ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಆತ್ಮೀಯ ಸ್ನೇಹಿತರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ತನ್ನ ಆಪ್ತ ಮಹದೇವಪ್ಪಗೆ ಎಲ್ಲರನ್ನೂ ಎದುರು ಹಾಕಿಕೊಂಡು ಸಿದ್ದರಾಮಯ್ಯ ಲೋಕೋಪಯೋಗಿ ಖಾತೆ ನೀಡಿದ್ದರು. ಲೋಕೋಪಯೋಗಿ ಸಚಿವರಾಗಿ ಮಹದೇವಪ್ಪ ಯಾವುದೇ ಕೆಲಸ ಮಾಡದೆ ಹೋದರು ಇವರನ್ನು ಸಮರ್ಥಿಸಿಕೊಂಡವರು ಸಿದ್ದರಾಮಯ್ಯ. ಯಾರೇ ಎಷ್ಟೇ ಸರ್ಕಸ್ ಮಾಡಿದರೂ ಇಬ್ಬರ ನಡುವೆ ತಂದಿಡಲು ಸಾಧ್ಯವೇ ಇಲ್ಲದ ಸ್ನೇಹ ಸಿದ್ದರಾಮಯ್ಯ ಮತ್ತು ಎಚ್.ಸಿ ಮಹದೇವಪ್ಪರದ್ದು.

2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಳಗೆ ಗುದ್ದಾಟ ನಡೆಸಿ ಎಚ್.ಸಿ ಮಹದೇವಪ್ಪಗೆ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು. ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಸಿ ಮಹದೇವಪ್ಪ ಸೋಲೋದು ಎಂದು ಗೊತ್ತಿದ್ದರೂ ಲೆಕ್ಕಚಾರ ಹಾಕದೆ ಸಿದ್ದರಾಮಯ್ಯ ಟಿಕೆಟ್ ನೀಡಿದರು. ಹೀಗಿದ್ದರೂ ಎಚ್.ಸಿ ಮಹದೇವಪ್ಪ ತನ್ನ ಕ್ಷೇತ್ರದಲ್ಲಿ ಏನು ಕೆಲಸ ಮಾಡದ ಕಾರಣ ಚುನಾವಣೆಯಲ್ಲಿ ಸೋಲಬೇಕಾಯ್ತು. ಅಂದು ಯಾವುದೋ ವಿಚಾರಕ್ಕೆ ಕಾಣಿಸಿಕೊಂಡ ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವಿನ ಬಿರುಕು ಇನ್ನೂ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
ಹೌದು, ಸಿದ್ದರಾಮಯ್ಯ ಮತ್ತು ಆಪ್ತ ಮಹದೇವಪ್ಪ ನಡುವಿನ ಸ್ನೇಹ ಮತ್ತಷ್ಟು ಬಿಗಡಾಯಿಸಿದೆ ಎನ್ನಲಾಗುತ್ತಿದೆ. ಹಾಗಾಗಿ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಅಲ್ಲದೇ ಮಹದೇವಪ್ಪ ಜೊತೆಗಿನ ಗುದ್ದಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಾರೀ ಹಿನ್ನಡೆಯಾಗಿದೆ. ಹಾಗಾಗಿಯೇ ಟಿ. ನರಸೀಪುರ ಪುರಸಭೆ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪುರಸಭೆ ಅಧ್ಯಕ್ಷ ಸೋಮು ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ. ಸಿದ್ದರಾಮಯ್ಯ ಕೃಪಾಕಟಾಕ್ಷದಿಂದ ಹೇಗೋ ಹತ್ತು ತಿಂಗಳ ಹಿಂದೆ ಸೋಮ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸೋಮು ಪುರಸಭೆ ಅಧ್ಯಕ್ಷರಾಗಿದ್ದೇ ತಡ ಮಹದೇವಪ್ಪ ಬೆಂಬಲಿಗರು ಅಸಮಾಧಾನಗೊಂಡಿದ್ದರು. ಅಲ್ಲದೇ ಮಹದೇವಪ್ಪ ಬಣದ ಕೌನ್ಸಿಲರ್ಗಳು ಹತ್ತು ತಿಂಗಳಿಂದ ಯಾವುದೇ ಸಭೆ ನಡೆಸಲು ಬಿಡದಂತೆ ತಕರಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಮೂರು ಬಾರಿ ಕೌನ್ಸಿಲರ್ಗಳ ಸಭೆ ನಡೆಸಿ ಮನವೊಲಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಮಾತಿಗೂ ಜಗ್ಗದ ಮಹದೇವಪ್ಪ ಬಂಬಲಿಗೆ ಕೌನ್ಸಿಲ್ಗಳು ಅವಿಶ್ವಾಸ ನಿರ್ಣಯ ತರುವ ಮೂಲಕ ಸೋಮು ಪದಚ್ಯುತಿಗೆ ಯತ್ನಿಸಿದ್ದಾರೆ. ಮಹದೇವಪ್ಪ ಮನಸ್ಸು ಮಾಡಿದ್ರೆ ಇದನ್ನು ಕೇವಲ ಎರಡು ನಿಮಿಷದಲ್ಲಿ ಬಗೆಹರಿಸಬಹುದು. ಆದರೆ, ಯಾಕೋ ತನ್ನ ಬೆಂಬಲಿಗರನ್ನು ಕರೆಸಿ ಸಂಧಾನ ಸಭೆ ಮಾಡಲು ಆಸಕ್ತಿ ತೋರಿಸಿಲ್ಲ ಎನ್ನಲಾಗುತ್ತಿದೆ.
