ಐಷಾರಾಮಿ ಕ್ರೂಸ್ ಎಂಪ್ರೆಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗಿದ್ದು,ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (NCB) ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದು ಇಂದು (ಸೋಮವಾರ) ಆರೋಪಿಗಳನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅಕ್ಟೋಬರ್ 7 ವರೆಗೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು NCB ವಶಕ್ಕೆ ನೀಡಿದೆ.
ಹೌದು, ವಿಲಾಸಿ ಹಡಗು ಕಾರ್ಡೇಲಿಯಾ ಕ್ರೂಸ್ ಎಂಪ್ರೆಸ್ ಶಿಪ್ನಲ್ಲಿ ಆಯೋಜಿಸಿಲಾಗಿತ್ತು ಎನ್ನಲಾದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಇತರ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆರ್ಯನ್ ಖಾನ್ ಫೋನಿನಲ್ಲಿ ‘ಆಘಾತಕಾರಿ, ಅಪರಾಧಿ ಸಂಗತಿ’ ಪತ್ತೆಯಾಗಿದ್ದು ಆತನನ್ನು ಅಕ್ಟೋಬರ್ 11 ರ ವರೆಗೆ ಕಸ್ಟಡಿಗೆ ಕೋರಿತ್ತು. ಹಾಗಾಗಿ ನ್ಯಾಯಾಲಯ ಗುರುವಾರದ ವರೆಗೆ ಅಂದರೆ 7ನೇ ತಾರೀಖಿನವರೆಗೂ NCB ವಶಕ್ಕೆ ನೀಡಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಇತರ ಮೂವರನ್ನು ಮುಂಬೈ ನ್ಯಾಯಾಲಯವೊಂದು ಅಕ್ಟೋಬರ್ 4ರವರೆಗೆ ಮಾದಕವಸ್ತು ನಿಯಂತ್ರಣ ದಳದ ವಶಕ್ಕೆ ಭಾನುವಾರ (ಅಕ್ಟೋಬರ್ 3) ರಂದು ನೀಡಿತ್ತು.
ಭಾನುವಾರ ಪ್ರಕರಣದ ವಿಚಾರಣೆ ವೇಳೆ, ಎನ್ಸಿಬಿ ವಕೀಲ ಅದ್ವೈತ್ ಸೇಥ್ನಾ ಅವರು ಎರಡು ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಿದರು. “ಎನ್ಸಿಬಿಯು ಮಾದಕವಸ್ತು ಪೂರೈಕೆದಾರನೊಬ್ಬನನ್ನು ವಶಕ್ಕೆ ಪಡೆದಿದ್ದು ವಿವಿಧ ಸಂಪರ್ಕಿತರ ಬಗ್ಗೆ ಪತ್ತೆ ಹಚ್ಚಬೇಕಿದೆ. ವಾಟ್ಸಪ್ ಸಂದೇಶಗಳ ಮೂಲಕ ಈ ಸಂಪರ್ಕ ಕೊಂಡಿಗಳು ಕಂಡು ಬಂದಿವೆ,” ಎಂದು ವಿವರಿಸಿದ್ದರು.
ಆರೋಪಿಗಳು ಎದುರಿಸುತ್ತಿರುವ ಅಪರಾಧವು ಜಾಮೀನಿಗೆ ಒಳಪಟ್ಟಿರುವಂಥದ್ದೇ ಆದರೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. “ಮೇಲುನೋಟಕ್ಕೇ ವಾಟ್ಸಪ್ ಸಂದೇಶಗಳಲ್ಲಿ ದೋಷಾರೋಪಣೆ ಮಾಡಬಹುದಾದ ವಿವರ ಲಭ್ಯವಾಗಿದ. ಹಾಗಾಗಿ ವಶಕ್ಕೆ ನೀಡಲು ಕೋರಿರುವ ರಿಮ್ಯಾಂಡ್ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಬೇಕು” ಎಂದು ಎನ್ಸಿಬಿ ವಕೀಲ ಅದ್ವೈತ್ ಸೇಥ್ನಾ ವಾದಿಸಿದ್ದರು.
