ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಶ್ರೀಲಂದಲ್ಲಿ ಆಹಾರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಖಾಸಗಿ ಬ್ಯಾಂಕುಗಳು ವಿತ್ತೀಯ ಆಮದಿಗೆ ಬಳಸುವ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾರ್ವಜನಿಕ ಭದ್ರತಾ ಸುಗ್ರಿವಾಜ್ಞೆ ಮೂಲಕ ಶ್ರೀಲಂಕ ಅಧ್ಯಕ್ಷ ಗೋತಬಯ ರಾಜಪಕ್ಸ ಈ ತುರ್ತು ಪರಿಸ್ಥಿತಿ ಕಡಗಳಿಗೆ ಸಹಿ ಹಾಕಿದ್ದಾರೆ. ತುರ್ತು ಪರಿಸ್ಥಿತಿಯ ನಿಯಮದನ್ವಯ, ಅಗತ್ಯಕ್ಕಿಂತ ಹೆಚ್ಚು ಆಹಾರ ದಾಸ್ತಾನು ಹೊಂದಿರುವ ವ್ಯಾಪಾರಿಗಳಿಂದ ದಾಸ್ತಾನು ವಶಪಡಿಸಿಕೊಂಡು ಅವರನ್ನು ಬಂಧಿಸುವ ಅಧಿಕಾರ ಸರ್ಕಾರ ಅಧಿಕಾರಿಗಳಿಗೆ ಸಿಗಲಿದೆ.
ದೇಶದೆಲ್ಲೆಡೆ ಹಣದುಬ್ಬರದಿಂದ ಜನರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ವವ್ಯಾಪಾರಿಗಳು ಸಗಟು ಹಾಗೂ ಚಿಲ್ಲರೆ ವ್ಯಾಪಾರ ನಡೆಸದಂತೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಅಗತ್ಯ ಸಾಮಗ್ರಿಗಳಾದ ಭತ್ತ, ಅಕ್ಕಿ ಮತ್ತು ಸಕ್ಕರೆಗಳ ದರದ ಮೇಲೆ ಗಮನ ಹರಿಸುವಂತೆ ಸರ್ಕಾರ ಆದೇಶಿಸಿದೆ.
ಇದರೊಂದಿಗೆ, ಗೊತಬಯಾ ಅವರು ಶ್ರೀಲಂಕಾದ ಮೇಜರ್ ಜನರಲ್ ಅವರಿಗೆ ಹೆಚ್ಚುವರಿ ಅಧಿಕಾರವನ್ನು ನೀಡಿದ್ದು, ದೇಶದ ಆಹಾರ ವಿತರಣೆಯ ಮೇಲುಸ್ತುವಾರ ವಹಿಸಿಕೊಳ್ಳಲು ಆದೇಶಿಸಿದ್ದಾರೆ.
ಶ್ರೀಲಂಕದೆಲ್ಲೆಡೆ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವಾಗಲೇ, ಜನರು ಹಾಲಿನ ಪುಡಿ, ಸಕ್ಕರೆ, ಅಡುಗೆ ಎಣ್ಣೆ ಹಾಗು ಇತರೆ ಸಾಮಗ್ರಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮುಂದಿನ ಸೋಮವಾರದವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ಜನ ಚಿಂತಿಸದೇ ಉದ್ದದ ಸಾಲುಗಳನ್ನು ನಿರ್ಮಿಸಿದ್ದಾರೆ.
ಇಂಧನ ಸಚಿರಾದ ಉದಯ ಗಮ್ಮನಪಿಲ್ಲ ಅವರು ಇಂಧನವನ್ನು ಮಿತವಾಗಿ ಬಳಸಲು ಕರೆ ನೀಡಿದ್ದಾರೆ. ಇದರಿಂದಾಗಿ, ಉಳಿದಿರುವ ವಿದೇಶಿ ವಿನಿಮಯ ಮೂಲಗಳಿಂದ ಅಗತ್ಯ ವಸ್ತು, ಔಷಧ ಹಾಗೂ ಲಸಿಕೆಗಳನ್ನು ಖರೀದಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.
2019ರಲ್ಲಿ ಗೋತಬಯ ಅಧಿಕಾರ ಸ್ವೀಕರಿಸುವಾಗ 7.5 ಬಿಲಿಯನ್ ಡಾಲರ್ ನಷ್ಟಿದ್ದ ವಿದೇಶಿ ವಿನಿಮಯ ಮೌಲ್ಯ ಈಗ 2.8 ಬಿಲಿಯನ್ ಡಾಲರ್’ಗೆ ಇಳಿದಿದೆ. ಈ ಕಾರಣಕ್ಕಾಗಿ ಕಳೆದ ವರ್ಷ ಶ್ರೀಲಂಕ ಸರ್ಕಾರವು ವಿದೇಶಿ ನಿರ್ಮಿತ ವಸ್ತುಗಳಾದ ಟೂತ್ ಬ್ರಷ್, ಸ್ಟ್ರಾಬೆರಿ, ವಿನಿಗರ್, ಸಕ್ಕರೆ ಸೇರಿದಂತೆ ಹಲವು ವಸ್ತುಗಳ ಮೇಲೆ ನಿಷೇಧ ಹೇರಿತ್ತು ಅಥವಾ ಅವುಗಲ ಮಾರಾಟಕ್ಕೆ ಪರವಾನಿಗೆ ಪಡೆಯಲು ಸೂಚಿಸಿತ್ತು.
ಶ್ರೀಲಂಕಾದ ಮುಳುಗುತ್ತಿರುವ ಆರ್ಥಿಕ ಹಡಗಿಗೆ, ಪ್ರವಾಸೋಸ್ಯಮ ಮಾತ್ರ ಜೀವ ತುಂಬಬಹುದಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಆ ಆಸೆಯೂ ಕಮರಿ ಹೋಗಿದೆ. ಮುಂದಿನ ಹನ್ನೆರಡು ತಿಂಗಳ ಒಳಗಾಗಿ ಶ್ರೀಲಂಕಾ ತಲಾ 1.5 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಎರಡು ಬಾರಿ ಪಾವತಿಸಬೇಕಿದೆ. ಈಗಿರುವ ಆರ್ಥಿಕ ಸಂಕಷ್ಟದಲ್ಲಿ ಇದು ಕೂಡಾ ಸಾಧ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ.