ಕೋವಿಡ್ ಸಂಕಷ್ಟದ ಹೊತ್ತಲ್ಲಿ ಅಧಿಕಾರಸ್ಥರ ಹೊಣೆಗೇಡಿತನ, ಜನವಿರೋಧಿ ನಡೆಗಳು ಬೆತ್ತಲಾಗುತ್ತಿಲ್ಲ, ಅವರ ನಾಚಿಕೆಗೇಡಿನ ಕ್ಷುಲ್ಲಕತನಗಳು ಬಟಾಬಯಲಾಗುತ್ತಿವೆ.
ಅದಕ್ಕೆ ಒಂದು ಅಂತಾರಾಷ್ಟ್ರೀಯ ಗಮನ ಸೆಳೆದ ತಾಜಾ ನಿದರ್ಶನ ಕೋವಿಡ್ ವಿಷಯದಲ್ಲಿ ನಮ್ಮ ಎರಡು ರಾಷ್ಟ್ರೀಯ ಪಕ್ಷಗಳ ಯುವ ಘಟಕಗಳ ಅಧ್ಯಕ್ಷರ ನಡೆಗಳು ಮತ್ತು ಆ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ.
ಕಾಂಗ್ರೆಸ್ ಯುವ ಘಟಕ, ಭಾರತೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ, ಭದ್ರಾವತಿ ಮೂಲದ ಬಿ ವಿ ಶ್ರೀನಿವಾಸ್ ಅವರು, ಕಳೆದ ಮಾರ್ಚ್ ನಿಂದಲೇ ದೆಹಲಿಯಲ್ಲಿ ಕರೋನಾ ಪೀಡಿತರ ನೆರವಿಗೆ ನಿಂತಿದ್ದಾರೆ. ತಮ್ಮದೇ ಸಂಘಟನೆಯ ಯುವ ಸ್ವಯಂಸೇವಕರ ಪಡೆ ಕಟ್ಟಿಕೊಂಡು ಅವರು, ‘ಎಸ್ ಒ ಎಸ್ ಐವೈಸಿ’ ಹೆಸರಿನಲ್ಲಿ ಸಾವಿನ ವಿರುದ್ಧ ಸೆಣುಸುತ್ತಿರುವ ಜೀವಗಳಿಗೆ ಸಕಾಲದಲ್ಲಿ ಆಮ್ಲಜನಕ, ಔಷಧ, ಊಟೋಪಚಾರ ಮತ್ತಿತರ ನೆರವು ಮನೆಮನೆಗೆ ತಲುಪಿಸುತ್ತಿದ್ದಾರೆ.
ಅವರ ಆ ಸೇವೆಯ ಕುರಿತು, ಅಂತಾರಾಷ್ಟ್ರೀಯ ಮಾಧ್ಯಮಗಳು ಮುಖಪುಟದ ವರದಿಗಳನ್ನು ಮಾಡಿವೆ. ದೆಹಲಿಯಲ್ಲಿರುವ ನ್ಯೂಜಿಲೆಂಡ್, ಫಿಲಿಪೈನ್ಸ್ ಮತ್ತಿತರ ರಾಯಭಾರಿ ನಿವಾಸಗಳೂ ಕೂಡ ತುರ್ತು ಆಮ್ಲಜನಕಕ್ಕಾಗಿ ಕೇಂದ್ರ ಸರ್ಕಾರದ ಬದಲಾಗಿ, ಬಿ ವಿ ಶ್ರೀನಿವಾಸ್ ಅವರಿಗೆ ಮೊರೆ ಇಟ್ಟಿದ್ದವು ಎಂಬುದೇ ಶ್ರೀನಿವಾಸ ಮತ್ತು ತಂಡ ತುರ್ತು ಪರಿಸ್ಥಿತಿಯಲ್ಲಿ ಜೀವರಕ್ಷಣೆಗೆ ಎಷ್ಟರಮಟ್ಟಿಗೆ ಜನರ ವಿಶ್ವಾಸ ಗಳಿಸಿದೆ ಎಂಬುದಕ್ಕೆ ನಿದರ್ಶನ. ಇದು ಬಿ ವಿ ಶ್ರೀನಿವಾಸ್ ಒಂದು ರಾಷ್ಟ್ರೀಯ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಮಾಡುತ್ತಿರುವ ಕೆಲಸ.
