ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಎನ್‌ಒಸಿ ಪಡೆದು ಕಟ್ಟಿದ್ದ ಮನೆಗಳನ್ನು ನೆಲಸಮ ಮಾಡುವುದನ್ನು ತಡೆಯಲು ಹೋದ ಜೆಡಿಎಸ್ ಪಕ್ಷದ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿರುವುದು ಅತ್ಯಂತ ಖಂಡಿನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಈ ಬಡಾವಣೆಯ ಜನರ ಸಂಕಷ್ಟಕ್ಕೆ ಸಂಬಂಧಿಸಿ ಹೋರಾಟಗಾರರು, ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ ಒಂದು ಸಭೆ ಕರೆಯಿರಿ, ನಾನೂ ಬರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ, ಸಭೆಗೆ ಕಾಲಾವಕಾಶವವನ್ನೇ ನೀಡದೇ ಈಗ ಏಕಾಎಕಿ ಮನೆಗಳನ್ನು ಒಡೆಸುತ್ತಿರುವುದು ಸರಿಯಲ್ಲ” ಎಂದರು.
ಜನ ಸಾಲ ಮಾಡಿ ಮನೆಗಳನ್ನು ಕಟ್ಟಿದ್ದಾರೆ. ಈ ಬಡಾವಣೆ ನಿರ್ಮಾಣ ಆದಾಗ ಆರಂಭಿಕ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ನೋಟಿಫಿಕೇಶ್ ಮಾಡಿ, ಆಮೇಲೆ ಕೆಲ ಕಡೆ ಡಿನೋಟಿಫಿಕೇಷನ್ ಮಾಡಿ ಎನ್‌ಒಸಿಗಳನ್ನೂ ಕೊಟ್ಟು ಬಿಡಿಎ ಆಯುಕ್ತರು, ಅಧಿಕಾರಿಗಳು ಹಣ ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಇದೆಲ್ಲವನ್ನೂ ಅಧಿಕಾರಿಗಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಮಾಡಿದರು.
ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡನೆ ಮಾಡದೇ, ಸಮರ್ಪಕ ಮಾಹಿತಿಯನ್ನೂ ನೀಡದೇ ಅಧಿಕಾರಿಗಳು ಮತ್ತು ಸರಕಾರ ಅಮಾಯಕರ ಜೀವನದ ಜತೆ ಚೆಲ್ಲಾಟ ಆಡಿದ್ದಾರೆ. ಬಿಡಿಎಯ ಈಗಿನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರೇ ಈ ಜನರ ಪರ ಹೋರಾಟ ಮಾಡಿದ್ದರು. ಈಗ ನೋಡಿದರೆ ಅವರೇ ಮನೆಗಳನ್ನು ನೆಲಸಮ ಮಾಡಿಸುತ್ತಿದ್ದಾರೆ. ನಾನು ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದಾಗ ಈ ಮನೆಗಳನ್ನು ಒಡೆಯಲು ಬಿಟ್ಟಿರಲಿಲ್ಲ, ಈ ಸರಕಾರ ನಿಜಕ್ಕೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಇವರೇ ಒಂದು ಕಡೆ ದುಡ್ಡು ಹೊಡೆಯೋದು. ಇನ್ನೊಂದು ಕಡೆ ಇವರೇ ಕಟ್ಟಡ ಒಡೆಸೋದು. ಜನರನ್ನು ಈಗ ಬೀದಿಗೆ ತಂದು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗೆ ಜವಾಬ್ದಾರಿ ಎನ್ನುವುದು ಇದ್ದಿದ್ದರೆ ಕೂತು ಚರ್ಚೆ ಮಾಡಿ ಕಾನೂನು ರೀತಿಯಲ್ಲಿ ಆ ಜನರಿಗೆ ರಕ್ಷಣೆ ನೀಡಬೇಕಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.