ಸಂಧಾನ ಸಭೆಗೆ ಆಹ್ವಾನಿಸಿದರೂ ಮಹದೇವಪ್ಪ ಬಂದಿರಲಿಲ್ಲ. ಮಹದೇವಪ್ಪ ಮನಸ್ಸು ಮಾಡಿದ್ರೆ ಕೌನ್ಸಿಲರ್ಗಳ ಮನವೊಲಿಸಬಹುದಿತ್ತು. ಆದರೆ ಸಿದ್ದು ನೇತೃತ್ವದಲ್ಲಿ ನಡೆದ ಸಂಧಾನ ಸಭೆಗೆ ಮಹದೇವಪ್ಪ ಗೈರಾಗಿದ್ದರು ಎನ್ನಲಾಗಿದೆ.
ಟಿ. ನರಸೀಪುರ ಪುರಸಭೆ 23 ಸದಸ್ಯರ ಸಂಖ್ಯಾ ಬಲ ಹೊಂದಿದೆ. ಇದರಲ್ಲಿ ಹತ್ತು ಕಾಂಗ್ರೆಸ್, ಆರು ಪಕ್ಷೇತರ, ಮೂರು ಬಿಜೆಪಿ, ಮೂರು ಜೆಡಿಎಸ್, ಒಂದು ಬಿಎಸ್ಪಿ ಗೆಲುವು ಸಾಧಿಸಿತ್ತು. ಮೂವರು ಪಕ್ಷೇತರರು, ಶಾಸಕ ಯತೀಂದ್ರ ಸಿದ್ದರಾಮಯ್ಯ, ಎಂಎಲ್ಸಿ ಧರ್ಮಸೇನ ಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.
ಇನ್ನು, ಮಹದೇವಪ್ಪ ಬೆಂಬಲಿಗ ಕೌನ್ಸಿಲರ್ಗಳು ಮನವೊಲಿಕೆ ತಯಾರಿಲ್ಲ. ನಾನು ಕರೆದ ಸಂಧಾನ ಸಭೆಗೆ ಮಹದೇವಪ್ಪ ಬರಲಿಲ್ಲ. ಹಾಗಾಗಿ ಮುಜುಗರದಿಂದ ಪಾರಾಗಾಲು ರಾಜೀನಾಮೆ ನೀಡುವಂತೆ ಸೋಮುಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರಂತೆ.
ಟಿ. ನರಸೀಪುರ ಪಟ್ಟಣ ಬಹುತೇಕ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮು ಗೆಲುವು ಸಾಧಿಸಿದ್ದರು. ಈ ಹಿಂದೆಯೇ ಸೋಮು ಆಯ್ಕೆಗೆ ಪರೋಕ್ಷವಾಗಿ ಮಹದೇವಪ್ಪ ಮತ್ತು ಮಗ ಸುನೀಲ್ ಬೋಸ್ ಅಸಮಧಾನ ವ್ಯಕ್ತಪಡಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಸುನೀಲ್ ಬೋಸ್ಗೆ ಟಿಕೆಟ್ ನೀಡದ ಕಾರಣ ಮಹದೇವಪ್ಪ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದಾರೆ. ಆದ್ದರಿಂದಲೇ ಈಗ ತನ್ನ ಕಟ್ಟಾ ಬೆಂಬಲಿಗೆ ಸೋಮು ಅವರನ್ನು ಪುರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿದೆ.







