ಇಂದು ಇಡೀ ದೇಶವೇ ಕರೋನಾ ಎಂದ ಕೂಡಲೇ ಒಂದು ಕ್ಷಣ ಬೆಚ್ಚಿ ಬೀಳುತ್ತಿದೆ. ನಿತ್ಯವೂ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಆಗುತ್ತಿರುವ ಕೋವಿಡ್ ಸಾವು ನೋವುಗಳು, ಆಕ್ಸಿಜನ್ ಸಿಗದೇ ಕುಟುಂಬಸ್ಥರನ್ನು ಕಳೆದುಕೊಂಡ ಮನೆಯವರ ನೋವಿನ ಕಥೆಗಳು ಹೃದಯ ಹಿಂಡುತ್ತವೆ. ಸ್ಮಶಾನಗಳಲ್ಲಿ ನಡೆಯುತ್ತಿರುವ ಸಾಮೂಹಿಕ ಅಂತ್ಯ ಸಂಸ್ಕಾರಗಳು, ದಿನಕ್ಕಿಂತ ಇದನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳಿಂದ ಜನ ಸಾಮಾನ್ಯರು ತಲ್ಲಣಗೊಂಡಿದ್ದಾರೆ.
ಪುಟ್ಟ ಜಿಲ್ಲೆ ಕೊಡಗು ಕೋವಿಡ್ ಸೋಂಕು ಪ್ರಕರಣ ಹೆಚ್ಚಿರುವ ದೇಶದ 150 ಜಿಲ್ಲೆಗಳಲ್ಲಿ ಒಂದು ಎಂಬ ಕುಖ್ಯಾತಿ ಪಡೆದುಕೊಂಡಿದೆ. ಆದರೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲು ಕೊಪ್ಪ ಟಿಬೆಟ್ ಕ್ಯಾಂಪ್ ನಲ್ಲಿ ಮಾತ್ರ ಕರೋನಾ ಬೆದರಿಕೆ ಇಲ್ಲ. ಮಹದಚ್ಚರಿಯ ಸಂಗತಿಯೆಂದರೆ ಇಲ್ಲಿ ಯಾವುದೇ ಸಾವೂ ಸಂಭವಿಸಿಲ್ಲ ಅಷ್ಟೇ ಅಲ್ಲ ಇಲ್ಲಿ ಇನ್ನೂ ಒಂದೂ ಕರೋನಾ ಪ್ರಕರಣಗಳೇ ವರದಿ ಆಗಿಲ್ಲ!
ಈ ವಿಷಯ ನಂಬಲಿಕ್ಕೆ ಕಷ್ಟವಾದರೂ ಸತ್ಯ. ಇದಕ್ಕೆ ಕಾರಣ ಟಿಬೇಟಿಯನ್ನರ ಸೂಕ್ತ ನಿರ್ವಹಣೆ ಮತ್ತು ಜಾಗೃತಿಯೇ ಹೊರತು ಬೇರೇನೂ ಅಲ್ಲ. ಈಗ ದೇಶದಲ್ಲಿ ನಾವು ಕಳೆದ ವರ್ಷ ಬಿಟ್ಟರೆ ಇಗೊಂದು ತಿಂಗಳಿನಿಂದ ಲಾಕ್ ಡೌನ್ ಎಂಬ ಪದವನ್ನು ಕೇಳುತಿದ್ದೇವೆ. ಆದರೆ ಬೈಲುಕೊಪ್ಪದಲ್ಲಿರುವ ಟಿಬೇಟನ್ ಕ್ಯಾಂಪ್ ನಲ್ಲಿ ಕಳೆದ 400 ದಿನಗಳಿಂದ ಮ್ಯಾರಾಥಾನ್ ಲಾಕ್ ಡೌನ್ ನಡೆಯುತ್ತಿದೆ!. ಇಲ್ಲಿ 400 ದಿನಗಳಿಂದ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಹಬ್ಬವನ್ನು ಸಂಭ್ರಮಿಸುವಂತಿಲ್ಲ, ಜನ ಗುಂಪು ಸೇರುವಂತೆಯೂ ಇಲ್ಲ. ಕರೋನಾ ಮಹಾಮಾರಿ ತೊಲಗುವವರೆಗೂ ಇಲ್ಲಿನ ಜನರಿಗೆ ಇಂಥದ್ದೊಂದು ಕಠಿಣ ನಿಯಮ ದೈನಂದಿನ ಬದುಕಿನ ಭಾಗವೇ ಆಗಿದೆ.
