ಇವತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು.
ಅವರ ತಂದೆ ಶ್ರೀ ಎಸ್.ಆರ್.ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಆಗಸ್ಟ್ 13, 1988ರಿಂದ ಏಪ್ರಿಲ್ 21. 1989 ವರೆಗೆ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಕರ್ನಾಟಕ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಪ್ರಜಾಪ್ರಭುತ್ವ ಮತ್ತು ರಾಜ್ಯದ ಸ್ವಾಯತ್ತೆಯ ಉಳಿವಿಗೆ ಅವರು ನಡೆಸಿದ ಹೋರಾಟ ಐತಿಹಾಸಿಕವಾದುದು.
1989 ರಲ್ಲಿ ಕೆಲವು ಶಾಸಕರು ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಪತ್ರ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಸರ್ಕಾರದ ವಜಾಗೊಂಡಿತು. ಇದರ ವಿರುದ್ಧ ಬೊಮ್ಮಾಯಿಯವರು ಕೋರ್ಟಿಗೆ ಹೋದರು. ಈ ಕುರಿತು ಒಂಭತ್ತು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು , 1994 ಮಾರ್ಚ್ 11ರಂದು ನೀಡಿದ ತೀರ್ಪು ಮುಂದೆ, ಸಂವಿಧಾನದ ಘನತೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಕಾರಣವಾಯಿತು.

ʼರಾಜ್ಯ ಸರ್ಕಾರವನ್ನು ವಜಾಗೊಳಿಸುವ ರಾಷ್ಟ್ರಪತಿಗಳ ಅಧಿಕಾರವು ಸಂಪೂರ್ಣವಲ್ಲ, ಸಂಸತ್ತಿನ ಉಭಯ ಸದನಗಳಿಂದ ಘೋಷಣೆ ಅಂಗೀಕರಿಸಲ್ಪಟ್ಟ ನಂತರವೇ ರಾಷ್ಟ್ರಪತಿಗಳು ಅಧಿಕಾರವನ್ನು ಚಲಾಯಿಸಬೇಕು, ಸಂಸತ್ತಿನ ಉಭಯ ಸದನಗಳು ಒಪ್ಪಿಗೆ ನೀಡದಿದ್ದಲ್ಲಿ ಅಥವಾ ಘೋಷಣೆಯನ್ನು ಅಂಗೀಕರಿಸದಿದ್ದಲ್ಲಿ, ಘೋಷಣೆ ಎರಡು ತಿಂಗಳ ಅವಧಿಯ ಕೊನೆಯಲ್ಲಿ ಕಳೆದುಹೋಗುತ್ತದೆ. ಅಂತಹ ಸಂದರ್ಭದಲ್ಲಿ, ವಜಾಗೊಳಿಸಲ್ಪಟ್ಟ ಸರ್ಕಾರವು ಪುನರುಜ್ಜೀವನಗೊಳ್ಳುತ್ತದೆ ಮತ್ತು ವಿಧಾನಸಭೆ ಪುನಃ ಸಕ್ರಿಯಗೊಳ್ಳುತ್ತದೆ ‘ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿತು. ಚುನಾಯಿತ ಸರ್ಕಾರವನ್ನು ವಜಾಗೊಳಿಸುವುದು ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರದ ಹಕ್ಕು ಎಂಬಂತಿದ್ದ ಧೋರಣೆಯನ್ನು ಆ ತೀರ್ಪು ಶಾಶ್ವತವಾಗಿ ಬದಲಾಯಿಸಿತು. ಈ ಪ್ರಕರಣ ಕಳೆದು ಮೂರು ದಶಕಗಳಾಗುತ್ತಾ ಬಂದರೂ ಅದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ.

ಇದು ಸಾಧ್ಯವಾಗುವಂತೆ ಮಾಡಿದ ಎಸ್.ಆರ್ ಬೊಮ್ಮಾಯಿಯವರು ತಮ್ಮ ಕಾಲೇಜು ದಿನಗಳಿಂದಲೇ ಕ್ರಾಂತಿಕಾರಕ, ವಿನೂತನ ರಾಜಕೀಯ ಸಿದ್ಧಾಂತ ಹೊಂದಿದವರಾಗಿದ್ದರು. ಬಂಗಾಲದ ಕ್ರಾಂತಿಕಾರಿ ಚಿಂತಕ ಎಂ.ಎನ್.ರಾಯ್ ಅವರ ಸೈದ್ಧಾಂತಿಕ ಗರಡಿಯಲ್ಲಿ ಬೆಳೆದ ಬೊಮ್ಮಾಯಿಯವರಿಗೆ ರಾಜಕೀಯ ಧೈರ್ಯ, ಸೈದ್ಧಾಂತಿಕ ಬದ್ಧತೆಗೆ ಯಾವ ಕೊರತೆಯೂ ಇರಲಿಲ್ಲ. ಅವರು ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದರು, ಬಡ ಗೇಣಿದಾರರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿದ್ದರು. ತುರ್ತು ಪರಿಸ್ಥಿತಿಯ ದುರಾಡಳಿತದ ವಿರುದ್ಧ ಧ್ವನಿ ಎತ್ತಿದ್ದರು. ರೈತರು, ದಲಿತರು, ಕನ್ನಡಪರ ಹೋರಾಟಗಾರರನ್ನು ಒಗ್ಗೂಡಿಸಿದ್ದರು. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಅವರು ನಿರಂತರವಾಗಿ ಮಾತಾಡಿದ್ದರು. ೨೦೦೭ರಲ್ಲಿ ಅವರು ತೀರಿಕೊಂಡಾಗ ನಾವು ಕೆಲವರು ದೆಹಲಿಯಲ್ಲಿ ಪುಟ್ಟದೊಂದು ಕಾರ್ಯಕ್ರಮ ನಡೆಸಿ ಅವರಿಗೆ ಗೌರವ ಸಲ್ಲಿಸಿದ್ದೆವು.
ಇಂದಿನ ಮುಖ್ಯಮಂತ್ರಿಗಳಿಗೆ ಒಳ್ಳೆಯ ಹಿನ್ನೆಲೆಯಿದೆ ಎಂದು ಹೇಳಲು ಇಷ್ಟು ಬರಯಬೇಕಾಯಿತು. ಅವರದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ಕಾಲವೇ ಹೇಳಬೇಕು.
(ಪುರುಷೋತ್ತಮ ಬಿಳಿಮಲೆಯವರ ಫೇಸ್ಬುಕ್ ಪೋಸ್ಟ್)
ಪುರುಷೋತ್ತಮ ಬಿಳಿಮಲೆ, ಚಿಂತಕರು, ಜೆಎನ್‌ಯು ಕನ್ನಡ ಪೀಠದ ಮುಖ್ಯಸ್ಥರಾಗಿದ್ದವರು