ಇನ್ನು ಕೋವಿಡ್ ಕೇರ್ ಸೆಂಟರಿನಲ್ಲೂ ಆರಂಭವಾಗಲಿದೆ ಬಿಜೆಪಿ ಮತಬೇಟೆ!

‘ಒಂದು ಒಳ್ಳೇ ಬರವನ್ನು ಎಲ್ಲರೂ ಇಷ್ಟಪಡ್ತಾರೆ‘ ಎಂಬ ಮಾತು ಹಳೆಯದಾಯ್ತು. ಈ ಕರೋನಾ ಕಾಲದಲ್ಲಿ ಅದು ‘ಒಂದು ಭೀಕರ ಸಾಂಕ್ರಾಮಿಕವನ್ನು ಎಲ್ಲರೂ ತಮ್ಮ ಲಾಭಕ್ಕೆ ಬಳಸಿಕೊಳ್ತಾರೆ’ ಎಂದಾಗಿದೆ.

ಆದರೆ, ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತನ್ನ ಲಾಭಕ್ಕಾಗಿಯೇ ಕರೋನಾದ ಸಂಕಷ್ಟವನ್ನು ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಿದೆ. ಕರೋನಾ ಲಾಕ್ ಡೌನ್, ಪರೀಕ್ಷೆ, ಚಿಕಿತ್ಸೆ, ಲಸಿಕೆಯಿಂದ ಹಿಡಿದು ಕೊನೆಗೆ ಕರೋನಾ ಪರಿಹಾರ ಪ್ಯಾಕೇಜುಗಳಲ್ಲಿ ಕೂಡ ಚುನಾವಣಾ ಲಾಭದ ಲೆಕ್ಕಾಚಾರಗಳ ಮೇಲೆಯೇ ಎಲ್ಲವನ್ನು ನಿರ್ಧರಿಸಲಾಗುತ್ತಿದೆ.

ಭಾರತ, ಭಾರತೀಯರು, ಹಿಂದೂ ಧರ್ಮ, ಹಿಂದೂಗಳ ರಕ್ಷಣೆಗಾಗಿಯೇ ತಾನಿರುವುದು ಮತ್ತು ತನ್ನ ರಾಜಕೀಯ ಉದ್ದೇಶವೇ ಹಿಂದೂ ರಕ್ಷಣೆ ಮತ್ತು ಹಿಂದೂ ರಾಷ್ಟ್ರ ನಿರ್ಮಾಣವೆಂದು ದಶಕಗಳ ಪ್ರಚಾರದ ಮೂಲಕ ಅದೇ ಭರವವಸೆಯ ಮೇಲೆಯೇ ಅಧಿಕಾರಕ್ಕೆ ಬಂದಿರುವ ಬಿಜೆಪಿ, ನಿಜಕ್ಕೂ ಅದೇ ಹಿಂದೂಗಳ ಜೀವವನ್ನೇ ಹರಣಮಾಡುತ್ತಿರುವ ಕರೋನಾದ ವಿಷಯದಲ್ಲಿ ಎಷ್ಟು ಸರ್ಮಥವಾಗಿ ಕೆಲಸ ಮಾಡಿದೆ? ಎಂಬುದು ಭಾರತೀಯರೆಲ್ಲರಿಗೂ ಗೊತ್ತಿರುವ ಸಂಗತಿ. ಮೊದಲ ಅಲೆ, ಬಳಿಕದ ಎರಡನೆಯ ಅಲೆ,.. ಹೀಗೆ ಸಾಲು ಸಾಲು ವೈಫಲ್ಯಗಳು ಅಲೆ ಮೇಲೊಂದು ಅಲೆ ಹಬ್ಬಿಸಿ ದೇಶದ ಲಕ್ಷಾಂತರ ಮಂದಿಯ ಜೀವ, ಕೋಟ್ಯಂತರ ಜನರ ಜೀವನವನ್ನೇ ಕಿತ್ತುಕೊಂಡಿವೆ.

