ಸಿಎಂ ಕುರ್ಚಿಯಿಂದ ಕೆಳಗಿಳಿದರೂ, ನಾಯಕತ್ವದ ಹೊರೆ ಕಳಚಿಟ್ಟರೂ ಬಿ.ಎಸ್ ಯಡಿಯೂರಪ್ಪ ಹುಮ್ಮಸ್ಸು, ವರ್ಚಸ್ಸು ಎಂದೂ ಕಡಿಮೆಯಾಗೋದಿಲ್ಲ. ಈಗಿನಿಂದಲೇ ಪಕ್ಷ ಸಂಘಟಿಸಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿಎಸ್ವೈ ಪಣ ತೊಟ್ಟಿದ್ದಾರೆ. ಇದಕ್ಕೆ ರಾಜ್ಯ ಪ್ರವಾಸವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಸದ್ಯ ಇದೇ ಕಮಲ ಮನೆಯಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.
ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜ್ಯ ಬಿಜೆಪಿಗೆ ಇವರೇ ಹಿರಿಯ ನಾಯಕ. ಹೀಗಂತ ಖುದ್ದು ಹೈಕಮಾಂಡೇ ಹೇಳಿರೋದು ಎಲ್ಲರಿಗೂ ಗೊತ್ತೇ ಇದೆ. ರಾಜ್ಯ ಪ್ರವಾಸ ಮಾಡುವ ಬಿಎಸ್ವೈ ಇರಾದೆಗೂ ನಮ್ಮ ಅನುಮತಿ ಯಾಕೆ ಬೇಕು ಎಂದು ಬಿಜೆಪಿ ವರಿಷ್ಠರೇ ಹೇಳಿದ್ದಾರೆ. ಏಕೆಂದರೆ, ಈಗಾಗಲೇ ಬಿಎಸ್ವೈ ರನ್ನ ಕೆಳಗಿಳಿಸಿದಕ್ಕೆ ಎದ್ದಿರುವ ಅಸಮಾಧಾನ ಪಕ್ಷದ ಒಳಗೊಳಗೆ ಇದ್ದೇ ಇದೆ.
ಈಗ ರಾಜ್ಯ ಪ್ರವಾಸ ತಡೆದರೆ 2023ರ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಗುವುದು ಬಹುತೇಕ ಖಚಿತ ಎಂಬುದು ಹೈಕಮಾಂಡ್ ಚಿಂತೆ.
ಹೀಗಾಗಿ ಬಿಎಸ್ವೈ ರಾಜ್ಯ ಪ್ರವಾಸ ತಡೆಯಲು ಹಿಂದೆ ಮುಂದೆ ನೋಡುತ್ತಿದೆ. ನೀವು ರಾಜ್ಯ ಪ್ರವಾಸ ಮಾಡಿ ಎಂದು ಹೇಳಿದೆ, ಮಾಡಬೇಡಿ ಎಂದು ಸೂಚಿಸದೆ ಹೈಕಮಾಂಡ್ ಜಾಣ ನಡೆ ತೋರುತ್ತಿದೆ. ಇದರ ಬೆನ್ನಲ್ಲೇ ಬಿಎಸ್ವೈ ಮತ್ತಷ್ಟೂ ಹುಮ್ಮಸ್ಸಿನಿಂದಲೇ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ.
ಯಡಿಯೂರಪ್ಪ ಗಣೇಶ ಚತುರ್ಥಿ ಬಳಿಕ ರಾಜ್ಯ ಪ್ರವಾಸ ಅಂದಿದ್ರು. ಆದರೆ, ಇನ್ನೂ ಕೂಡ ಪ್ರವಾಸ ಆರಂಭವಾಗಿಲ್ಲ. ಈ ನಡುವೆಯೇ ರಾಜ್ಯ ಪ್ರವಾಸಕ್ಕೆ ಬಿಎಸ್ವೈ ಭರದ ಸಿದ್ಧತೆ ನಡೆಸಿಕೊಂಡಿದ್ದಾರೆ. ನಾಯಕತ್ವ ಬಿಟ್ಟುಕೊಟ್ಟರೂ 2023ರ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದೇ ತೀರುತ್ತೇನೆ ಅಂತ ಪಣ ತೊಟ್ಟಿದ್ದಾರೆ. ಈ ಮೂಲಕ ವಯಸ್ಸಾದರೂ ನನ್ನ ವರ್ಚಸ್ಸು ಕಡಿಮೆಯಾಗಿಲ್ಲ ಎಂದು ಸಂದೇಶ ಸಾರಲು ಮುಂದಾಗಿದ್ದಾರೆ. ಇದೀಗ ಕಮಲ ಪಡೆಯನ್ನ ಗೊಂದಲಕ್ಕೀಡು ಮಾಡಿದೆ.

ಬಿಜೆಪಿ ನಾಯಕರಲ್ಲಿ ಇರುವ ಗೊಂದಲವೇನು?