ಇತ್ತ ಖಾನ್ ಪರವಾಗಿ ಹಾಜಾರದ ವಕೀಲ ಸತೀಶ್ ಮಾನೆಶಿಂಧೆ ಅವರು, “ನನ್ನ ಕಕ್ಷಿದಾರರನ್ನು ಆಯೋಜಕರು ಆಹ್ವಾನಿಸಿದ್ದರು. ಅವರ ಬಳಿ ಯಾವುದೇ ಬೋರ್ಡಿಂಗ್ ಪಾಸ್ ಇಲ್ಲ. ಅವರ ಬಳಿ ಯಾವುದೇ ಪದಾರ್ಥ (ಮಾದಕವಸ್ತು) ದೊರೆತಿಲ್ಲ. ಅವರ ಮೊಬೈಲ್ ಫೋನ್ ಸಹ ಪರಿಶೀಲಿಸಲಾಗಿದೆ. ಪರೀಕ್ಷೆಗಳಲ್ಲಿಯೂ ಸಹ ಯಾವುದೇ ಅಂಶ ಪತ್ತೆಯಾಗಿಲ್ಲ” ಎಂದು ವಾದ ಮಂಡಿಸಿದ್ದರು.
ಮುಂದುವರೆದು ಅವರು, ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು ಯಾವುದೇ ರೀತಿಯ ಒತ್ತಾಯವನ್ನು ಮಾಡುತ್ತಿಲ್ಲ. ಹಾಗಾಗಿ ತಾವು ಒಂದು ದಿನದ ಅವಧಿಯ ಮಟ್ಟಿಗೆ ವಶಕ್ಕೆ ಸಮ್ಮತಿಸುವುದಾಗಿ ತಿಳಿಸಿದರು. “ನಾನು ಒಂದು ವೇಳೆ ಇಂದು ಜಾಮೀನು ಅರ್ಜಿ ಸಲ್ಲಿಸಿದರೂ ಅವರು ಅದಕ್ಕೆ ಪ್ರತ್ಯುತ್ತರ ನೀಡಲು ಸಮಯ ಕೋರುತ್ತಾರೆ. ಇದರಿಂದ ನನ್ನ ಉದ್ದೇಶ ಈಡೇರಿದಂತಾಗುವುದಿಲ್ಲ. ಹಾಗಾಗಿ, ಘನ ನ್ಯಾಯಾಧೀಶರು ಒಂದು ದಿನದ ಮಟ್ಟಿಗೆ ವಶಕ್ಕೆ ನೀಡಲು ಸಮ್ಮತಿಸಬಹುದು,” ಎಂದು ವಾದಿಸಿದರು.
ಅಂತಿಮವಾಗಿ ನ್ಯಾಯಾಲಯವು ಖಾನ್ ಸಹಿತ ಮೂವರು ಆರೋಪಿಗಳನ್ನು ಅಕ್ಟೋಬರ್ 4ರವರೆಗೆ (ಸೋಮವಾರ) ವಿಚಾರಣೆಗಾಗಿ ಎನ್ಸಿಬಿ ವಶಕ್ಕೆ ನೀಡಿತು. ಖಾನ್ ಹಾಗೂ ಇತರೆ ಏಳು ಮಂದಿಯನ್ನು ಎನ್ಸಿಬಿಯು ಶನಿವಾರದಂದು ವಶಕ್ಕೆ ಪಡೆದಿತ್ತು. ಕಾರ್ಡೇಲಿಯಾ ಕ್ರೂಸ್ ಎಂಪ್ರೆಸ್ ಹಡಗಿನಲ್ಲಿ ಡ್ರಗ್ಸ್ ದೊರೆತ ಹಿನ್ನೆಲೆಯಲ್ಲಿ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಆದರೆ ಈಗ ಸೋಮವಾರ ಮತ್ತೆ ಅಫರಾಧಿಗಳನ್ನು ನ್ಯಾಯಾಲಕ್ಕೆ ಹಾಜರಿಪಡಿಸಿದ್ದು ನ್ಯಾಯಾಲಯ ಮುಂಬರುವ ಗುರುವಾರ ಅಕ್ಟೋಬರ್ 7 ವರಗೆ ಅಫರಾಧಿಗಳನ್ನು ಎನ್ಸಿಬಿ ವಶಕ್ಕೆ ನೀಡಿದೆ.
