ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಯುಎಸ್ ಸರ್ಜನ್ ಗಳು ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ಮನುಷ್ಯನ ದೇಹಕ್ಕೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೇನೆಂದರೆ, ಹಂದಿಯ ಕಿಡ್ನಿಯನ್ನು ಅಳವಡಿಸಿರುವ ರೋಗಿಯ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂಬುದು.
ನ್ಯೂಯಾರ್ಕ್ ನಗರದ ಎನ್ವೈಯು ಲ್ಯಾಂಗೋನ್ ಹೆಲ್ತ್ಕೇರ್ ಸೆಂಟರ್ನಲ್ಲಿ (NYU Langone Health in New York City) ಈ ಪರೀಕ್ಷೆಯನ್ನು ಸರ್ಜನ್ಗಳು ಯಶಸ್ವಿಯಾಗಿ ಮಾಡಿದ್ದಾರೆ. ಹಂದಿಯ ಕಿಡ್ನಿಯನ್ನು ರೋಗಿಗೆ ಅಳವಡಿಸುವ ಮುನ್ನ ಅದರ ಜೀನ್ಸ್ ಅನ್ನು ಬದಲಾವಣೆ ಮಾಡಲಾಯಿತು. ಅದರಿಂದ ವಂಶವಾಹಿಗಳು ಬದಲಾಗಿರುವುದರಿಂದ ಅದರ ಅಂಗಾಂಶಗಳು ಯಾವುದಕ್ಕೂ ತಕ್ಷಣವೇ ವ್ಯತಿರಕ್ತವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಈ ಕಿಡ್ನಿ ಕಸಿಯಾಗಿರುವ ರೋಗಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಕಿಡ್ನಿ ವೈಫಲ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ನಲ್ಲಿದ್ದ ಅವರ ಲೈಫ್ ಸಪೋರ್ಟ್ ಅನ್ನು ತೆಗೆಯುವ ಮುನ್ನ ಆಕೆಯ ದೇಹವನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸಿಕೊಳ್ಳುವಂತೆ ಆ ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರಿಗೆ ಅನುಮತಿ ನೀಡಿದ್ದರು ಎಂದು ರಾಯಿಟರ್ಸ್ಗೆ ತಿಳಿಸಿದರು.
ಹೀಗಾಗಿ, ಮೆದುಳು ನಿಷ್ಕ್ರಿಯ ಆಗಿದ್ದ ರೋಗಿಯ ಕಿಡ್ನಿಯನ್ನು ತೆಗೆದು ಹಂದಿಯ ಕಿಡ್ನಿಯನ್ನು ಅಳವಡಿಸಿ ಆ ಆಸ್ಪತ್ರೆಯ ಸರ್ಜನ್ಗಳು ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗದ ಬಳಿಕ ಆ ರೋಗಿಯ ಲೈಫ್ ಸಪೋರ್ಟ್ ಅನ್ನು ತೆಗೆಯಲಾಗಿದೆ. ಅದಕ್ಕೂ ಮೊದಲು 3 ದಿನಗಳವರೆಗೆ ಹೊಸ ಮೂತ್ರಪಿಂಡವನ್ನು ಆಕೆಯ ರಕ್ತನಾಳಗಳಿಗೆ ಜೋಡಿಸಲಾಗಿದೆ. ಹಂದಿಯ ಕಿಡ್ನಿಯನ್ನು ಅಳವಡಿಸಿದ ನಂತರ ಆಕೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬಂದವು ಎಂಬುದನ್ನು ಪರೀಕ್ಷಿಸಲಾಗಿದೆ. ಹಂದಿಯ ಕಿಡ್ನಿ ಜೋಡಣೆ ಮಾಡಿದ್ದರಿಂದ ಆ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿಲ್ಲವಾದ್ದರಿಂದ ಈ ಪ್ರಯೋಗ ಯಶಸ್ವಿಯಾಗಿದೆ ಎಂದೇ ಹೇಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ.
ಅಮೆರಿಕದಲ್ಲಿ ಸುಮಾರು 1,07,000 ಜನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. 90,000ಕ್ಕಿಂತ ಹೆಚ್ಚು ರೋಗಿಗಳು ಮೂತ್ರಪಿಂಡಕ್ಕಾಗಿ ಕಾಯುತ್ತಿದ್ದಾರೆ.
ಯುನೈಟೆಡ್ ನೆಟ್ವರ್ಕ್ ಫಾರ್ ಆರ್ಗನ್ ಹಂಚಿಕೆ ಪ್ರಕಾರ, ಮೂತ್ರಪಿಂಡಕ್ಕಾಗಿ ಸರಾಸರಿ 3ರಿಂದ 5 ವರ್ಷಗಳ ಕಾಲ ರೋಗಿಗಳು ಕಾಯಬೇಕಾಗುತ್ತದೆ. ಅಂಗಾಂಗಳ ಕೊರತೆ ಎದುರಾಗಿರುವುದರಿಂದ ಅಂಗಾಂಗ ದಾನದ ಬಗ್ಗೆ ಅಮೆರಿಕದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ.
ಹಂದಿಗಳಿಂದ ಅಭಿವೃದ್ಧಿಪಡಿಸಿದ ವೈದ್ಯಕೀಯ ಉತ್ಪನ್ನಗಳನ್ನು ಮಾನವನ ಮೇಲೆ ಬಳಸುವ ಮುನ್ನ ಮೊದಲು ನಿರ್ದಿಷ್ಟ ಎಫ್ಡಿಎ ಅನುಮೋದನೆಯ ಅಗತ್ಯವಿರುತ್ತದೆ ಎಂದು ಸಂಸ್ಥೆ ಹೇಳಿದೆ.