ಯಡಿಯೂರಪ್ಪನವರ ಬಳಿಕ ರಾಜ್ಯಕ್ಕೆ ಸಿಎಂ ಯಾರು ಎಂಬ ಪ್ರಶ್ನೆಗೆ ನಿನ್ನೆ (ಮಂಗಳವಾರ) ತೆರೆ ಎಳೆದ ಹೈಕಮಾಂಡ್ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದರು. ಈ ಕುರಿತು ರಾಜ್ಯ ಕಾಂಗ್ರೇಸ್ ಟೀಕಿಸಿದ್ದು, ವಿಫಲ ಗೃಹಮಂತ್ರಿಯನ್ನು ಮುಖ್ಯಮಂತ್ರಿ ಮಾಡಿದರೂ ತಮ್ಮ ವಿಫಲ ಆಡಳಿತವನ್ನು ಮುಂದುವರೆಸುತ್ತಾರೆ. ಗೃಹ ಖಾತೆಯನ್ನು ಅತೀ ಕಳಪೆಯಾಗಿ ನಿಭಾಯಿಸಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ರಾಜ್ಯ ಬಿಜೆಪಿ ಸಿಎಂ ಮಾಡಲು ಮುಂದಾಗಿದೆ, ಈ “ಕೈಗೊಂಬೆ ಸಿಎಂ”ನಿಂದ ಮುಂದೆ ರಾಜ್ಯ ಇನ್ನಷ್ಟು ಅಧೋಗತಿಗೆ ಇಳಿಯಲಿದೆ ಎಂಬ ಭವಿಷ್ಯವನ್ನು ನಾವು ಈಗಲೇ ಊಹಿಸಬಹುದು. ವಿಫಲ ಹಾಗೂ ಪಕ್ಷಪಾತಿ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರ ಕೈಯ್ಯಲ್ಲಿ ರಾಜ್ಯ ಅಧೋಗತಿಗೆ ಇಳಿಯಲಿದೆ ಎಂಬುದಕ್ಕೆ ಕೆಲವು ಸಾಕ್ಷಿಗಳು ಇಲ್ಲಿವೇ ಎಂದು ಟ್ವೀಟ್ ಮಾಡಿದ್ದಾರೆ.
ಮಂಗಳೂರು ಗಲಭೆ ನಿಯಂತ್ರಣದಲ್ಲಿ ವೈಫಲ್ಯ:
ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ 2019 ಡಿಸೆಂಬರ್ 19ರಂದು ನಡೆದ ಪ್ರತಿಭಟನೆ, ಗಲಭೆ, ಪೊಲೀಸ್ ಗೋಲಿಬಾರ್ ಬಗ್ಗೆ ದೇಶಾದ್ಯಂತ ಚರ್ಚೆಯಾಗಿತ್ತು. ಈ ಕುರಿತು ಅನೇಕರು ಪೋಲಿಸರ ವರ್ತನೆ ಬಗ್ಗೆ ಗಂಭೀರ ಆರೋಪವನ್ನು ಸಹ ಮಾಡಿದ್ದರು. ಆ ಸಮಯದಲ್ಲಿ ಬಿ.ಎಸ್.ವೈ ನೇತೃತ್ವದ ಸರ್ಕಾರ ಇದ್ದು ಬಸವರಾಜ್ ಬೊಮ್ಮಾಯಿ ಅವರು ಗೃಹ ಮಂತ್ರಿಯಾಗಿದ್ದರು ಈ ಗಲಭೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದ ಅವರಿಗೆ ಈಗ ಸಿಎಂ ಪಟ್ಟ ಕೊಟ್ಟಿರುವುದನ್ನು ಕಾಂಗ್ರೆಸ್ ಟೀಕಿಸಿದೆ.
ಏನಿದು ಮಂಗಳೂರು ಗಲಭೆ?
ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ 2019 ಡಿಸೆಂಬರ್ 19ರಂದು ನಡೆದ ಪ್ರತಿಭಟನೆ, ಗಲಭೆ, ಪೊಲೀಸ್ ಗೋಲಿಬಾರ್ ಬಗ್ಗೆ ಎಲ್ಲೆಡೆ ಚರ್ಚೆಯಾಗಿತ್ತು. ಈ ಕುರಿತು 2020ರ ವಿಧಾನಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, “ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರ್ಕಾರ ರೂಪಿಸಿ ಜಾರಿಗೊಳಿಸುವ ಯಾವುದೇ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ” ಎಂದು ಹೇಳಿದ್ದರು.

“ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ ಸ್ಥಳೀಯರು ಡಿ.18ರ ಬೆಳಿಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದರು. ಆದರೆ ಇದೇ ದಿನ ಸಂಜೆ ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಮಾಡಿತು. ಈ ವಿಚಾರ ಹೆಚ್ಚು ಪ್ರಚಾರವಾಗದ ಕಾರಣ, ಡಿ.19 ರಂದು 100 ರಿಂದ 150 ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡರ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಮಂಗಳೂರಿಗೆ ತೆರಳಿ ಪರಿಸ್ಥಿತಿಯ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ, ಆ ದಿನ 144 ಸೆಕ್ಷನ್ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದೆ” ಎಂದು ಸಿದ್ದರಾಮಯ್ಯ ಹೇಳಿದ್ದರು.
ನಿಯಮ 69ರ ಅಡಿ ನಡೆದ ಸುಧೀರ್ಘ ಚರ್ಚೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, “ಮಂಗಳೂರಿನ ಸ್ಟೇಟ್ ಬ್ಯಾಂಕ್ ಎಂಬ ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, 144 ಸೆಕ್ಷನ್ ಬಗ್ಗೆ ಮಾಹಿತಿಯಿಲ್ಲದೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರರ ಮನವೊಲಿಸಿ ಮನೆಗೆ ಕಳುಹಿಸುವ ಬದಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಬಲಿ ಪಡೆದರು” ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

“ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಿಸಿಟಿವಿ ವೀಡಿಯೊ ಹಾಗೂ ಫೋಟೋಗಳಲ್ಲಿ ತೋರಿಸಿರುವಂತೆ ಪ್ರತಿಭಟನಾಕಾರರು ಮಾರಕಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಆಧಾರಗಳನ್ನು ಹಾಜರುಪಡಿಸಿಲ್ಲ ಹಾಗೂ ಈ ವೇಳೆ ಏನು 21 ಜನರನ್ನು ಬಂಧಿಸಲಾಗಿತ್ತು, ಅವರಲ್ಲಿ ಯಾರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬಂಧನಕ್ಕೊಳಗಾಗಿದ್ದ 21 ಜನರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದರೆ ಅವರ ಜೊತೆಯಲ್ಲಿದ್ದ ಇಬ್ಬರು ಗೋಲಿಬಾರ್ಗೆ ಬಲಿಯಾಗಿದ್ದಾರೆ. ಬಂಧನಕ್ಕೊಳಗಾದವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದಾದರೆ ಗೋಲಿಬಾರ್ನಲ್ಲಿ ಮೃತಪಟ್ಟವರು ಕೂಡ ಅಮಾಯಕರಲ್ಲವೇ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
“ಮಂಗಳೂರು ಗೋಲಿಬಾರ್ ಗೆ ಮುನ್ನದಿನ ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಲಾಠಿಚಾರ್ಜ್ ಮಾಡದಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದರು, ಮರುದಿನವೇ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಮೃತರಾದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಮೀರಿ ಆದೇಶ ನೀಡುವ ಕಾಣದ ಕೈಗಳಿವೆ. ಇಲ್ಲದಿದ್ದರೆ ಆದೇಶವಿಲ್ಲದೆ ಪೊಲೀಸರು ಲಾಠಿಚಾರ್ಜ್, ಗೋಲಿಬಾರ್ ಮಾಡಲು ಹೇಗೆ ಸಾಧ್ಯ?” ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಅನೇಕ ನಾಯಕರು ಗೃಹ ಸಚಿವರಿಗೆ ಈ ಕುರಿತು ತರಾಟೆಗೆ ತೆಗೆದುಕೊಂಡಿದ್ದರು.
