ಗುರುಮೀತ್ ರಾಮ್ ರಹೀಮ್ ಸಿಂಗ್‌ರೊಂದಿಗೆ ಅವತಾರ್ ಸಿಂಗ್, ಆಶ್ರಮದ ಮ್ಯಾನೇಜರ್ ಕೃಷನ್ ಲಾಲ್, ಶೂಟರ್‌ಗಳಾದ ಜಸಬೀರ್ ಸಿಂಗ್ ಹಾಗು ಸಾಬದಿಲ್ ಸಿಂಗ್ ರನ್ನು ದೋಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ. ಇನ್ನೊಬ್ಬ ಆರೋಪಿ ಇಂದರ್ ಸೈನ್ ಅಕ್ಟೊಬರ್ 2020ರಲ್ಲಿ ಸಾವನಪ್ಪಿದ್ದಾನೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಸುಶೀಲ್ ಕುಮಾರ್ ಗರ್ಗ ಐವರು ಆರೋಪಿಗಳನ್ನು ಐಪಿಸಿ ಸೆಕ್ಷನ್ 302 ಮತ್ತು 120ಬಿ ಅಡಿಯಲ್ಲಿ ದೋಷಿಗಳೆಂದು ಪರಿಗಣಿಸಿ ಘೋಷಿಸಿದ್ದಾರೆ. ಸಾಬದಿಲ್ ಸಿಂಗ್ ಅನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಪಿ.ಎಸ್.ವರ್ಮಾ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜಶೀಟ್ ಪ್ರಕಾರ ಹರಿಯಾಣ ರಾಜ್ಯದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧದಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತ್ ಸಿಂಗ್ ಒಂದು ಅನಾಮಧೇಯ ಪತ್ರವನ್ನು ಬರೆದಿದ್ದರು.
ಆಶ್ರಮದ ಒಳಗೆ ಗುರುಮೀತ್ ರಾಮ್ ರಹೀಮ್ ಸಿಂಗ್ ಮಹಿಳಾ ಅನುಯಾಯಿಗಳನ್ನು (ಸಾದ್ವಿಗಳು) ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅನಾಮಧೇಯ ಪತ್ರವನ್ನು ಬರೆದಿದ್ದರು. ಪತ್ರಕರ್ತ ರಾಮ್ ಚಂದರ್ ಛತ್ರಪತಿ ತನ್ನ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ತರುವಾಯ ಇಬ್ಬರನ್ನು ಕೊಲ್ಲಲಾಗಿತ್ತು.ಘಟನೆಗೆ ಸಂಭಂದಿಸಿದಂತೆ ಛತ್ರಪತಿ ಸಾವಿನ ಕುರಿತ ತೀರ್ಪು ಎರಡು ವರ್ಷದ ಹಿಂದೆ ಪ್ರಕಟವಾಗಿತ್ತು.
ಜುಲೈ 10 2002ರಲ್ಲಿ ಹರಿಯಾಣದ ಕುರುಕ್ಷೇತ್ರ ಥನೇಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಂಜಿತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಎಫ್‌ಐಆರ್‌ಅನ್ನು ದಾಖಲಿಸಿದ್ದರು. ನವೆಂಬರ್ 10 2003ರಂದು ಹರಿಯಾಣ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ರಾಮ್ ರಹೀಮ್ ಸಿಂಗ್ ಪ್ರಸ್ತುತ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿ ಎರಡು ಅತ್ಯಾಚಾರ ಪ್ರಕರಣ ಮತ್ತು ಪತ್ರಕರ್ತನ ಕೊಲೆ ಆರೋಪದ ಮೇಲೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅಕ್ಟೋಬರ್ 5ರಂದು ಪಂಜಾಬ್-ಹರಿಯಾಣ ಹೈಕೋರ್ಟ್ ಕೊಲೆ ಪ್ರಕರಣವನ್ನ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯದಿಂದ ಬೇರೆ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ಈಗಾಗಲೇ ಆಶ್ರಮದ ಸಾದ್ವಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಮೇಲೆ ರಹೀಮ್ ಸಿಂಗ್‌ನನ್ನು 2017ರಲ್ಲಿ 20ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಪತ್ರಕರ್ತನ ಕೊಲೆ ಆರೋಪದ ಮೇಲೆ ನ್ಯಾಯಾಲಯ ಎರಡು ವರ್ಷದ ಹಿಂದೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಗುರುಮೀತ್ ರಾಮ್ ರಹೀಮ್ ಸಿಂಗ್‌ಗೆ 2017ರಲ್ಲಿ ನ್ಯಾಯಾಲಯ ತೀರ್ಪನ್ನು ಪ್ರಕಟಿಸುತ್ತಿದ್ದಂತೆ ಹರಿಯಾಣದಲ್ಲಿ ಹಿಂಸಾಚಾರ ಭುಗಿಲೆದ್ದು ಅನೇಕ ಜನರು ಸಾವನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.