ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ ಭಾಷನದ ವೇಳೆ ಹೊಸ ಬಾಂಬ್ ಸಿಡಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟೆ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ ನಿನ್ನನು ಮತ್ತು ನಿನ್ನ ಮಗನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ಬಿಜೆಪಿ ಹೈಕಮಾಂಡ್ ಬಿಎಸ್ವೈ ರಾಜೀನಾಮೆ ಪಡೆದಿದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ದ ಆರೋಪಿಸಿದ್ದಾರೆ.
ಯಡಿಯೂರಪ್ಪ ಕಣ್ಣೀರು ಹಾಕುತ್ತಾ ರಾಜೀನಾಮೆ ಕೊಟ್ಟು ಮನೆ ಕಡೆ ಹೋದರು. ಈ ವೇಳೆ ಬಸವರಾಜ್ ಬೊಮ್ಮಾಯಿ ತಾನು ಮುಖ್ಯಮಂತ್ರಿ ಆಗಬಹುದು ಅಂತಾ ಕಾಯ್ತಾ ಇದರು. ಆಗ, ಆರ್ಎಸ್ಎಸ್ ನವರೇ ಬೊಮ್ಮಾಯಿಯನ್ನ ಮುಖ್ಯಮಂತ್ರಿ ಮಾಡಿದರು ಬೊಮ್ಮಾಯಿಯನ್ನು ಆರ್ಎಸ್ಎಸ್ನವರು ರಿಮೋಟ್ ಮೂಲಕ ಕಂಟ್ರೋಲ್ ಮಾಡ್ತಾ ಇದ್ದಾರೆ ಬೊಮ್ಮಾಯಿ ರಿಮೋಟ್ ಆರ್ಎಸ್ಎಸ್ನವರ ಬಳಿ ಇದೆ. ಬೊಮ್ಮಾಯಿ ಇಷ್ಟಕ್ಕೆ ಎಲ್ಲಾ ಮುಗಿಯಿತ್ತು ಎಂದು ಭಾವಿಸಬಾರದು ಎಂದು ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಕೊಲೆಗಡುಕರು ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹತ್ತಿಸಿ ಸಾಯಿಸಿದ್ರು. ಹಾವೇರಿಯಲ್ಲಿ ಗುಂಡು ಹಾರಿಸಿ ರೈತರನ್ನು ಕೊಂದರು. ಗಾಂಧಿಜೀಯನ್ನು ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟಿ ಪೂಜೆ ಮಾಡ್ತಾರೆ. ಯುವಕರಿಗೆ ಉದ್ಯೋಗ ಕೊಡ್ತೀನಿ ಅಂತ ಯಾಮಾರಿಸಿದ್ದಾರೆ ಎಂದು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೊರೋನಾ ಟೈಂ ನಲ್ಲಿ ಜನರಿಗೆ ಲಸಿಕೆ ಹಾಕಿಸೋದು ಬಿಟ್ಟು ದೀಪ ಹಚ್ಚಿ ಅಂತ ಹೇಳಿದರು. 56 ಇಂಚಿನ ಎದೆ ಇದೆ ಎಂದು ಮೋದಿ ಹೇಳಿದ್ರು. 56 ಇಂಚಿನ ಎದೆ ಬಾಡಿ ಬಿಲ್ಡರ್ , ಪೈಲ್ವಾನರಿಗೂ ಇರುತ್ತೆ. ಆದರೆ ತಾಯಿ ಹೃದಯ ಇರಬೇಕು ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ. ಚಾಣಕ್ಯ ಯುನಿವರ್ಸಿಟಿ ಕಟ್ಟೋಕೆ ಹೋಗ್ತಿದ್ದಾರೆ. ಚಾಣಕ್ಯ ಯುನಿವರ್ಸಿಟಿಗೆ ಕಡಿಮೆ ಬೆಲೆಗೆ ಜಮೀನು ನೀಡಿದ್ದಾರೆ. 