ಪೊಲೀಸರ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯದ ವಿರುದ್ದ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ. ಅಮೇರಿಕಾದ ಜಾರ್ಜ್ ಫ್ಲಾಯ್ಡ್ ಉದಾಹರಣೆ ನೀಡಿರುವ ನ್ಯಾಯಾಲಯವು,“ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಜಾರ್ಜ್ ಫ್ಲಾಯ್ಡ್ ಹೇಳಿದಂತೆ ಬೇರೆ ಯಾರೂ ಹೇಳುವಂತೆ ಆಗದಿರಲಿ, ಎಂದು ಹೇಳಿದೆ. ಕಾನೂನಿನ ಅಡಿಯಲ್ಲಿ ಆರೋಪಿಯ ಮೇಲಿರುವ ಆರೋಪ ಸಾಬೀತಾದರೆ ಅತನಿಗೆ ಶಿಕ್ಷೆ ನೀಡುವ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಇದೆಯೇ ಹೊರತು, ಪೊಲೀಸ್ ಕಸ್ಟಡಿಯಲ್ಲಿ ಶಿಕ್ಷೆ ನೀಡಬಾರದು ಎಂದು ಹೇಳಿದೆ.
ದೆಹಲಿಯ ತುರ್ಕ್ಮನ್ ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಅನಧಿಕೃತವಾಗಿ ವಶಕ್ಕೆ ಪಡೆದು ಠಾಣೆಯಲ್ಲಿ ಅವರ ವಿರುದ್ದ ದೌರ್ಜನ್ಯ ನಡೆಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಸಂತ್ರಸ್ಥರು ಪೊಲೀಸ್ ಅಧಿಕಾರಿಗಳ ವಿರುದ್ದವೇ ಮೊಕದ್ದಮೆ ಹೂಡಿದ್ದರು. ಫಿರ್ಯಾದುದಾರರ ಪ್ರಕಾರ, ಇನ್ಸಪೆಕ್ಟರ್ ದರ್ಜೆಯ ಅಧಿಕಾರಿಯು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ, ಇದು ‘ಗಮನಾರ್ಹ’ ಪ್ರಕರಣವಲ್ಲ, ಇದರಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ವರದಿ ನೀಡಿದ್ದರು. ಹಾಗಾಗಿ, ಉನ್ನತ ಮಟ್ಟದ ಅಧಿಕಾರಿಯಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ನಜ್ಮೀ ವಝೀರಿ, ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆಯೂ ವಶಕ್ಕೆ ಪಡೆದಿರುವ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಲು ಕಾನೂನು ಅವಕಾಶ ನೀಡುವುದಿಲ್ಲ, ಎಂದಿದ್ದಾರೆ.

“ಯಾವುದೇ ಅಪರಾಧಿ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ಕೋರ್ಟ್ ನಿರ್ಧರಿಸುತ್ತದೆ. ತಮ್ಮ ಸ್ವಂತ ಪ್ರಕರಣದಲ್ಲಿ ಪೊಲೀಸರು ತಾವೇ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಕಸ್ಟಡಿಯಲ್ಲಿ ಅಥವಾ ತನಿಖೆಯ ವೇಳೆ ಜನರನ್ನು ಹೊಡೆಯಲು ಅವಕಾಶ ಇಲ್ಲವೇ ಇಲ್ಲ,” ಎಂದು ನ್ಯಾಯಾಲಯ ಹೇಳಿದೆ.
ಫಿರ್ಯಾದುದಾರರ ಮನವಿಯ ಮೇರೆಗೆ ಡಿಸಿಪಿ (ಕಣ್ಗಾವಲು) ಮಟ್ಟದ ಅಧಿಕಾರಿಯಿಂದ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಿದೆ. ಈ ಪ್ರಕರಣವು ಸಂಪೂರ್ಣ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸುವಂತಹ ಪ್ರಕರಣವಾಗಿರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.






