ಅಮ್ಮನ ದಿನ ಎಂದಾಕ್ಷಣ ಅಮ್ಮಂದಿರು ನೆನಪಾಗುತ್ತಾರೆ. ಅಮ್ಮ ಒಬ್ಬಳಿರುತ್ತಾಳೆ. ಅಮ್ಮಂದಿರು ಹೇರಳ. ಇದು ಸಂವೇದನಾಶೀಲ ಜಗತ್ತಿನ ನಿಯಮ. ಅಮ್ಮನನ್ನು ಕಾಣುವುದು ಹೇಗೆ, ಯಾರಲ್ಲಿ, ಯಾವ ಸಂದರ್ಭದಲ್ಲಿ, ಯಾರ ನಡುವೆ ಹೀಗೆ ಹತ್ತು ಹಲವು ಪ್ರಶ್ನೆಗಳು. ಅಮ್ಮ ಎನ್ನುವ ಕಲ್ಪನೆಯೇ ಹಾಗೆ. ಹೆತ್ತವಳು ಸ್ವಾಭಾವಿಕವಾಗಿ ಅಮ್ಮ ಎನಿಸಿಕೊಳ್ಳುತ್ತಾಳೆ. ಪೊರೆದವಳು, ಪೋಷಿಸಿದವಳು ಅಮ್ಮ ಎಂದು ಕರೆಸಿಕೊಳ್ಳುತ್ತಾಳೆ. ಅಮ್ಮಾ,,,,, ಎಂಬ ನೋವಿನ ದನಿಗೆ ಸ್ಪಂದಿಸುವ ಯಾವುದೇ ಮನಸು ನಮಗೇ ಅರಿವಿಲ್ಲದೆ ಮನದ ಮೂಲೆಯಲ್ಲಿ ನೆಲೆಸಿಬಿಡುತ್ತದೆ. ಆ ಮನಸೂ ಅಮ್ಮನ ಸ್ಥಾನ ಭರಿಸಿಬಿಡುತ್ತದೆ. ಮಹಾಭಾರತದ ಕರ್ಣ ಕೌಂತೇಯನೋ ರಾಧೇಯನೋ ಎಂಬ ಪ್ರಶ್ನೆ ಎದುರಾದಾಗ ಹೇಗೆ ನಿಖರವಾಗಿ ಉತ್ತರ ಹೇಳಲು ಸಾಧ್ಯ. ಕರುಳ ಬಳ್ಳಿಯ ಸೂಕ್ಷ್ಮ ತಂತುಗಳನ್ನೂ ದಾಟಿದ ಒಂದು ಸೇತುವೆಯನ್ನು ಜಿಜ್ಞಾಸೆಯ ನಡುವೆಯೇ ದಾಟಬೇಕು.
ಅಮ್ಮನ ಮುಖವನ್ನೇ ಕಾಣದ ಎಷ್ಟೋ ಜೀವಗಳು ನಮ್ಮ ನಡುವೆ ಇವೆ. ಇಂತಹ ಅಭಾಗ್ಯರಿಗೆ ಅಮ್ಮ ಒಂದು ಅನುಭಾವದ ನೆಲೆಯಾಗಿರುತ್ತಾಳೆ. ಅಪ್ಪನಲ್ಲೋ, ಅಕ್ಕನಲ್ಲೋ ಮತ್ತಾರಲ್ಲೋ ಆ ಸೂಕ್ಷ್ಮ ಸಂವೇದನೆಯನ್ನು ಕಂಡುಕೊಳ್ಳುವ ತವಕ ಬದುಕಿನುದ್ದಕ್ಕೂ ಕಾಡುತ್ತದೆ. ಕೆಲವೊಮ್ಮೆ ಈ ಅನುಭಾವವೂ ನಿಲುಕದೆ ಹೋಗಬಹುದು. ಶೂನ್ಯಭಾವ ಆವರಿಸಬಹುದು. ಜಗತ್ತು ಪರಿಪೂರ್ಣವಲ್ಲ ಎಂಬ ಭಾವನೆ ಮೂಡಲಿಕ್ಕೂ ಸಾಕು. ಕಣ್ತೆರೆಯುವ ಮುನ್ನವೇ ಹೆತ್ತ ಒಡಲನ್ನು ಕಳೆದುಕೊಳ್ಳುವ ಸುಪ್ತ ವೇದನೆ ಅನುಭವಕ್ಕೆ ನಿಲುಕುವಂತಹುದಲ್ಲ. ನಮ್ಮ ನಡುವೆಯೇ, ನಮ್ಮ ನಿಕಟದಲ್ಲೇ ಇಂತಹ ಅಭಾಗ್ಯರು ಇರುತ್ತಾರೆ. ಇಂಥವರಿಗೆ ನಾವು ಅನುಕಂಪ ತೋರುತ್ತೇವೆ. ಸಹಾನುಭೂತಿಯಿಂದ ಕಾಣುತ್ತೇವೆ. ಅವರ ಬೇಕು ಬೇಡಗಳಿಗೆ ಸ್ಪಂದಿಸುತ್ತೇವೆ.
ಆದರೆ ನಮ್ಮ ಸಂವೇದನೆಗೂ ನಿಲುಕದ ಒಂದು ಸುಪ್ತ ಭಾವ ಈ ಮಕ್ಕಳಲ್ಲಿ ಅಡಗಿರುತ್ತದೆ. ಇದನ್ನು ಅರಿಯಲು ಪರಾನುಭೂತಿ (Empathy) ಅವಶ್ಯ. ಈ ಪರಾನುಭೂತಿಯ ಮೂಲ ಸೆಲೆಯೇ ಅಮ್ಮ ಎನ್ನುವ ಆ ಶಕ್ತಿ. ಎಷ್ಟೋ ಸಂದರ್ಭಗಳಲ್ಲಿ ನಮ್ಮೊಳಗಿನ ಅನುಕಂಪ ಮತ್ತು ಸಂವೇದನೆಯ ಫಲ ನಾವು ಅಮ್ಮನಿಲ್ಲದವರ ಬದುಕಿನಲ್ಲಿ ಅಮ್ಮನ ಸ್ಥಾನ ಭರಿಸಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಗೆದ್ದೆನೆಂಬ ಅಹಮಿಕೆಯೂ ನಮ್ಮಲ್ಲಿ ಮೂಡುತ್ತದೆ. “ ಪಾಪ ತಾಯಿ ಇಲ್ಲದ ಮಗು ” ಎಂತಲೋ, ತಬ್ಬಲಿ ಎಂತಲೋ ನಮ್ಮ ಮನದಾಳದ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ಈ ಲೌಕಿಕ ನೆಲೆಗಳು ಒಂದು ಹಂತದವರೆಗೆ ಹರಿದು ಬಂದು ನಂತರ ನಿಂತುಬಿಡುತ್ತವೆ. ಅಲ್ಲಿ ಅಮ್ಮನ ಮೂಲ ಸೆಲೆ ನಮಗೆ ಗೋಚರಿಸಬೇಕು, ಗೋಚರಿಸುತ್ತದೆ. ಮಕ್ಕಳ ಬೇಕು ಬೇಡಗಳಿಗೆ ನಿಲುಕುವ ಮನಸು, ಭಾವುಕ ನೆಲೆಯಲ್ಲಿ ಎಷ್ಟೇ ಔನ್ನತ್ಯ ಗಳಿಸಿದ್ದರೂ ಅಂತಿಮವಾಗಿ ಆ ಮಗುವಿನ ಅಂತರಾಳದಲ್ಲಿ ಒಂದು ಶೂನ್ಯ ಹಾಗೇ ಉಳಿದಿರುತ್ತದೆ. ಅದು ಅಮ್ಮ, ಅನುಭಾವದ ಅಮ್ಮ.
ತಮ್ಮ ಜೀವಮಾನದುದ್ದಕ್ಕೂ ಅಮ್ಮನೊಡನೆ ಇರುವ ಭಾಗ್ಯ ಹಲವರಿಗೇ ಇರಲು ಸಾಧ್ಯ. ಇಂಥವರಿಗೆ ಅಮ್ಮ ಎಂದರೆ ಬದುಕು ಮತ್ತು ಬದುಕಿನ ಎಲ್ಲ ಮಜಲುಗಳು. ತಾನು ಇರುವವರೆಗೂ ತನ್ನ ಮಕ್ಕಳು ಕಣ್ಣೆದುರು ಇರಬೇಕು ಎಂದು ಸದಾ ಬಯಸುವ ಆ ಜೀವಕ್ಕೆ ತನಗಿಂತಲೂ ತನ್ನ ಕುಡಿಗಳ ಜೀವ ಹೆಚ್ಚು ಎನಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಇಂತಹ ಎಷ್ಟೋ ಜೀವಗಳು ಏಕಾಂಗಿಯಾಗಿ ಬದುಕು ಸವೆಸುವುದನ್ನೂ ನಾವು ಕಾಣುತ್ತಿದ್ದೇವೆ. ತನ್ನ ಒಡಲ ಕುಡಿಗಳ ಏಳಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ಬದುಕು ಸವೆಸುವ ಅಮ್ಮ ಎನ್ನುವ ಆ ಜೀವ, ಈ ಕುಡಿಗಳು ಸಾಗರ ದಾಟಿದರೂ ತನ್ನೊಡನೆಯೇ ಇವೆ ಎಂದು ಭಾವಿಸಿ ಬದುಕು ಸವೆಸುತ್ತದೆ. ಇಂತಹ ಜೀವಗಳಿಗೆ ಒಂದು ಹಿತಾನುಭವದ ಹಿತವಲಯ ಸೃಷ್ಟಿಸುವ ಮೂಲಕ ನಾವು ಸಂತೃಪ್ತರಾಗುತ್ತೇವೆ. ಗೆದ್ದೆನೆಂಬ ಹಿರಿಮೆಯಲ್ಲಿ ತೀರದಾಚೆಯಲ್ಲಿ ನೆಲೆಸಿಬಿಡುತ್ತೇವೆ.
ಹಿತವಲಯಗಳೇ ಹಾಗೆ. ಅದೊಂದು ಭ್ರಮೆಯನ್ನು ಸೃಷ್ಟಿಸುತ್ತದೆ. ಒಳಗಿರುವವರಿಗೆ ಏನೋ ಹೊಸತು ಕಂಡಂತಹ ಅನುಭವವಾದರೆ ಹೊರಗೆ ಉಳಿದವರಿಗೆ ನಿಷ್ಕರ್ಷೆಗೆ ನಿಲುಕದ ಆತ್ಮತೃಪ್ತಿ ಇರುತ್ತದೆ. ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಮನುಷ್ಯನಿಗೆ ಮುಂದಿನ ಹಾದಿಯ ಕನಸುಗಳು ಆಕರ್ಷಣೀಯವಾಗುತ್ತವೆ, ಎಷ್ಟೇ ಸುಂದರ ಎನಿಸಿದರೂ ದಾಟಿ ಹೋದ ಕನಸುಗಳು ಭವಿಷ್ಯಕ್ಕೆ ನಿಲುಕುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಅಮ್ಮ ಎನ್ನುವ ಶಕ್ತಿ ಇಂತಹ ಹಿತವಲಯದಲ್ಲಿ ಸಿಲುಕಿ ತನ್ನ ಕನಸುಗಳಲ್ಲೇ ಕಾಲ ಕಳೆಯುವುದನ್ನೂ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಸಕಲ ಸೌಕರ್ಯಗಳೊಂದಿಗೆ, ಸುಖಾನುಭವದ ಸುಂದರ ತಾಣಗಳಲ್ಲಿ ಅಮ್ಮ ಎನ್ನುವ ಜೀವ ಸಾಗರದಾಚೆಯ ಕಂದನ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿರುತ್ತದೆ. ಈ ಜೀವದ ಒಂಟಿ ಬದುಕಿನ ನೆಲೆಗಳನ್ನು ಆಧುನಿಕ ಸಮಾಜ ಗೌರವಯುತವಾಗಿ “ ವೃದ್ಧಾಶ್ರಮ ” ಎಂದು ಗುರುತಿಸುತ್ತದೆ.
