ಭಾರತದಲ್ಲಿ ಕರೋನಾ 2ನೇ ಅಲೆ; ಮೋದಿ ಸೃಷ್ಟಿಸಿದ ರಾಷ್ಟ್ರೀಯ ದುರಂತ

ಭಾರತದಲ್ಲಿ ಪ್ರತಿ ದಿನ ‌4 ಲಕ್ಷಕ್ಕಿಂತಲೂ ಹೆಚ್ಚು ಜ‌ನ ಕರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನ ಕರೋನಾದಿಂದ ಸಾಯುತ್ತಿದ್ದಾರೆ. ನಡುವೆ ಆಮ್ಲಜನಕದ ಸಮಸ್ಯೆ ಸೃಷ್ಟಿಯಾಗಿದೆ. ಬೆಡ್, ಐಸಿಯು, ವೆಂಟಿಲೇಟರ್ ಮತ್ತು ಔಷಧೀಯ ಸಾಮಾಗ್ರಿಗಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕರೋನಾ ಲಸಿಕೆಗಳು ಕೂಡ ಅಗತ್ಯಕ್ಕೆ ತಕ್ಕಷ್ಟು ಲಭ್ಯವಾಗುತ್ತಿಲ್ಲ. ಹೀಗೆ ಸಮಸ್ಯೆಗಳ ಸರಮಾಲೆ ಸೃಷ್ಠಿಯಾಗಲು, ಸತ್ತವರನ್ನು ಸುಡಲು ಸಾಲುಗಟ್ಟಿ ನಿಲ್ಲಬೇಕಾದ ಕಂಡೂಕೇಳರಿಯದ ಪರಿಸ್ಥಿತಿ ನಿರ್ಮಾಣವಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದು ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ಹೇಳಿದೆ.

ಭಾರತದ ಮಾಧ್ಯಮಗಳು ಇಷ್ಟು ನೇರವಾಗಿ, ನಿಷ್ಠೂರವಾಗಿ ಕೇಂದ್ರ ಸರ್ಕಾರದ ತಪ್ಪುಗಳನ್ನು ಎತ್ತಿ ಹೇಳುತ್ತಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಬರುವ ಸಣ್ಣ ಪುಟ್ಟ ಟೀಕೆ-ವಿಮರ್ಶೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗಂಭೀರವಾಗಿ ‌ಪರಿಗಣಿಸುವುದಿಲ್ಲ. ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಆರ್ಥಿಕ ತಜ್ಞರೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನೀಡಿದಂತಹ ಸಲಹೆಗಳನ್ನು ಸಹಿಸಿಕೊಳ್ಳಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರೋನಾ ವಿಷಯದಲ್ಲಿ ಆಡಿದ ಮೌಲಿಕ ಮಾತುಗಳನ್ನು ಅಣಕಮಾಡಲಾಯಿತು. ಆದರೀಗ ದೇಶದಲ್ಲಿ ಹದಗೆಟ್ಟಿರುವ ಪರಿಸ್ಥಿತಿಯಿಂದಾಗಿ ಅಂತಾರಾಷ್ಟ್ರೀಯ ಸಮುದಾಯ ಭಾರತದತ್ತ ಬೊಟ್ಟು ಮಾಡುವಂತಾಗಿದೆ.

ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ಶನಿವಾರದ ತನ್ನ ಸಂಪಾದಕೀಯದಲ್ಲಿ ‘ಕರೋನಾ ನಿಯಂತ್ರಿಸುವಲ್ಲಿ ಭಾರತವು ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಿತ್ತು’ ಎಂಬುದನ್ನು ಹೇಳಿದೆ‌. ಕ್ರಮೇಣ ಆ ಆರಂಭಿಕ ಯಶಸ್ಸನ್ನು ಹಾಳುಮಾಡಿದೆ ಎಂಬುದಾಗಿ ಕೂಡ ಉಲ್ಲೇಖಿಸಿದೆ. ಅದಕ್ಕಿಂತ ಗಮನಾರ್ಹವಾದ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವೇ ಈ “ಸ್ವಯಂ ಪ್ರೇರಿತ ರಾಷ್ಟ್ರೀಯ ದುರಂತ”ದ ನೇತೃತ್ವ ವಹಿಸಿದೆ ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದೆ.