ದಲಿತ ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು:
ಕಿರುಗುಂದದ ಮಹಿಳೆಯೊಬ್ಬರು ಕಾಣೆಯಾದ ಪ್ರಕರಣದಲ್ಲಿ ಬೆಟ್ಟಗೆರೆ ಗ್ರಾ.ಪಂ.ನಲ್ಲಿ ದಿನಗೂಲಿ ನೌಕರನಾಗಿರುವ ಇದೇ ಗ್ರಾಮದ ಕೆ.ಎಲ್.ಪುನೀತ್ನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ಸಂದರ್ಭ ಠಾಣೆಯಲ್ಲಿ ತಲೆಕೆಳಗಾಗಿ ಕಟ್ಟಿ ತೀವ್ರ ಹಲ್ಲೆ ನಡೆಸಿದ್ದಲ್ಲದೆ ಕಳ್ಳತನದ ಆರೋಪದಲ್ಲಿ ಕರೆತಂದಿದ್ದ ಚೇತನ್ ಎಂಬಾತನಿಂದ ಮೂತ್ರ ಮಾಡಿಸಿ ಕುಡಿಸಿದ್ದರು. ಪಿಎಸೈ ಅರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತೀವ್ರ ಹಲ್ಲೆ ಮಾಡಿದ್ದರಿಂದ ನಿತ್ರಾಣಗೊಂಡಿದ್ದ ಪುನೀತ್. ಕುಡಿಯಲು ನೀರು ಕೇಳಿದ್ದಾನೆ ಅಲ್ಲೇ ಇದ್ದ ಬಾಟಲಿಯಿಂದ ಎರಡು ಹನಿ ನೀರು ಹಾಕಿದ್ದಲ್ಲದೆ. ಪುನಃ ಹಲ್ಲೆಮಾಡಿದ್ದು, ನೀರು ಬೇಕೇ ಬೇಕು ಎಂದು ಕೇಳಿದಾಗ ಚೇತನ್ ಎಂಬುವನನ್ನು ಕರೆದ ಪಿಎಸೈ ಅರ್ಜುನ್, ಆತನ ಜಿಪ್ ಬಿಚ್ಚಿಸಿ ಬಾಯಿಗೆ ಮೂತ್ರ ಮಾಡಿಸಿದ್ದಾರೆ ಈ ಕುರಿತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಮಾನವ ಹಕ್ಕು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ದೂರಿದ್ದರು.
ದಲಿತ ಯುವಕ ಪುನೀತ್ಗೆ ಮೂತ್ರ ಕುಡಿಸುವ ಮೂಲಕ ಗೋಣಿಬೀಡು ಠಾಣೆ ಪಿಎಸ್ಐ ಅರ್ಜುನ್ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಆತನನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ರಾಜ್ಯದ ಅನೇಕ ಜನ ಆಗ್ರಹಿಸಿದ್ದರು. ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದರೆ ತನಿಖೆ ನಡೆಸಲಿ. ತಪ್ಪು ಮಾಡಿದ್ದರೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ. ಆದರೆ, ಜಾತಿ ನಿಂದನೆ ಮಾಡಿ, ಮೂತ್ರ ಕುಡಿಸುವ ಅಧಿಕಾರ ಪಿಎಸ್ಐಗೆ ನೀಡಿದ್ದು ಯಾರು? ದಲಿತ ದೌರ್ಜನ್ಯ ಕಾಯಿದೆಯಡಿ ಪಿಎಸ್ಐ ಅರ್ಜುನ್ನನ್ನು ಬಂಧಿಸಬೇಕು ಎಂದು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದರು.