ಇವೆಲ್ಲವೂ ಬದುಕಿನ ಅನಿವಾರ್ಯತೆಗಳು. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಕಾಣಬಹುದಾದ ಸಹಜ ಘಟ್ಟಗಳು. ಈ ಸುಂದರ ಕನಸಿನ ಲೋಕದ ನಡುವೆಯೇ ನಮ್ಮ ನಡುವೆ, ನಮ್ಮ ಸುತ್ತಲಿನ ಸೀಮಿತ ಲೋಕದಲ್ಲಿ ಅಮ್ಮ ಎನ್ನುವ ಚೇತನವನ್ನು ಸದಾ ತನ್ನೊಡನೆ ಉಳಿಸಿಕೊಳ್ಳುವ ಹಂಬಲ ಇರುವ ಅದೆಷ್ಟೋ ಜೀವಗಳು ಇರುತ್ತವೆ. “ ಆತ್ಮತೃಪ್ತಿ ”ಯ ಮತ್ತೊಂದು ಹೆಸರೇ ಅಮ್ಮ ಅಲ್ಲವೇ ? ತನ್ನ ಒಡಲ ಕುಡಿಗಳ ಪ್ರೀತಿ ವಾತ್ಸಲ್ಯಗಳಲ್ಲೇ ಭವಿಷ್ಯದ ಬದುಕು ಕಂಡುಕೊಳ್ಳುವ ಅಮ್ಮ ತಾನು ನೆಟ್ಟ ಸಸಿ ‘ಹೊಂಗೆ’ಯಾದರೂ ಸರಿ ‘ಜಾಲಿ’ಯಾದರೂ ಸರಿ. ಅದರ ನೆರಳಲ್ಲೇ ಬದುಕಲಿಚ್ಚಿಸುತ್ತದೆ. ಹೊಂಗೆ ಮತ್ತು ಜಾಜಿಯ ಆಯ್ಕೆ ನಮ್ಮದಾಗಿಬಿಡುತ್ತದೆ. ಅನುಭಾವದ ನೆಲೆಯಲ್ಲಿ ಅಮ್ಮನನ್ನು ಕಂಡುಕೊಳ್ಳುವಾಗ ಈ ಜಿಜ್ಞಾಸೆ ಕಾಡಿಯೇ ತೀರುತ್ತದೆ. ಪ್ರಜ್ಞೆ ನಮ್ಮದು ಆಯ್ಕೆಯೂ ನಮ್ಮದು , ಅಲ್ಲವೇ ?
