ಕೋವಿಡ್ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಉನ್ನತ ಮಟ್ಟದ ಸಭೆ ಮತ್ತು ಅದರ ಫಲಿತಾಂಶದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ಸಭೆಯು ಉತ್ತರ ಪ್ರದೇಶದ ರಾಜಕೀಯ ಹಣೆಬರಹವನ್ನು ಮಾತ್ರವಲ್ಲ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭವಿಷ್ಯವನ್ನೂ ನಿರ್ಧರಿಸುತ್ತದೆ ಎನ್ನಲಾಗಿದೆ.

ಮೇಲ್ನೋಟಕ್ಕೆ ಈ ಸಭೆಯು ಮಾರ್ಚ್ 2022 ರಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೆ ತಯಾರಿ ಮಾಡುವ ಯೋಜನೆಗಳನ್ನು ಚರ್ಚಿಸುವ ಉದ್ದೇಶಕ್ಕೆ ನಡೆಸಲಾಗುವುದು. ಆದರೆ ಮೂಲಗಳ ಪ್ರಕಾರ ಸಭೆಯ ಪ್ರಮುಖ ಕಾರ್ಯಸೂಚಿಯೆಂದರೆ ಆದಿತ್ಯನಾಥ್ ಮತ್ತು ಪ್ರಧಾನಿಯ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಕಾರಣವಾದ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವುದೇ ಆಗಿದೆ.
ಮುಖ್ಯವಾಗಿ ಮೋದಿ ಶಿಫಾರಸು ಮಾಡಿದ ವ್ಯಕ್ತಿಯನ್ನು ಆದಿತ್ಯನಾಥ್ ಸಂಪುಟಕ್ಕೆ ಸೇರಿಸಿಕೊಳ್ಳುವುದರ ಮೇಲೆ ಉಭಯ ನಾಯಕರ ನಡುವೆ ಭಿನ್ನಮತ ಉಂಟಾಗಿದೆ. ಮಾಜಿ ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಧಾನಮಂತ್ರಿಯವರು ಸಲಹೆ ನೀಡಿದ್ದರು. ಆದರೆ ಯುಪಿ ಮುಖ್ಯಮಂತ್ರಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು ಐದು ತಿಂಗಳ ಹಿಂದೆ ಶರ್ಮಾ ಅವರನ್ನು ಅಹಮದಾಬಾದ್‌ನಿಂದ ಲಕ್ನೋಗೆ ಕಳಿಸಿ ರಾಜ್ಯ ಶಾಸಕಾಂಗ ಪರಿಷತ್ತಿನ (ಎಂಎಲ್‌ಸಿ) ಸದಸ್ಯರಾಗಿ ನಾಮನಿರ್ದೇಶನ ಮಾಡಿದಾಗ ಆದಿತ್ಯನಾಥ್ ನಿರಾಕರಿಸಿರಲಿಲ್ಲ. ಆದರೆ ಅವರಿಗೆ ಕ್ಯಾಬಿನೆಟ್‌ನಲ್ಲಿ ಪ್ರಮುಖ ಸ್ಥಾನ ನೀಡುವ ಪ್ರಸ್ತಾಪ ಬಂದಾಗ ಮುಖ್ಯಮಂತ್ರಿಗಳು ಒಪ್ಪಲಿಲ್ಲ. ಶರ್ಮಾ ಅವರನ್ನು ಲಕ್ನೋಗೆ ಯೋಗಿಯವರನ್ನು ಪರೀಕ್ಷಿಸಲು ಕಳುಹಿಸಲಾಗಿದೆ ಎಂದು ವರದಿಯಾಗಿರುವುದನ್ನು ಆದಿತ್ಯನಾಥ್ ಅವರು ನಂಬಲು ಪ್ರಾರಂಭಿಸಿದರು ಎನ್ನಲಾಗಿದೆ.
