ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟೀಷ್ ಸರ್ಕಾರವು ಭಾರತದ ಕೋಮುವಾದಿ ವಿಭಜನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು. ಇದರ ಪರಿಣಾಮವನ್ನು ಕೆಲವೇ ವರ್ಷಗಳಲ್ಲಿ ಕೋಹಾತ್ನಲ್ಲಿ ನಡೆದ ಹಿಂದೂ ಮುಸ್ಲಿಂ ಘರ್ಷಣೆಯಲ್ಲಿ ಕಾಣಬಹುದಿತ್ತು. ಈ ಘಟನೆಯ ನಂತರದಲ್ಲಿ, ರಾಷ್ಟ್ರದ ರಾಜಕೀಯ ಪ್ರಜ್ಞೆಯಲ್ಲಿ ಕೋಮು ದಂಗೆಗಳ ಬಗ್ಗೆ ವ್ಯಾಪಕವಾದ ಚರ್ಚೆಯನ್ನು ಕಾಣಬಹುದಾಗಿತ್ತು. ಇಂತಹ ಕೋಮು ಸಂಘರ್ಷಗಳಿಗೆ ಅಂತ್ಯ ಹಾಡಬೇಕು ಎನ್ನುವುದು ಬಹುಪಾಲು ಎಲ್ಲ ಅಭಿಪ್ರಾಯವಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ರಾಜಕಾರಣಿಗಳು ಈ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಹೆಜ್ಜೆ ಎಂದರೆ ಹಿಂದೂ ಮತ್ತು ಮುಸ್ಲಿಂ ನಾಯಕರ ನಡುವೆ ಸೌಹಾರ್ದದ ಒಪ್ಪಂದಗಳನ್ನು ಮಾಡಿಕೊಳ್ಳುವುದು. ಈ ಸಮಸ್ಯೆಗೆ ಒಂದು ನಿರ್ದಿಷ್ಟ ಪರಿಹಾರವನ್ನು ಸೂಚಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಆಂದೋಲನಗಳೂ ಸಹ ತಮ್ಮದೇ ಆದ ಪ್ರಸ್ತಾವನೆಯನ್ನು ಮುಂದಿರಿಸಿದ್ದವು. 1927ರಲ್ಲಿ ಕೀರ್ತಿ ಎಂಬ ಪತ್ರಿಕೆಯಲ್ಲಿ ಸಂಗಾತಿ ಭಗತ್ ಸಿಂಗ್ ಬರೆದ ಈ ಲೇಖನ, 94 ವರ್ಷಗಳ ನಂತರವೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.
ಭಾರತದ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಮತದ ಅನುಯಾಯಿಗಳು ಮತ್ತೊಂದು ಮತದ ಅನುಯಾಯಿಗಳ ಬದ್ಧ ವೈರಿಗಳಾಗಿಬಿಟ್ಟಿದ್ದಾರೆ. ವಿಭಿನ್ನ ಮತಗಳಿಗೆ ಸೇರಿದ ಜನರ ಗುಂಪುಗಳ ನಡುವೆ ದ್ವೇಷ ಎಷ್ಟು ಹೆಚ್ಚಾಗುತ್ತಿದೆ ಎಂದರೆ, ಒಂದು ಮತಕ್ಕೆ ಸೇರಿದವರಾಗಿರುವುದೇ ಮತ್ತೊಂದು ಮತದ ಜನರ ದ್ವೇಷಕ್ಕೆ ಕಾರಣವಾಗುತ್ತಿದೆ. ಈ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದಲ್ಲಿ ಅಂಥವರು ಇತ್ತೀಚೆಗೆ ನಡೆದ ಲಾಹೋರ್ ಕೋಮು ದಂಗೆಯತ್ತ ನೋಡುವುದು ಒಳಿತು. ಅಲ್ಲಿ ಹೇಗೆ ಮುಸ್ಲಿಮರು ಅಮಾಯಕ ಹಿಂದೂಗಳನ್ನು ಮತ್ತು ಸಿಖ್ಖರನ್ನು ಕೊಂದಿದ್ದಾರೆ, ಹೇಗೆ ಸಿಖ್ಖರೂ ಅಷ್ಟೇ ತೀವ್ರವಾಗಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಗಮನಿಸಬೇಕು. ಈ ಪರಸ್ಪರ ಹತ್ಯೆಗಳು ನಡೆದಿರುವುದಕ್ಕೆ ಹಂತಕರು ಹತ್ಯೆಗೀಡಾದವ ವ್ಯಕ್ತಿಯಲ್ಲಿ ಯಾವುದೇ ಅಪರಾಧ ಕಂಡಿದ್ದಾರೆ ಎನ್ನುವುದು ಕಾರಣವಲ್ಲ, ಬದಲಾಗಿ ಅವರು ಅನ್ಯ ಮತಕ್ಕೆ, ಹಿಂದೂ-ಮುಸ್ಲಿಂ-ಸಿಖ್ ಮತಕ್ಕೆ ಸೇರಿದವರಾಗಿದ್ದಾರೆ ಎಂಬ ಕಾರಣಕ್ಕಾಗಿದೆ. ಮುಸಲ್ಮಾನರ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿ ಹಿಂದೂ ಅಥವಾ ಸಿಖ್ ಆಗಿದ್ದರೂ ಸಾಕು ಅಥವಾ ಹಿಂದೂಗಳಿಗೆ ಆ ವ್ಯಕ್ತಿ ಮುಸ್ಲಿಂ ಆಗಿದ್ದರೆ ಸಾಕು ಹತ್ಯೆಗೀಡಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಗತಿ ಏನಾಗುವುದೋ ಭಗವಂತನೇ ಬಲ್ಲ.