ಹೀಗೆ ನಮ್ಮೊಡನಿಲ್ಲದ ಅಮ್ಮನನ್ನು ಕಂಡುಕೊಳ್ಳುವುದು ಹೇಗೆ ? ಯಾರಲ್ಲಿ ? ಯಾವ ಸಂದರ್ಭದಲ್ಲಿ ಅಥವಾ ಯಾವ ಸಾಂದರ್ಭಿಕ ನೆಲೆಯಲ್ಲಿ ? ಈ ಪ್ರಶ್ನೆಗಳನ್ನು ಶೋಧಿಸುತ್ತಾ ಹೋದಾಗ ಕಳೆದುಹೋದ ಅಮ್ಮ ಎದುರಾಗಿಬಿಡುತ್ತಾಳೆ. ಆಗ ಮನಸಿಗೆ ಭಾಸವಾಗುತ್ತದೆ ನಾನೇಕೆ ಹುಡುಕುತ್ತಿದ್ದೇನೆ ? ನಮ್ಮೊಳಗೇ ಇದ್ದಾಳಲ್ಲವೇ ಎಂದು. ಹಾಗೆಯೇ ಅಮ್ಮನಿಲ್ಲದ ದಿನಗಳಲ್ಲಿ ಮತ್ತಾರಲ್ಲೋ ಆ ಜೀವ ಸೆಲೆಯ ಒಂದು ಎಳೆಯನ್ನು ಕಂಡಿರುವ ಸಾಧ್ಯತೆಗಳೂ ಇರುತ್ತವೆ ಅಲ್ಲವೇ ? ಈ ಸೂಕ್ಷ್ಮ ಎಳೆಯ ಹಿಂದೆ ಅಡಗಿರುವ ಸಂವೇದನೆಯ ತಂತುಗಳು ಹೊಸ ಬಾಂಧವ್ಯಗಳನ್ನು ಹುಟ್ಟಿಸುತ್ತವೆ. ಹೊಸ ಲೋಕವೊಂದನ್ನು ತೆರೆಯುತ್ತವೆ. ಯಾವುದೋ ಒಂದು ಘಟ್ಟದಲ್ಲಿ ಕಳಚಿಕೊಳ್ಳುವ ಈ ತಂತುಗಳು ಭಾವುಕ ನೆಲೆಯಲ್ಲಿ ಜೀವಂತವಾಗಿಯೇ ಉಳಿಯುತ್ತವೆ. ನಮ್ಮೊಳಗಿನ ‘ ಅಮ್ಮ ’ ಅನುಭಾವದ ನೆಲೆಯಲ್ಲಿ ಜೀವಂತವಾಗಿದ್ದರೆ ಮಾತ್ರ ಹೀಗೆ ಮತ್ತೊಂದು ಜೀವದಲ್ಲಿ ಭಾವ ಕಂಡುಕೊಳ್ಳಲು ಸಾಧ್ಯ. ಇದು ಅಮ್ಮ ಎನ್ನುವ ಆ ಚೇತನದ ಚೈತನ್ಯ ಮತ್ತು ಶಕ್ತಿ.
ನೋಡಿ, ನನ್ನೊಡನಿಲ್ಲದ, ಮೂರು ದಶಕಗಳ ಹಿಂದೆಯೇ ನೆನಪಿನ ಚುಕ್ಕೆಯಾಗಿ ನಿರ್ಗಮಿಸಿದ ಆ ಮಡಿಲು ನೆನಪಾದಾಗ ಮನಸು ಹೇಗೆ ವಿಹರಿಸುತ್ತದೆ. ಇಷ್ಟೆಲ್ಲಾ ಬಳಸಿ ಸುತ್ತಾಡಿ ವಿಹರಿಸಿ ತನ್ಮಯ ಭಾವದಿಂದ ಮರಳಿ ಮನದ ಮೂಸೆಯನು ತಲುಪಿದಾಗ ಮತ್ತದೇ ಪ್ರಶ್ನೆ , ಅಮ್ಮ ನೀ ಎಲ್ಲಿರುವೆ ? ಚಿತ್ರಪಟದಲ್ಲಿರುವ ನಗುಮುಖದ ಅಮ್ಮ ಹೇಳುತ್ತಾಳೆ, ಮಗೂ ನಿನ್ನೊಳಗೇ !!! ಸಾಕಲ್ಲವೇ ಸಾರ್ಥಕತೆಗೆ.
ಅಮ್ಮಂದಿರ ದಿನದ ಶುಭಾಶಯಗಳು