ಜಗತ್ತಿನಾದ್ಯಂತ ವ್ಯಾಪಕವಾಗಿ ಮನ್ನಣೆಗಳಿಸಿರುವ ‘ದಿ ಲ್ಯಾನ್ಸೆಟ್’ ಜರ್ನಲ್, ಭಾರತದ ಕರೋನಾ ಸಾಂಕ್ರಾಮಿಕ ಬಿಕ್ಕಟ್ಟು ನಿವಾರಣೆ ಆಗುವುದು ಸದ್ಯ ಪ್ರಧಾನಿ ಮೋದಿಯ ಆಡಳಿತವು ತನ್ನ ತಪ್ಪುಗಳನ್ನು ಒಪ್ಪಿಕೊಂಡು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಹೇಳಿದೆ. ‘ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಟೀಕೆಗಳನ್ನು ಮತ್ತು ಮುಕ್ತ ಚರ್ಚೆಯನ್ನು ತಡೆಯುವ ಮೋದಿ ಸರ್ಕಾರದ ಕ್ರಮಗಳು ಕ್ಷಮಿಸಲು ಅರ್ಹವಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಭಾರತ ತನ್ನ ಆರಂಭಿಕ ಯಶಸ್ಸನ್ನು ಹೇಗೆ ಹಾಳು ಮಾಡಿತು ಎಂಬುದನ್ನು ವಿವರಿಸಲಾಗಿದೆ. ಕರೋನಾ ಎರಡನೇ ಅಲೆ ತಾರಕಕ್ಕೆ ಏರುವವರೆಗೆ  ಏಪ್ರಿಲ್ ವರೆಗೆ ಕೇಂದ್ರ ಸರ್ಕಾರವು ಕೋವಿಡ್ ಕಾರ್ಯಪಡೆಯ‌ ಜೊತೆ ತಿಂಗಳ ಸಭೆಯನ್ನೇ ನಡೆಸಲಿಲ್ಲ. ಇಂತಹ ಕ್ರಮಗಳಿಂದ ಆದ ಪರಿಣಾಮಗಳು ನಮ್ಮ ಕಣ್ಣ ಮುಂದೆಯೇ ಇವೆ. ಆದುದರಿಂದ ಈಗ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಭಾರತವು ಈಗ ತನ್ನ ಪ್ರತಿಕ್ರಿಯೆಯನ್ನು ಪುನರರಾಂಭ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.‌ ಈ ಪ್ರಯತ್ನಗಳು ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಜವಾಬ್ದಾರಿಯುತ ನಾಯಕತ್ವ ನೀಡುವುದು, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ವಿಜ್ಞಾನವನ್ನು ಅಂತರ್ಗತಗೊಂಡ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸ್ಥಾಪಿಸವುದರ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅದು ಹೇಳಿದೆ.

ಕರೋನಾ ಎರಡನೇ ಅಲೆಯ ಅಪಾಯಗಳು ಮತ್ತು ಹೊಸ ತಳಿಗಳ ಹೊರಹೊಮ್ಮುವಿಕೆಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಹಲವಾರು ತಿಂಗಳ ಕಡಿಮೆ ಪ್ರಕರಣಗಳ ಬಂದಿದ್ದಕ್ಕೆ ಭಾರತವು ಕೋವಿಡ್ ಅನ್ನು ಸೋಲಿಸಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಕರೋನಾ ಎರಡನೇ ಅಲೆ ಹುಟ್ಟುವ ಹಂತದಲ್ಲಿ ಅಂದರೆ ಇದೇ ಮಾರ್ಚ್ ಆರಂಭದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸುವ ಮೊದಲು, ಭಾರತವು ಸಾಂಕ್ರಾಮಿಕ ರೋಗದಿಂಸ ಮುಕ್ತಾಯವಾಗುವ ಹಂತದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದ್ದರು ಎಂಬುದರ ಮೇಲೆ ಜರ್ನಲ್ ಬೆಳಕುಚೆಲ್ಲಿದೆ.

ಸೂಪರ್-ಸ್ಪ್ರೆಡರ್ ಘಟನೆಗಳ ಅಪಾಯಗಳ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರೂ ಧಾರ್ಮಿಕ ಉತ್ಸವಗಳನ್ನು ಮುಂದುವರಿಸಲು ಸರ್ಕಾರವು ಅವಕಾಶ ಮಾಡಿಕೊಟ್ಟಿತು. ದೇಶಾದ್ಯಂತದ ಲಕ್ಷಾಂತರ ಜನರು ಸೇರಿ ಮಾಡುವ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಯಿತು. ಬೃಹತ್ ರಾಜಕೀಯ ಸಮಾವೇಶಗಳನ್ನು ನಡೆಸಲಾಯಿತು. ಇವೆಲ್ಲವೂ ಕರೋನಾ ವ್ಯಾಪಕವಾಗಿ ಹರಡಲು ಕಾರಣವಾದವು ಎಂದು ಲ್ಯಾನ್ಸೆಟ್ ಹೇಳಿದೆ. ಅಲ್ಲದೆ ಭಾರತದ ವ್ಯಾಕ್ಸಿನೇಷನ್ ನೀತಿಯ ಬಗ್ಗೆ ಕೂಡ ಆಕ್ಷೇಪಣೆ ಎತ್ತಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೆ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ನಿರ್ಧರಿಸಿದೆ. ಮತ್ತು ದೇಶದ ಒಟ್ಡು ಜನಸಂಖ್ಯೆಯ ಶೇಕಡಾ 2ಕ್ಕಿಂತ ಕಡಿಮೆ ಲಸಿಕೆ ನೀಡುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಟೀಕೆ ಮಾಡಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...