ಆರ್ಯನ್ ಖಾನ್ ನನ್ನು ಯಾವ ಅಪರಾಧಗಳಿಗಾಗಿ ಬಂಧಿಸಲಾಗಿದೆ? ಆತ ತಪ್ಪಿತಸ್ಥ ಎಂದು ಸಾಬೀತಾದರೆ ಮುಂದೇನು?
ವಶಪಡಿಸಿಕೊಂಡ ಮಾದಕ ವಸ್ತುವಿನ ಪ್ರಮಾಣವನ್ನು ಆಧರಿಸಿ ಎನ್ಡಿಪಿಎಸ್ ಕಾಯಿದೆಯ ಕಠಿಣತೆ ನಿರ್ಧರಿತವಾಗುತ್ತದೆ. ಬಂಧನ ಮೆಮೊ ಪ್ರಕಾರ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಯಿದೆಯ ಸೆಕ್ಷನ್ 35ರ ಜೊತೆಗೆ ಸೆಕ್ಷನ್ 8 (ಸಿ), 20 (ಬಿ), 27ರ ಆರೋಪವನ್ನು ಖಾನ್ಗೆ ನೀಡಲಾಗಿರುವ ಮೆಮೊ ಆರೋಪಿಸಿದೆ. ಮೊದಲು, ನಾವು ನಿಬಂಧನೆಗಳನ್ನು ಪರಿಶೀಲಿಸೋಣ.
ಸೆಕ್ಷನ್ 8 (ಸಿ): ಯಾವುದೇ ವ್ಯಕ್ತಿ ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಸ್ವಾಧೀನ, ಮಾರಾಟ, ಖರೀದಿ, ಸಾರಿಗೆ, ಸಂಗ್ರಹ, ಬಳಕೆ, ಸೇವನೆ, ಅಂತರ ರಾಜ್ಯ ಆಮದು, ರಫ್ತು, ಭಾರತಕ್ಕೆ ಆಮದು, ಭಾರತದಿಂದ ರಫ್ತು ಅಥವಾ ಸಾಗಾಟವನ್ನು ನಿರ್ಬಂಧಿಸಿದೆ.
ಸೆಕ್ಷನ್ 20 (ಬಿ): ಗಾಂಜಾಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಶಿಕ್ಷೆಯನ್ನು ಕಾಯಿದೆಯ ಈ ಸೆಕ್ಷನ್ ವಿಧಿಸುತ್ತದೆ. ಈ ಕಾಯಿದೆಯಡಿಯ ಯಾವುದೇ ನಿಬಂಧನೆ ಅಥವಾ ಯಾವುದೇ ನಿಯಮ ಅಥವಾ ಆದೇಶದ ವಿರುದ್ಧ ಅಥವಾ ಅದಕ್ಕೆ ನೀಡಿದ ಪರವಾನಗಿಯ ಷರತ್ತಿನ ವಿರುದ್ಧವಾಗಿ, ಗಾಂಜಾದ ಉತ್ಪಾದನೆ, ತಯಾರಿಕೆ, ಸ್ವಾಧೀನ, ಮಾರಾಟ, ಖರೀದಿ, ಸಾಗಾಟ, ಸಂಗ್ರಹ, ಬಳಕೆ, ಸೇವನೆ, ಅಂತರ ರಾಜ್ಯ ಆಮದು, ರಫ್ತು ಶಿಕ್ಷಾರ್ಹ ಅಪರಾಧ. ಈ ಕುರಿತಾದ ಶಿಕ್ಷೆಯ ವಿವರ:
1. ಸಣ್ಣ ಪ್ರಮಾಣಕ್ಕೆ – ಒಂದು ವರ್ಷದ ಕಠಿಣ ಸೆರೆವಾಸ, ಅಥವಾ 10,000 ದಂಡದೊಂದಿಗೆ ಶಿಕ್ಷೆ ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ.