ಈಗಿರುವ ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದಿನೇಶ್ ಶರ್ಮಾ ಅಥವಾ ಕೇಶವ್ ಪ್ರಸಾದ್ ಮೌರ್ಯ ಇಬ್ಬರಲ್ಲಿ ಒಬ್ಬರ ಬದಲಿಗೆ ಶರ್ಮಾ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. 2017 ರ ರಾಜ್ಯ ಚುನಾವಣೆಗೆ ಮುಂಚೆಯೇ ಮೌರ್ಯ ಅವರನ್ನು ರಾಜ್ಯ ಪಕ್ಷದ ಸಂಘಟನೆಯ ಅಧ್ಯಕ್ಷ ಹುದ್ದೆಗೆ ವರ್ಗಾಯಿಸಬಹುದೆಂದು ನಂಬಲಾಗಿತ್ತು. ಪ್ರಬಲ ಒಬಿಸಿ ನಾಯಕರಾಗಿರುವ ಮೌರ್ಯ ಅವರು ಯಾವಾಗಲೂ ತನ್ನನ್ನು ಮುಖ್ಯಮಂತ್ರಿಯ ಸ್ಥಾನಕ್ಕೆ ಸ್ಪರ್ಧಿಯಾಗಿ ಪರಿಗಣಿಸುತ್ತಾ ಬಂದಿದ್ದಾರೆ. ಅಂತಿಮವಾಗಿ, ಅವರು ಉಪಮುಖ್ಯಮಂತ್ರಿಯಾಗಿ ಹೆಚ್ಚುವರಿಯಾಗಿ ಪಕ್ಷದ ಮುಖ್ಯಸ್ಥರ ಸ್ಥಾನವನ್ನು ನಿಭಾಯಿಸಲು ಒಪ್ಪಿಕೊಂಡರು ಎಂದು ಹೇಳಲಾಗುತ್ತದೆ.
ಪಕ್ಷದ ನಾಯಕರು ಇಬ್ಬರು ಶರ್ಮಾರು ಪರಸ್ಪರ ಒಬ್ಬರನ್ನೊಬ್ಬರು ಬದಲಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಶರ್ಮಾ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸೇರಿಸಿಕೊಳ್ಳುವುದರ ವಿರುದ್ಧ ಆದಿತ್ಯನಾಥ್ ಅವರು ತೊಡರುಗಾಲು ಹಾಕಿದರು ಎನ್ನಲಾಗುತ್ತಿದೆ.
ಈ ಮಧ್ಯೆ ಭೋಪಾಲ ಪ್ರವಾಸದಲ್ಲಿದ್ದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹಠಾತ್ತಾಗಿ ಪ್ರವೇಶ ರದ್ದು ಪಡಿಸಿ ಮುಖ್ಯಮಂತ್ರಿ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಅಧಿಕೃತವಾಗಿ ಈ ಭೇಟಿಯನ್ನು ‘ಸೌಜನ್ಯ’ದ ಭೇಟಿ ಎಂದು ಕರೆದರೂ ಅದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಬಹಿರಂಗವಾಗದೇ ಉಳಿದಿಲ್ಲ.
ಆರ್‌ಎಸ್‌ಎಸ್ ರಾಷ್ಟ್ರೀಯ ಉಪ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ ಅವರು ಹಠಾತ್ತಾಗಿ ಆದಿತ್ಯನಾಥ್ ಅವರನ್ನು ಭೇಟಿಯಾಗುವುದರ ಜೊತೆಗೆ ಯುಪಿ ಮಂತ್ರಿ ಮಂಡಳದ ಹಲವಾರು ಸದಸ್ಯರು ಮತ್ತು ಅನೇಕ ಶಾಸಕರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ. ಹೊಸಬಾಳೆ ಅವರನ್ನು ಭೇಟಿಯಾದವರಲ್ಲಿ ಹೆಚ್ಚಿನವರು ಮುಖ್ಯಮಂತ್ರಿಯೊಂದಿಗಿನ ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ.
