ಆಂಟಿವೈರಲ್ ಔಷಧಿ ರೆಮ್ಡೆಸಿವಿರ್ಗೆ ಬೇಡಿಕೆ ಹೆಚ್ಚಳದ ಮಧ್ಯೆ, ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಔಷಧವು ಉಪಯುಕ್ತವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಭಿಪ್ರಾಯ ಪಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಮತ್ತು ಅದರ ತಾಂತ್ರಿಕ ಪ್ರಮುಖರಾದ ಡಾ.ಮರಿಯಾ ವ್ಯಾನ್ ಕೆರ್ಖೋವ್ ಅವರು ಈ ಹಿಂದೆ ಐದು ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ರೆಮ್ಡೆಸಿವಿರ್ ಬಳಕೆಯು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಥವಾ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ವಾತಾಯನ ಕಡಿಮೆ ಮಾಡಲು ಸಹಾಯ ಮಾಡಿಲ್ಲ ಎಂದು ಸೂಚಿಸುತ್ತದೆ ಎಂದು ಏಪ್ರಿಲ್ನಲ್ಲಿಯೇ ಹೇಳಿದ್ದರು.
ಕ್ಲಿನಿಕಲ್ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ ಡಾ. ಸೌಮ್ಯಾ, “ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ರೆಮ್ಡೆಸಿವಿರ್ ನೀಡಿಯೂ ಮರಣ ಪ್ರಮಾಣವನ್ನು ಕಡಿಮೆ ಮಾಡಿಲ್ಲ ಮತ್ತು ರೋಗದ ಪ್ರಗತಿಯ ಮೇಲೆ ಪರಿಣಾಮ ಬೀರಲಿಲ್ಲ ” ಎಂದಿದ್ದರು.
ಕ್ಲಿನಿಕಲ್ ಪ್ರಯೋಗಗಳ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ರೆಮ್ಡೆಸಿವಿರ್ ಬಳಕೆಯ ವಿರುದ್ಧ ಡಬ್ಲ್ಯುಎಚ್ಒ ಕಳೆದ ವರ್ಷ ಮಾರ್ಗಸೂಚಿಗಳನ್ನೂ ಹೊರಡಿಸಿತ್ತು. WHO ತಾಂತ್ರಿಕ ಮುಖ್ಯಸ್ಥ ಡಾ. ವ್ಯಾನ್ ಕೆರ್ಖೋವ್ “ನಾವು ಪ್ರಸ್ತುತ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ರೆಮ್ಡೆಸಿವಿರ್ ಅನ್ನು ಬಳಸುವುದರ ವಿರುದ್ಧ ಷರತ್ತುಬದ್ಧ ಶಿಫಾರಸುಗಳನ್ನು ಮಾಡಿದ್ದೇವೆ. ಇದು ಬದುಕುಳಿಯುವಿಕೆಯನ್ನು ಮತ್ತು ಇತರ ಫಲಿತಾಂಶಗಳನ್ನು ಸುಧಾರಿಸುತ್ತದೆ ಎಂದು ತೋರಿಸುವ ಸಾಕ್ಷ್ಯಾಧಾರದ ಕೊರತೆ ಇದೆ. ಆದರೆ ನಾವು ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳ ಮೇಲೆ ನಿರಂತರವಾಗಿ ಗಮನವಿಟ್ಟಿದ್ದೇವೆ” ಎಂದಿದ್ದರು.
ಇದೀಗ ಒಂದು ವರ್ಷದ ನಂತರವೂ ರೆಮ್ಡೆಸಿವಿರ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಅದಾಗ್ಯೂ ತನ್ನ ಬೇಡಿಕೆಯಲ್ಲಿನ ಹಠಾತ್ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ರೆಮ್ಡೆಸಿವಿರ್ ರಫ್ತಿಗೆ ನಿಷೇಧ ಹೇರಿತ್ತು. ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಚಿಕಿತ್ಸೆಗಾಗಿ ವೈದ್ಯರು ರೆಮ್ಡೆಸಿವಿರ್ ಚುಚ್ಚುಮದ್ದನ್ನೇ ಸೂಚಿಸುತ್ತಿದ್ದಾರೆ.