ಇಂದು ಭಾರತದ ಭವಿಷ್ಯ ಮಸುಕಾಗಿ ಕಾಣುತ್ತಿದೆ. ಈ ಮತಗಳು ಭಾರತವನ್ನು ಶಿಥಿಲಗೊಳಿಸಿವೆ. ಭಾರತ ಎಂದು ಈ ಕೋಮು ದಂಗೆಗಳಿಂದ ಮುಕ್ತವಾಗುವುದೋ ಹೇಳಲಾಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದಂಗೆಗಳು ಭಾರತವನ್ನು ನಾಚಿ ತಲೆ ತಗ್ಗಿಸುವಂತೆ ಮಾಡಿವೆ. ಮೂಢನಂಬಿಕೆಗಳ ಪ್ರವಾಹದಲ್ಲಿ ಪ್ರತಿಯೊಬ್ಬರೂ ಕೊಚ್ಚಿಹೋಗುತ್ತಿರುವುದನ್ನು ನೋಡುತ್ತಿರುವಿರಿ. ಈ ದಂಗೆಗಳ ಸಂದರ್ಭದಲ್ಲಿ ತಮ್ಮ ಸಂಯಮವನ್ನು ಕಾಪಾಡಿಕೊಳ್ಳುವ ಹಿಂದೂ, ಮುಸ್ಲಿಂ, ಸಿಖ್ ವ್ಯಕ್ತಿಯನ್ನು ಕಾಣುವುದೇ ಅಪರೂಪ ಎನ್ನಬಹುದು. ಉಳಿದವರು ಕಬ್ಬಿಣದ ಸಲಾಕೆಗಳನ್ನು ಹಿಡಿದು, ದಂಡಗಳನ್ನು ಹಿಡಿದು, ಖಡ್ಗ, ಚಾಕುಗಳನ್ನು ಹಿಡಿದು ತಮ್ಮ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿರುತ್ತಾರೆ. ಈ ಪ್ರಕ್ರಿಯೆಯಲ್ಲೇ ತಮ್ಮ ಪಾರಮ್ಯ ಸಾಧಿಸಲು ಪರಸ್ಪರ ಹತ್ಯೆಯಲ್ಲಿ ತೊಡಗುತ್ತಾರೆ. ಕೆಲವು ನೇಣುಗಂಬ ಏರುತ್ತಾರೆ ಇನ್ನು ಕೆಲವರು ಸೆರೆವಾಸ ಅನುಭವಿಸುತ್ತಾರೆ. ಈ ರಕ್ತಪಾತವೆಲ್ಲವೂ ಮುಗಿದ ನಂತರ ಬ್ರಿಟೀಷ್ ಸರ್ಕಾರ ಈ ಧರ್ಮ ರಕ್ಷಕರನ್ನೇ ಬಳಸಿಕೊಳ್ಳಲಾರಂಭಿಸುತ್ತದೆ. ಆಗ ಇವರ ಮಾನಸಿಕ ರೋಗ ವಾಸಿಯಾಗುತ್ತದೆ.