2. ವಾಣಿಜ್ಯ ಪ್ರಮಾಣಕ್ಕಿಂತ ಕಡಿಮೆ ಆದರೆ ಸಣ್ಣ ಪ್ರಮಾಣಕ್ಕಿಂತ ಹೆಚ್ಚು – ಹತ್ತು ವರ್ಷಗಳ ಅವಧಿಗೆ ವಿಸ್ತರಿಸಬಹುದಾದ ಕಠಿಣ ಜೈಲುವಾಸ ಮತ್ತು 1 ಲಕ್ಷದವರೆಗೆ ದಂಡ ವಿಧಿಸಬಹುದು;
3. ವಾಣಿಜ್ಯ ಪ್ರಮಾಣಕ್ಕಾಗಿ – ಹತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಇಪ್ಪತ್ತು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಠಿಣ ಜೈಲುವಾಸ ಮತ್ತು 1 ಲಕ್ಷಕ್ಕಿಂತ ಕಡಿಮೆಯಿಲ್ಲದ ಆದರೆ 2 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಒಳಪಡುತ್ತಾರೆ. ಅಲ್ಲದೆ ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ, ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚುವರಿ ದಂಡ ವಿಧಿಸಬಹುದು.
ಸೆಕ್ಷನ್ 27 ಯಾವುದೇ ಮಾದಕ ದ್ರವ್ಯ ಅಥವಾ ಅಮಲು ಪದಾರ್ಥ ಸೇವನೆಗಾಗಿ ಶಿಕ್ಷೆ ನೀಡುತ್ತದೆ. ದೆಹಲಿಯಲ್ಲಿ ಎನ್ಡಿಪಿಎಸ್ ಪ್ರಕರಣಗಳಲ್ಲಿ ವಾದ ಮಂಡಿಸುವ ವಕೀಲ ಎಂ ಎಫ್ ಫಿಲಿಪ್ ಅವರು ಹೇಳುವಂತೆ, ಖಾನ್ ಅವರಿಂದ ವಶಪಡಿಸಿಕೊಂಡ ಮಾದಕವಸ್ತುಗಳನ್ನು ‘ಸಣ್ಣ ಪ್ರಮಾಣ’ದ್ದು ಎಂದು ಪರಿಗಣಿಸಲಾಗುತ್ತದೆ. ಆದರೆ ದೊರೆತಿರುವ ಕೊಕೇನ್ ಮಧ್ಯಮ ಪ್ರಮಾಣದ್ದಾಗಿದೆ.
ಇದರರ್ಥ ಸೆಕ್ಷನ್ 20 ಬಿ (ಬಿ) ಹತ್ತು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡವನ್ನು ವಿಧಿಸುತ್ತದೆ. ವ್ಯಕ್ತಿ ತಪ್ಪಿತಸ್ಥನಾಗಿದ್ದರೆ ಅದು ಅನ್ವಯವಾಗುತ್ತದೆ. ಆದರೂ, ಈ ನಿಬಂಧನೆಯು ಮಧ್ಯಂತರ ಪ್ರಮಾಣಕ್ಕೆ ಯಾವುದೇ ಕನಿಷ್ಠ ಶಿಕ್ಷೆ ಸೂಚಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿಯ ಜೈಲು ಶಿಕ್ಷೆ ನೀಡಲಾಗುತ್ತದೆ.
ಸೆಕ್ಷನ್ 27 ರ ಅಡಿಯಲ್ಲಿ ಮಾದಕ ವಸ್ತು ಸೇವನೆಗಾಗಿ ಶಿಕ್ಷೆ ವಿಧಿಸಿರುವುದು ತುಂಬಾ ಕಡಿಮೆ. ಜಾಮೀನಿಗೆ ಸಂಬಂಧಿಸಿದಂತೆ ಎನ್ಡಿಪಿಎಸ್ ಕಾನೂನಿನಲ್ಲಿ ಇನ್ನೊಂದು ಕುತೂಹಲಕಾರಿ ಅಂಶವಿದೆ. ವಾಣಿಜ್ಯ ಪ್ರಮಾಣವನ್ನು ಒಳಗೊಂಡ ಅಪರಾಧಗಳಿಗೆ, ಸರ್ಕಾರಿ ಅಭಿಯೋಜಕರು ಜಾಮೀನನ್ನು ವಿರೋಧಿಸಿದರೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗದು.
