ಸಿದ್ದರಾಮಯ್ಯ ಕರ್ನಾಟಕ ರಾಜಕೀಯದಲ್ಲಿಯೇ ವೈಯಕ್ತಿಕ ವರ್ಚಸ್ಸು ಇರುವ ನಾಯಕರು. ಟಗರಿನಂತೆಯೇ ವಿರೋಧಿಗಳಿಗೆ ಗುದ್ದಬಲ್ಲವರು. ಅವರನ್ನು ವಿರೋಧಿಸುವವರೂ ಎದುರಲ್ಲಿ ಮಾತನಾಡಲು ಸಣ್ಣ ಭಯ ಕಾಣುತ್ತಾರೆ, ಪ್ರಸಕ್ತವಾಗಿ ಅವರಂತಹ ಗಟ್ಟಿ ನಾಯಕರು, ಜ್ಞಾನ ರಾಜಕಾರಣಿ ಯಾರೂ ಇಲ್ಲ. ವಿದಾನಸಭೆಯಲ್ಲಿ ಅವರು ಬಿಜಪಿಯನ್ನು ಕೆಣಕುವ ಪರಿಯೇ ವಿಶಿಷ್ಟ. ಸಿದ್ದರಾಮಯ್ಯರ ಆತ್ಮವಿಶ್ವಾಸ, ಮಾತಿನ ಶಕ್ತಿ ಬಿಜೆಪಿಗೆ ಕಷ್ಟವೋ ಕಷ್ಟ. ಹೇಗಾದರೂ ಮಾಡಿ ಅವರ ವರ್ಚಸ್ಸು ಕಡಿಮೆ ಮಾಡಿ ಅವರ ಆತ್ಮವಿಶ್ವಾಸ ಕುಗ್ಗಿಸದೇ ಇದ್ದರೆ ಕಷ್ಟ ಎಂಬ ನಿಲುವಿಗೆ ಬಜೆಪಿ ಬಂದಂತಿದೆ. ಇತ್ತೀಚೆಗೆ ಸಿದ್ದರಾಮಯ್ಯ ದಲಿತರ ಪರವಾಗಿ ಹೇಳಿದ ಮಾತನ್ನು ಬಿಜೆಪಿ ಸಿದ್ದರಾಮಯ್ಯರ ಆತ್ಮವಿಶ್ವಾಸ ಕುಗ್ಗಿಸಲು ಬಳಸುತ್ತಿದೆ.
ದಲಿತರಿಗೆ ಶತಮಾನಗಳಿಂದ ಎಲ್ಲರಂತೆ ಬದುಕುವ, ದೇವಸ್ಥಾನ ಪ್ರವೇಶಿಸುವ, ಹೋಟೆಲ್ ಅಂಗಡಿಗಳನ್ನೂ ಪ್ರವೇಶಿಸುವ ಹಕ್ಕನ್ನು ಕೊಡದೆ ಅಸ್ಪ್ರಷ್ಯತೆಯಿಂದ ಕಂಡ ಮನಸ್ಥಿತಿಯವರ ಪಕ್ಷವಾಗಿದೆ ಬಿಜೆಪಿ. ಅದು ದಲಿತರಿಗೆ ಎಲ್ಲಾ ಹಕ್ಕುಗಳನ್ನು ನಿರಾಕರಿಸಿ ಶೋಷಿಸಿದ ಮನುಸ್ಮೃತಿಯ ಪ್ರತಿಪಾದಕರು. ದಲಿತರಿಗೆ ಬದುಕಲು ಅವಕಾಶ ಕೊಟ್ಟ ಸಂವಿಧಾನವನ್ನೇ ಬದಲಾವಣೆ ಮಾಡ್ತೀನಿ ಎಂದು ಬಿಜೆಪಿಗರು ಹೇಳ್ತಿದ್ದಾರೆ. ಅಂತಹ ಪಕ್ಷಕ್ಕೆ ಕೆಲವು ದಲಿತರು ಹೋಗ್ತಿದ್ದಾರೆ. ಅದು ಹೇಗೆ ಅವರಿಗೆ ಅಲ್ಲಿರಲು ಸಾಧ್ಯವಾಗುತ್ತದೆ? ಅಂತಹ ಪಕ್ಷದಲ್ಲಿ ದಲಿತರಿದ್ದರೆ ಅದು ಹೊಟ್ಟೆಪಾಡು ಮಾತ್ರವಲ್ಲದೆ, ಅದು ಮನಪೂರ್ವಕ ಅಲ್ಲ ಎಂರ್ಥದಲ್ಲಿ ಸಿದ್ದರಾಮಯ್ಯ ದಲಿತರ ಸಮಾವೇಶದಲ್ಲಿಯೇ ಮಾತನಾಡಿದ್ದರು. ಆದರೆ ಸಿದ್ದರಾಮಯ್ಯರ ಮೇಲೆ ಮುಗಿಬೀಳಲು ಬಿಜೆಪಿಯು ಇದನ್ನು ಬಳಸಿಕೊಂಡಿತು. ಹೊಟ್ಟೆಪಾಡಿಗಾಗಿ ದಲಿತ ನಾಯಕರು ಬಿಜೆಪಿಯಲ್ಲಿದ್ದಾರೆ ಎನ್ನುವ ಮೂಲಕ ದಲಿತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ಎಂದು ಹಲವು ಕಡೆ ಬಿಜೆಪಿಗರು ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿದ್ದಾರೆ.