“ಅಧಿಕಾರಶಾಹಿ-ಚಾಲಿತ”, ದೋಷಯುಕ್ತ COVID-19 ನಿರ್ವಹಣೆ ವಿರುದ್ಧವಾಗಿ ಈಗಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವು ಮಂತ್ರಿಗಳು, ಆಮ್ಲಜನಕ, ಔಷಧಿಗಳ ಕೊರತೆ, ಹಾಸಿಗೆಗಳ ಅಲಭ್ಯತೆಯಿಂದ ಜನರು ಸಾಯುತ್ತಿದ್ದಾರೆ. ಹೀಗಾಗಿಯೇ ರಾಜ್ಯದ ನದಿಗಳಲ್ಲಿ ಮತ್ತು ನದಿ ತೀರಗಳಲ್ಕಿ ಮೃತದೇಹ ತೇಲಿ ಬರುತ್ತಿವೆ ಎಂದೂ ಗಮನ ಸೆಳೆದಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿ ಮೋಹನ್ ಭಾಗವತ್ ನಂತರ ಎರಡನೆಯ ಸ್ಥಾನದಲ್ಲಿರುವ ಮತ್ತು ಮೋದಿಯವರ ಆಪ್ತರಾಗಿರುವ ಹೊಸಬಾಳೆ ಮೂರು ದಿನಗಳ ಕಾಲ ಲಖನೌದಲ್ಲಿ ಕಳೆದ ನಂತರ ದೆಹಲಿಗೆ ಮರಳಿದ್ದಾರೆ. ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ಯುಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಹೊಸಬೇಳೆಯಂತೆಯೇ ವರ್ಚುವಲ್ ಆಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಆದಿತ್ಯನಾಥ್ ಅವರ ಕೇಸರಿ ನಿಲುವಂಗಿಗಳು ಮತ್ತು ಪ್ರಚೋದಕ ಮಾತುಗಳು ಅವರನ್ನು ದೊಡ್ಡ ಹಿಂದುತ್ವ ಐಕಾನ್ ಆಗಿ ಹಾಟ್ ಫೇವರಿಟ್ ಆಗಿ ಮಾಡಿವೆ. ಅವರು ದೇಶದ ಮೂಲೆ ಮೂಲೆಗಳಲ್ಲಿ ಪಕ್ಷದ ಸ್ಟಾರ್ ಪ್ರಚಾರಕರು. ಅವರ ಪ್ರಚಾರದ ಪರಿಣಾಮಗಳು ಕಡಿಮೆಯಾಗುತ್ತಿರುವಂತೆ ಕಂಡುಬಂದರೂ ಸಹ ಕೇರಳ, ಗುಜರಾತ್, ಈಶಾನ್ಯ ಅಥವಾ ಪಶ್ಚಿಮ ಬಂಗಾಳ ಅಥವಾ ಯಾವುದೇಚುನಾವಣಾ ಕ್ಷೇತ್ರಗಳೇ ಆಗಿರಲಿ ಅವರನ್ನು ಪ್ರಚಾರಕ್ಕೆ ಕರೆಯಲಾಗುತ್ತದೆ. ಮೋದಿಯವರು ತಮ್ಮನ್ನು ಕೇಸರಿ ವಸ್ತ್ರದಲ್ಲಿ ಕಟ್ಟಿಕೊಳ್ಳದಿರಬಹುದು, ಆದರೆ ಹಿಂದುತ್ವ ನಾಯಕನಾಗಿ ಅವರ ವರ್ಚಸ್ಸು ಅಸಾಧಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ, ಆರ್ಟಿಕಲ್ 370 ಮತ್ತು ತ್ರಿವಳಿ ತಲಾಖ್ ನಿಷೇಧ ಮುಂತಾದ ಆರ್‌ಎಸ್‌ಎಸ್ ಅಜೆಂಡಾಗಳನ್ನು ಜಾರಿಗೊಳಿಸಿದ ನಂತರ ಹಿಂದುತ್ವ ಪ್ರತಿಪಾದಕರಲ್ಲಿ ಅವರ ಜನಪ್ರಿಯತೆ ಏರಿದೆ.
ಬಿಜೆಪಿ-ಸಂಘದ ಸಂಬಂಧದ ವಿಶ್ಲೇಷಕರು, ಅರವಿಂದ್ ಶರ್ಮಾ ಪರಿಸ್ಥಿತಿಯನ್ನು ಆದಿತ್ಯನಾಥ್ ಹೆಚ್ಚು ಚಾತುರ್ಯದಿಂದ ಮತ್ತು ಹೆಚ್ಚು ಶಬ್ದ ಮಾಡದೆ ನಿಭಾಯಿಸಿದ್ದರೆ, ಆದಿತ್ಯನಾಥ್ ಮತ್ತು ಮೋದಿಯವರ ನಡುವಿನ ಬಿಕ್ಕಟ್ಟನ್ನು ಸುಲಭವಾಗಿ ತಪ್ಪಿಸಬಹುದಿತ್ತು ಎನ್ನುತ್ತಾರೆ. ಇಡೀ ಪ್ರಕರಣವನ್ನು ಅವರು ನಿಭಾಯಿಸುದ ರೀತಿ ಸರಿ ಇರಲಿಲ್ಲ ಎಂದು ಅವರ ಹಿತೈಷಿಗಳೂ ಅಭಿಪ್ರಾಯ ಪಡುತ್ತಾರೆ, ಅದರಲ್ಲೂ ಮೋದಿಯಂತಹ ಸಶಕ್ತ, ಜನಪ್ರಿಯ ಪ್ರಧಾನಿಯನ್ನು ಅವರು ಎದುರು ಹಾಕಿಕೊಳ್ಳಬಾರದಿತ್ತು ಎನ್ನುತ್ತಾರೆ.
ಅಂದಿನ ಯುಪಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಸಹ ಇದೇ ರೀತಿಯ ನಿರ್ಧಾರ ಕೈಗೊಂಡು ಹೇಗೆ ಮೂಲೆಗುಂಪಾದರು ಎಂದು ಪಕ್ಷದ ಒಳಗಿನವರು ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆ ಅವರು ಉರುಳಿಸಿದ ದಾಳ ಅವರಿಗೆ ತುಂಬಾ ದುಬಾರಿಯಾಯಿತು. ಕಲ್ಯಾಣ್ ಸಿಂಗ್ ಅವರ ರಾಜಕೀಯ ಭವಿಷ್ಯ ಅವರ ಬದ್ಧ ಎದುರಾಳಿ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿಯೂ ಎದುರಾಗಿತ್ತು.
ಕಲ್ಯಾಣ್ ಸಿಂಗ್ ಅವರು ಅಂ್ಉ ಆದಿತ್ಯನಾಥ್‌ಗಿಂತಲೂ ಹೆಚ್ಚಿನ ರಾಜಕೀಯ ಪ್ರಭಾವವನ್ನು ಹೊಂದಿದ್ದರು. ಮೋದಿ ಮತ್ತು ವಾಜಪೇಯಿ ಮಧ್ಯೆ ಭಿನ್ನಾಭಿಪ್ರಾಯವನ್ನು ಎದುರಿಸುವಲ್ಲೇ ಭಿನ್ನತೆಯಿದೆ. ಅತ್ಯಂತ ಆಕ್ರನಣಕಾರಿಯಾಗಿ ಭಿನ್ನಮತವನ್ನು ಹತ್ತಿಕ್ಕುವ ಮೋದಿಗೂ ತುಂಬಾ ಸೌಮ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಜಪೇಯಿಗೂ ಅಜಗಜಾಂತರವಿದೆ. ಹಾಗಾಗಿಯೇ ಯೋಗಿ ಆದಿತ್ಯನಾಥ್ ಅವರ ಭವಿಷ್ಯದಲ್ಲಿ ಏನಿದೆ ಎಂಬುದನ್ನು ಸಮಯವಷ್ಟೇ ಹೇಳಲು ಸಾಧ್ಯ ಎನ್ನಬಹುದೇನೋ?
ಕೃಪೆ: ದಿ ವೈರ್