ನಟ, ಸಮಾಜ ಸೇವಕ ಸೋನುಸೂದ್ ಅವರ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಸೋನುಸೂದ್ ಅವರ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಅವರ ಕಚೇರಿಯಲ್ಲಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಮುಂಬೈನಲ್ಲಿ ನಟ ಸೋನುಸೂದ್ ಅವರ ನಿವಾಸಗಳು ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಸೋನುಸೂದ್ ಅವರಿಗೆ ಸಂಬಂಧಿಸಿದ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಐಟಿ ದಾಳಿ ನಡೆದಿದೆ.
ಕೊರೊನಾ ಸಂದರ್ಭದಲ್ಲಿ ನಟ ಸೋನುಸೂದ್ ಸಾವಿರಾರು ಮಂದಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಲಾಕ್ಡೌನ್ನಲ್ಲಿ ಬೇರೆ ರಾಜ್ಯ ಅಥವಾ ಬೇರೆ ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ನೆರವಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋನುಸೂದ್ ಹೆಸರು ಪ್ರಖ್ಯಾತಿಗೊಂಡಿತ್ತು. ಇತ್ತೀಚೆಗೆ ದೆಹಲಿ ಸರ್ಕಾರದ ‘ದೇಶ್ ಕೆ ಮಂಟರ್ಸ್’ ನ ಬ್ರಾಂಡ್ ಅಂಬಾಸಿಡರ್ ಆಗಿ ಅವರು ನೇಮಕಗೊಂಡಿದ್ದರು.
ರಾಜಕೀಯ ಸೇರಲು ಯಾವತ್ತೂ ಒಲವು ತೋರದ ಸೋನು ಸೂದ್ ಕಳೆದ ಹಲವು ದಿನಗಳಿಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಹಲವರಿಗೆ ಸೋನು ಸೂದ್ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆಯೇ ಎಂಬ ಅನುಮಾನ ಕಾಡಿತ್ತು. ಮುಂದಿನ ವರ್ಷದ ಪಂಜಾಬ್ ಚುನಾವಣೆಯಲ್ಲಿ ಸೋನುಸೂದ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡಿದ್ದವು.
ಈ ದಾಳಿ ರಾಜಕೀಯ ಪ್ರೇರಿತವೇ:
ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಯಾವುದೇ ವ್ಯಕ್ತಿ ಯಾರನ್ನಾದರೂ ಭೇಟಿಯಾಗಬಹುದು, ಆದಾಯ ತೆರಿಗೆ ಇಲಾಖೆ ಸ್ವತಂತ್ರ ವಿಭಾಗವಾಗಿದ್ದು, ತನ್ನದೇ ಆದ ಪ್ರೋಟೋಕಾಲ್ಗಳ ಪ್ರಕಾರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಹೇಳಿದ್ದಾರೆ.
ಶಿವಸೇನಾ ಮುಖಂಡ ಆನಂದ್ ದುಬೆ ಮಾತನಾಡಿ, ”ಆದಾಯ ತೆರಿಗೆ ಇಲಾಖೆ ದಾಳಿಯಿಂದ ಆಘಾತವಾಗಿದೆ, ಅವರು ಸಾವಿರಾರು ಮಂದಿಗೆ ಸಹಾಯ ಮಾಡಿದ್ದು, ಹೀಗೆ ಐಟಿ ಅಧಿಕಾರಿಗಳು ದಸಾಳಿ ನಡೆಸಲಿ ಎಂದೇ?, ಅವರು ಕಾನೂನು ಬಾಹಿರವಾಗಿ ಏನಾದರೂ ಮಾಡಿರಬಹುದು ಎಂದು ನನಗೆ ಅನಿಸುತ್ತಿಲ್ಲ” ಎಂದರು.