ಸೋಂಕು ತಡೆ, ಚಿಕಿತ್ಸೆಯ ವೈದ್ಯಕೀಯ ವ್ಯವಸ್ಥೆ, ಲಾಕ್ ಡೌನ್ ಹೇರಿಕೆಯ ಅನಾಹುತ ತಡೆ ಮುಂತಾದ ಹಂತಹಂತದಲ್ಲೂ ಆದ ಸರ್ಕಾರದ ವೈಫಲ್ಯಗಳೇ ದೇಶದ ಅಪಾರ ಜೀವಗಳ ಮಾರಣಹೋಮ, ಅಪಾರ ಆಸ್ತಿಪಾಸ್ತಿಯ ನಷ್ಟಕ್ಕೆ ಕಾರಣ ಎಂಬುದು ಗುಟ್ಟೇನಲ್ಲ. ದೇಶದೊಳಗೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ವೈಫಲ್ಯಗಳು ಚರ್ಚೆಯಾಗಿವೆ. ಅದರಿಂದಾಗಿ ವಿವಿಧ ರಂಗಗಳಲ್ಲಿ ದೇಶ ಸಾಧಿಸಿದ್ದ ಸಾಧನೆಗಳ ವರ್ಚಸ್ಸು ಕಳಚಿಬೀಳುವಂತಾಯಿತು. ನೆರವು ಯಾಚಿಸಿ ದೇಶ ಅಂತಾರಾಷ್ಟ್ರೀಯ ಸಮುದಾಯಗಳ ಮುಂದೆ ಕೈಯೊಡ್ಡಿ ನಿಲ್ಲಬೇಕಾಯಿತು. ಕೀನ್ಯಾ, ಬಾಂಗ್ಲಾದಂತಹ ಚಿಕ್ಕಪುಟ್ಟ ದೇಶಗಳು ಭಾರತದ ಕರೋನಾ ಎರಡನೇ ಅಲೆಯ ಸಂಕಷ್ಟದ ಹೊತ್ತಲ್ಲಿ ನೆರವಿನ ಹಸ್ತ ಚಾಚಬೇಕಾಯಿತು!

ಇಂತಹ ಸಂಕಷ್ಟದ ಸ್ಥಿತಿಗೆ ದೇಶವನ್ನು ನೂಕಿದ ದೇಶಭಕ್ತರ ಪಕ್ಷ ಬಿಜೆಪಿ, ಅಂತಹ ತನ್ನ ಯಡವಟ್ಟುಗಳಿಗೆ, ಪ್ರಮಾದಗಳಿಗೆ ಕನಿಷ್ಟ ದೇಶದ ಜನತೆಯ ಮುಂದೆ ತಲೆಬಾಗಿಸುವುದಿರಲಿ, ತನ್ನಿಂದ ತಪ್ಪಾಗಿದೆ ಎಂಬುದನ್ನೂ ಒಪ್ಪಿಕೊಳ್ಳಲಿಲ್ಲ. ಎರಡನೇ ಅಲೆಯ ಭೀಕರತೆಯ ಬಗ್ಗೆ ತನ್ನದೇ ತಜ್ಞರ ಸಮಿತಿ ಎಚ್ಚರಿಸಿದ್ದರೂ, ಡಬ್ಲ್ಯೂಎಚ್ ಒ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ತಜ್ಞರು, ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿದ್ದರೂ, ಆ ಯಾವುದರ ಬಗ್ಗೆ ಗಮನ ಕೊಡದೆ ಕೇವಲ ಚುನಾವಣೆಗಳತ್ತ ಮಾತ್ರ ಇಡೀ ವ್ಯವಸ್ಥೆಯನ್ನು ಕೇಂದ್ರೀಕರಿಸಿದ ಪರಿಣಾಮವಾಗಿ ಭೀಕರ ಎರಡನೇ ಅಲೆಗೆ ದೇಶವೇ ಈಡಾದರೂ, ಆ ಬಗ್ಗೆ ಒಂದು ಸಣ್ಣ ಪಶ್ಚಾತ್ತಾಪವಾಗಲೀ, ಪಾಪಪ್ರಜ್ಞೆಯಾಗಲೀ ಪ್ರಧಾನಿ ಮೋದಿಯಿಂದ ಹಿಡಿದು ಯಾವ ಬಿಜೆಪಿ ನಾಯಕರಲ್ಲೂ ಕಾಣಲೇ ಇಲ್ಲ!