ಕರೋನಾ ಮಹಾಮಾರಿ ವಕ್ಕರಿಸಿದಂದಿನಿಂದ ಇಲ್ಲಿನ ಬೌದ್ಧ ಭಿಕ್ಕುಗಳು ಸ್ವಯಂಘೋಷಿತ ಲಾಕ್ಡೌನ್ ಪಾಲಿಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಘೋಷಣೆಯಾದ ಇವರ ಶಿಬಿರದ ಲಾಕ್ಡೌನ್ ಮೊನ್ನೆ ಮಂಗಳವಾರಕ್ಕೆ 400 ದಿನಗಳನ್ನು ಪೂರೈಸಿರುವುದು ವಿಶೇಷ. ಕಳೆದ 2020 ಮಾಚ್ರ್ನಿಂದ ಈವರೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ತಮ್ಮ ಆಂತರಿಕ ಸರ್ಕಾರ ಹೊರಡಿಸಿದ ಕೋವಿಡ್-19 ನಿಯಮಗಳನ್ನು ಇಲ್ಲಿನ ಬೌದ್ಧ ಭಿಕ್ಕುಗಳು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಇಂದಿಗೂ ಶಿಬಿರದೊಳಗೆ ಕರೋನಾ ಮಹಾಮಾರಿ ಪ್ರವೇಶಿಸದಂತೆ ನೋಡಿಕೊಂಡಿದ್ದಾರೆ.
ಬೈಲಕುಪ್ಪೆ ನಿರಾಶ್ರಿತರ ಶಿಬಿರದ ಲಾಮಾ ಕ್ಯಾಂಪ್ನಲ್ಲಿ ಕಳೆದ ವರ್ಷದ ಮಾಚ್ರ್ನಿಂದಲೇ ಶಿಬಿರದ ಒಳಗೆ ಬರುವವರು ಮತ್ತು ಹೊರ ತೆರಳುವವರ ಬಗ್ಗೆ ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತದೆ. ಸೋಂಕು ಶಿಬಿರ ಪ್ರವೇಶಿಸದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ. 2020ರ ಮಾಚ್ರ್ 18ರಿಂದ ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಯಾವುದೇ ವಿದೇಶಿ ಪ್ರವಾಸಿಗರು, ಹೊರ ರಾಜ್ಯದ ಭಿಕ್ಕುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶಿಬಿರದ ಪ್ರಮುಖ ದ್ವಾರದಲ್ಲಿ 3 ಪಾಳಿಯಲ್ಲಿ ಶಿಬಿರದ ಸ್ವಯಂಸೇವಕರು ಕಾವಲು ಕಾಯುತ್ತಿದ್ದು, ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬಾರಿ ಟಿಬೆಟಿಯನ್ ನೂತನ ವರ್ಷ ಲೋಸಾರ್ ಸಂದರ್ಭದಲ್ಲೂ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಿಕೊಂಡರು. ಶಿಬಿರದ ಸೀಮಿತ ಜನರಿಗಷ್ಟೇ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕುಟುಂಬ ಸದಸ್ಯರನ್ನೂ ಹಬ್ಬಾಚರಣೆಯಿಂದ ದೂರ ಇಡಲಾಗಿತ್ತು. ಇದರ ಪರಿಣಾಮ ಶಿಬಿರದ ಒಳಭಾಗದಲ್ಲಿ ನೆಲೆಸಿರುವ ಬೌದ್ಧ ಭಿಕ್ಕುಗಳು, ಧರ್ಮಗುರುಗಳಿಗೆ ಸೋಂಕು ತಗುಲಿಲ್ಲ ಎನ್ನುತ್ತಾರೆ ಶಿಬಿರದ ಪ್ರಮುಖರಾದ ಫಾಲ್ಡೇನ್ ರಿಂಪೊಚೆ.