ಪ್ರಕರಣದ ತನಿಖೆ ನಡೆಸಲು ಡಿವೈಎಸ್ಪಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಕ ಮಾಡಿದ್ದರು. ಪ್ರಾಥಮಿಕ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಪಿಎಸ್ಐ ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 342, 323, 504, 506, 330, 348 ಹಾಗೂ ದಲಿತ ದೌರ್ಜನ್ಯ ಕಾಯಿದೆಯಡಿ ಎಫ್ಐಆರ್ ದಾಖಲಿಸಿದ್ದರು. ಇಲ್ಲಿವರೆಗೂ ಈ ಕುರಿತು ಇಷ್ಟಯ ಮಾಹಿತಿ ಇದ್ದು ತನಿಖೆ ಎಲ್ಲಿವರೆಗೂ ಬಂದಿದೆ ಎಂಬುವ ಯಾವುದೇ ಮಾಹಿತಿ ದೊರೆತಿಲ್ಲ.

ಅತ್ಯಾಚಾರ ಆರೋಪಿ ಜಾರಕಿಹೊಳಿ ರಕ್ಷಣೆ:
ಸಿ.ಡಿ ಪ್ರಕರಣದ ಆರೋಪಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಕ್ಷಣೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದು ಆರೋಪಿಸಿದ್ದರು.
‘ಸರ್ಕಾರದ ಸಂಪೂರ್ಣ ರಕ್ಷಣೆ ಇದ್ದ ಕಾರಣ ಪೊಲೀಸರು ರಮೇಶ ಜಾರಕಿಹೊಳಿಯನ್ನು ಬಂಧಿಸಿಲ್ಲ. ಹೀಗಾಗಿ, ರಮೇಶ ಆರಾಮಾಗಿ ಓಡಾಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ರಮೇಶ ಜಾರಕಿಹೊಳಿಯನ್ನು ಬಂಧಿಸದಂತೆ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಇತ್ತೀಚೆಗೆ ಎಸ್ಐಟಿ ಮುಖ್ಯಸ್ಥ ಸೌಮೇಂಧು ಮುಖರ್ಜಿ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಈ ಮೂಲಕ, ಎಸ್ಐಟಿ ನಿಷ್ಕ್ರಿಯಗೊಳಿಸಲಾಗಿದೆ. ಮೇಲ್ನೋಟಕ್ಕೆ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
‘ರಮೇಶ ಜಾರಕಿಹೊಳಿ ಅವರನ್ನು ಬಿಪಿ, ಶುಗರ್ ಪರೀಕ್ಷೆ ಮಾಡಿ ಕಳುಹಿಸಿದ್ದಾರೆ. ಇದುವರೆಗೂ ಡಿಎನ್ಎ ಟೆಸ್ಟ್ ಮಾಡಿಲ್ಲ. ಕಾನೂನು ಪ್ರಕರಣ ಡಿಎನ್ಎ ಪರೀಕ್ಷೆ ಮಾಡಬೇಕಿತ್ತು. ಇಂಥ ಪ್ರಕರಣಗಳಲ್ಲಿ ಆರೋಪಿಯ ಡಿಎನ್ಎ ಟೆಸ್ಟ್ ಮಾಡಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಆದರೆ, ರಮೇಶ ಜಾರಕಿಹೊಳಿಯ ರಕ್ಷಣೆಯನ್ನು ಸರ್ಕಾರ ಮಾಡುತ್ತಿದೆ. ಒಪ್ಪಿಗೆ ಮೇರೆ ಎಲ್ಲ ನಡೆದಿದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬರಲು ರಮೇಶ ಜಾರಕಿಹೊಳಿ ಕಾರಣವಾಗಿದ್ದಾರೆ. ಹೀಗಾಗಿ, ಅವರನ್ನು ಈವರೆಗೂ ಬಂಧಿಸಿಲ್ಲ’ ಎಂದು ಸಿದ್ದರಾಮಯ್ಯ ದೂರಿದ್ದರು.
