ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರೂ ಬಿ.ಎಸ್. ಯಡಿಯೂರಪ್ಪ ತಮ್ಮ ಬೆಂಬಲಿಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸೋತು ಗೆದ್ದಿದ್ದಾರೆ. ರಾಜಕೀಯದಲ್ಲಿ ‘ರಾಜಿ’ ಎಂಬುದು ಬಹಳ ಮಹತ್ವವಾದುದು. ರಾಜಿ ಮೂಲಕ ಸೋಲನ್ನು ಗೆಲುವಾಗಿಸಿಕೊಳ್ಳುವ ಅವಕಾಶ ಇರುತ್ತದೆ. ಅದು ನಾಯಕನ ನಡೆಗಳನ್ನು ಆಧರಿಸಿರುತ್ತದೆ. ಕರ್ನಾಟಕದ ಸದ್ಯದ ರಾಜಕೀಯ ಪ್ರಹಸನದಲ್ಲಿ ಬಿ.ಎಸ್. ಯಡಿಯೂರಪ್ಪ ಅಂತಹ ನಾಜೂಕಿನ ನಡೆ ಇಟ್ಟಿದ್ದಾರೆ. ತನ್ಮೂಲಕ ‘ಪ್ರಬಲ’ ಎಂದು ಕರೆಯಲ್ಪಡುವ ಬಿಜೆಪಿ ಹೈಕಮಾಂಡಿನ ಎದುರು ಗೆದ್ದು ಬೀಗಿದ್ದಾರೆ.
ಅನಿವಾರ್ಯವಾಗಿದ್ದ ಸೋಲು!
ಗೆದ್ದಿರುವ ಬಿ.ಎಸ್. ಯಡಿಯೂರಪ್ಪ ಸೋತಿದ್ದಾದರೂ ಏಕೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಆಪರೇಷನ್ ಕಮಲ ನಡೆಸಿ, ಕೆಸರನ್ನು ತಮ್ಮ ಮುಖಕ್ಕೆ ಬಳಿದುಕೊಂಡು ತಂದಿದ್ದ ಅಧಿಕಾರ ಅವರ ಪಾಲಿಗೆ ತಾತ್ಕಾಲಿಕವಾಗಿತ್ತು. ಮುಖ್ಯಮಂತ್ರಿ ಗದ್ದುಗೆ ಏರುವ ಮುನ್ನವೇ ಇಳಿಯುವ ಸಮಯದ ಬಗ್ಗೆ ಹೈಕಮಾಂಡ್ ಸೂಚನೆ ನೀಡಿತ್ತು. ಹಾಗೆ ನೋಡಿದರೆ ಕಾಲಕಾಲಕ್ಕೆ ಯಡಿಯೂರಪ್ಪ ಉರುಳಿಸಿದ ದಾಳಗಳಿಂದಾಗಿ ಅವರು ನಿಗದಿತ ಸಮಯಕ್ಕಿಂತ ಹೆಚ್ಚೇ ಅಧಿಕಾರ ಅನುಭವಿಸಿದ್ದಾರೆ. ಈಗ ಕಾಲ ಮೀರಿತ್ತು. ಆದುದರಿಂದ ಅವರು ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು.

ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರಿಗೆ ಅವಧಿ ನಿಗಧಿ ಮಾಡುವ ಅಗತ್ಯ ಏನಿತ್ತು? ಅವರಿಗೆ ಅಧಿಕಾರ ಬಿಟ್ಟುಕೊಡುವ ಅನಿವಾರ್ಯತೆ ಏನಿತ್ತು ಎಂಬ ಉಪ ಪ್ರಶ್ನೆಗಳು ಹುಟ್ಟುವುದು ಕೂಡ ಸಹಜ. ಬಿಜೆಪಿಗೆ ಅಧಿಕಾರದ ಜೇನುಣಿಸಿದ ಯಡಿಯೂರಪ್ಪ ಪ್ರಮಾದಗಳನ್ನೂ ಮಾಡಿದ್ದಾರೆ. ಅದೇ ಕಾರಣಕ್ಕೆ ಮೊದಲ ಅವಧಿಯಲ್ಲಿ ಅವರು ಅಧಿಕಾರ ಕಳೆದುಕೊಂಡರು ಎಂಬುದು ಇತಿಹಾಸ. ಇನ್ನೊಂದೆಡೆ ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದ್ದರು. ಆಗಲೂ ಸೋತು ಗೆದ್ದು ಬೀಗಿದ್ದವರು ಯಡಿಯೂರಪ್ಪ. ಕೆಜೆಪಿಯಿಂದ ಬಿಜೆಪಿಗೆ ಬಂದಿದ್ದ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಒಂದು ವರ್ಷದ ಸಮಯದವರೆಗೆ ಅವಕಾಶ ನೀಡಲಾಗಿತ್ತು.
ಪುತ್ರ ತಂದ ಆಪತ್ತು!
