ಶಾಲಾ ಮಕ್ಕಳಲ್ಲಿ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ತಜ್ಞರ ಶಿಫಾರಸಿನಂತೆ ರಾಜ್ಯ ಸರ್ಕಾರ ಮೊಟ್ಟೆ ವಿತರಿಸುವ ಯೋಜನೆ ಜಾರಿಗೆ ಬರುತ್ತಿದ್ದಂತೆ ಲಿಂಗಾಯತ ಮಠಾಧೀಶರು ಮೈಮೇಲೆ ಬಿಸಿನೀರು ಸುರಿದಂತೆ ಬೆಚ್ಚಿಬಿದ್ದಿದ್ದಾರೆ.
ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಮತ್ತು ಬಿಜಾಪುರ ಜಿಲ್ಲೆಯ 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷೆಯ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಕ್ಕಳ ಆರೋಗ್ಯ ಸುಧಾರಣೆಯ ಕ್ರಮವಾಗಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಗೆ ತಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ(ಎನ್ ಎಫ್ ಎಚ್ ಎಸ್) ಐದನೇ ಸುತ್ತಿನ ಸಮೀಕ್ಷೆಯ ಪ್ರಕಾರ ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಪೌಷ್ಟಿಕಾಂಶಗಳ ಕೊರತೆಯನ್ನು ಗುರುತಿಸಿದ್ದು, ಬಹುತೇಕ ಮಕ್ಕಳು ವಯಸ್ಸಿಗೆ ಸರಿಯಾದ ದೈಹಿಕ ಬೆಳವಣಿಗೆ ಹೊಂದಿಲ್ಲ. ಶೇ.35ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ಎತ್ತರ ಹೊಂದಿಲ್ಲ, ಶೇ.33ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೊಂದಿಲ್ಲ. ಬಡವರು ಮತ್ತು ತಳ ಸಮುದಾಯಗಳು ಮುಂತಾದ ದುರ್ಬಲ ವರ್ಗದಲ್ಲಿ ಇಂತಹ ಕುಂಠಿತ ಬೆಳವಣಿಗೆ ಕಂಡುಬಂದಿದ್ದು, ಅದಕ್ಕೆ ಆ ಮಕ್ಕಳಿಗೆ ವಯಸ್ಸಿಗೆ ಸರಿಯಾದ ಪೌಷ್ಟಿಕ ಆಹಾರ ಲಭ್ಯವಿಲ್ಲದಿರುವುದೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು.
ಹಾಗೇ, ಕಲ್ಯಾಣ ಕರ್ನಾಟಕದ ಮಕ್ಕಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಎನ್ ಕೆ ಪಾಟೀಲ್ ಸಮಿತಿ ಕೂಡ, ಆ ಭಾಗದ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದ್ದು, ಗುಣಮಟ್ಟದ ಕೋಳಿ ಮೊಟ್ಟೆ ವಿತರಿಸುವ ಮೂಲಕ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮಬೀರುತ್ತಿರುವ ಅಪೌಷ್ಟಿಕತೆಯನ್ನು ನಿವಾರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ, ದೇಶದ ಬಡ ಮತ್ತು ದುರ್ಬಲ ವರ್ಗಗಳ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ನಿವಾರಣೆಗಾಗಿ ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಚ್ಚು ಪೌಷ್ಟಿಕಾಂಶಭರಿತ ಆಹಾರ ನೀಡಬೇಕು ಎಂದು ಹೊಸ ಶಿಕ್ಷಣ ನೀತಿಯಲ್ಲಿ ಕೂಡ ಒತ್ತಾಸೆ ನೀಡಲಾಗಿದೆ.
ಹೀಗೆ ವೈಜ್ಞಾನಿಕ ಹಿನ್ನೆಲೆ, ದೇಶದ ನಾಳೆಯ ಪ್ರಜೆಗಳ ದೈಹಿಕ ಮತ್ತು ಮಾನಸಿಕ ಸದೃಢತೆಯ ಸದಾಶಯ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯ ಸರ್ಕಾರ ಇಡೀ ರಾಜ್ಯಾದ್ಯಂತ ಅಲ್ಲದಿದ್ದರೂ ತೀವ್ರ ಅಪೌಷ್ಟಿಕತೆ ಇರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 14.5 ಲಕ್ಷ ಸರ್ಕಾರಿ ಶಾಲೆ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ಮತ್ತು ಮೊಟ್ಟೆ ಸೇವಿಸದೇ ಇರುವವರಿಗೆ ಬಾಳೆಹಣ್ಣು ವಿತರಿಸುವ ತೀರ್ಮಾನ ಕೈಗೊಂಡಿದೆ.