ಹಾಗೇ, ಒಂದು ಪ್ರತಿಪಕ್ಷದ ಯುವ ಘಟಕದ ಅಧ್ಯಕ್ಷರೇ ಸಮರೋಪಾದಿಯಲ್ಲಿ ಕೋವಿಡ್ ಸಂತ್ರಸ್ತರ ನೆರವಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವಾಗ, ಸ್ವತಃ ಆಡಳಿತ ಪಕ್ಷದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರು ಇನ್ನೆಷ್ಟು ಜನರ ಜೀವ ರಕ್ಷಣೆಗೆ ದುಡಿಯುತ್ತಿರಬಹುದು? ಎಂಬ ಪ್ರಶ್ನೆ ಏಳುವುದು ಸಹಜ. ಹೌದು, ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರು ಕೂಡ ಕರ್ನಾಟಕದವರೇ. ತೇಜಸ್ವಿ ಸೂರ್ಯ ಎಂಬ ಬೆಂಗಳೂರಿನ ಆ ಸಂಸದರು, ಕರೋನಾದ ವಿಷಯದಲ್ಲಿ ಬಿಬಿಎಂಪಿಯಲ್ಲಿ ನಡೆದಿದೆ ಎಂಬ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆಯಲು ಹೋಗಿ, ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಯುವ ನಾಯಕ ಭೀಕರ ಸಾಂಕ್ರಾಮಿಕದ ಅಪಾಯವನ್ನೂ ಲೆಕ್ಕಿಸದೆ ಜನರ ಜೀವ ರಕ್ಷಣೆಗೆ ದಿಲ್ಲಿಯ ಬೀದಿಬೀದಿಗಳಲ್ಲಿ ಮಾತ್ರವಲ್ಲದೆ, ತಮ್ಮದೇ ಸಂಘಟನೆಯ ಮೂಲಕ ದೇಶದ ವಿವಿಧ ಕಡೆ ನೆರವಿನ ಹಸ್ತ ಚಾಚುತ್ತಿದ್ದರೆ, ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಕರೋನಾದಲ್ಲೂ ತಮ್ಮ ಜನ್ಮಜಾತ ಮುಸ್ಲಿಂ ದ್ವೇಷ ಎಂಬ ಕೋಮು ವಿಷ ಕಕ್ಕಲು ಹೋಗಿ ಹೋಗಿ ಅಪಹಾಸ್ಯಕ್ಕೆ ಈಡಾದರು.
ಇಂತಹ ವೈರುಧ್ಯಗಳ ಹೊತ್ತಲ್ಲಿ; ಸರ್ಕಾರವೊಂದು ಏನು ಮಾಡಬಹುದು? ಕನಿಷ್ಟ ಪ್ರತಿಪಕ್ಷದ ಯುವ ನಾಯಕ ಜನಪರ ಕೆಲಸವನ್ನು ಮೆಚ್ಚಿ ಕೊಂಡಾಡುವ ಔದಾರ್ಯ ತೋರದೆ ಹೋದರೂ, ತಮ್ಮ ಪಾಡಿಗೆ ತಾವು ಜನರ ಕೆಲಸ ಮಾಡಲು ಬಿಟ್ಟು ಸುಮ್ಮನಿರುವುದೇ ಸರ್ಕಾರ ಮಾಡಬಹುದಾಗಿದ್ದ ಮಹತ್ಕಾರ್ಯ ಎಂಬುದು, ಬಿಜೆಪಿಯ ಏಳು ವರ್ಷಗಳ ದ್ವೇಷ ರಾಜಕಾರಣವನ್ನು ಕಂಡವರಿಗೆ ಅನಿಸದೇ ಇರದು. ಆದರೆ, ಸರ್ಕಾರ ಮಾಡಿದ್ದು ತದ್ವಿರುದ್ಧ.