ರೆಮ್ಡೆಸಿವಿರ್ ಮದ್ದಿನ ಫಲಿತಾಂಶದ ಬಗ್ಗೆ ಯಾವುದೇ ನಿಖರ ಆಧಾರಗಳಿಲ್ಲದಿದ್ದರೂ ವೈದ್ಯರು ಈ ಇಂಜೆಕ್ಷನ್ ಯಾಕೆ ಬಳಸುತ್ತಿದ್ದಾರೆ? ಭಾರತದ ಡ್ರಗ್ ಕಂಟ್ರೋಲ್ ಇಲಾಖೆ ಈ ಬಗ್ಗೆ ಸ್ಪಷ್ಟವಾದ ಮತ್ತು ದೃಢವಾದ ನಿರ್ಧಾರ ಯಾಕೆ ಕೈಗೊಳ್ಳುತ್ತಿಲ್ಲ. ಅದರಲ್ಲೂ ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಸೂಚನೆ ಹೊರಡಿಸಿರುವಾಗ ಈ ಮದ್ದಿಗೆ ಭಾರತದಲ್ಲಿ ಇಷ್ಟೊಂದು ಬೇಡಿಕೆ ಉಂಟಾಗಲು ಕಾರಣವೇನು?
ICMR ನ ಸ್ಪಷ್ಟ ನಿರ್ದೇಶನವಿಲ್ಲದರಿರುವುದರಿಂದಲೇ ಬ್ಲಾಕ್ ಮಾರ್ಕೆಟ್ನಲ್ಲಿ ರೆಮ್ಡೆಸಿವಿರ್ ಸಾವಿರಾರು ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅದೇನೋ ಪವಾಡ ಮಾಡಿಬಿಡುತ್ತದೆ ಎಂಬ ಭ್ರಮೆಯಲ್ಲಿ ರೋಗಿಗಳೂ ಅವನ್ನು ಬಳಸಲು ಮುಗಿ ಬೀಳುತ್ತಿದ್ದಾರೆ. ಕೆಲವೆಡೆ ಡಾಕ್ಟರ್ಗಳೇ ಬೇಡ ಎಂದರೂ ರೋಗಿಗಳು ತಾವೇ ಔಷಧಿ ತರಿಸಿ ಚುಚ್ಚಿಸಿಕೊಂಡಿರುವುದೂ ವರದಿಯಾಗಿದೆ.
ಈ ಮಧ್ಯೆ ಅತಿಯಾದ ಸ್ಟಿರಾಯ್ಡ್ ಬಳಕೆಯಿಂದ ದೆಹಲಿ ಮತ್ತಿತರ ಕಡೆಗಳಲ್ಲಿ ಕೋವಿಡ್ ರೋಗಿಗಳು ಮಾರಣಾಂತಿಕ ಬ್ಲ್ಯಾಕ್ ಫಂಗಸ್ ಗೆ ತುತ್ತಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಪ್ರಕರಣಗಗಳಲ್ಲಿ ಪ್ರಾಣಕ್ಕೆ ಅಪಾಯವಾಗಿರುವುದೂ ವರದಿಯಾಗಿದೆ.
ರಕ್ತದಲ್ಲಿ ಆಮ್ಲಜನಕದ ಪ್ರಮಾಣ 92%ಗಿಂತ ಕಡಿಮೆಯಾದರೆ ಮಾತ್ರ ಸ್ಟೀರಾಯ್ಡ್ ಬಳಸಬೇಕು ಎಂದು ಮೆಡಿಕಲ್ ಸೈನ್ಸ್ ಹೇಳುತ್ತದೆ, ಅದೂ ಐದು ದಿನಗಳ ಕಾಲ ಮಾತ್ರ ಬಳಸುವಂತೆ. ಗೊತ್ತು ಗುರಿಯಿಲ್ಲದೆ ಸ್ಟೀರಾಯ್ಡ್ ಬಳಸದಂತೆ ವೈದ್ಯ ಜಗತ್ತಿಗೆ ಸರ್ಕಾರ, ಕನಿಷ್ಠ ಡ್ರಗ್ ಕಂಟ್ರೋಲರ್ ಇಲಾಖೆಯಾದರೂ ಸೂಚನೆ ನೀಡಬೇಕು. ಆದರೆ ಕಾರ್ಪೋರೆಟ್ ಸಂಸ್ಥೆಗಳ ಹಿತ ಕಾಯಲು ಮಾತ್ರ ಇದೆ ಎನ್ನುವಂತೆ ವರ್ತಿಸುವ ಈ ಇಲಾಖೆಗಳು ಇಂಥದ್ದೊಂದು ಸೂಚನೆ ನೀಡೀತು ಎಂದು ಸದ್ಯದ ಸ್ಥಿತಿಯಲ್ಲಿ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪಾಗುತ್ತದೆ.