ಅದೇ ರೀತಿ ಪ್ರವಾಸಿಗರಿಗೂ ವಿಶ್ವವಿಖ್ಯಾತ ಗೋಲ್ಡನ್ ಟೆಂಪಲ್ ಬಾಗಿಲು ಬಂದ್ ಮಾಡಲಾಗಿದೆ. ಶಿಬಿರದ ನಿವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ತಪಾಸಣಾ ಗೇಟ್ ತನಕ ಬರುತ್ತವೆ. ನಂತರ ಶಿಬಿರದ ವಾಹನಗಳ ಸಹಾಯದಿಂದ ಒಳಗೆ ಸಾಗಿಸುವ ಕಾಯಕ ನಡೆಯುತ್ತಿದೆ. ಎಲ್ಲವನ್ನೂ ಸ್ಯಾನಿಟೈಸ್ ಮಾಡಿಯೇ ಶಿಬಿರದೊಳಗೆ ತರಲಾಗುತ್ತದೆ. ಶಿಬಿರದೊಳಗೆ ಬರುವ ಲಾಮಾಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ. ನಂತರವಷ್ಟೇ ಶಿಬಿರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಬೈಲುಕುಪ್ಪೆಯಲ್ಲಿ 30 ನಿರಾಶ್ರಿತರ ಶಿಬಿರಗಳಿದ್ದು, ಇವುಗಳಲ್ಲಿ ಗೋಲ್ಡನ್ ಟೆಂಪಲ್ ಮತ್ತು ಸುತ್ತಲಿನ ಎರಡ್ಮೂರು ಕ್ಯಾಂಪ್ಗಳಲ್ಲಿ ಈ ನಿಯಮ ಹೆಚ್ಚು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಉಳಿದ ಕ್ಯಾಂಪ್ಗಳ ನಿರಾಶ್ರಿತರು ಕೂಡ ಒಂದು ವರ್ಷದಿಂದ ಕೆಲಸಕ್ಕಾಗಿ ಹೊರಗೆ ಹೋಗಿಯೇ ಇಲ್ಲ. ಶಿಬಿರದ ಬಹುತೇಕ ಭಿಕ್ಕುಗಳು ಕೋವಿಡ್ ಲಸಿಕೆ ಕೂಡ ಹಾಕಿಸಿಕೊಂಡಿರುವುದಾಗಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕೆಲ ಸಮಯದ ಹಿಂದೆ ನಡೆದ ಟಿಬೆಟಿಯನ್ ಆಂತರಿಕ ಸರ್ಕಾರದ ಪ್ರತಿನಿಧಿಗಳ ಚುನಾವಣೆ ಸಂದರ್ಭದಲ್ಲೂ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.
ಕಳೆದ ವರ್ಷದ ಅಂತ್ಯದಲ್ಲಿ ಕೋವಿಡ್ಪ್ರಕರಣಗಳು ಇಳಿಮುಖವಾಗುತಿದ್ದಂತೆ ಎಲ್ಲ ಪ್ರವಾಸೀ ತಾಣಗಳು, ಹೋಟೆಲ್ಅಂಗಡಿಗಳು ತೆರೆದು ಎಂದಿನ ವ್ಯಾಪಾರದಲ್ಲಿ ತೊಡಗಿದವು. ಆದರೆ ಬೈಲುಕೊಪ್ಪದ ಪ್ರಮುಖ ಪ್ರವಾಸೀ ತಾಣ ಗೋಲ್ಡನ್ಟೆಂಪಲ್ಮಾತ್ರ ತೆರೆಯಲೇ ಇಲ್ಲ. ಇದನ್ನು ತೆರೆಸಲು ಪ್ರವಾಸಿಗರಿಂದಲೇ ಒತ್ತಡ ಬಂದರೂ ಟಿಬೇಟನ್ಆಡಳಿತ ಇದಕ್ಕೆ ಸೊಪ್ಪು ಹಾಕಲಿಲ್ಲ. ಇದರಿಂದಾಗಿ ಇಂದು ಇಡೀ ದೇಶ ಕೋವಿಡ್ಸೋಂಕಿನಿಂದ ಕಂಗೆಟ್ಟಿರುವಾಗ ಬೈಲು ಕೊಪ್ಪ ಪ್ರಶಾಂತವಾಗಿದೆ.