ಈ ದಿನಗಳಲ್ಲಿ, ಕೋಮುವಾದಿ ನಾಯಕರು ಮತ್ತು ಕೆಲವು ಪತ್ರಿಕೆಗಳೂ ಸಹ ಈ ರೀತಿಯ ದಂಗೆಗಳಿಗೆ ಪ್ರಚೋದನೆ ನೀಡುವುದನ್ನು ಗಮನಿಸಬಹುದು. ಕೋಮು ದ್ವೇಷ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ನೇತಾರರು ಮೌನ ವಹಿಸಲು ನಿರ್ಧರಿಸಿದ್ದಾರೆ. ದೇಶಕ್ಕೆ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯಲು ಮುಂಚೂಣಿಯಲ್ಲಿ ನಿಂತು ಹೋರಾಡಲು ಸಜ್ಜಾಗಿರುವ ನಾಯಕರೂ ಇವರೇ ಆಗಿದ್ದಾರೆ. ಹಾಗೆಯೇ ಸಮಾನ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ನೇತಾರರೂ ಇವರೇ ಆಗಿದ್ದಾರೆ.
ಸ್ವರಾಜ್ ಆಗ್ರಹದೊಂದಿಗೆ ಹೋರಾಟಕ್ಕೆ ಧುಮುಕಿರುವ ಈ ನಾಯಕರೇ ಈಗ ನಾಚಿಕೆಯಿಂದ ತಲೆ ತಗ್ಗಿಸಿ ಮೌನಕ್ಕೆ ಶರಣಾಗಿದ್ದಾರೆ. ಈ ಧಾರ್ಮಿಕ ಮತಾಂಧತೆಯಿಂದ ಕೆಲವು ನಾಯಕರು ಅಪಾರ ನೋವು ಅನುಭವಿಸಿದ್ದಾರೆ. ಇನ್ನು ಕೆಲವು ನಾಯಕರು ಈ ಸಂದಿಗ್ಧ ಸಮಯದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು ನೀವು ಮುಕ್ತವಾಗಿ ಕೋಮುವಾದವನ್ನೇ ಪ್ರಚೋದಿಸುವ ನಾಯಕರನ್ನೂ ಕಾಣಬಹುದು. ಪ್ರತಿಯೊಬ್ಬರ ಬಗ್ಗೆಯೂ ಯೋಚಿಸಿ ಪ್ರಾಮಾಣಿಕವಾಗಿ ಚಿಂತೆ ಮಾಡುವ ಕೆಲವೇ ನಾಯಕರನ್ನು ನೀವು ಕಾಣಬಹುದಷ್ಟೆ. ಈ ಪ್ರಾಮಾಣಿಕ ನಾಯಕರೂ ಸಹ ಕೋಮುವಾದಿ ಭಾವನೆಗಳು ಹರಡುತ್ತಿರುವುದನ್ನು ತಡೆಗಟ್ಟಲಾಗುತ್ತಿಲ್ಲ. ಬಹುಶಃ ಭಾರತದ ನಾಯಕತ್ವವೇ ದೀವಾಳಿಯಾಗುತ್ತಿದೆ !
ಕೋಮು ಗಲಭೆಯನ್ನು ಪ್ರಚೋದಿಸಿ, ಹಿಂಸೆಯ ಕಿಡಿಯನ್ನು ಹೊತ್ತಿಸುವ ಮತ್ತೊಂದು ಸಾಧನ ಎಂದರೆ ದಿನಪತ್ರಿಕೆಗಳಲ್ಲಿ ಬರೆಯುವವರು. ಒಂದು ಕಾಲದಲ್ಲಿ ಪತ್ರಿಕೋದ್ಯೋಗ ಎಂದರೆ ಗೌರವಯುತ ಸ್ಥಾನ ಹೊಂದಿತ್ತು ಆದರೆ ಇಂದು ಇದು ಕೊಳೆತುಹೋಗಿದೆ. ಈ ಜನರು ಅನ್ಯ ಸಮುದಾಯಗಳ ವಿರುದ್ಧ ದಪ್ಪ ಅಕ್ಷರಗಳ ಶೀರ್ಷಿಕೆಯುಳ್ಳ ಲೇಖನಗಳನ್ನು ಬರೆಯುವ ಮೂಲಕ ಸಮುದಾಯಗಳ ನಡುವೆ ಶಾಶ್ವತವಾದ ದ್ವೇಷ ಮತ್ತು ಶತ್ರುತ್ವವನ್ನು ಪ್ರಚೋದಿಸುತ್ತಾರೆ. ಇದು ಬೀಸು ಆರೋಪವಲ್ಲ. ಇಂತಹ ಹಲವು ಉದಾಹರಣೆಗಳನ್ನು ಕಾಣಬಹುದು. ಈ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳಿಂದ ಪ್ರಚೋದನೆ ಪಡೆದೇ ಹಲವು ಕೋಮು ಗಲಭೆಗಳಾಗಿರುವುದನ್ನೂ ಗಮನಿಸಬಹುದು. ಈ ಪ್ರಕ್ಷುಬ್ಧ ಸಂದರ್ಭದಲ್ಲಿ ಸಮಚಿತ್ತದೊಂದಿಗೆ ಸಮತೋಲಿತ ವರದಿಯನ್ನು ಮಾಡುತ್ತೇವೆ ಎಂದು ಎದೆತಟ್ಟಿಕೊಳ್ಳಬಹುದಾದ ಕೆಲವೇ ಪತ್ರಿಕೋದ್ಯೋಗಿಗಳನ್ನು ಕಾಣಲು ಸಾಧ್ಯ.