‘ನನಗೆ ಇರುವ ಮಾಹಿತಿ ಪ್ರಕಾರ, ಆರೋಪಿ ಸ್ಥಾನದಲ್ಲಿ ಇರುವ ರಮೇಶ ಜಾರಕಿಹೊಳಿ ಶನಿವಾರ ಗೃಹ ಸಚಿವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಒಬ್ಬ ಅತ್ಯಾಚಾರ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಇದೇ ಮೊದಲು. ಆರಂಭದಲ್ಲಿ ವಿಡಿಯೊ ನಕಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದರು. ಇದೀಗ ವಿಡಿಯೊದಲ್ಲಿ ಇರುವುದು ನಾನೇ ಎಂದು ಹೇಳಿದ್ದಾರೆ. ನಾನು, ನಾನೇ – ಅವಳು, ಅವಳೇ ಎಂದಿದ್ದಾರೆ’ ಎಂದು ರಮೇಶ್ ಜಾರಕಿಹೊಳಿ ನಡೆಯನ್ನು ಸಿದ್ದರಾಮಯ್ಯ ಲೇವಡಿ ಮಾಡಿದ್ದರು.
ಎಸ್ಐಟಿ ತನಿಖೆಯಿಂದ ಜಾರಕಿಹೊಳಿಗೆ ಕ್ಲೀನ್ಚಿಟ್ ಸಿಗುವುದರಲ್ಲಿ ಅನುಮಾನವಿಲ್ಲ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡರು ಎಂದು ಹೇಳಿದ್ದರು.
ಒಬ್ಬ ಅತ್ಯಾಚಾರಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಯನ್ನು ಖುದ್ದು ಮುಖ್ಯಮಂತ್ರಿಗಳೆ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ.
ಹೀಗಿರುವಾಗ ಎಸ್ ಐಟಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದರು.

ಹಲ್ಲೆ ಆರೋಪಿ ಸಿದ್ದು ಸವದಿ ರಕ್ಷಣೆ:
ಭಾರೀ ವಿವಾದ ಸೃಷ್ಟಿಸಿದ್ದ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಕಾರ್ಯಕರ್ತರು ಮಹಿಳಾ ಸದಸ್ಯೆಯೋರ್ವರನ್ನು ಎಳೆದಾಡಿದ್ದ ಮಹಿಳೆ ಗರ್ಭಾಪಾತಕ್ಕೊಳಗಾಗಿದ್ದರು ಈ ಕುರಿತು ಯಾವುದೇ ಪ್ರಕರಣವಾಗಲಿ ನೈತಿಕ ಹೊಣೆ ಹೊತ್ತು ಸಿದ್ದು ಸವದಿ ವಿರುದ್ದ ಪ್ರಕರಣ ದಾಕಲಿಸುವಲ್ಲಿ ಬೊಮ್ಮಾಯಿ ವಿಫಲಾಗಿದ್ದು ಹಲ್ಲೆ ಕೋರನನ್ನು ರಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿದೆ.
ನವೆಂಬರ್ 11 ರಂದು ಬಾಗಲಕೋಟೆಯ ಮಹಾಲಿಂಗಪುರಂ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯ ವೇಳೆ ಬಿಜೆಪಿಯ ಮೂವರು ಸದಸ್ಯೆಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂವರು ಸದಸ್ಯೆಯರು ಸಭೆಗೆ ಬಾರದಂತೆ ತಡೆಯಲು ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ.
ಸಿದ್ದು ಸವದಿ ಹಾಗೂ ಬೆಂಬಲಿಗರು ಎಳೆದಾಡಿದಾಗ ಹಲ್ಲೆಗೊಳಗಾಗಿದ್ದ ಬಿಜೆಪಿ ಸದಸ್ಯೆ ಚಾಂದಿನಿ ನಾಯ್ಕ ಅವರು ಮೂರು ತಿಂಗಳ ಗರ್ಭಣಿಯಾಗಿದ್ದು, ಎಳೆದಾಟದ ಪರಿಣಾಮ ಗಾಯಗೊಂಡಿದ್ದ ಅವರು ಗರ್ಭಾಪಾತಕ್ಕೊಳಗಾಗಿದ್ದರು.

