ಸರ್ಕಾರವು ತಾನು ಹೊಸದಾಗಿ ತರಲಿಚ್ಛಿಸಿರುವ ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ಐಟಿ ನಿಯಮ- 2021ರಲ್ಲಿ ಯಾರಿಗೂ ವಿನಾಯಿತಿ ನೀಡುವುದಿಲ್ಲ ಎಂದು ನಿರ್ಧರಿಸಿದೆ. ಹೊಸ ನಿಯಮಗಳು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ಹುನ್ನಾರ ಎಂಬ ಆರೋಪಗಳ ನಡುವೆಯೂ ದೇಶದ ಹಲವು ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳು ತಮ್ಮ ವೆಬ್ಸೈಟ್ ಗಳಿಗೆ ಹೊಸ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದವು. ಆದರೆ ಟೆಲಿವಿಷನ್ ಚಾನೆಲ್ಗಳು ಮತ್ತು ಮುದ್ರಣ ಮಾಧ್ಯಮಗಳ ಡಿಜಿಟಲ್ ಸುದ್ದಿ ವೆಬ್ಸೈಟ್ ಗಳನ್ನು 2021 ರ ಐಟಿ ನಿಯಮಗಳ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಸರ್ಕಾರ ನಿರಾಕರಿಸಿದೆ ಮತ್ತು ಡಿಜಿಟಲ್ ಮಾಧ್ಯಮ ನಿಯಮಗಳ ನಿಬಂಧನೆಗಳನ್ನು ತಕ್ಷಣವೇ ಅನುಸರಿಸಲು “ತುರ್ತು ಕ್ರಮಗಳನ್ನು” ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.

ಎಲ್ಲಾ ಸಂಸ್ಥೆಗಳ ವೆಬ್ಸೈಟ್ಗಳನ್ನು ಕಾನೂನಿನ ವ್ಯಾಪ್ತಿಗೆ ತರುವ ಸರ್ಕಾರದ ನಿರ್ಧಾರವು “ಸಮಂಜಸವಾಗಿದೆ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಜಿಟಲ್ ನ್ಯೂಸ್ ಪ್ರಕಾಶಕರು, ಆನ್ಲೈನ್ ಕ್ಯುರೇಟೆಡ್ ಕಂಟೆಟ್ ಪ್ರಕಾಶಕರು, ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ಮೀಡಿಯಾ ಪ್ರಕಾಶಕರ ಸಂಘಗಳಿಗೆ ಸ್ಪಷ್ಟೀಕರಣದಲ್ಲಿ ಗುರುವಾರ ತಿಳಿಸಿದೆ.
“ಈ ರೀತಿ ವಿನಾಯಿತಿ ನೀಡಿದರೆ ಸಾಂಪ್ರದಾಯಿಕ ಟಿವಿ ಅಥವಾ ಮುದ್ರಣ ಮಾಧ್ಯಮಗಳನ್ನು ಹೊಂದಿಲ್ಲದ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ” ಎಂದು ಸಚಿವಾಲಯ ತಿಳಿಸಿದೆ.
ನ್ಯಾಷನಲ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ (ಎನ್ಬಿಎ) ಇತ್ತೀಚೆಗೆ ಸಚಿವಾಲಯಕ್ಕೆ ಪತ್ರ ಬರೆದು, ಸಾಂಪ್ರದಾಯಿಕ ಟೆಲಿವಿಷನ್ ಸುದ್ದಿ ಮಾಧ್ಯಮವನ್ನು ಮತ್ತು ಅದರ ಡಿಜಿಟಲ್ ಆವೃತ್ತಿಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021ರಿಂದ ಹೊರಗಿಡಬೇಕು ಮತ್ತು ವಿನಾಯಿತಿ ನೀಡಬೇಕು. ಯಾಕೆಂದರೆ ಈ ಮಾಧ್ಯಮಗಳು ಈಗಾಗಲೇ ವಿವಿಧ ಕಾನೂನುಗಳು, ಮಾರ್ಗಸೂಚಿಗಳು ಮತ್ತು ನಿಬಂಧನೆಗಳಿಂದ “ಸಾಕಷ್ಟು ನಿಯಂತ್ರಿಸಲ್ಪಟ್ಟಿದೆ” ಎಂದು ಹೇಳಿದೆ.

