ದೇಶದಲ್ಲಿ ಕರೋನಾ ಮೊದಲ ಅಲೆಯಲ್ಲಿ ಸೋಂಕು ನಿಯಂತ್ರಣ ಹಿನ್ನೆಲೆ, ಧಿಡೀರನೆ ಘೋಷಿಸಿದ ಲಾಕ್‌ಡೌನ್ ಅದೆಷ್ಟೋ ಜನರ ಬದುಕಿಗೆ ಮುಳುವಾಗಿ ಪರಿಣಮಿಸಿದೆ. ಅದರಲ್ಲೂ ವಲಸೆ ಕಾರ್ಮಿಕರಿಗೆ ದಿಕ್ಕೇ ತೋಚದಂತಾಗಿತ್ತು. ಕೆಲಸವಿಲ್ಲ, ಹಣದ ಸಮಸ್ಯೆ, ಸಾರಿಗೆ-ಸಂಪರ್ಕ ವ್ಯವಸ್ಥೆ ಕಡಿತಗೊಂಡಿತ್ತು. ಸಾವಿರಾರು ವಲಸೆ ಕಾರ್ಮಿಕರು ನಡಿಗೆಯಲ್ಲಿ ಸ್ವಂತ ಊರಿಗೆ ಪ್ರಯಾಣ ಬೆಳಸಿದ್ದರು..! ಆಗ ಅವರು ಆಯ್ಕೆ ಮಾಡಿಕೊಂಡ ದಾರಿಯೇ ರೈಲ್ವೇ ಟ್ರ್ಯಾಕ್.

ಹೊಟ್ಟೆಗೆ ಊಟವಿಲ್ಲ, ಹಸಿವು, ಲಾಕ್‌ಡೌನ್ ಕಠಿಣ ನಿರ್ಬಂಧಗಳು ಅದೆಷ್ಟೋ ಕಾರ್ಮಿಕರ ಜೀವವನ್ನೇ ಬಲಿ ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರಯಾಣಿಕರ ರೈಲ್ವೇ ಸೇವೆಗಳನ್ನು ಮೊಟಕುಗೊಳಿಸಿದರೂ ಕೂಡ ಸುಮಾರು 8700 ಕ್ಕೂ ಹೆಚ್ಚು ಜನರು ರೈಲ್ವೇ ಹಳಿಗಳ ಮೇಲೆ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರೆಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2020 ರಲ್ಲಿ ರೈಲ್ವೇ ಹಳಿಗಳ ಮೇಲೆ ಸಾವನ್ನಪ್ಪಿದವರು ಅಂಕಿ ಅಂಶ ತಿಳಿಯುವ ಹಿನ್ನೆಲೆ, ಮಾಹಿತಿ ಹಕ್ಕು ಕಾಯ್ದೆಯಡಿ ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರ ಪ್ರಶ್ನೆಗೆ ರೈಲ್ವೆ ಮಂಡಳಿ ಪ್ರತಿಕ್ರಿಯಿಸಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರವ್ಯಾಪಿ ಕರೋನಾ ಲಾಕ್‌ಡೌನ್‌ನಿಂದಾಗಿ ಪ್ರಯಾಣಿಕರ ರೈಲು ಸೇವೆಗಳನ್ನು ಮೊಟಕುಗೊಳಿಸಿದ್ದರೂ ಕೂಡ ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಸುಮಾರು 8733 ಜನ ಸಾವನ್ನಪ್ಪಿದ್ದಾರೆ, 805 ಜನ ಗಾಯಗೊಂಡಿದ್ದಾರೆ.

ಹೆದ್ದಾರಿಗಳನ್ನು ಆಯ್ಕೆ ಮಾಡಿಕೊಂಡರೆ. ಸಮಯ ಹೆಚ್ಚು ಬೇಕಾಗುತ್ತದೆಂದು ತಿಳಿದ ಕಾರ್ಮಿಕರು ಬೇಗ ಮನೆ ಸೇರಲು ರೈಲ್ವೆ ಹಳಿಗಳನ್ನು ಆಯ್ಕೆ ಮಾಡಿಕೊಂಡರು. ಜೊತೆಗೆ ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಇದು ಸಹಕಾರಿಯಾಗಿತ್ತು. ಇನ್ನೊಂದೆಡೆ ಲಾಕ್‌ಡೌನ್ ಇರುವುದರಿಂದ ರೈಲುಗಳು ಓಡಾಡುವುದಿಲ್ಲ ಎಂದು ಊಹಿಸಿಕೊಂಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕೇವಲ ಸರಕು ಸಾಗಣಿಯ ರೈಲುಗಳು ಮಾತ್ರಾ ಕಾರ್ಯನಿರ್ವಹಿಸುತ್ತಿದ್ದವು. ಮೇ 1 ರಿಂದ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸಲಾಗಿತ್ತು. ನಂತರ ಹಂತ-ಹಂತವಾಗಿ ಪ್ರಯಾಣಿಕರ ರೈಲು ಸೇವೆ ಆರಂಭಿಸಲಾಗಿದ್ದು, ಡಿಸೆಂಬರ್ ವೇಳೆಗೆ ಸುಮಾರು 1,100 ವಿಶೇಷ ರೈಲುಗಳು 110 ಸಾಮಾನ್ಯ ಪ್ರಯಾಣಿಕರ ರೈಲುಗಳು ಕಾರ್ಯನಿರ್ವಹಿಸಿದ್ದವು ಎಂದು ಫಿನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದಕ್ಕೂ ಮುಂಚಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2020 ರ ಸಾವುನೋವುಗಳು ಕಡಿಮೆ ಇದ್ದರೂ, ಮಾರ್ಚ್ 25 ರಂದು ಕರೋನ ಕಾರಣ ಲಾಕ್‌ಡೌನ್ ಘೋಷಿಸಿದ ನಂತರ ರೈಲ್ವೇಯು ಪ್ರಯಾಣಿಕರ ಸೇವೆಗಳನ್ನು ನಿರ್ಬಂಧಿಸಲಾಗಿದ್ದರೂ ಕೂಡ ಇಷ್ಟು ಸಾವುಗಳಾಗಿದ್ದು ಗಮನಾರ್ಹ ಅಂಶವಾಗಿದೆ.

ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಲಾದ ರೈಲ್ವೆ ಅಂಕಿಅಂಶಗಳ ಪ್ರಕಾರ, 2016 ಮತ್ತು 2019 ರ ನಡುವೆ ಅತೀ ಹೆಚ್ಚು ಸಾವು ಸಂಭವಿಸಿದ್ದು, 56,271 ಜನರು ಸಾವನ್ನಪ್ಪಿದರು ಹಾಗು 5,938 ಮಂದಿ ಗಾಯಗೊಂಡಿದ್ದಾರೆ. 2017 ರಲ್ಲಿ ಈ ಪ್ರಮಾಣ ಕಡಿಮೆಯಿದೆ ಎಂದು ತಿಳಿಸಿದೆ. 2016 ರಲ್ಲಿ 14,032 ಜನರು, 2017 ರಲ್ಲಿ 12,838, 2018 ರಲ್ಲಿ 14,197, 2019 ರಲ್ಲಿ 15,204 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.
ಇಂತಹ ಸಾವುಗಳನ್ನು ರೈಲ್ವೆ ಇಲಾಖೆ ಅಪಘಾತವೆಂದು ಪರಿಗಣಿಸಿಲ್ಲ, ರೈಲ್ವೆಯ ಸಾವಿನ ಅಂಕಿಅಂಶಗಳನ್ನು ಮೂರು ರೀತಿ ವರ್ಗಾಹಿಸಲಾಗುತ್ತದೆ. ಅವುಗಳೆಂದರೆ ಸಂಭವನೀಯ ಅಪಘಾತಗಳು, ಅತಿಕ್ರಮಣ ಮತ್ತು ಅಹಿತಕರ ಘಟನೆಗಳು. ಈ ಮೇಲೆ ತಿಳಿಸಿದ ಸಾವುಗಳನ್ನು ಅತಿಕ್ರಮಣ ವರ್ಗಕ್ಕೆ ಸೇರಿಸಲಾಗುತ್ತದೆ. ಇದನ್ನು ರಾಜ್ಯಗಳ ಪೊಲೀಸರು ತನಿಖೆ ನಡೆಸಿ ಸಂಬಂಧಪಟ್ಟ ಸಂತ್ರಸ್ತರಿಗೆ ರಾಜ್ಯ ಸರ್ಕಾರಗಳಿಂದ ಪರಿಹಾರವನ್ನು ನೀಡಲಾಗುತ್ತದೆ.

ಈ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ರೈಲ್ವೆ ವಕ್ತಾರ ಡಿಜೆ ನರೈನ್ ಅವರು ಹಳಿಗಳಲ್ಲಿ ಇಂತಹ ಸಾವುಗಳು ಸಂಭವಿಸುವುದು ಅಪಘಾತಗಳಿಂದಲ್ಲ, ಅತಿಕ್ರಮಣದಿಂದಾಗಿ ನಡೆಯುತ್ತವೆ. ಇದು ನಾಗರೀಕರ ಕಾಳಜಿ ವಿಷಯವಾಗಿದ್ದು, ಹಳಿಗಳಲ್ಲಿ ನಡೆಯುವುದನ್ನು ತಪ್ಪಿಸುವ ಸಲುವಾಗಿ ರೈಲ್ವೆ ಅತಿಕ್ರಮಣದಾರರನ್ನು ಸಂವೇದನಾಶೀಲಗೊಳಿಸುವಲ್ಲಿ ಭಾರೀ ಪ್ರಯತ್ನ ನಡೆಸುತ್ತಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಸಾವುಗಳನ್ನು ಕಡಿಮೆ ಮಾಡಲು ರೈಲ್ವೆ ಬೃಹತ್ ಅಭಿಯಾನಗಳನ್ನು ನಡೆಸಿದೆ. ಕೆಲವು ಸಂದರ್ಭಗಳಲ್ಲಿ ಸಹಾನುಭೂತಿಯ ಆಧಾರದ ಮೇಲೆ ಇಂತಹ ಸಾವಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಎಕ್ಸ್ ಗ್ರೇಟಿಯಾವನ್ನು ಪಾವತಿಸಿದೆ.
ದೇಶಾದ್ಯಂತ ಸುಮಾರು 70,000 ಕಿಲೋಮೀಟರ್ ನಷ್ಟು ರೈಲು ಹಳಿಗಳು ಹರಡಿಕೊಂಡಿವೆ, ಪ್ರತಿದಿನ 17,000 ರೈಲುಗಳು ಚಲಿಸುತ್ತವೆ. ಇಂತಹ ಸಾವುಗಳು ದುರದೃಷ್ಟಕರ ಮತ್ತು ದುಃಖಕರವಾಗಿದೆ. ಪ್ರಯಾಣಿಕರ ಮತ್ತು ನಾಗರಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆಂದು ರೈಲ್ವೆ ವಕ್ತಾರ ಡಿಜೆ ನರೈನ್ ತಿಳಿಸಿದ್ದಾರೆ. ಅಸಡ್ಡೆಯಾಗಿ ಹಳಿ ದಾಟುವಿಕೆಯಿಂದಾಗಿ ಈ ರೀತಿಯ ಅಪಘಾತಗಳು ಸಂಭವಿಸುತ್ತವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮೂಲ: Financial Express