ಇಂತಹದ್ದೊಂದು ಕನಿಷ್ಟ ಮಾನವೀಯ ಕಾಳಜಿಯ ಕೆಲಸಕ್ಕೆ ವಾಸ್ತವವಾಗಿ ಬಡವರ ದುಡ್ಡಿನ ಮೇಲೆ ದರ್ಬಾರು ಮಾಡುವ ಮಠಮಾನ್ಯಗಳು, ಧಾರ್ಮಿಕ ಕೇಂದ್ರಗಳು ಸ್ವಯಂಪೇರಣೆಯಿಂದ ನೆರವಿನ ಹಸ್ತ ಚಾಚಬೇಕಿತ್ತು. ತಮ್ಮ ಮಠ, ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ಕಾಣಿಕೆ ಸ್ವೀಕರಿಸುವಾಗ ಮಾಂಸಹಾರಿ, ಸಸ್ಯಾಹಾರಿ ಎಂದು ಬೇಧವೆಣಿಸದ ಮಠಾಧೀಶರು, ಶಾಲೆಯಲ್ಲಿ ಮಾಂಸಹಾರಿ ಮಕ್ಕಳು ಮೊಟ್ಟೆ ಸೇವಿಸಿದರೆ ತಮ್ಮ ಸಸ್ಯಾಹಾರಿಗಳ ಧರ್ಮ ಕಳಚಿಬೀಳುತ್ತದೆ ಎಂಬಂತೆ ಸಿಡಿದೆದ್ದಿರುವುದು ಹಾಸ್ಯಾಸ್ಪದ.
ನಿಜವಾಗಿಯೂ ಸ್ವಸ್ಥ ಸಮಾಜ ನಿರ್ಮಾಣ ಮಾಡಲು, ಸದೃಢ ದೇಶ ಕಟ್ಟಲು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಅಡಿಪಾಯ. ಆರೋಗ್ಯವಂತ ಮಕ್ಕಳೇ ಆರೋಗ್ಯವಂತ ಸಮಾಜಕ್ಕೆ ಬುನಾದಿ. ಹಾಗಿರುವಾಗ ಅಂತಹ ಮಕ್ಕಳನ್ನು ಕಾಡುವ ಅಪೌಷ್ಟಿಕತೆ, ಅಸಮಾನತೆ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ದುಶ್ಚಟಗಳು ಮುಂತಾದ ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳ ವಿರುದ್ಧ ಹೋರಾಡಬೇಕಿದ್ದ ಮತ್ತು ಆ ಮೂಲಕ ಸದಾಚಾರ ಮತ್ತು ಸಚ್ಛಾರಿತ್ರ್ಯದ ಸಮಾಜ ಕಟ್ಟಬೇಕಾದ ಮಠಾಧೀಶರು, ತದ್ವಿರುದ್ಧ ಹಾದಿಯಲ್ಲಿ ಆಹಾರ ರಾಜಕಾರಣದ ದಾಳಗಳಾಗಿರುವುದು ವಿಚಿತ್ರ.
ಆ ಕಾರಣದಿಂದಾಗಿಯೇ ಮಠಾಧೀಶರ ಈ ಮೊಟ್ಟೆ ವಿರೋಧವನ್ನು ಆಹಾರದ ವಿಷಯದಲ್ಲೂ ಮೇಲು ಕೀಳು, ಶ್ರೇಷ್ಠ ಕನಿಷ್ಟದ ವ್ಯಾಖ್ಯಾನ ಮಾಡುವ ಆಹಾರ ರಾಜಕಾರಣದ, ಧಾರ್ಮಿಕ ರಾಜಕಾರಣದ ಹಿನ್ನೆಲೆಯಿಂದಲೇ ವಿರೋಧಿಸಲಾಗುತ್ತಿದೆ. ಅದರಲ್ಲೂ ಅಪೌಷ್ಟಿಕತೆ ಹೆಚ್ಚಿರುವುದು ದಲಿತರು, ಶ್ರೂಧ್ರದ ಮಕ್ಕಳಲ್ಲೇ ಹೆಚ್ಚು ಮತ್ತು ಅವರು ಶತಮಾನಗಳಿಂದ ಮಠಾಧೀಶರು ಪ್ರತಿನಿಧಿಸುವ ಮೇಲ್ಜಾತಿ ಮತ್ತು ವರ್ಗಗಳಿಂದ ಶೋಷಿತರಾದವರು ಎಂಬ ಹಿನ್ನೆಲೆಯಲ್ಲಿ ಮಠಾಧೀಶರ ವಿರೋಧದ ಹಿಂದೆ ಧಾರ್ಮಿಕ ಭಾವನೆಗಿಂತಲೂ ದಲಿತರು ಮತ್ತು ತಳ ಸಮುದಾಯಗಳ ಏಳಿಗೆಯ ವಿರುದ್ಧದ ಪಿತೂರಿ ಕೆಲಸ ಮಾಡುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.
ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ನಂತರ ಕಳೆದ ಒಂದು ವಾರದಲ್ಲಿ ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇಕಡ.10 ರಿಂದ 12ರಷ್ಟು ಏರಿಕೆ ಕಂಡುಬಂದಿದೆ. ಶೇ.80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಉಳಿದ ಶೇಕಡ. 20ರಷ್ಟು ಮಕ್ಕಳಿಗೆ ಬಾಳೇಹಣ್ಣು ವಿತರಣೆ ಮಾಡಲಾಗುತ್ತಿದೆ ಎಂದು ಸ್ವತಃ ಶಿಕ್ಷಣ ಇಲಾಖೆಯ ಮೂಲಗಳೇ ಹೇಳಿರುವ ವಾಸ್ತವಾಂಶಗಳು ಮಠಾಧೀಶರ ವಾದಕ್ಕೆ ತಿರುಗೇಟು ನೀಡಿವೆ. ವಾಸ್ತವವಾಗಿ ಶೇ.80ಕ್ಕೂ ಅಧಿಕ ಮಕ್ಕಳು ತಮಗೆ ಮೊಟ್ಟೆ ಬೇಕು ಎನ್ನುತ್ತಿರುವಾಗ ಬಹುಸಂಖ್ಯಾತರ ಆಹಾರದ ಹಕ್ಕನ್ನು ಮತ್ತು ಆಯ್ಕೆಯನ್ನು ಕಸಿದುಕೊಳ್ಳುವ ಅಧಿಕಾರವನ್ನು ಈ ಮಠಾಧೀಶರಿಗೆ ನೀಡಿದ್ದು ಯಾರು? ಎಂಬುದು ಪ್ರಶ್ನೆ.
Also Read : ಮೊಟ್ಟೆ ರಾಜಕೀಯ ಮತ್ತು ಮೆದಳು ಬಲಿಯದವರು
ಆ ಹಿನ್ನೆಲೆಯಲ್ಲಿ ನೋಡಿದರೆ, ಶಾಲೆಗಳಲ್ಲಿ ಮೊಟ್ಟೆ ವಿತರಣೆ ನಿಲ್ಲಿಸದೇ ಹೋದರೆ, ತಮಗೆ ಪ್ರತ್ಯೇಕ ಸಸ್ಯಾಹಾರಿ ಶಾಲೆ ನೀಡಿ ಎಂದು ಮಠಾಧೀಶರು ಬಾಲಿಶಃ ಬೇಡಿಕೆ ಮುಂದಿಟ್ಟುರುವುದು ಕೂಡ ಯಾವ ವೈಚಾರಿಕ ನೆಲೆಯೂ ಇಲ್ಲದ ಭೋಳೇತನದ ಪರಮಾವಧಿ. ಅಕ್ಕಪಕ್ಕದಲ್ಲಿ ಕುಳಿತು ಆಹಾರ ಸೇವಿಸಿದರೆ ಇವರ ಧರ್ಮಕ್ಕೆ, ಆಚಾರಕ್ಕೆ ಚ್ಯುತಿ ಬರುತ್ತದೆ ಎಂದಾದರೆ, ಆ ಕಾರಣಕ್ಕಾಗಿ ಪ್ರತ್ಯೇಕ ಸಸ್ಯಾಹಾರಿ ಶಾಲೆಯೇ ಬೇಕು ಎಂಬ ಮಟ್ಟಿನ ಮಡಿವಂತಿಕೆ ತೋರುತ್ತಾರೆ ಎಂದಾದರೆ, ಶೇ.80ರಷ್ಟು ಜನರ ಹಿತ ಕಾಯಲು ಸರ್ಕಾರ ಇದೆಯೇ? ಅಥವಾ ಉಳಿದ ಶೇ.20 ಮಂದಿಯ ಆಶಯದಂತೆ ನೀತಿ ನಿಲುವುಗಳು ರೂಪಿತವಾಗಬೇಕೆ? ಎಂಬ ಪ್ರಜಾಸತ್ತಾತ್ಮಕ ಪ್ರಶ್ನೆಗೆ ಈ ಮಠಾಧೀಶರ ಬಳಿ ಏನಿದೆ ಉತ್ತರ? ಹಾಗಾಗಿ ಬಹುಸಂಖ್ಯಾತರ ಆಯ್ಕೆಯನ್ನು, ಹಿತವನ್ನು ಗಾಳಿಗೆ ತೂರಿ ‘ಅತ್ಯಲ್ಪ ಸಂಖ್ಯಾತರ’ ಹುಕುಂ ಚಲಾಯಿಸುವ ಮಠಾಧೀಶರು, ತಮ್ಮದೇ ಮಠಮಾನ್ಯಗಳ ಸಂಪನ್ಮೂಲ ಬಳಸಿ ಶುದ್ಧ ಸಸ್ಯಾಹಾರಿ ಶಾಲೆ, ಶುದ್ಧ ಸಸ್ಯಾಹಾರಿ ಶಿಕ್ಷಕರು, ಶುದ್ಧ ಸಸ್ಯಾಹಾರಿ ಮಕ್ಕಳೇ ಇರುವ ಪರ್ಯಾಯ ವ್ಯವಸ್ಥೆಯನ್ನು ಯಾಕೆ ರೂಪಿಸಬಾರದು? ಎಂಬುದು ಮೊಟ್ಟೆ ವಿರೋಧಿಗಳು ಉತ್ತರಿಸಬೇಕಾದ ಪ್ರಶ್ನೆ.
ಅಷ್ಟಕ್ಕೂ ಮೊಟ್ಟೆಯನ್ನು ಮಾಂಸಹಾರ ಎಂದಾಗಲೀ, ಅದು ಅಶುದ್ಧವೆಂದಾಗಲೀ ಯಾವ ವೈಜ್ಞಾನಿಕ ಸಂಸ್ಥೆಗಳು ಹೇಳಿವೆ? ಯಾವ ಆಧಾರದ ಮೇಲೆ ಮಠಾಧೀಶರು ಮೊಟ್ಟೆಯನ್ನು ಮಾಂಸಾಹಾರ ಎಂದಿದ್ದಾರೆ? ಒಂದು ವೇಳೆ ಪ್ರಾಣಿಜನ್ಯ ಮೊಟ್ಟೆ ಮಾಂಸಹಾರ ಎನ್ನುವುದೇ ಆದರೆ, ಅದೇ ರೀತಿಯಲ್ಲಿ ಪ್ರಾಣಿಜನ್ಯವಾದ ಹಾಲು ತುಪ್ಪ ಮೊಸರು ಮಜ್ಜಿಗೆ ಮುಂತಾದ ಹೈನು ಉತ್ಪನ್ನಗಳು ಏನು? ಆ ಪ್ರಾಣಿಜನ್ಯ ಉತ್ಪನ್ನಗಳಿಗೆ ಇಲ್ಲದ ಮಡಿವಂತಿಕೆ ಈ ಮಠಾಧೀಶರಲ್ಲಿ ಮೊಟ್ಟೆಯ ಬಗ್ಗೆ ಇರಲು ಕಾರಣ ಧರ್ಮಶಾಸ್ತ್ರವೇ? ಅಥವಾ ಶತಮಾನಗಳಿಂದ ತಮ್ಮ ತಮ್ಮ ಜೀತದಾಳುಗಳಾಗಿದ್ದ ದೇಶದ ಬಹುಸಂಖ್ಯಾತ ಜನಸಮುದಾಯದ ಸಬಲೀಕರಣವನ್ನು ಮೆಟ್ಟಿಹಾಕುವ ಹುನ್ನಾರವೇ? ಎಂಬುದು ಸ್ಪಷ್ಟವಾಗಬೇಕಿದೆ.