“ಸಾಂಪ್ರದಾಯಿಕ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ನೀತಿ ಸಂಹಿತೆಗಳನ್ನು ಪಾಲಿಸಬೇಕಿರುವುದರಿಂದ ಅಂತಹ ಘಟಕಗಳಿಗೆ ಯಾವುದೇ ಹೆಚ್ಚುವರಿ ನಿಯಂತ್ರಣ ಹೊರೆ ಇರುವುದಿಲ್ಲ. ಹಾಗೆಯೇ ಅಂತಹ ಸಂಸ್ಥೆಗಳ ಡಿಜಿಟಲ್ ಸುದ್ದಿ ಕಂಟೆಂಟನ್ನು ಡಿಜಿಟಲ್ ಮೀಡಿಯಾ ನಿಯಮಗಳು 2021 ರ ವ್ಯಾಪ್ತಿಯಿಂದ ವಿನಾಯಿತಿ ನೀಡುವ ಮನವಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ”ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ ಸಾಂಪ್ರದಾಯಿಕ ಟಿವಿ ಮತ್ತು ಮುದ್ರಣ ಮಾಧ್ಯಮಗಳು ಹೊಂದಿರುವ ಡಿಜಿಟಲ್ ಘಟಕಗಳನ್ನು ಈಗಾಗಲೇ ಸರ್ಕಾರದಲ್ಲಿ ಪತ್ರಿಕಾ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ ಅಥವಾ 2011 ರ ಅಪ್ಲಿಂಕಿಂಗ್ ಮತ್ತು ಡೌನ್ಲಿಂಕಿಂಗ್ ಮಾರ್ಗಸೂಚಿಗಳ ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಡಿಜಿಟಲ್ ಸುದ್ದಿ ಪ್ರಕಾಶಕರು ಯಾವುದೇ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ವಿಷಯವನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರವಾನಿಸಿದಾಗ, ಅಂತಹ ವಿಷಯವು ಆ ವೇದಿಕೆಯ ನಿಯಂತ್ರಕ ಜವಾಬ್ದಾರಿಯಿಂದ ಹೊರಗಿರುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ ಆಕ್ಟ್, 1995 ರ ಅಡಿಯಲ್ಲಿ ಪ್ರೋಗ್ರಾಂ ಕೋಡ್ ಉಲ್ಲಂಘನೆ ಮತ್ತು ಅವುಗಳ ಆಂತರಿಕ ಸಂಕೇತಗಳು ಅಥವಾ ಮಾರ್ಗಸೂಚಿಗಳ ಕುರಿತಾದ ಸವಾಲುಗಳನ್ನು ನಿರ್ಣಯಿಸಲು ದೂರದರ್ಶನ ಸುದ್ದಿ ವಾಹಿನಿಗಳು ಈಗಾಗಲೇ ಸ್ವಯಂ-ನಿಯಂತ್ರಕ ಕಾರ್ಯವಿಧಾನವನ್ನು ಹೊಂದಿವೆ ಎಂದು ಸಚಿವಾಲಯ ಹೇಳಿದೆ.

“ಐಟಿ ರೂಲ್ಸ್ 2021, ಅಸ್ತಿತ್ವದಲ್ಲಿರುವ ನಿಯಮಗಳ ವಿಸ್ತರಣೆಯಾಗಿದೆ. ಇದಲ್ಲದೆ, ಸ್ವಯಂ-ನಿಯಂತ್ರಕ ಸಂಸ್ಥೆಯ ಸಂಯೋಜನೆಯನ್ನು ಸಂಪೂರ್ಣವಾಗಿ ಪ್ರಕಾಶಕರು ನಿರ್ಧರಿಸುತ್ತಾರೆ ಮತ್ತು ಇದರಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿರುವುದಿಲ್ಲ ” ಎಂದು ಸಚಿವಾಲಯ ತಿಳಿಸಿದೆ. “ಸರ್ಕಾರವು ಅದರ ಸಂಯೋಜನೆಯನ್ನು ಒಳಗೊಂಡಂತೆ ಸ್ವಯಂ-ನಿಯಂತ್ರಕ ಸಂಸ್ಥೆಯ ರಚನೆಯಲ್ಲಿ ಹಸ್ತಕ್ಷೇಪ ಮಾಡುವ ಅಥವಾ ತಡೆಯುವ ಉದ್ದೇಶವನ್ನು ಹೊಂದಿಲ್ಲ” ಎಂದು ಅದು ಹೇಳಿದೆ.
ಪ್ರಧಾನಿಗಳ ವಿರುದ್ಧ, ಆಡಳಿತ ಪಕ್ಷಗಳ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಬರೆದರೆ ಬಂಧನವಾಗುವ ಈ ಕಾಲದಲ್ಲಿ ಸರ್ಕಾರದ ಉದ್ದೇಶವನ್ನೂ, ಅದರ ಹೇಳಿಕೆಯನ್ನೂ ನಂಬಲಾಗುವುದಿಲ್ಲ ಎಂದು ಸಾಮಾನ್ಯ ಜನರು ಆತಂಕ ವ್ಯಕ್ತಪಡಿಸತ್ತಾರೆ. ಡಿಜಿಟಲ್ ಮೀಡಿಯಾ ನಿಯಮಗಳ ಅಡಿಯಲ್ಲಿ ನಿಗದಿತ ಮೇಲ್ವಿಚಾರಣಾ ಕಾರ್ಯವಿಧಾನವು ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳ ಕಾರ್ಯನಿರ್ವಹಣೆಯ ಮೇಲೆ ಸರ್ಕಾರದ ಅತಿಯಾದ ನಿಯಂತ್ರಣಕ್ಕೆ ಕಾರಣವಾಗಬಹುದು ಎಂಬ ಕಳವಳ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವು ಡಿಜಿಟಲ್ ಸುದ್ದಿ ಸಂಸ್ಥೆಗಳು ಈ ಬಗ್ಗೆ ಕೋರ್ಟ್ ಗೂ ಹೋಗಿವೆ. ಆದರೆ ಸಚಿವಾಲಯವು ಈ ಆತಂಕವನ್ನು ಪೂರ್ತಿ ತಳ್ಳಿಹಾಕಿದೆ.