ಗಲಭೆಕೋರರ ಕೇಸ್ ಹಿಂತೆಗೆತ:
ಬಿಜೆಪಿ ಸರ್ಕಾರ ಈಗಾಗಲೇ ರೈತ ಪ್ರತಿಭಟನೆಗಳು, ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿತ್ತು. ಆದರೆ ಹೋರಾಟಗಾರರ ಹೆಸರಲ್ಲಿ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನೂ ಹಿಂಪಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು.
ರೈತರ ಪರ, ಸಾಮಾಜಿಕ ಕಳಕಳಿ ಹಿನ್ನೆಲೆಯ ಪ್ರತಿಭಟನೆ, ಹರತಾಳ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಸಾಮಾಜಿಕ ಕಳಕಳಿ ಹೆಸರಿನಲ್ಲಿ ಸಂಘಟನೆಗಳು, ಪಕ್ಷದ ಕಾರ್ಯಕರ್ತರು ಮೇಲಿರುವ ಪ್ರಕರಣಗಳನ್ನು ವಾಪಾಸು ಪಡೆಯುವ ಮೂಲಕ ಅವರ ಕೃತ್ಯಗಳನ್ನು ಮುಚ್ಚಿ ಹಾಕಲು, ಆ ಮೂಲಕ ಅಂತಹ ಸಂಘಟನೆ ಮತ್ತು ವ್ಯಕ್ತಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸಕ್ಕೆ ಸರ್ಕಾರ ಬಹಿರಂಗವಾಗಿಯೇ ಕೈಹಾಕಿದೆ. ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ 62 ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಾಸು ಪಡೆಯಲು ಅನುಮೋದನೆ ನೀಡಿತ್ತು.
ಈ ಬಹುತೇಕ ಕ್ರಿಮಿನಲ್ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಡಿಜಿ-ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಡಿಸಿತ್ತು. ಆದರೆ 2020 ಜುಲೈ 22ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ 62 ಪ್ರಕರಣಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದರಂತೆ ಸಂಪುಟ ಸಭೆ 62 ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ವಾಪಸು ಪಡೆಯಲು ಅನುಮೋದನೆ ನೀಡಿತು.
ಸಂಪುಟ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲಿನ ಪ್ರಕರಣವನ್ನೂ ವಾಪಸು ಪಡೆಯಲು ತೀರ್ಮಾನಿಸಲಾಗಿತ್ತು. ಮೈಸೂರು ಸಂಸದ ಪ್ರತಾಪ್ ಸಿಂಹ ಡಿ.3, 2017ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ರ್ಯಾಲಿ ನಡೆಸಲು ಯತ್ನಿಸಿದ್ದರು. ನಿಷೇಧಾಜ್ಞೆ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಪ್ರಯತ್ನ ನಡೆಸಿದ್ದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಸಂಸದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಸಂಸದ ಪ್ರತಾಪ್ ಸಿಂಹ ವಿರುದ್ಧ ಐಪಿಸಿ 279, 353, 188 ಮತ್ತು 332ರಡಿ ಪ್ರಕರಣ ದಾಖಲಿಸಲಾಗಿತ್ತು. 2020 ಆಗಸ್ಟ್ ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕರಣಗಳನ್ನು ವಾಪಸು ಪಡೆಯಲಾಗಿದೆ. ಅಲ್ಲದೆ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿರುವ ಬೆಂಬಲಿಗರ ವಿರುದ್ಧದ ಪ್ರಕರಣವನ್ನೂ ವಾಪಸು ಪಡೆಯಲು ನಿರ್ಧರಿಸಲಾಗಿತ್ತು.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಫೆ.6, 2019ರಂದು ದಾವಣಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಂ.ಪಿ.ರೇಣುಕಾಚಾರ್ಯರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರೇಣುಕಾಚಾರ್ಯರ ಜಯಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಅಕ್ರಮ ಗುಂಪು ಕಟ್ಟಿಕೊಂಡಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ .ಪಿ.ಮಂಜಪ್ಪ ಮನೆ ಹತ್ತಿರ ಬೈದಾಡಿಕೊಂಡು ಸುತ್ತಾಡಿದ್ದರು. ಮುಖಂಡರ ಮನೆಯವರೊಂದಿಗೆ ಜಗಳ ಮಾಡಿ, ಹಲ್ಲೆ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಮಂಜಪ್ಪ ಅವರ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದರು. ಆ ವೇಳೆ ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದ ಆರೋಪವು ಕೇಳಿ ಬಂದಿದ್ದು ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂನಡಿ 143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.

ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ವಾಪಸ್ ಪಡೆಯಲಾಗಿದೆ. ಸರ್ಕಾರಿ ವಾಹನ ಜಖಂ, ಆಸ್ತಿಪಾಸ್ತಿ ನಾಶ, ಅಧಿಕಾರೊಗಳಿಗೆ ಗಾಯ ಮಾಡಿದ ಗಂಭೀರ ಆರೋಪ ಇತ್ತು. ಪ್ರಕರಣ ವಾಪಸು ಪಡೆಯಲು ಸಚಿವರು ಮನವಿ ಮಾಡಿದ್ದರು.
ಮೈಸೂರು ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂಧಲೆ ನಡೆಸಿ, ಕೋಮು ಗಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು ವಾಪಸು. ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಿಂದ 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ ವಾಪಸ್.
ಹೀಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ಪ್ರಕರಣ ವಾಪಸ್ ಪಡೆಯಬಾರದೆಂದು ಸೂಚಿಸಿದ್ದರೂ ಸರ್ಕಾರ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು, ಶಾಸಕರನ್ನು ರಕ್ಷಿಸಲು ಪ್ರಕರಣಗಳನ್ನು ಅಭಿಯೋಜನೆ ಯಿಂದ ವಾಪಸ್ ಪಡೆದಿದೆ. ರೈತರು, ವಿದ್ಯಾರ್ಥಿಗಳು, ನೀರಿಗಾಗಿ, ವಿದ್ಯುತ್, ಸರ್ಕಾರದ ನಡೆ ಖಂಡಿಸಿ ನಡೆಸುವ ಹೋರಾಟಗಳಿಗೆ ಸೀಮಿತವಾಗಬೇಕಿದ್ದ ಕ್ರಿಮಿನಲ್ ಪ್ರಕರಣಗಳ ವಾಪಸ್ ಪಡೆಯುವ ಪ್ರಕ್ರಿಯೆ, ಪಕ್ಷದವರನ್ನು ಹಾಗೂ ಸಂಘಟನೆ ಕಾರ್ಯಕರ್ತರನ್ನು ರಕ್ಷಿಸುವ ಉದ್ದೇಶಕ್ಕಾಗಿ ವಾಪಸ್ ಪಡೆಯುತ್ತಿರುವುದು ಆಗ ಗೃಹ ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗಲಭೆಕೋರರ ಕೇಸ್ ಹಿಂತೆಗೆಯುವ ಮೂಲಕ ರಕ್ಷಣೆ ಮಾಡುತ್ತಿದ್ದಾರೆ ಎಂಬ ಕೂಗು ಬಂದೊದ್ದು ಈಗ ಕಾಂಗ್ರೆಸ್ ಈ ಕುರಿರು ಟೀಕಿಸಿದೆ.
ಮೇಲಿನ ಎಲ್ಲಾ ಪ್ರಕರಣಗಳು ಇಂದಿನ ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಆಗ ಗೃಹ ಮಂತ್ರಿಯಾಗಿದ್ದಾಗ ಸಂಭವಿಸಿದ ಘಟನೆಯಾಗಿದ್ದು ಸರ್ಕಾರ ಮತ್ತು ಗೃಹ ಸಚಿವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಬಲವಾದ ಆರೋಪ ಮಾಡಿದ್ದು ವಿಫಲ ಗೃಹಮಂತ್ರಿಯನ್ನು ಮುಖ್ಯಮಂತ್ರಿ ಮಾಡಿದರೂ ತಮ್ಮ ವಿಫಲ ಆಡಳಿತವನ್ನು ಮುಂದುವರೆಸುತ್ತಾರೆ ಎಂದಿದೆ.