ಬದಲಾಗಿ, ಮೊದಲ ಅಲೆಯ ವೇಳೆ ಕರೋನಾ ಪರಿಹಾರ ಪ್ಯಾಕೇಜ್, ಆತ್ಮನಿರ್ಭರ ಭಾರತ ಪ್ಯಾಕೇಜ್ ಸೇರಿದಂತೆ ಪ್ರತಿ ಪ್ಯಾಕೇಜ್ ಗಳಲ್ಲಿಯೂ ಬಿಜೆಪಿ ಮತ್ತು ಅದರ ಸಂಘಪರಿವಾರದ ಮಂದಿಗೆ, ಸಂಘ-ಸಂಸ್ಥೆಗಳಿಗೆ ಭಾರೀ ಅನುಕೂಲಗಳನ್ನು ಮಾಡಿಕೊಟ್ಟಿದ್ದ ಬಿಜೆಪಿ, ಎರಡನೇ ಅಲೆಯ ಹೊತ್ತಿಗೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆಮ್ಲಜನಕ, ಆಸ್ಪತ್ರೆ ಹಾಸಿಗೆ, ಲಸಿಕೆ ವಿಷಯದಲ್ಲಿ ಕೂಡ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮತದಾರರಿಗೆ ಆದ್ಯತೆ ನೀಡಿದೆ. ತಮ್ಮ ಪಕ್ಷದವರು ಮತ್ತು ಪಕ್ಷದ ಖಾಯಂ ಮತದಾರರಿಗೆ ಆಮ್ಲಜನಕ ಕೊಡಿಸುವ, ಆಸ್ಪತ್ರೆಗಳ ಬೆಡ್ ಬ್ಲಾಕ್ ಮಾಡಿ ಕೊಡುವ, ಲಸಿಕೆ ಬ್ಲಾಕ್ ಮಾಡಿ ಕೊಡಿಸುವ ಕೆಲಸವನ್ನು ಬಿಜೆಪಿಯ ಸಚಿವರು, ಶಾಸಕರು ಮತ್ತು ಮುಖಂಡರು ಮಾಡಿರುವ ನೂರಾರು ಪ್ರಕರಣಗಳು ಬೆಂಗಳೂರು ಸೇರಿದಂತೆ ದೇಶದ ಉದ್ದಗಲಕ್ಕೆ ವರದಿಯಾಗಿವೆ.

ಬೆಂಗಳೂರಿನ ಬಿಜೆಪಿ ಶಾಸಕರು, ಸಂಸದರ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಬ್ರಾಹ್ಮಣರಿಗೆ ಲಸಿಕೆ ನೀಡುವ ವಿಶೇಷ ಅಭಿಯಾನವನ್ನು ಬಿಜೆಪಿ ನಡೆಸಿದ ಬೆನ್ನಲ್ಲೇ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬಿಜೆಪಿ ಸರ್ಕಾರ ಕೇವಲ ಬ್ರಾಹ್ಮಣರಿಗಾಗಿಯೇ ಪ್ರತ್ಯೇಕ ದವಸ-ಧಾನ್ಯ ಪಾಕೇಟ್ ವಿತರಿಸಿ, ತಮ್ಮ ಮತಬ್ಯಾಂಕಿಗೆ ಮಾತ್ರ ವಿಶೇಷ ಸೌಲಭ್ಯ ನೀಡಿದ ವರದಿಯಾಗಿದೆ. ಹೀಗೆ ಸಾವು ಬದುಕಿನ ನಡುವೆ ಹೋರಾಡುವವರಿಗೆ ಚಿಕಿತ್ಸೆ, ಹಾಸಿಗೆ, ಆಮ್ಲಜನಕ, ಔಷಧಿ, ಕೊನೆಗೆ ಲಸಿಕೆ ವಿಷಯದಲ್ಲಿ ಕೂಡ ತಾರತಮ್ಯ ಎಸಗಿದ, ಪಕ್ಷಪಾತ ಮಾಡಿದ ಆಡಳಿತ ವ್ಯವಸ್ಥೆ, ದುಡಿಮೆ ಇಲ್ಲದೆ ಹಸಿದ ಹೊಟ್ಟೆಗಳು ಹಸಿವು ನೀಗಿಸುವ ಪರಿಹಾರದ ವಿಷಯದಲ್ಲಿ ಕೂಡ ಅದೇ ಮತಬ್ಯಾಂಕ್ ರಾಜಕಾರಣವನ್ನು ಯಾವ ಲಜ್ಜೆ ಇಲ್ಲದೆ, ಕನಿಷ್ಟ ಮನುಷ್ಯತ್ವವನ್ನೂ ಮರೆತು ನಡೆದುಕೊಂಡಿದೆ.

ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಇಡೀ ಕೋವಿಡ್ ಪರಿಸ್ಥಿತಿಯನ್ನು ತನ್ನ ಮತ ಬ್ಯಾಂಕ್ ಕ್ರೋಡೀಕರಣದ ಅವಕಾಶವಾಗಿ ಬಳಸಿಕೊಳ್ಳಲು ಅಧಿಕೃತ ಕಾರ್ಯಕ್ರಮವೊಂದನ್ನು ಘೋಷಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಎರಡು ದಿನದ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ.

ಕೋವಿಡ್ ಸೋಂಕಿತರ ಐಸೋಲೇಷನ್, ಚಿಕಿತ್ಸೆಯ ಹಂತದಲ್ಲಿ ಅಗತ್ಯವಿರುವ ವೈದ್ಯಕೀಯ ಪರಿಣತಿಯೇತರ ಸಹಾಯಕ ಕೆಲಸಕಾರ್ಯಗಳನ್ನು ನಡೆಸಲು ಪಕ್ಷದ ಒಂದು ಲಕ್ಷ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಅಧಿಕೃತ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದ್ದು, ದೇಶಾದ್ಯಂತ ಬಿಜೆಪಿಯ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ವೆಂಟಿಲೇಟರ್ ನಿರ್ವಹಣೆ, ಆಮ್ಲಜನಕ ನೀಡಿಕೆ, ಔಷಧಿ, ಮಾತ್ರೆ ನೀಡಿಕೆ ಸೇರಿದಂತೆ ಸೋಂಕಿತರ ಚಿಕಿತ್ಸೆ ಕಾರ್ಯದಲ್ಲಿ ನೆರವಾಗಲು ಅನುಕೂಲವಾಗುವಂತೆ ಸಜ್ಜುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಆ ಮೂಲಕ, ಬಿಜೆಪಿ ಪರಿಹಾರ ಪ್ಯಾಕೇಜ್, ಪರಿಹಾರ ದವಸ ಧಾನ್ಯ ವಿತರಣೆ, ಹಾಸಿಗೆ, ಲಸಿಕೆಯ ಬಳಿಕ ಇದೀಗ ಆಸ್ಪತ್ರೆಯ ಒಳಹೊರಗಿನ ಚಿಕಿತ್ಸೆ ಹಂತದಲ್ಲಿ ಕೂಡ  ತನ್ನವರು ಮತ್ತು ತನ್ನ ಮತಬ್ಯಾಂಕ್ ಪರ ಕೆಲಸ ಮಾಡಲು ಸಜ್ಜಾಗಿದೆ. ಲಸಿಕೆ ವಿಷಯದಲ್ಲಿ, ಚಿಕಿತ್ಸೆ ವಿಷಯದಲ್ಲಿ ತಾರತಮ್ಯ ಮಾಡಿದ, ಪಕ್ಷಪಾತ ಮಾಡಿದ ಬಿಜೆಪಿಯ ಆಡಳಿತ ವ್ಯವಸ್ಥೆ ಮತ್ತು ಮುಖಂಡರು, ಮುಂದಿನ ದಿನಗಳಲ್ಲಿ ಚಿಕಿತ್ಸೆಯ ಪ್ರತಿ ಹಂತದಲ್ಲೂ ಅಂತಹದ್ದೇ ಪಕ್ಷಪಾತಿ ಧೋರಣೆಯನ್ನು ಮುಂದುವರಿಸಲು ಮತ್ತು ಆ ಮೂಲಕ ತನ್ನ ಮತದಾರರನ್ನು ಓಲೈಸಲು, ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದೆ. ಅಂದರೆ, ಕರೋನಾ ಸಾಂಕ್ರಾಮಿಕದ ಪ್ರತಿ ಸಂಕಷ್ಟವನ್ನೂ ಚುನಾವನಾ ರಾಜಕಾರಣಕ್ಕೆ ಬಹಳ ವ್ಯವಸ್ಥಿತವಾಗಿ ಬಳಸಿಕೊಳ್ಳಲು ಈಗ ಬಿಜೆಪಿ ಅಧಿಕೃತ ಕಾರ್ಯಕ್ರಮದ ಮೂಲಕವೇ ಮುಂದಾಗಿದೆ.