116.16 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕೊಟ್ಟಿದಾರೆ ಎಂದು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ನವರು ದೇಶಭಕ್ತರು ಅಂತಾರೆ, ಯಾವಾನಾದರೂ ಒಬ್ಬ ಆರ್ ಎಸ್ ಎಸ್ ನವನು ಜೈಲಿಗೆ ಹೋಗಿದಾನ? ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದು ತೋರಿಸಲಿ ಎಂದು ಪ್ರಶ್ನಿಸಿದ್ದಾರೆ. ಆರ್ ಎಸ್ ಎಸ್ ಸಮಾಜ ಒಡೆಯಲು ಇರೋ ಪಾರ್ಟಿ. ಸಮಾಜ ಒಡೆಯೋಕೆ ಇರೋ ಕೋಮುವಾದಿಗಳ ಗುಂಪು ಆರ್ ಎಸ್ ಎಸ್ ಎಂದು ಕಟುವಾಗಿ ಟೀಕಿಸಿದ್ದಾರೆ. RSS ಬಗ್ಗೆ ಮಾತಾಡಿ ಯಾರನ್ನ ಸಿದ್ದರಾಮಯ್ಯ ಓಲೈಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ. ಯಾರನ್ನ ಓಲೈಕೆ ಮಾಡ್ತಿದೀನಂತೆ? ಅವರು ಆರ್ ಎಸ್ ಎಸ್ ಹಿಡಿತದಲ್ಲಿದಾರಲ್ಲಾ, ಅವರನ್ನ ಓಲೈಕೆ ಮಾಡ್ತಿದ್ದೀನಿ. ಅವರನ್ನೇ ಓಲೈಕೆ ಮಾಡ್ತಿದ್ದೀನಿ ಎಂದು ವ್ಯಂಗ್ಯವಾಡಿದ್ದಾರೆ.
ಆದಾಯದಲ್ಲಿ ಚೇತರಿಕೆ ಕಂಡರೆ ಇಂಧನ ಬೆಲೆ ಇಳಿಕೆ ಬಗ್ಗೆ ಚರ್ಚೆ ಮಾಡ್ತೀವಿ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಎಲೆಕ್ಷನ್ ಗಿಮಿಕ್. ಚುನಾವಣೆಗೋಸ್ಕರ ಹೇಳಿರೋ ಮಾತಿದು. ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡಿದಾರಲ್ಲಾ? ಸರ್ಕಾರಕ್ಕೆ ಈಗಾಗಲೇ ಆದಾಯ ಬಂದಿದೆ. ಸೆಪ್ಟಂಬರ್ ನಿಂದ ಇತ್ತೀಚಿನವರೆಗೆ 9000 ಕೋಟಿ ರೂ. ಟ್ಯಾಕ್ಸ್ ಕಲೆಕ್ಷನ್ ಆಗಿದೆ. ತೈಲ ಬೆಲೆ ಜಾಸ್ತಿ ಆಗಿರೋದಕ್ಕೆ ಸರ್ಕಾರಕ್ಕೆ ಆದಾಯ ಜಾಸ್ತಿ ಆಗಿದೆ. ಡೀಸೆಲ್ ಪೆಟ್ರೋಲ್ ಬೆಲೆ ಒಂದತ್ತು ರೂಪಾಯಿ ಕಡಿಮೆ ಮಾಡಿ ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಸಂಗುರು ಕಾರ್ಖಾನೆ ಕಾಂಗ್ರೆಸ್ ನವರಿಂದ ದಿವಾಳಿಯಾಗಿದೆ ಎಂದು ಬೊಮ್ಮಾಯಿ ಸುಳ್ಳು ಹೇಳ್ತಾರೆ. ಸಜ್ಜನರ ಮೇಲೆ ಆರೋಪ ಇದೆ, ಈ ಆರೋಪ ಇರೋ ವ್ಯಕ್ತಿನಾ ಶಾಸಕನನ್ನಾಗಿ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಶುಗರ್ ಫ್ಯಾಕ್ಟರಿಯನ್ನ ದಾವಣಗೆರೆ ಸಂಸದ ಸಿದ್ದೇಶ್ವರಗೆ ಬಿಜೆಪಿಯವರೇ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.