ಕರೋನ ವಿರುದ್ಧದ ಹೋರಾಟದಲ್ಲಿ ಆಶಾಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು. ಸರ್ಕಾರ ಇವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿದೆ.ಹಗಲು ರಾತ್ರಿಯೆನ್ನದೆ ಸೋಂಕಿತರ ಆರೋಗ್ಯ ವಿಚಾರಿಸಿಕೊಳ್ಳುವ ಆಶಾ ಕಾರ್ಯಕರ್ತರಿಗೆ ತಮ್ಮ ಆರೋಗ್ಯಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಮತ್ತೊಂದೆಡೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇವರು ಸರ್ಕಾರದ ಖಾಯಂ ನೌಕರರಲ್ಲ, ಸಂಬಳ ಕಡಿಮೆ, ಅದು ಸರಿಯಾಗಿ ಸಿಗದಿರುವುದು ದುರಂತ ಸಂಗತಿ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಆಶಾಕಾರ್ಯಕರ್ತೆಯರು ಅಸುರಕ್ಷತೆಯ ನಡುವೆ ಹೋಮ್ ಐಸುಲೇಶನಲ್ಲಿರುವ ಸೋಂಕಿತರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿಕೊಳ್ಳುವುದು ಆತ್ಮವಿಶ್ವಾಸ , ಮುನ್ನೆಚ್ಚರಿಕೆ, ಜಾಗೃತಿ ಮೂಡಿಸುವ ಕೆಲಸಮಾಡುತ್ತಿದ್ದಾರೆ.
ಕೋವಿಡ್ ಸೋಂಕಿತರ ಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ(ವಲ್ನೆರಬಲ್) ಮಾತ್ರೆ, ಕೋವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸುವುದು, ಸೋಂಕಿತರ ಮನೆಗೆ ಹೋಗಿ ಅವರ ಆರೋಗ್ಯದ ಬಗ್ಗೆ ಇಲಾಖೆಗೆ ದಿನಂಪ್ರತಿ ವರದಿ ಮಾಡುತ್ತಾರೆ. ಇನ್ನು ರಾಜ್ಯದ ಕೆಲವೆಡೆ ಇವರಿಗೆ ನಿಯೋಜಿಸಿದ ಕಾರ್ಯಗಳನ್ನು ಹೊರತು ಹೆಚ್ಚಿನ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.
ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ 4000 ಗೌರವ ಧನ ನೀಡಲಾಗುತ್ತದೆ. ಇದೀಗ ಮೂರು ತಿಂಗಳಿಂದ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಸಹಾಯಧನ ಬಂದಿರಲಿಲ್ಲ, ಅಸುರಕ್ಷತೆಯ ವಾತಾವರಣದಲ್ಲಿ ಕೆಲಸಮಾಡುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿಯೇ ಮೂರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ, ಎರಡು-ಮೂರುದಿನಗಳ ಹಿಂದೆ 2 ತಿಂಗಳ ಸಂಬಳ ಕೊಡಲಾಗಿದೆ. ಇನ್ನೂ ಒಂದು ತಿಂಗಳ ಸಂಬಳ ಬಾಕಿಯಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷೀ ಪ್ರತಿಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯಾದ್ಯಂತ ಒಟ್ಟು 42 ಸಾವಿರ ಜನ ಆಶಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಎರಡನೇ ಅಲೆಯಲ್ಲಿ ಒಟ್ಟು 08 ಜನ ಸೋಂಕಿಗೆ ಬಲಿಯಾಗಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಆಸ್ಪತ್ರೆಗಳಲ್ಲಿ ವೈದ್ಯರು ದಾದಿಯರು ಪಿಪಿ ಕಿಟ್, ಫೇಸ್ ಮಾಸ್ಕ್ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಆಶಾಕಾರ್ಯಕರ್ತೆಯರಿಗೆ ಈ ರೀತಿಯ ಸೌಲಭ್ಯವಿಲ್ಲ, ಜೊತೆಗೆ ಆರೋಗ್ಯ ಸುರಕ್ಷತೆಗೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಒದಗಿಸುತ್ತಿಲ್ಲ, ಆರೋಗ್ಯ ರಕ್ಷಣೆಯನ್ನು ಕಡೆಗಣಿಸಲಾಗಿದೆ ಎಂದು ನಾಗಲಕ್ಷೀ ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಅಗತ್ಯವಿರುವಷ್ಟು ಮಾಸ್ಕ್ ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು ಆರೋಗ್ಯ ಇಲಾಖೆಯ ವಿವಿಧ ಕರೋನಾ ವಾರಿಯರ್ಸ್‌ಗಳಿಗೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಕೋವಿಡ್ ವಿಶೇಷ ಪ್ರೋತ್ಸಾಹಧನ ಮಾಸಿಕ 5000 ನೀಡ ಬೇಕು.
ಈ ಸಂದರ್ಭದಲ್ಲಿಆಶಾ ಕಾರ್ಯಕರ್ತೆಯರಿಗೆ,ಅವರ ಕುಟುಂಬದ ಸದಸ್ಯರು ಅನಾರೋಗ್ಯ ಪೀಡಿತರಾದರೆ, ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಬೇಕ ಹಾಗೆಯೇ ಬಹುತೇಕ ಸೋಂಕಿಗೆ ಒಳಗಾದ ಆಶಾಕಾರ್ಯಕರ್ತೆಯರಿಗೆ ಕನಿಷ್ಠ ರೂ 25 ಸಾವಿರ ಸೋಂಕಿನ ತೀವ್ರತೆಗೆ ಅನುಗುಣವಾಗಿ ಪರಿಹಾರ ನೀಡಬೇಕು. ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವಿಗೀಡಾದ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಬೇಕೆಂದು ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಆಶಾಕಾರ್ಯಕರ್ತೆಯರು ಆನ್‌ಲೈನ್ ಪ್ರತಿಭಟನೆ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕೋವಿಡ್ ಆರಂಭದಿಂದಲೂ ಬಿಸಿಲು, ಮಳೆ, ಗಾಳಿ, ಚಳಿಯೆನ್ನದೆ ಮನೆ-ಮನೆಗಳಿಗೆ ತೆರಳಿ ಸೋಂಕಿನ ಬಗ್ಗೆ ಅರಿವು ಮೂಡಿಸುವುದು. ವಿದೇಶದಿಂದ, ವಿವಿಧ ರಾಜ್ಯಗಳಿಂದ ಬಂದ ಜನಗಳ ಸರ್ವೆ, ಕರೋನಾ ಪಾಜಿಟಿವ್ ಬಂದಿರುವ, ಹಾಗೆಯೇ ಪ್ರಥಮ, ದ್ವೀತೀಯ ಸಂಪರ್ಕಿತರನ್ನು ಗುರುತಿಸುವುದು, ಕ್ವಾರಂಟೈನ್ ಮನೆಗಳಿಗೆ ಗುರುತಿನ ಚೀಟಿ ಅಂಟಿಸುವುದು, ಸೋಂಕಿತರ ಮನೆಗಳಿಗೆ ಹೋಗಿ ಆರೋಗ್ಯ ವಿಚಾರಿಸುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವ ಆಶಾಕಾರ್ಯಕರ್ತೆಯರಿಗೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಿಂಗಳಿಗೆ ಸರಿಯಾಗಿ ಗೌರವ ಧನ ನೀಡದಿರುವು ಅಮಾನವೀಯ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.