ಕಳೆದ 15 ವರ್ಷಗಳಿಂದಲೂ ಪ್ರೋಗ್ರಾಂ ಕೋಡ್ಗೆ ಸಂಬಂಧಿಸಿದಂತೆ ಮತ್ತು ಅಂತಹ ಪ್ರತಿಯೊಂದು ಸಂದರ್ಭದಲ್ಲೂ ಸುದ್ದಿ ಮತ್ತು ಸುದ್ದಿಯೇತರ ಚಾನೆಲ್ಗಳ ವಿಷಯವನ್ನು ಒಳಗೊಂಡ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಐಎಂಸಿ (inter ministerial committee) ಸಲಹೆಗಳ, ಎಚ್ಚರಿಕೆಗಳ ಮೂಲಕ ಶಿಫಾರಸುಗಳನ್ನು ನೀಡುತ್ತಾ ಬಂದಿದೆ ಮತ್ತು ಟಿವಿ ಚಾನೆಲ್ಗಳು ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿವೆ ಎಂದು ಸಚಿವಾಲಯ ತಿಳಿಸಿದೆ. “ಐಎಂಸಿ ಕಾರ್ಯವಿಧಾನವು ಎಲ್ಲಾ ಕಾಲಕ್ಕೂ ಪ್ರಸ್ತುವಾಗಿರುವಂಥದ್ದು. ಅಂತರ-ವಿಭಾಗೀಯ ಸಮಿತಿಯ (ಐಡಿಸಿ) ಪರಿಕಲ್ಪನೆಯೂ ಇದನ್ನೇ ಹೋಲುತ್ತದೆ ”ಎಂದು ಅದು ಹೇಳಿದೆ.

ಇದಲ್ಲದೆ ಮೊದಲ ಮತ್ತು ಎರಡನೆಯ ಹಂತಗಳಲ್ಲಿ ಪರಿಹರಿಸಲಾಗದ ಸಮಸ್ಯೆಗಳು ಐಡಿಸಿಗೆ ಹೋಗುವುದರಿಂದ, ಮೂರನೇ ಹಂತವನ್ನು ರೂಪಿಸಲಾಗಿದೆ. ಹಾಗಾಗಿ ಈ ಕಾರ್ಯವಿಧಾನಗಳ ಮೂಲಕ ಸರ್ಕಾರದ ಅತಿಯಾದ ನಿಯಂತ್ರಣ ಹೊಂದಲಿದೆ ಎಂದು ಆತಂಕ ಪಡುವುದು ಅನಗತ್ಯ ”ಎಂದು ಸಚಿವಾಲಯ ಹೇಳಿದೆ. ಡಿಜಿಟಲ್ ಮೀಡಿಯಾ ರೂಲ್ಸ್ 2021 ಅನ್ನು ಡಿಜಿಟಲ್ ನ್ಯೂಸ್ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳು ಯಾವುದೇ ತಪ್ಪು ಗ್ರಹಿಕೆಗಳಿಲ್ಲದೆ ಅನುಸರಿಸಬಹುದು ಎಂದು ಅದು ಹೇಳಿದೆ.
“ಪ್ರಕಾಶಕರು ಅಗತ್ಯ ಮಾಹಿತಿಯನ್ನು ತಕ್ಷಣವೇ ನಿಗದಿತ ಸ್ವರೂಪದಲ್ಲಿ ನೀಡಬಹುದು, ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗೆ ಮಾಡದಿದ್ದರೆ,ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಇರಿಸಿ, ಪರಸ್ಪರ ಸಮಾಲೋಚನೆಯ ಮೂಲಕ ಸ್ವಯಂ-ನಿಯಂತ್ರಕ ಸಂಸ್ಥೆಗಳನ್ನು ರಚಿಸಬಹುದು. ಈ ಮೂಲಕ ಸಮಸ್ಯೆಗಳನ್ನು ಪ್ರಕಾಶಕರ ಮಟ್ಟದಲ್ಲಿ ಅಥವಾ ಸ್ವಯಂ-ನಿಯಂತ್ರಿಸುವ ಸಂಸ್ಥೆಗಳ ಮಟ್ಟದಲ್ಲಿ ಪರಿಹರಿಸಬಹುದು”ಎಂದು ಸಚಿವಾಲಯ ಹೇಳಿದೆ. ಅಲ್ಲದೆ 500 ಕ್ಕೂ ಹೆಚ್ಚು ಪ್ರಕಾಶಕರು ಈಗಾಗಲೇ ತಮ್ಮ ವಿವರಗಳನ್ನು ಅಗತ್ಯ ಸ್ವರೂಪದಲ್ಲಿ ಸಲ್ಲಿಸಿದ್ದಾರೆ ಎಂದು ಅದು ಹೇಳಿದೆ.