1. ಬಿಎಸ್ವೈ ರಾಜ್ಯ ಪ್ರವಾಸ ಹೇಗಿರುತ್ತೆ ಅನ್ನೋ ಅಧಿಕೃತ ಮಾಹಿತಿ ಸಿಕ್ಕಿಲ್ಲ
2. ಯಡಿಯೂರಪ್ಪ ರಾಜ್ಯ ಪ್ರವಾಸ ಯಾವಾಗ ಆರಂಭ? ಎಲ್ಲಿಂದ ಆರಂಭ?
3. ಯಾವೆಲ್ಲಾ ಕ್ಷೇತ್ರಗಳಿಗೆ ಬಿಎಸ್ವೈ ಭೇಟಿ ಕೊಡ್ತಾರೆ? ನಿಗಾವಹಿಸುತ್ತಾರೆ?
4. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯತ್ತ ನಿಗಾವಹಿಸುವುದಾ?
5. ರಾಜ್ಯ ಪ್ರವಾಸದ ವೇಳೆ ಬಿಎಸ್ವೈ ನಮ್ಮ ಕ್ಷೇತ್ರಕ್ಕೇನಾದ್ರೂ ಬರ್ತಾರಾ?
6. ಒಂದು ವೇಳೆ ಬಂದರೆ ನಾವು ಪ್ರವಾಸದಲ್ಲಿ ಭಾಗಿಯಾಗಬೇಕಾ? ಬೇಡವಾ?
7. ನಳಿನ್ ಕುಮಾರ್ ಕಟೀಲ್ ಕೇಳಿ ಭಾಗಿಯಾಗೋ ಬಗ್ಗೆ ನಿರ್ಧರಿಸಬೇಕಾ?
ಹೌದು, ಬಿಎಸ್ವೈ ರಾಜ್ಯ ಪ್ರವಾಸ ಹೇಗಿರುತ್ತೆ ಅನ್ನೋ ಅಧಿಕೃತ ಮಾಹಿತಿ ಯಾರಿಗೂ ಸಿಕ್ಕಿಲ್ಲ. ಅಲ್ಲದೆ ರಾಜ್ಯ ಪ್ರವಾಸ ಯಾವಾಗ ಆರಂಭ? ಎಲ್ಲಿಂದ ಆರಂಭ ಅನ್ನೋದು ಇನ್ನೂ ಗೊತ್ತಾಗಿಲ್ಲ. ಯಾವೆಲ್ಲಾ ಕ್ಷೇತ್ರಗಳಿಗೆ ಬಿಎಸ್ವೈ ಭೇಟಿ ಕೊಡ್ತಾರೆ? ನಿಗಾವಹಿಸುತ್ತಾರೆ? ಎಂಬ ಬಗ್ಗೆಯೂ ಶಾಸಕರಿಗೆ ಸ್ಪಷ್ಟತೆ ಇಲ್ಲ. ಇದರ ನಡುವೆ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯತ್ತ ನಿಗಾವಹಿಸುವುದಾ? ಅಥವಾ ರಾಜ್ಯ ಪ್ರವಾಸದ ವೇಳೆ ಬಿಎಸ್ವೈ ನಮ್ಮ ಕ್ಷೇತ್ರಕ್ಕೇನಾದ್ರೂ ಬರುತ್ತಾರಾ? ಒಂದು ವೇಳೆ ಬಂದರೆ ನಾವು ಪ್ರವಾಸದಲ್ಲಿ ಭಾಗಿಯಾಗಬೇಕಾ? ಬೇಡವಾ? ಎನ್ನುವ ಗೊಂದಲ ಶಾಸಕರನ್ನು ಕಾಡುತ್ತಿದೆ.
ಹೀಗೆ ಬಿಎಸ್ವೈ ರಾಜ್ಯ ಪ್ರವಾಸದಿಂದ ಎದ್ದಿರುವ ಸಾಲು ಸಾಲು ಪ್ರಶ್ನೆಗಳಿಗೆ ಈವರೆಗೂ ಸಮರ್ಪಕವಾದ ಉತ್ತರ ಸಿಗದೆ ಬಿಜೆಪಿ ನಾಯಕರು ಹಾಗೂ ಶಾಸಕರು ಆತಂಕದಲ್ಲಿದ್ದಾರೆ. ಅತ್ತ ಹೈಕಮಾಂಡ್ ಏನೋ ಬಿಎಸ್ವೈ ಪ್ರವಾಸಕ್ಕೆ ನಮ್ಮ ಗ್ರೀನ್ ಸಿಗ್ನಲ್ ಬೇಡ ಅಂತ ಕೈ ತೊಳೆದುಕೊಂಡಿದೆ. ಇತ್ತ ಬಿಎಸ್ವೈ ಮಾತ್ರ ಯಾರಿಗೂ ಹೇಳದೆ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಇದರ ಹಿಂದೆ ತನ್ನ ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯದ ವಿಚಾರ ಇದ್ಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿದೆ.






