ದೆಹಲಿಯ ಜನನದ ಸಮಯದ ಲಿಂಗಾನುಪಾತವು 2019 ರಲ್ಲಿ ಸಾವಿರ ಪುರುಷರಿಗೆ 920 ಮಹಿಳೆಯರಿದ್ದರೆ 2020 ರಲ್ಲಿ ಅದು 933ಕ್ಕೆ ಏರಿದೆ ಮತ್ತು ಇದೇ ಅವಧಿಯಲ್ಲಿ ಶಿಶು ಮರಣ ಪ್ರಮಾಣವು 24.19% ರಿಂದ 20.37% ಗೆ ಇಳಿದಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಸರ್ಕಾರದ ವರದಿಯೊಂದನ್ನು ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.
2019-20ರ ಸಮೀಕ್ಷೆಯ ಪ್ರಕಾರವೇ ಕರ್ನಾಟಕದ ಜನನ ಸಮಯದಲ್ಲಿನ ಲಿಂಗಾನುಪಾತವು ಪ್ರತಿ 1000 ಪುರುಷರಿಗೆ 1034 ಮಹಿಳೆಯರಿದ್ದರು. ಅಂಗನವಾಡಿ ಕಾರ್ತಕರ್ತೆಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಜಾಗೃತಿ ಮೂಡಿಸುವ, ಅರಿವು ಮೂಡಿಸುವ ಕಾರ್ಯಕ್ರಮದಿಂದಾಗಿಯೇ ಕರ್ನಾಟಕದಲ್ಲಿ ಲಿಂಗಾನುಪಾತದಲ್ಲಿ ಈ ಮಹತ್ತರ ಬದಲಾವಣೆ ತರಲು ಸಾಧ್ಯವಾಗಿದೆ.
ಆದರೆ ಶಿಕ್ಷಣ, ಜಾಗೃತಿಯ ಕೊರತೆ ಇರುವ ಉತ್ತರ ಭಾರತದಲ್ಲಿ ಈಗಲೂ ಹೆಣ್ಣು ಶಿಶು ಹತ್ಯೆ, ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಇದೀಗ ದೆಹಲಿಯಲ್ಲಿ ಹೆಚ್ಚಿರುವ ಲಿಂಗಾನುಪಾತವು ಒಂದು ಆಶಾದಾಯಕ ಬೆಳವಣಿಗೆಯಾಗಿದ್ದು ಅಲ್ಲಿನ ಉಪಮುಖ್ಯಮಂತ್ರಿ “ಲಿಂಗ ಅನುಪಾತ ಹೆಚ್ಚಳವು ಸಾಮಾಜಿಕ ಜಾಗೃತಿಯ ಪರಿಣಾಮವಾಗಿದೆ ಹಾಗೂ ಸಮಾಜವು ಶಿಕ್ಷಣ ಪಡೆಯುತ್ತಿದೆ ಮತ್ತು ಹೆಣ್ಣುಮಕ್ಕಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದೆ ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.
“ದೆಹಲಿಯಲ್ಲಿ, ಸಾರ್ವಜನಿಕ ಜಾಗೃತಿ ಪ್ರಯತ್ನಗಳು ಪ್ರಯೋಜನಕಾರಿ ಪರಿಣಾಮಗಳನ್ನು ನೀಡಿವೆ. ಜನನ ಪ್ರಮಾಣವು 2019 ರಲ್ಲಿ ಸಾವಿರಕ್ಕೆ 18.35 ರಷ್ಟಿದ್ದದ್ದು 2020ರಲ್ಲಿ ಸಾವಿರಕ್ಕೆ 14.85ಕ್ಕೆ ಇಳಿದಿದೆ. 2019 ರಲ್ಲಿ ನೋಂದಾಯಿಸಲ್ಪಟ್ಟ 3,65,868 ಜನನ ಸಂಖ್ಯೆಗೆ ಹೋಲಿಸಿದ 2020 ರಲ್ಲಿ 3,01,645 ಜನನಗಳನ್ನು ಮಾತ್ರ ನೋಂದಾಯಿಸಲಾಗಿದೆ” ಎಂದೂ ಅವರ ಹೇಳಿಕೆ ತಿಳಿಸಿದೆ.
“ಎಲ್ಲಾ ನಾಗರೀಕರಿಗೆ ಲಭ್ಯವಿರುವ ಆರೋಗ್ಯ ಸೌಲಭ್ಯಗಳು ಮತ್ತು ಆರೋಗ್ಯ ಮೂಲಸೌಕರ್ಯದಲ್ಲಿನ ಮಹತ್ತರವಾದ ಬದಲಾವಣೆಗಳಿಂದ ಶಿಶು ಮರಣ ಕಡಿಮೆಯಾಗಿದೆ” ಎಂದು ಅವರು ಹೇಳಿದರು. 2019 ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಶಿಶು ಮರಣ ಪ್ರಮಾಣವೂ ಕಡಿಮೆಯಾಗಿದೆ. 2019 ರಲ್ಲಿ ಪ್ರತಿ ಸಾವಿರಕ್ಕೆ ಶಿಶು ಮರಣ ಪ್ರಮಾಣವು 24.19 ರಷ್ಟಿದ್ದರೆ, 2020 ರಲ್ಲಿ ಇದು 20.37 ರಷ್ಟಿತ್ತು ಎಂದು ವರದಿ ತೋರಿಸಿದೆ.
ದೆಹಲಿಯಲ್ಲಿ ತಾಯಂದಿರ ಮರಣ ಪ್ರಮಾಣವೂ ಕಡಿಮೆಯಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ತಾಯಂದಿರ ಮರಣ ಪ್ರಮಾಣವು 2019 ರಲ್ಲಿ 1,000 ಜನನಗಳಿಗೆ 0.55 ರಷ್ಟಿತ್ತು, ಇದು 2020 ರಲ್ಲಿ 1,000 ಜನನಗಳಿಗೆ 0.54 ಕ್ಕೆ ಇಳಿದಿದೆ.
ನಗರದ ಆರೋಗ್ಯ ಮೂಲಸೌಕರ್ಯದಲ್ಲಿನ ಬದಲಾವಣೆಗಳು ಮತ್ತು ಎಲ್ಲಾ ನಿವಾಸಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿರುವುದು ದೆಹಲಿಯಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದೆ.
ಅಂಕಿಅಂಶಗಳ ಪ್ರಕಾರ, ಸಾವಿನ ಪ್ರಮಾಣವು 2019 ರಲ್ಲಿ ಸಾವಿರಕ್ಕೆ 7.29 ರಷ್ಡಿದ್ದದ್ದು 2020 ರಲ್ಲಿ ಸಾವಿರಕ್ಕೆ 7.03 ಕ್ಕೆ ಇಳಿದಿದೆ.