ಕೊಡಗಿನ ಕೃಷಿ ಲಾಕ್ ಮಾಡಿದ ಕರೋನಾ ಕರ್ಫ್ಯೂ

ಕರೋನಾ ಅಟ್ಟಹಾಸಕ್ಕೆ ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ಎಲ್ಲಾ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿರುವ ಕೋವಿಡ್, ಕೃಷಿ ವಲಯಕ್ಕೂ ದೊಡ್ಡ ಮಟ್ಟದ ಪೆಟ್ಟು ನೀಡಿದೆ. ಕೊಡಗು ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು ಸೇರಿದಂತೆ ಇತರೆ ಎಲ್ಲಾ ಬೆಳೆಗಳ ಕ್ವೌಯ್ಲು ಮುಗಿದಿದ್ದು, ನಂತರ ಕಾರ್ಯಗಳಿಗೆ ಕರೋನಾ ಅಡ್ಡಿಪಡಿಸಿದೆ. ಈ ಹಿಂದೆ ಮಹಾಮಳೆ, ಪ್ರಾಕೃತಿಕ ವಿಕೋಪದಂತಹ ದುರಂತಗಳು ಸಂಭವಿಸಿ ಕೊಡಗಿನ ರೈತರು ನಲುಗಿ ಹೋಗಿದ್ದರು. ಜೀವದ ಜತೆಗೇ  ಬೆಳೆ, ಭೂಮಿ ಕಳೆದುಕೊಂಡರು. ಇದರೊಂದಿಗೆ ಇತ್ತೀಚಿಗೆ ಜಿಲ್ಲೆಯ ಉತ್ತರ ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಕೂಡ ಸಮಸ್ಯೆ ಸೃಷ್ಟಿಯಾಯಿತು. ಇವೆಲ್ಲದರ ಮೇಲೆ ಕಾಡಾನೆ ದಾಳಿ ಕೊಡಗಿನ ಬೆಳೆಗಾರರನ್ನು ಕಂಗಾಲು ಮಾಡಿತು.

ಇದೀಗ ಕರೋನಾ ನೇಗಿಲಯೋಗಿಯ ಬದುಕಿಗೂ ಮುಳುವಾಗಿದೆ. ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ, ಸೂಕ್ತ ಬೆಲೆ, ರಸಗೊಬ್ಬರ ಕೊರತೆ, ರಫ್ತು ಹೀಗೆ ಆನೇಕ ಸಮಸ್ಯೆಗಳಿಗೆ ಕರೋನಾ ಕಾರಣವಾಗಿದೆ. ದಕ್ಷಿಣ ಕೊಡಗಿನಲ್ಲಿ ಮುಂಗಾರಿನ ಸಿದ್ಧತೆಗೆ ಕರೋನಾ ಅಡ್ಡಿಪಡಿಸಿದರೆ, ಉತ್ತರ ಕೊಡಗಿನಲ್ಲಿ ತೋಟಗಾರಿಕೆ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುವ ಸ್ಥಿತಿ ಸೃಷ್ಟಿಯಾಗಿದೆ. ಕೇರಳ-ಕೊಡಗು ಗಡಿಯ ಕರಿಕೆ ಹಾಗೂ ಮದೆ, ಸಂಪಾಜೆ, ಪೆರಾಜೆ ವಲಯಗಳಲ್ಲಿ ಬೆಳೆದ ಬೆಳೆಗಳನ್ನು  ಹೊರ ಜಿಲ್ಲೆಗೆ ಕಳಿಸಲಾಗಿದೆ.

ಕೇರಳಕ್ಕೆ ಅಡಿಕೆ, ತೆಂಗು, ರಬ್ಬರ್ ಬೆಳೆಯನ್ನು ಕರಿಕೆ ಭಾಗದ ಜನರು   ಮಾರಾಟ  ಮಾಡುತ್ತಾರೆ.  ಲಾಕ್ಡೌನ್ ಇರುವುದರಿಂದ  ಮಾರಾಟ   ಅಸಾಧ್ಯವಾಗಿದ್ದು, ಸಣ್ಣ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಶುಂಠಿ, ಸಿಹಿಗೆಣಸು ಬೆಳೆಗೂ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ವೀರಾಜಪೇಟೆ, ಸಿದ್ದಾಪುರ ಸೇರಿದಂತೆ ಕೊಡಗಿನ ನಾನಾ ಭಾಗದ ಬೆಳೆಗಾರರು ಕರೋನಾ ಕಂಟಕಕ್ಕೆ ತತ್ತರಗೊಂಡಿದ್ದಾರೆ.  