ಕರೋನಾ ವಾರಿಯರ್ಸ್ ಆಗಿ ಬಿಬಿಎಂಪಿ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಅಧಿಕ ಸಿಬ್ಬಂದಿಯ ಪೈಕಿ ಕೇವಲ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರು ಪಟ್ಟಿ ಮಾಡಿ, ಸುಳ್ಳು ಆರೋಪ ಮಾಡಿ(ಎರಡೇ ದಿನದಲ್ಲಿ ಆ ಸಿಬ್ಬಂದಿಯ ಮೇಲಿನ ಆರೋಪ ಸುಳ್ಳೆಂದು ಸಾಬೀತಾಗಿ, ಅವರನ್ನು ವಾಪಸು ಕೆಲಸಕ್ಕೆ ತೆಗೆದುಕೊಳ್ಳಲಾಯಿತು!) ಅಸಹ್ಯಕರ ಕೋಮುವಾದಿ ಅಜೆಂಡಾವನ್ನು ಪ್ರದರ್ಶಿಸಿದ ತನ್ನದೇ ಸಂಸದ ಮತ್ತು ಯುವ ಮೋರ್ಚಾ ಅಧ್ಯಕ್ಷರ ಪರ ವಕಾಲತು ವಹಿಸಿದ ಬಿಜೆಪಿ, ಧರ್ಮ, ಜಾತಿ, ಕುಲವೆನ್ನದೆ ಸಾವು ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಜೀವರಕ್ಷಕ ನೀಡಿ ಜೀವ ಉಳಿಸಲು ಶ್ರಮಿಸುತ್ತಿರುವ ಶ್ರೀನಿವಾಸ್ ವಿರುದ್ಧ ದೆಹಲಿ ಪೊಲೀಸರನ್ನು ಛೂ ಬಿಟ್ಟು ಕಿರುಕುಳ ನೀಡತೊಡಗಿದೆ!
ಶ್ರೀನಿವಾಸ್ ಮತ್ತು ತಂಡ ಜನರ ಆಪತ್ಕಾಲದ ಕರೆಗೆ (ಎಸ್ ಒಎಸ್) ಓಗೊಟ್ಟು ಸರಬರಾಜು ಮಾಡುತ್ತಿರುವ ಆಮ್ಲಜನಕ, ಔಷಧೋಪಚಾರಗಳು ಅವರಿಗೆ ಎಲ್ಲಿಂದ ಸಿಕ್ಕವು? ಯಾರು ಅವುಗಳಿಗೆ ಹಣ ನೀಡುತ್ತಿದ್ದಾರೆ? ಯುವ ಕಾಂಗ್ರೆಸ್ ವಾರ್ ರೂಂನಲ್ಲಿ ಸಂಗ್ರಹವಾಗಿರುವ ಈ ಸಾಮಗ್ರಿಗಳು ಅನಧಿಕೃತ ಸಂಗ್ರಹವಲ್ಲವೆ? ಎಂದು ದೆಹಲಿ ಪೊಲೀಸರು ಬಿ ವಿ ಶ್ರೀನಿವಾಸ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ದೆಹಲಿ ನ್ಯಾಯಾಲಯದಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರ ಸಂಬಂಧ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ತಾವು ಶ್ರೀನಿವಾಸ್ ಸೇರಿದಂತೆ ಕರೋನಾ ಪರಿಹಾರ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ವಿಚಾರಣೆಗೊಳಪಡಿಸಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಆದರೆ, ದೇಶದ ಉದ್ದಗಲಕ್ಕೆ ಜನ ಆಮ್ಲಜನಕ ಸಿಗದೆ, ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ, ಸಕಾಲದಲ್ಲಿ ಔಷಧಿ ಮತ್ತು ಚಿಕಿತ್ಸೆ ಸಿಗದೆ ಲಕ್ಷಾಂತರ ಮಂದಿ ಹಾದಿಬೀದಿಯ ಹೆಣವಾಗುತ್ತಿರುವ ಹೊತ್ತಲ್ಲಿ, ವರ್ಷಗಟ್ಟಲೆ ಕರೋನಾ ಅಪಾಯದ ಅರಿವಿದ್ದರೂ ಜನ ಜೀವ ರಕ್ಷಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳದೆ ಚುನಾವಣೆಗಳಲ್ಲಿ ಮುಳುಗಿದ್ದ ಸರ್ಕಾರ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿಯ ವಿರುದ್ಧ ಜನಾಕ್ರೋಶ ಹೆಪ್ಪುಗಟ್ಟುತ್ತಿರುವ ಹೊತ್ತಲ್ಲಿ, ಜನರ ನೋವಿಗೆ ಸ್ಪಂದಿಸುವ ಮೂಲಕ ಪ್ರತಿಪಕ್ಷದ ಯುವ ನಾಯಕನೊಬ್ಬ ರಾಜಧಾನಿಯಲ್ಲೇ ತಮಗೆ ತೀವ್ರ ಮುಜುಗರ ಉಂಟುಮಾಡುತ್ತಿರುವುದು ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ಮಾತನಾಡುತ್ತಿರುವುದು ಸಹಜವಾಗೇ ಆಳುವ ಮಂದಿಗೆ ಕಿರಿಕಿರಿ ತಂದಿದೆ. ಹಾಗಾಗಿಯೇ ಯಾವುದೋ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆ ನೆಪಮಾಡಿಕೊಂಡು ಯುವ ಮುಖಂಡರ ಜನಪರ ಕೆಲಸಗಳನ್ನು ಹತ್ತಿಕ್ಕಲು ತನ್ನದೇ ವಶದಲ್ಲಿರುವ ದೆಹಲಿ ಪೊಲೀಸರನ್ನು ಕೇಂದ್ರ ಸರ್ಕಾರ ಬಳಸಿಕೊಂಡಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್ ಪಕ್ಷ ಕೂಡ ಇಂತಹ ಗಂಭೀರ ಆರೋಪ ಮಾಡಿದೆ. ಆದರೆ, ಶ್ರೀನಿವಾಸ್ ಮಾತ್ರ ಅಂತಹ ಯಾವುದೇ ಆರೋಪದ ಪ್ರಸ್ತಾಪ ಮಾಡದೆ, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇವೆ. ನಾವು ಪಾರದರ್ಶಕವಾಗಿದ್ದೇವೆ. ನಮ್ಮ ಜನರ ಜೀವ ರಕ್ಷಣೆಯ ಕಾರ್ಯ ಮುಂದುವರಿಯಲಿದೆ, ಇಂತಹ ಬೆದರಿಕೆಗಳಿಂದ ನಮ್ಮ ಜನಪರ ಕೆಲಸವನ್ನು ತಡೆಯಲಾಗದು ಎಂದಿದ್ಧಾರೆ. ಆ ಮೂಲಕ ಕ್ಷುಲ್ಲಕ ರಾಜಕಾರಣ ಮೀರಿದ ಜನಹಿತ ತಮ್ಮ ಧ್ಯೇಯ ಎಂಬುದನ್ನು ಪರೋಕ್ಷವಾಗಿ ಆಳುವ ಮಂದಿಯ ಮುಖಕ್ಕೆ ರಾಚುವಂತೆ ಹೇಳಿದ್ದಾರೆ!
ತನ್ನದೇ ಪಕ್ಷದ ಕರ್ನಾಟಕದ ಕಲಬುರ್ಗಿಯ ಸಂಸದ ಉಮೇಶ್ ಜಾಧವ್, ಸರ್ಕಾರದ ಯಾವ ಅಧಿಕೃತ ಅನುಮತಿ ಇಲ್ಲದೆ ವಿಮಾನದಲ್ಲಿ ಆಮ್ಲಜನಕ ಸಾಗಣೆ ಮಾಡಿದ ವಿಷಯದಲ್ಲಾಗಲೀ, ರಾಷ್ಟ್ರೀಯ ಸ್ವಯಂಸೇವಾ ಸಂಘದ ವಿವಿಧ ಘಟಕಗಳು ದೇಶಾದ್ಯಂತ ನಡೆಸುತ್ತಿವೆ ಎನ್ನಲಾಗುವ ಪರಿಹಾರ ಕಾರ್ಯಗಳ ವಿಷಯದಲ್ಲಾಗಲೀ ಯಾವ ಕ್ರಮ ಜರುಗಿಸಲಾಗಿದೆ? ಅವರುಗಳೆಲ್ಲಾ ಮಾಡುವುದು ಜನಸೇವೆಯಾದರೆ, ಅವರು ಒದಗಿಸುವ ಆಮ್ಲಜನಕ, ಔಷಧಿ, ವೈದ್ಯಕೀಯ ನೆರವು, ಆಹಾರ ಪದಾರ್ಥಗಳ ನೆರವು ಸಹಾಯ ಹಸ್ತವಾದರೆ, ಬಿ ವಿ ಶ್ರೀನಿವಾಸ್ ಕೂಡ ಅದನ್ನೇ ಹೆಚ್ಚು ವ್ಯವಸ್ಥಿತವಾಗಿ, ಯಾವ ತಾರತಮ್ಯವಿಲ್ಲದೆ ಜೀವ ರಕ್ಷಣೆಯ ಉದ್ದೇಶದಿಂದ ಮಾಡುತ್ತಿದ್ದರೆ, ಅದು ಹೇಗೆ ಅಪರಾಧವಾಗುತ್ತದೆ? ಎಂಬುದು ಕೇಳಲೇಬೇಕಾದ ಪ್ರಶ್ನೆ
ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಕೇಂದ್ರ ಸರ್ಕಾರ ರಾಜಧಾನಿ ದೆಹಲಿಯಲ್ಲಿ ಶನಿವಾರ ಮತ್ತೊಂದು ಇಂತಹದ್ದೇ ವರಸೆ ಪ್ರದರ್ಶಿಸಿದೆ. ದೇಶದಲ್ಲಿ ಲಸಿಕೆ ಹಾಹಾಕಾರದ ಹಿನ್ನೆಲೆಯಲ್ಲಿ, “ನಮ್ಮ ಮಕ್ಕಳಿಗೆ ಬೇಕಾದ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕೊಟ್ಟಿರಿ ಮೋದಿಯವರೇ” ಎಂದು ಪೋಸ್ಟರ್ ಅಂಟಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ! ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ, ಸಾರ್ವಜನಿಕ ಆಸ್ತಿ ವಿರೋಪದಂತಹ ಪ್ರಕರಣಗಳನ್ನು ಅಧಿಕೃತವಾಗಿ ದಾಖಲಿಸಿ ಎಫ್ ಐಆರ್ ದಾಖಲಾಗಿದ್ದರೂ, ಪೊಲೀಸರ ಕ್ರಮದ ಹಿಂದೆ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಕಾರಣವೇ ಇರುವುದು ಎಂಬುದಕ್ಕೆ ಸಾಕ್ಷಿ ಬೇಕಿಲ್ಲ!
ಅಂದರೆ, ಒಂದು ಕಡೆ ಸರ್ಕಾರ ತನ್ನ ಹೊಣಗೇಡಿತನ ಮತ್ತು ಜನಹಿತ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳಲೂ ಸಿದ್ಧವಿಲ್ಲ. ಅದೇ ಹೊತ್ತಿಗೆ ತಾನು ಮಾಡಬೇಕಾದ ಆದರೆ ಮಾಡಲಾಗದೆ ಸೋತ ಕಡೆ ದೇಶದ ಯುವಕರು, ತಮ್ಮದೇ ಸಂಘಟನೆಗಳ ಮೂಲಕ ಜನರ ನೆರವಿಗೆ ಒದಗಿ ಬರುತ್ತಿರುವುದನ್ನು ಕೂಡ ಸಹಿಸುತ್ತಿಲ್ಲ. ಮತ್ತೊಂದು ಕಡೆ ಇಂತಹ ತನ್ನ ಹೊಣೆಗೇಡಿತನವನ್ನು, ಜನ ವಿರೋಧಿ ನಡೆಗಳನ್ನು ಪ್ರಶ್ನಿಸುವವರ ಮೇಲೆ ಪೊಲೀಸರನ್ನು ಛೂ ಬಿಡುವ ಮೂಲಕ ಸರ್ವಾಧಿಕಾರಿ ದಮನ ನೀತಿ ಅನುಸರಿಸುತ್ತಿದೆ. ಇದೆಲ್ಲಕ್ಕೂ ಬಿ ವಿ ಶ್ರೀನಿವಾಸ್ ಮತ್ತು ಇದೀಗ ಪೋಸ್ಟರ್ ಪ್ರಕರಣಗಳೇ ಜ್ವಲಂತ ಸಾಕ್ಷಿ!