ಕೋವಿಡ್ 19 ಸೋಂಕಿನೊಂದಿಗೆ ಹೋರಾಡುತ್ತಿರುವವರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ʼಹಲೋ ಡಾಕ್ಟರ್ʼ ಎಂಬ ವೈದ್ಯಕೀಯ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ.
ದೇಶವು ಕರೋನಾ ಎರಡನೇ ಅಲೆಯ ತೀವೃತೆಗೆ ತತ್ತರಿಸಿರುವ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಸಹಾಯ ಮಾಡುವ ಸಲುವಾಗಿ ಕಾಂಗ್ರೆಸ್(AICC) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿದ ರಾಹುಲ್ ಗಾಂಧಿ, ನಾವು ʼಹಲೋ ಡಾಕ್ಟರ್ʼ ಎಂಬ ವೈದ್ಯಕೀಯ ಸಹಾಯವಾಣಿಯನ್ನು ಆರಂಭಿಸಿದ್ದೇವೆ. ವೈದ್ಯಕೀಯ ಸಲಹೆಗಳಿಗಾಗಿ +919983836838 ಸಂಖ್ಯೆಗೆ ಕರೆ ಮಾಡಿ ಎಂದು ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ತಮ್ಮನ್ನು ದಾಖಲಿಸುವಂತೆ ರಾಹುಲ್ ಗಾಂಧಿ ವೈದ್ಯರಿಗೆ ಮನವಿ ಮಾಡಿದ್ದಾರೆ, ವೈದ್ಯರು ಸ್ವ ಇಚ್ಛೆಯಿಂದ ನಮೂದಿಸಲು ಗೂಗಲ್ ಫಾರ್ಮ್ ಲಿಂಕ್ ಅನ್ನು ಇದರೊಂದಿಗೆ ಅವರು ಲಗತ್ತಿಸಿದ್ದಾರೆ.
ಆತ್ಮೀಯ ವೈದ್ಯರೇ, ಮಾನಸಿಕ ಆರೋಗ್ಯ ಸಮಾಲೋಚಕರೇ, ನಮಗೆ ನಿಮ್ಮ ಸಹಾಯದ ಅಗತ್ಯವಿದೆ. ದಯವಿಟ್ಟು ಈ ಲಿಂಕ್ನಲ್ಲಿ ದಾಖಲಿಸಿಕೊಳ್ಳಿ ಎಂದು ಅವರು ಕೋರಿಕೊಂಡಿದ್ದಾರೆ.
ವೈದ್ಯರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ‘COVID ಸಮಾಲೋಚನೆ’ ಮತ್ತು ‘ಮಾನಸಿಕ ಆರೋಗ್ಯ ಸಮಾಲೋಚನೆ’ ಎಂಬ ಎರಡು ಆಯ್ಕೆಗಳನ್ನು ಒದಗಿಸಲಾಗಿದೆ.
ಭಾರತವು ಒಟ್ಟಾಗಿ ನಿಂತು ತಮ್ಮ ಜನರಿಗೆ ಸಹಾಯ ಮಾಡಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.