ಸಿದ್ದಾಪುರದಲ್ಲಿ  ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾದ ಕರೋನಾ ವೈರಸ್ನಿಂದಾಗಿ ನರ್ಸರಿ ಗಿಡಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರು ಇದೀಗ ಕೃಷಿ ಮಾಡಿದ ಸಸಿಗಳು ಮಾರಾಟ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.

  ಮಳೆಗಾಲ ಸಮೀಪವಾಗುತ್ತಿರುವ ಸಂದರ್ಭದಲ್ಲಿ  ಕಾಫಿ, ಕರಿಮೆಣಸು ಬಳ್ಳಿ, ಅಡಿಕೆ, ಸಿಲ್ವರ್ ಸಸಿಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿಸಿ, ಅವುಗಳಿಗೆ ನೀರು ಸುರಿದು ಬೆಳೆಸಿ ಮಾರಾಟಕ್ಕೆ ಸಿದ್ದಪಡಿಸುತ್ತಾರೆ.  ಮುಂಗಾರು ಮಳೆ ಪ್ರಾರಂಭವಾಗುವ ಮುಂಚಿತವಾಗಿ  ಎಲ್ಲಾ ಬೆಳೆಗಾರರು ತಮ್ಮ ಕಾಫಿ ತೋಟಗಳಿಗೆ ನರ್ಸರಿಗಳಿಂದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಜಿಲ್ಲೆ, ಹಾಗೂ ಹೊರಜಿಲ್ಲೆಗೆ ಹೆಚ್ಚಾಗಿ ಗ್ರಾಹಕರು ಆಗಮಿಸಿ ನರ್ಸರಿಗಳಿಂದ ಗಿಡಗಳನ್ನು  ಖರೀದಿಸುವುದು ವಾಡಿಕೆಯಾಗಿದೆ. ಆದರೆ, ಕಳೆದೆರಡು ವರ್ಷಗಳಿಂದ ಏಪ್ರಿಲ್- ಮೇ ತಿಂಗಳಿನಲ್ಲಿ ಕರೋನಾ ವೈರಸ್ನಿಂದಾಗಿ ಲಾಕ್ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ  ನರ್ಸರಿಯ ಕೃಷಿಯನ್ನೇ ಅವಲಂಬಿಸಿಕೊಂಡಿರುವ ಅದೆಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಬ್ಯಾಂಕ್ಗಳಿಂದ ಸಾಲ ಪಡೆದುಕೊಂಡು ಕೃಷಿಕರು   ಗಿಡಗಳು  ಬ್ಯಾಂಕಿಗೆ ಸಾಲ ಪಾವತಿಸಲಾಗದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ಬ್ಯಾಂಕಿನಿಂದ ಸಾಲ ಪಡೆದು ನರ್ಸರಿ ಗಿಡಗಳನ್ನು ಬೆಳೆಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಕಳೆದೆರಡು ವರ್ಷಗಳಿಂದ  ಪ್ರವಾಹದಿಂದಾಗಿ ನರ್ಸರಿ ಗಿಡಗಳು ಪ್ರವಾಹಕ್ಕೆ ಸಿಲುಕಿ ನೀರು ಪಾಲಾದವು. ಇದಲ್ಲದೇ 2 ವರ್ಷಗಳಿಂದ ಕರೋನಾ ವೈರಸ್ನಿಂದ ಸಕಾಲಕ್ಕೆ ಗಿಡಗಳು ಮಾರಾಟವಾಗದೇ ಸಮಸ್ಯೆಯಾಗಿದೆಯೆಂದು ನೆಲ್ಲಿಹುದಿಕೇರಿ ಗ್ರಾಮದ ದೇವಿ ನರ್ಸರಿ ಮಾಲೀಕ ಸುರೇಶ್ ತಮ್ಮ ಅಳಲು ತೋಡಿಕೊಂಡರು.

  ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಉಲುಗುಲಿ ಗ್ರಾಮದ ನಿವೃತ್ತ ಯೋಧ ವಸಂತ ಎಂಬುವವರು ತಮ್ಮ ತೋಟದ ಅರ್ಧ ಎಕರೆ ಜಾಗದಲ್ಲಿ ಬಾಳೆಗಿಡ ನೆಟ್ಟಿದ್ದರು. ಅದು ಫಸಲು ಬಿಟ್ಟು ಗಿಡದಲ್ಲಿ ಕೊಳೆಯುತ್ತಿದೆ. ವಾತಾವರಣದ ಏರುಪೇರುಗಳಿಂದ ಬಾಳೆಕೊಳ್ಳಲು ವ್ಯಾಪಾರಸ್ಥರು ಬರುತ್ತಿಲ್ಲ. ಇದೇ ರೀತಿ ಅನೇಕ ರೈತರ ಪರಿಸ್ಥಿತಿಯಾಗಿದ್ದು, ಬೆಳೆಗಾರರು ಬೆಳೆದ ಹಣ್ಣನ್ನು ಅಕ್ಕಪಕ್ಕದವರಿಗೆ ದಾನವಾಗಿ ನೀಡಿದ್ದು, ಕಷ್ಟಪಟ್ಟು ಬೆಳೆದ ಬಾಳೆಹಣ್ಣು ಬೆಳೆದು ನಿಂತಾಗ ಕೊಂಡುಕೊಳ್ಳುವವರು ಇಲ್ಲದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ . ಸೋಮವಾರಪೇಟೆಯಲ್ಲಿ ತರಕಾರಿ ಬೆಳೆಗಳು ಗದ್ದೆಗಳಲ್ಲೇ ಕೊಳೆಯುತ್ತಿವೆ.   ಕೋವಿಡ್ ಕಪ್ರ್ಯೂನಿಂದಾಗಿ ಕೊಳ್ಳುವವರಿಲ್ಲದೆ ಹಸಿ ಮೆಣಸಿನಕಾಯಿ, ಬೀನ್ಸ್ ಗದ್ದೆಗಳಲ್ಲೇ ಉಳಿದಿವೆ.   ರೈತರು ತಾವು ಬೆಳೆದ ಚೆಂಡು ಹೂಗಳನ್ನು ಗಿಡಗಳಲ್ಲೇ ಬಿಡುವಂತಾಗಿದೆ.

ಈ ಮಧ್ಯೆ ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ಹೂವುಗಳು ಹಾಳಾಗುತ್ತಿದ್ದು, ಬೆಳೆದ ಹೂವುಗಳನ್ನು ತಿಪ್ಪೆಗೆ ಎಸೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದ ಹಸಿ ಮೆಣಸಿನಕಾಯಿ ಇತ್ತೀಚೆಗೆ ಬೆಲೆ ಕುಸಿತ ಕಂಡು ಕೆ.ಜಿ.ಗೆ  6 ರಿಂದ 10 ರೂಪಾಯಿ ಆಗಿದೆ.   ರೈತರಿಂದ 10 ರೂಪಾಯಿಗೆ ಖರೀದಿಸುವ ಖರೀದಿದಾರರು ಅದನ್ನು ವರ್ತಕರಿಗೆ 20 ರೂಪಾಯಿಗೆ ಮಾರುತ್ತಿದ್ದಾರೆ. ವರ್ತಕರು ಮಾರುಕಟ್ಟೆಯಲ್ಲಿ  40 ರೂಪಾಯಿಗೆ ಮಾರುತ್ತಿದ್ದು, ಮೆಣಸು ಬೆಳೆದ ರೈತ ಮಾತ್ರ ಕನಿಷ್ಟ ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಿಕೊಳ್ಳಲಾಗದೇ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾನೆ. ಬೀನ್ಸ್ ಸಹ  15 ರಿಂದ 20 ರೂ.ಗೆ ಕುಸಿದಿದ್ದು ರೈತರು ಕಂಗಾಲಾಗುವಂತೆ ಮಾಡಿದೆ. ಕೆಲವೆಡೆ ರೈತರು ವಿಧಿ ಇಲ್ಲದೆ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಕೆ.ಜಿ. ಬೀನ್ಸ್ಗೆ 40 ರಿಂದ 50 ರೂಪಾಯಿ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.