ಸ್ವಸ್ಥ ಸಮಾಜಕ್ಕೆ ಅಪಾಯಕಾರಿಯಾಗಿರುವ ಮದ್ಯದಂಗಡಿಗಳ ಬಗ್ಗೆ ಮಾತನಾಡದ, ಬಾರ್ ಗಳ ಬಗ್ಗೆ ದನಿ ಎತ್ತದ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಬಗ್ಗೆ ತುಟಿಬಿಚ್ಚದ, ಲಂಚ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡದ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ(ಬಹುತೇಕ ವೇಳೆ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರಿಂದಲೇ!) ಅತ್ಯಾಚಾರ, ಅನಾಚಾರಗಳ ಬಗ್ಗೆ ಮುಗುಮ್ಮಾಗಿ ಇರುವ ಮಠಾಧೀಶರು, ಮಕ್ಕಳ ಊಟದ ತಟ್ಟೆಗೆ ಕೈಹಾಕಿರುವುದು ನಾಚಿಕೆಗೇಡಿನ ಸಂಗತಿ.
ಆದರೆ, ಮಠಾಧೀಶರ ಈ ಹಠಮಾರಿತನದ ಹಿಂದೆ ಕೇವಲ ದಲಿತರು ಮತ್ತು ತಳ ಸಮುದಾಯಗಳನ್ನು ತುಳಿಯುವ ಮತ್ತು ಧರ್ಮದ ಹೆಸರಿನಲ್ಲಿ ಶತಮಾನಗಳ ತಮ್ಮ ಯಜಮಾನಿಕೆಯನ್ನು, ದಬ್ಬಾಳಿಕೆಯನ್ನು ಮುಂದುವರಿಸುವ ಹುನ್ನಾರ ಮಾತ್ರವಿದೆ ಎಂದುಕೊಳ್ಳುವಂತಿಲ್ಲ. ಏಕೆಂದರೆ; ಮೊಟ್ಟೆ ವಿರುದ್ಧ ಬೀದಿಗಿಳಿದು ಪಟ್ಟು ಹಿಡಿದಿರುವ ಮಠಾಧೀಶರಲ್ಲಿ ಹಲವರು ಈಗಾಗಲೇ ಮೊಟ್ಟೆಗೆ ಪರ್ಯಾಯವಾಗಿ ಏನೆಲ್ಲಾ ಕೊಡಬಹುದು ಎಂದು ತಮ್ಮದೇ ಹಿಡನ್ ಅಜೆಂಡಾದ ಮೆನು ಕೊಟ್ಟಿದ್ದಾರೆ! ಅದರಲ್ಲೂ ಅವರು ಮೊಟ್ಟೆಯ ಬದಲಾಗಿ ನೀಡಿ ಎಂದು ಹೇಳಿರುವ ಮೆನುವಿನಲ್ಲಿರುವ ಪದಾರ್ಥಗಳು ಮತ್ತು ಧಾನ್ಯಗಳು ಯಾವುವು ಎಂಬುದನ್ನು ಗಮನಿಸಿದರೆ ಮಠಾಧೀಶರು ಉಗ್ರ ಹೋರಾಟದ ಹಿಂದೆ ಮತ್ತೇನೋ ವ್ಯವಹಾರಿಕ ಲೆಕ್ಕಾಚಾರಗಳಿರುವುದು ಗೋಚರಿಸದೇ ಇರದು.
ಮಠಾಧೀಶರು ಮೊಟ್ಟೆಗೆ ಪರ್ಯಾಯವಾಗಿ ಇಟ್ಟಿರುವ ಮೆನುವಿನಲ್ಲಿ ಅಗ್ರಸ್ಥಾನದಲ್ಲಿರುವುದು ಸಿರಿಧಾನ್ಯ, ಮೊಳಕೆಕಾಳು, ಶೇಂಗಾ ಮತ್ತು ಸೋಯಾ ಹಾಲು. ಸಿರಿಧಾನ್ಯಗಳ ವಿಷಯದಲ್ಲಿ ಕಳೆದ ಒಂದು ದಶಕದಿಂದ ಅದರಲ್ಲಿ ಇರುವ, ಇಲ್ಲದಿರುವ ಗುಣಗಳನ್ನೆಲ್ಲಾ ಪಟ್ಟಿ ಮಾಡಿ ಅದೊಂದೇ ಮನುಷ್ಯನನ್ನು ಉಳಿಸಬಲ್ಲ ದಿವ್ಯಾಹಾರ ಎಂಬಂತೆ ಬಿಂಬಿಸಿ ಹತ್ತಾರು ಪಟ್ಟು ದುಬಾರಿ ಬೆಲೆಗೆ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಚೈನ್ ಲಿಂಕ್ ಕಂಪನಿಗಳು ಮತ್ತು ದಂಧೆಕೋರ ಆಂದೋಲನಕಾರರು ಮಾಡುತ್ತಿರುವ ಲೂಟಿಯ ಬಗ್ಗೆ ಅರಿವಿರುವವರಿಗೆ ಮಠಾಧೀಶರ ಸಿರಿಧಾನ್ಯ ಪ್ರೀತಿಯ ಹಿಂದಿನ ಲೆಕ್ಕಾಚಾರಗಳನ್ನು ವಿವರಿಸಬೇಕಿಲ್ಲ. ಹಾಗೇ ಸೋಯಾ ಹಾಲು ಮತ್ತು ಸೋಯಾ ಪುಡಿಯ ಕುರಿತ ಮಠಾಧೀಶರ ಒಲವಿನ ಹಿಂದೆ ಕೂಡ ಸೋಯಾ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಬಾಬಾ ಒಬ್ಬರ ನೆರಳಿರುವಂತಿದೆ.