ಯಡಿಯೂರಪ್ಪ ಬಗ್ಗೆ ಯಾರಿಗೂ ಅಪಸ್ವರಗಳು ಇರಲಿಲ್ಲ. ಆದರೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಗ್ಗೆ ವ್ಯಾಪಕವಾದ ಟೀಕೆ ಟಿಪ್ಪಣಿಗಳಿದ್ದವು. ಯಡಿಯೂರಪ್ಪ ಸರ್ಕಾರ ಎಂಬುದಕ್ಕಿಂತ ವಿಜಯೇಂದ್ರ ಸರ್ಕಾರ ಎನ್ನುವ ರೀತಿ ಆಗಿತ್ತು. ಕರೋನಾದಂತಹ ಕಡುಕಷ್ಟದ ಸಂದರ್ಭದಲ್ಲೂ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲಾಯಿತು. ಸಚಿವರು, ಶಾಸಕರು ವಿಜಯೇಂದ್ರ ಬಳಿ ಅವರ ಇಲಾಖೆಯ ಕೆಲಸಗಳಿಗೆ, ಅನುದಾನಕ್ಕೆ, ಅಧಿಕಾರಿಗಳ ವರ್ಗಾವಣೆಗೆ ಪರಿಪರಿಯಾಗಿ ಬೇಡಿಕೊಳ್ಳುವಂತಹ ಪರಿಸ್ಥಿತಿ ಇತ್ತು. ಇದರಿಂದಾಗಿ ದಿನೇ ದಿನೇ ಯಡಿಯೂರಪ್ಪ ವಿರುದ್ಧದ ಅಸಮಾಧಾನ ಹೆಚ್ಚಾಗಿ ಕಡೆಗೆ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ವಿಜಯೇಂದ್ರ ಉತ್ತಮವಾಗಿ ನಡೆದುಕೊಂಡಿದ್ದರೆ, ಅಪ್ಪನ ನೆರಳಲ್ಲಿ ನಿಧಾನಕ್ಕೆ ಬೇರೂರಲು ಯತ್ನಿಸಿದ್ದರೆ ಬಹುಶಃ ಚಿತ್ರಣ ಬದಲಾಗಿರುತ್ತಿತ್ತೇನೋ.
ಕಿಂಗ್ ಆಗಿದ್ದ ಯಡಿಯೂರಪ್ಪ ಈಗ ಕಿಂಗ್ ಮೇಕರ್!
ಹಿಂದಿನ ಅವಧಿಯಲ್ಲೂ ಯಡಿಯೂರಪ್ಪ ಮೊದಲಿಗೆ ಕಿಂಗ್ ಆಗಿದ್ದರು. ಬಳಿಕ ಕಿಂಗ್ ಮೇಕರ್ ಆದರು. ಈಗ ಈವರೆಗೆ ಕಿಂಗ್ ಆಗಿದ್ದರು. ಮುಂದೆ ಕಿಂಗ್ ಮೇಕರ್ ಆಗಲಿದ್ದಾರೆ. ಹೈಕಮಾಂಡ್ ಹೇಳಿದಂತೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟು ಬೆಂಬಲಿಗನನ್ನು ಮುಖ್ಯಮಂತ್ರಿ ಮಾಡಿ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಮೊದಲಿನಿಂದಲೂ ಸಂಚು ಹೂಡಿದ್ದ ಬಿ.ಎಲ್. ಸಂತೋಷ್ ಎದುರು ತನ್ನ ಶಕ್ತಿ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಎದುರು ಫೆಲವವಾದ ಅರವಿಂದ ಬೆಲ್ಲದ್ ಅವರನ್ನು ಅಖಾಡಕ್ಕಿಳಿಸಿ ಆಟ ನೋಡುತ್ತಿದ್ದವರಿಗೆ ಕಡೆ ಗಳಿಗೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ.
ಅಸಲಿ ಆಟ ಶುರು!
ರಾಜ್ಯದಲ್ಲಿ ಈಗಿರುವುದು ವಲಸಿಗರು ಮತ್ತು ಬಿಜೆಪಿ ಮೈತ್ರಿ ಸರ್ಕಾರ. 17 ಜನರ ಪೈಕಿ ಹತ್ತನ್ನೆರಡು ಮಂದಿಗೆ ಮಂತ್ರಿ ಸ್ಥಾನ ಕೊಡಬೇಕು. ಆಗ ಮೂಲ ಬಿಜೆಪಿಯ ಅರ್ಹರಿಗೆ ಅವಕಾಶ ತಪ್ಪುತ್ತವೆ. ಇದು ಮತ್ತೆ ಅನಿಶ್ಚಿತ ವಾತಾವರಣ ಸೃಷ್ಟಿ ಆಗಲು ಎಡೆಮಾಡಿಕೊಡುತ್ತದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸುಗಮವಾಗಿ ಸರ್ಕಾರ ನಡೆಯುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಆದುದರಿಂದ ಯಡಿಯೂರಪ್ಪ ತಮ್ಮ ಆಟ ಆಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲಿಗೆ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡರೂ ಅವರ ಪ್ರಭಾವ ತಪ್ಪಿಸಲು ಬಿಜೆಪಿ ಹೈಕಮಾಂಡಿಗೆ ಕಡೆಗೂ ಸಾಧ್ಯವಾಗಲೇ ಇಲ್ಲ.