ಸುದ್ದಿ ಪತ್ರಿಕೆಗಳ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಮನಸುಗಳನ್ನು ಸ್ವಚ್ಚಗೊಳಿಸುವುದು. ಜನರಲ್ಲಿರಬಹುದಾದ ಸಂಕುಚಿತ ಪಂಥೀಯ, ಪ್ರತ್ಯೇಕತಾ ಭಾವನೆಗಳನ್ನು ಹೋಗಲಾಡಿಸಿ ಅವರಲ್ಲಿ ಕೋಮು ಸೌಹಾರ್ದತೆ, ಸಮನ್ವಯತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಬಿತ್ತುವುದು ಪತ್ರಿಕೆಗಳ ಉದ್ದೇಶವಾಗಿರಬೇಕು. ತನ್ಮೂಲಕ ಜನಸಾಮಾನ್ಯರ ನಡುವೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಿ ಪರಸ್ಪರ ವಿಶ್ವಾಸ ಮೂಡಿಸುವಂತಾಗಬೇಕು. ಹಾಗಾದಲ್ಲಿ ಮಾತ್ರವೇ ಸಮಾನ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಾವು ಮುನ್ನಡೆಯಲು ಸಾಧ್ಯ. ಆದರೆ ಇವರು ಇದಕ್ಕೆ ತದ್ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾನ ರಾಷ್ಟ್ರೀಯತೆಯ ಉದ್ದೇಶದಲ್ಲೇ ವಿಭಜನೆಯನ್ನು ಕಾಣುತ್ತಿದ್ದೇವೆ. ಈ ಕಾರಣಕ್ಕಾಗಿಯೇ ನನಗೆ ಪ್ರಸ್ತುತ ಭಾರತವನ್ನು ನೆನೆಯುವಾಗಲೆಲ್ಲಾ ಕಣ್ಣಲ್ಲಿ ರಕ್ತ ಬರುತ್ತದೆ. “ ಈ ನನ್ನ ಭಾರತಕ್ಕೆ ಏನಾಗುತ್ತದೆ ” ಎಂಬ ಆತಂಕ ಮೂಡುತ್ತದೆ.
ಅಸಹಕಾರ ಚಳುವಳಿಯ ಸಂದರ್ಭದಲ್ಲಿ, ದುರಾಸೆ ಮತ್ತು ಅಸೂಯೆಯನ್ನು ಹೊಂದಿದ್ದ ಜನರೂ ಸಹ ಬದಲಾಗಿ ಸರಳ ಸಜ್ಜನರಾಗಿ ರೂಪುಗೊಂಡಿದ್ದರು. ಸ್ವಾತಂತ್ರ್ಯ ನಮ್ಮ ಕಣ್ಣೆದುರಿನಲ್ಲೇ ಇದೆ ಎಂಬ ಕನಸು ಕಂಡಿದ್ದ ಆ ದಿನಗಳು ಈಗೆಲ್ಲಿದೆ ? ಈ ಸಂದರ್ಭವನ್ನು ನೋಡಿ, ಸ್ವಾತಂತ್ರ್ಯ ಎನ್ನುವುದೇ ಒಂದು ಮರೀಚಿಕೆಯಂತೆ ಕಾಣುತ್ತಿದೆ ! ಕೋಮು ದಂಗೆಗಳನ್ನು ಸೃಷ್ಟಿಸಿದವರಿಗೆ ಇದು ಮೂರನೆಯ ಮತ್ತು ಕೊನೆಯ ಲಾಭವಾಗಿದೆ. ಅಸಹಕಾರ ಚಳುವಳಿಯ ದಿನಗಳಲ್ಲಿ ತನ್ನ ಸ್ಥಾನವೇ ಇಲ್ಲವಾಗುತ್ತದೆ ಎಂಬ ಭೀತಿಯಲ್ಲಿದ್ದ ಅಧಿಕಾರಶಾಹಿಗಳು ಇಂದು ಆಳವಾಗಿ ಬೇರೂರಿದ್ದು, ಇಂದಿನ ಪರಿಸ್ಥಿತಿಯಲ್ಲಿ ಅಲುಗಾಡಿಸದಂತಾಗಿದೆ.