ಇಡೀ ಬೆಳವಣಿಗೆ ಬಗ್ಗೆ ಇಂದು ಇಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗರಿಗೆ ತಮ್ಮ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದಾರೆ. ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ಸಂವಿಧಾನ ಬದಲಾವಣೆ ಮಾಡ್ತೀನಿ ಅಂದವರ ಪಕ್ಷಕ್ಕೆ ಹಲವರು ಹೋಗ್ತಿದ್ದಾರೆ ಅಂತ ನಾನು ಭಾಷಣ ಮಾಡಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ದಲಿತ ಹೇಳಿಕೆ ವಿವಾದಕ್ಕೆ ಸಂಬಂಧಿಸಿ ಮಾತನಾಡಿದರು. ಸಿದ್ದರಾಮಯ್ಯ ಜಾತಿವಾದ ಮಾಡ್ತಿದ್ದಾರೆ ಅಂತಾರೆ. ಇತಿಹಾಸ ಪುರುಷರ ಜಯಂತಿ ಆಚರಣೆ ಜಾರಿಗೆ ತಂದಿದ್ದೇ ನಾನು. ಬಿಜಪಿಯವರು ಕೊಳಕರು, ಅವರು ದೊಡ್ಡ ಜಾತಿವಾದಿಗಳು. ಆದರೆ ನನ್ನನ್ನು ಜಾತಿವಾದ ಮಾಡ್ತಾರೆ ಎನ್ನುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆದ್ನಲ್ಲ ಅನ್ನೋ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಾರೆ.

ನನ್ನ ಫ್ಲೆಕ್ಸ್ ಸುಟ್ಟಿದ ತಕ್ಷಣ ನಾನು ಸುಟ್ಟು ಹೋಗಲ್ಲ, ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ ಎಲ್ಲರೂ ಸಮಾನರಾಗಿ ಬದುಕುವಂತಾಗಬೇಕು ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ಎಲ್ಲಾ ಜಾತಿಗಳ ನಾಯಕರ ಜಯಂತಿ ಮಾಡಿದೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರತ, ಕೃಷ್ಣ, ಜೈನ ಜಯಂತಿ ಮಾಡಿದ್ದು ನಾನು. ಆದರೂ ಸಿದ್ದರಾಮಯ್ಯನ ಜಾತಿ ಜಾತಿ ಅಂತಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ದೇವರಾಜ್ ಅರಸು ನಂತರ 5 ವರ್ಷ ಮುಖ್ಯಮಂತ್ರಿ ಆಗಿ ಪೂರ್ಣಾವಧಿ ಆಡಳಿತ ಮಾಡಿದ್ದು ನಾನು, ಹೀಗಾಗಿ ಅವರಿಗೆ ಹೊಟ್ಟೆಕಿಚ್ಚು ಎಂದು ಹೇಳಿದ್ದಾರೆ..