ಇತ್ತ ಕಾಂಗ್ರೆಸ್, ಮುಂದ್ರಾ ಬಂದರು ಪ್ರಕರಣ ಮರೆಮಾಚಲು ಶಾರುಖ್ ಪುತ್ರನ ಬಂಧನ ಮಾಡಲಾಗಿದೆ ಎಂಬ ಹೇಳಿಕೆಗಳು ಬರುತ್ತಿವೆ.
ಬಿಜೆಪಿಯ ಪರಮಾಪ್ತ ಉದ್ಯಮಿ ಗೌತಮ್ ಅದಾನಿ ಒಡೆತನದ ಗುಜರಾತಿನ ಮುಂದ್ರಾ ಬಂದರಿನಲ್ಲಿ ಬರೋಬ್ಬರಿ ಮೂರು ಟನ್ ನಷ್ಟು ಹೆರಾಯಿನ್ ಪತ್ತೆಯಾದ ಕೆಲವೇ ದಿನಗಳಲ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ದೇಶದ ಸಾವಿರಾರು ಮೈಲಿ ಕರಾವಳಿಯಲ್ಲಿ ಕೇವಲ ಮುಂದ್ರಾ ಬಂದರಿನ ಮೂಲಕವೇ ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಕೋಟಿ ಮೊತ್ತದ 25 ಸಾವಿರ ಕೆಜಿಗೂ ಅಧಿಕ ಮಾದಕ ವಸ್ತು ದೇಶದ ಒಳಗೆ ಪ್ರವೇಶಿಸಿದೆ. ಆ ಬಗ್ಗೆ ದೇಶದ ಗೃಹ ಸಚಿವರಾಗಲೀ, ಪ್ರಧಾನಿಗಳಾಗಲೀ ಯಾವುದೇ ಪ್ರತಿಕ್ತಿಯೆ ನೀಡುತ್ತಿಲ್ಲ. ಜೊತೆಗೆ ಅಂತಹ ದಂಧೆಗೆ ಪೂರಕವೋ ಎಂಬಂತೆ ಕಳೆದ ಒಂದೂವರೆ ವರ್ಷದಿಂದ ಎನ್ ಸಿಬಿ ಮುಖ್ಯಸ್ಥರ ಹುದ್ದೆಯನ್ನು ಖಾಲಿ ಉಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಮತ್ತು ದೇಶದ ವಿದ್ಯಾರ್ಥಿಗಳು ಮತ್ತು ಯುವಜನತೆಯ ಜೀವ ಮತ್ತು ಜೀವನ ಕಾಪಾಡಲು ನ್ಯಾಯಾಲಯ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಈ ದಾಳಿ ಕೂಡ ನಿಜವಾಗಿಯೂ ಮಾದಕ ದ್ರವ್ಯದ ಪಿಡುಗಿನ ವಿರುದ್ಧದ ಕಾರ್ಯಾಚರಣೆಯಲ್ಲ; ಬದಲಾಗಿ ಅದಾನಿ ಬಂದರಿನ 21 ಸಾವಿರ ಕೋಟಿ ಮೌಲ್ಯದ ಭಾರೀ ಮಾದಕದ್ರವ್ಯ ವಶ ಪ್ರಕರಣದಲ್ಲಿ ದೇಶದ ಜನತೆ ಪ್ರಶ್ನಿಸತೊಡಗಿದ ಹಿನ್ನೆಲೆಯಲ್ಲಿ, ಅವರ ಗಮನವನ್ನು ಬೇರೆಡೆ ಸೆಳೆಯಲು ನಡೆಸಿದ ಕಣ್ಣೊರೆಸುವ ಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ. ಅದೇ ವೇಳೆ ಬಂದರಿನಲ್ಲಿ ಡ್ರಗ್ಸ್ ಸಾಗಣೆಯ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕು ಎಂದೂ ಪಕ್ಷ ಪುನರುಚ್ಛರಿಸಿದೆ.