 ನಾಪೋಕ್ಲು ವ್ಯಾಪ್ತಿಯಲ್ಲಿ  ಅಸ್ಸಾಂ, ಪಶ್ಚಿಮ ಬಂಗಾಳದ ಕಾರ್ಮಿಕರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಕಂಡು ಬರುತ್ತಿತ್ತು. ಆದರೆ, ಅಲ್ಲಿ ಚುನಾವಣೆ ಹಿನ್ನೆಲೆ ಎಲ್ಲಾ ಕಾರ್ಮಿಕರು ತಮ್ಮ ಊರು ಸೇರಿದ್ದಾರೆ. ವಾಪಸ್ಸಾಗುವ ಸಂದರ್ಭದಲ್ಲಿ ಕೊರೋನಾ ಅಟ್ಟಹಾಸ ಮೆರೆಯಿತು. ಆದ ಕಾರಣ ಇಲ್ಲಿ ಹೆಚ್ಚಿನ ಕಾರ್ಮಿಕರ ಸಮಸ್ಯೆ ಕಂಡು ಬರುತ್ತಿದೆ. ಅದಕ್ಕಾಗಿ ದೂರದ ಸಿದ್ದಾಪುರ, ಪಾಲಿಬೆಟ್ಟ, ಮಾಲ್ದಾರೆ, ಮತ್ತಿತರ ಕಡೆಗಳಿಂದ ಕಾಫಿ ಕಸಿ, ಮರ ಕಸಿ ಕೆಲಸಗಳಿಗೆ ಕಾರ್ಮಿಕರು ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಲ್ಲಿ ಬೆಳಿಗ್ಗೆ ಬಂದು ಕೆಲಸ ನಿರ್ವಹಿಸಿ ಸಂಜೆ ಮರುಳುತ್ತಿದ್ದರು. ಆದರೆ, ಲಾಕ್ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಹಿನ್ನೆಲೆ ಅವರಿಗೂ ಬರಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಬೆಳೆಗಾರರ ತೋಟದ ಕೆಲಸಗಳು ಅರ್ಧಕ್ಕೆ ನಿಂತಿದೆ. ಇದೆಲ್ಲದರ ನಡುವೆ ಕಳೆದ ಒಂದು ತಿಂಗಳಿಂದ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ಅರ್ಧ ದಿನದ ಕೆಲಸ ಮಾತ್ರ ಮಾಡಲು ಸಾಧ್ಯವಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗಲಿದೆ ಎಂಬ ವರದಿಯಿಂದ ಕಂಗಾಲಾಗಿರುವ ಬೆಳೆಗಾರರು ತಮ್ಮ ತೋಟದ ಕೆಲಸ ಹೇಗೆ ಮುಗಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಒಟ್ಟಿನಲ್ಲಿ ಕರೋನಾ ಈ ವ್ಯಾಪ್ತಿಯ ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.          

ದಕ್ಷಿಣ ಕೊಡಗಿನ ಬಹುತೇಕ ತೋಟಗಳಿಗೆ  ಪೊನ್ನಂಪೇಟೆ, ತಿತಿಮತಿ, ಗೋಣಿಕೊಪ್ಪ, ನೆರೆಯ ಹೆಚ್.ಡಿ. ಕೋಟೆ ಹಾಗೂ ಹುಣಸೂರು ತಾಲೂಕಿನಿಂದ ಜೀಪು ಹಾಗೂ ಇನ್ನಿತರ ವಾಹನಗಳಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದರು. ಆದರೆ ಲಾಕ್ ಡೌನ್ ನಿಂದ ವಾಹನ ಸಂಚಾರಕ್ಕೆ ಅವಕಾಶ ಇಲ್ಲದೆ ಇರುವ ಕಾರಣ ಕಾರ್ಮಿಕರ ಕೊರತೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಲಾಕ್ಡೌನ್ ನಿಂದಾಗಿ ಕೊಡಗಿನ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದು  ಲಾಕ್ ಡೌನ್ ಪುನಃ ಮುಂದುವರಿಕೆ ಆದಲ್ಲಿ ದೇವರೇ ಗತಿ ಎಂಬಂತಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...