ಸಿದ್ದರಾಮಯ್ಯರನ್ನು ದೇವರಾಜ ಅರಸರಿಗೆ ಅನೇಕರು ಹೋಲಿಕೆ ಮಾಡಿದ್ದಿದೆ. ಅಥವಾ ದೇವರಾಜರ ಬಳಿಕ ಆ ರೀತಿಯ ಚಿಂತನೆಯ ನಾಯಕ ಸಿದ್ದರಾಮಯ್ಯರಾಗಿದ್ದಾರೆ. ಅವರ ಹಾಗೆಯೇ 5 ವರರ್ಷ ಪೂರ್ತಿ ಮುಖ್ಯಮಂತ್ರಿ ಅಧಿಕಾರ ಮಾಡಿದ್ದೂ ಸಿದ್ದರಾಮಯ್ಯ ಮಾತ್ರ. ಈ ಸಂಬಂಧವಾಗಿ ಅವರ ಮೇಲೆ ಹೊಟ್ಟೆಕಿಚ್ಚು ಹೊಂದಿರುವುದೂ ನಿಜಾನೇ ಆಗಿದೆ.
ದೇವರಾಜ್ ಅರಸ್ ಅವರು ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕರು. ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸ್ ಎರಡು ಸಲ ಕರ್ನಾಟಕದ ಮುಖ್ಯಂತ್ರಿಯಾಗಿದ್ದರು. ಮೊದಲನೇ ಸಲ 5 ವರ್ಷಪೂರ್ತಿ ಆಡಳಿತ ನಡೆಸಿದ್ದರು. ಮಾರ್ಚ್ 20, 1972 – ಡಿಸೆಂಬರ್ 31, 1977 ತನಕ ಅವರ ಅಧಿಕಾರ ಇತ್ತು. 1977ರಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತ ಪಡೆಯಿತು. ಸ್ವಲ್ಪ ಕಾಲ ರಾಷ್ಟ್ರಪತಿ ಆಳ್ವಿಕೆಯ ಬಳಿಕ ದೇವರಾಜ ಅರಸು ಫೆಬ್ರವರಿ 28, 1978ರಂದು ಅವರು ಎರಡನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಮಾಡಿದ್ದರು. ಇಂದಿರಾಗಾಂಧಿಯವರ ಅವಕೃಪೆಗೆ ಒಳಗಾಗಿ ಜನವರಿ 7, 1980ರಂದು ಅಧಿಕಾರದಿಂದ ಕೆಳಗಿಳಿದರು. ಬಳಿಕ ಗುಂಡೂರಾವ್ ಮುಖ್ಯಮಂತ್ರಿಯಾದರು. ಅವರ ಅಧಿಕಾರವಧಿಯಲ್ಲಿ ಸಮಾಜದಲ್ಲಿ ಕೆಳವರ್ಗ ಎಂದು ನೋಡಲಾಗುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಸುಧಾರಣೆಗಳನ್ನು ತರುತ್ತಿದ್ದರು. ಇವರು ಅದಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು L G ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. “ಬಡತನ ನಿರ್ಮೂಲನೆ” ಅವರ ಮೊದಲ ಆದ್ಯತೆ. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. “ಉಳುವವನಿಗೆ ಭೂಮಿ” ಅವರ ಮತ್ತೊಂದು ಮಹತ್ತರವಾದ ಯೋಜನೆ. 1973ರಲ್ಲಿ ಮೈಸೂರನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ 16,000 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ರಾಜ್ಯದಲ್ಲಿ ಅಭಿವೃದ್ದಿಯ ಹೊಸ ಶಖೆಗೆ ಕಾರಣರಾದ ದೇವರಾಜ ಅರಸರು ಸಾಮಾಜಿಕ ನ್ಯಾಯದ ಹರಿಕಾರನೆಂದೇ ಇತಿಹಾಸದಲ್ಲಿ ದಾಖಲಾಗಿದ್ದಾರೆ.