ಒಂದು ಕಡೆ, ಸೇವೆಯ ದಾಳ ಪ್ರಯೋಗಿಸಿ ಜನರನ್ನು ಸೆಳೆದು, ಮೆಚ್ಚುಗೆ ಗಳಿಸಿ ಭವಿಷ್ಯದ ಚುನಾವಣಾ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರವಾದರೆ, ಮತ್ತೊಂದು ಕಡೆ ಈಗಾಗಲೇ ಕರೋನಾ ನಿರ್ವಹಣೆಯ ಸಾಲುಸಾಲು ವೈಫಲ್ಯಗಳನ್ನು, ದೇಶವನ್ನು ದಿವಾಳಿ ಸ್ಥಿತಿಗೆ ತಂದಿಟ್ಟು ಹೊಣೆಗೇಡಿತನವನ್ನು ಮರೆಮಾಚುವ ಪ್ರಯತ್ನವಾಗಿಯೂ ಬಿಜೆಪಿ ಈ ಹೊಸ ಯೋಜನೆ ರೂಪಿಸಿದೆ. ಈವರೆಗಿನ ಮೋದಿ ನಾಯಕತ್ವ, ಬಿಜೆಪಿ ಸರ್ಕಾರವ ವೈಫಲ್ಯಗಳನ್ನು ಮರೆಮಾಚುವ ಉದ್ದೇಶ ಎಷ್ಟರಮಟ್ಟಿಗೆ ಈಡೇರಬಹುದು ಎಂಬುದು ಕಾದುನೋಡಬೇಕಾದ ವಿಷಯ. ಆದರೆ, ಒಂದು ಲಕ್ಷ ಮಂದಿ ಬಿಜೆಪಿ ಕಾರ್ಯಕರ್ತರು ತರಬೇತುಗೊಂಡ ಸಹಾಯಕರಾಗಿ ದೇಶದ ಉದ್ದಗಲದ ಕೋವಿಡ್ ಕೇರ್ ಸೆಂಟರ್, ಐಸೋಲೇಷನ್ ವಾರ್ಡ್, ಚಿಕಿತ್ಸಾ ಕೇಂದ್ರಗಳಿಗೆ ಪ್ರವೇಶ ಪಡೆದ ಬಳಿಕ, ಅವರು ಅಲ್ಲಿ ನಡೆಸುವ ಪಕ್ಷದ ಪ್ರಚಾರ ಅಭಿಯಾನ ಭವಿಷ್ಯದ ಚುನಾವಣೆಗಳಿಗೆ ಮತಬ್ಯಾಂಕಿನ ಇಡುಗಂಟನ್ನು ಖಾತರಿಪಡಿಸಲಿದೆ ಎಂಬುದಂತೂ ನಿಜ!

ಹಾಗಾಗಿ, ಭಾರತೀಯ ಜನತಾ ಪಕ್ಷದ ಚುನಾವಣಾ ತಂತ್ರಗಾರಿಕೆ ಎಂಬುದು ಕೇವಲ ಚುನಾವಣಾ ಕಾಲದ ಶಸ್ತ್ರಾಭ್ಯಾಸ ಮಾತ್ರವಲ್ಲ; ಭೀಕರ ಸಾಂಕ್ರಾಮಿಕದ ಹೊತ್ತಲ್ಲೂ ಅದರ ಸೇನಾನಿಗಳು ಕಣದಲ್ಲಿದ್ದು ಕಾದಾಡುತ್ತಾರೆ! ಜನರಿಗಾಗಿ ಅಲ್ಲ; ಜನರ ಬೆರಳ ತುದಿಯ ಮತಬೇಟೆಗಾಗಿ!

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...