ರುಚಿ ಸೋಯಾ ಹೆಸರಿನಲ್ಲಿ ಭಾರತದಲ್ಲಿ ಅತಿದೊಡ್ಡ ಸೋಯಾ ಉದ್ಯಮ ಹೊಂದಿರುವ ಬಾಬಾ ರಾಮ್ ದೇವ್ ಅವರ ವ್ಯವಹಾರ ಹಿತಾಸಕ್ತಿಗೂ, ಅವರ ಪತಂಜಲಿ ಯೋಗದ ಅಭಿಮಾನಿ ಅನುಯಾಯಿಗಳೂ ಆಗಿರುವ ಬಹತೇಕ ಉತ್ತರಕರ್ನಾಟಕದ ಮಠಾಧೀಶರು ಈಗ ಧರ್ಮ ಮತ್ತು ಆಚಾರದ ಹೆಸರಿನಲ್ಲಿ ಮೊಟ್ಟೆಯ ವಿರುದ್ಧ ತಿರುಗಿಬಿದ್ದಿರುವುದು ಮತ್ತು ಮೊಟ್ಟೆ ಬದಲಿಗೆ ಸೋಯಾವನ್ನು ಪರ್ಯಾಯ ಮೆನುವಾಗಿ ಮುಂದಿಡುತ್ತಿರುವುದಕ್ಕೂ ಇರಬಹುದಾದ ತೆರೆಮರೆಯ ನಂಟಿನ ಬಗ್ಗೆ ಕುತೂಹಲವಿದೆ.
Also Read : ಮೊಟ್ಟೆಗೆ ವಿರೋಧ: ವಯಸ್ಸಾಯ್ತು, ನೀವ್ ಉತ್ತತ್ತಿ ತಿನ್ನಿ, ಮಕ್ಳು ತತ್ತಿ ತಿನ್ನಲಿ
ಶಾಲಾ ಮಕ್ಕಳ ಊಟದ ತಟ್ಟೆಗೆ ಅಡ್ಡಗಾಲು ಹಾಕಿರುವ ಮಠಾಧೀಶರ ಬಹುತೇಕ ಒಲವು ನಿಲುವುಗಳನ್ನು ಪರಿಶೀಲಿಸಿದರೆ, ಹಿಂದುತ್ವವಾದಿ ಶ್ರೇಷ್ಠತೆ ಮತ್ತು ಮನುವಾದಿ ಪರಿಶುದ್ಧತೆಯ ಮೂಸೆಯಲ್ಲೇ ಬಹುತೇಕ ಮಂದಿ ಪಳಗಿರುವುದು ಕೂಡ ಗುಟ್ಟೇನಲ್ಲ. ಜೊತೆಗೆ ಸಿರಿಧಾನ್ಯ ಮತ್ತು ಸೋಯಾ ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಯೋಗಶಿಬಿರ, ಧ್ಯಾನ ಶಿಬಿರಗಳ ನಿರ್ವಾಹಕರಾಗಿಯೂ ಬಹಳಷ್ಟು ಮಠಾಧೀಶರು ಸಾಕಷ್ಟು ವ್ಯವಹಾರಿಕ ಯಶಸ್ಸು ಪಡೆದವರೇ. ಆ ಹಿನ್ನೆಲೆಯಲ್ಲಿ ನೋಡಿದರೆ, ಮಠಾಧೀಶರ ಮೊಟ್ಟೆ ವಿರೋಧಿ ಹೋರಾಟಕ್ಕೂ ಸಿರಿಧಾನ್ಯ ಮತ್ತು ಸೋಯಾ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯ ಲೆಕ್ಕಾಚಾರಗಳಿಗೂ ತಾಳೆಯಾಗದೆ ಇರದು!