ಮೇ 13,2013 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು. ಹಸಿವು ಮುಕ್ತ ರಾಜ್ಯ ಮಾಡುವುದು ಸಿದ್ದರಾಮಯ್ಯನವರ ಪ್ರಮುಖ ಗುರಿಗಳಲ್ಲೊಂದು. ಈ ನಿಟ್ಟಿನಲ್ಲಿ ಬಡವರಿಗಾಗಿ ಕಡಿಮೆ ದರದಲ್ಲಿ ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಿದರು. 2018ರಲ್ಲಿ ಮುಖ್ಯಮಂತ್ರಿಯಾಗಿ ಇವರು ತಮ್ಮ 13ನೇ ಬಜೆಟ್ ಮಂಡಿಸಿದ್ದು ದಾಖಲೆಯಾಗಿದೆ. ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಸಮರ ಸಾರಿದ ಇವರು 2010 ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ 320 ಕಿಮೀ ಪಾದಯಾತ್ರೆ ಮಾಡಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಿದೆ.
ಸಂವಿಧಾನ ವಿರೋಧಿಗಳು, ಪ್ರಜಾಪ್ರಭುತ್ವ ವಿರೋಧಿಗಳು, ಸಾಮಾಜಿಕ ನ್ಯಾಯ ವಿರೋಧಿಗಳು, ಕೋಮು ಸೌಹಾರ್ದ ವಿರೋಧಿಗಳು ಹೀಗೆ ಬಹಳಷ್ಟು ಅಂಶಗಳ ವಿರೋಧಿಗಳು ಆದ ಬಿಜೆಪಿಯನ್ನು ಮತ್ತು ಸ್ವಾಭಿಮಾನವನ್ನೂ ಮರೆತು ಅದರಲ್ಲಿರುವ ದಲಿತ ನಾಯಕರನ್ನು ಸಿದ್ದರಾಮಯ್ಯ ವಿರೋಧಿಸುವುದರಲ್ಲಿ ತಪ್ಪಿಲ್ಲ, ತರ ನಾಯಕರೂ ಇದನ್ನು ಮಾಡಬೇಕು ಎಂದು ಸಿದ್ದರಾಮಯ್ಯ ಪರವಾದ ಹೇಳಿಕೆಗಳು ಜಾತ್ಯತೀತವಾದಿಗಳಿಂದ ಕೇಳಿಬರುತ್ತಿದೆ. ಏನೇ ಆದರೂ ಸಿದ್ದರಾಮಯ್ಯ ಬಿಜೆಪಿಗರನ್ನು ಕಾಡುತ್ತಿರುವ ಶಕ್ತಿಯಾಗಿದ್ದು, ಬಿಜೆಪಿಯು ಅವರ ವಿರುದ್ಧ ಸಿಕ್ಕಿದ ಅವಕಾಶಕ್ಕೆ ರೆಕ್ಕೆಪುಕ್ಕ ಜೋಡಿಸದೇ ಬಿಡಲಾರದು ಎಂದು ಅಂದಾಜಾಗುತ್ತದೆ, ಈಶ್ವರಪ್ಪನವರ ಇತ್ತೀಚೆಗೆ ಸಿದ್ದರಾಮಯ್ಯ ಎಲ್ಲೇ ವೋಟಿಗೆ ನಿಂತರೂ ಅವರನ್ನು ಸೋಲಿಸುತ್ತೇವೆ ಎಂದದ್ದು ಗಮನಾರ್ಹ, ಬಿಜೆಪಿ ಪಾಳಯದಲ್ಲಿ ಸಿದ್ದರಾಮಯ್ಯರನ್ನು ಶಕ್ತಿಹೀನಗೊಳಿಸಲು ರೂಪುರೇಷೆ ತಯಾರಾಗುತ್ತಿದೆ.
- ಅಬೂಮನ್ಹ ಪಡಿಕಲ್






