ಕರೋನಾ ಸಂಕಷ್ಟ ಕಾಲದಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕೈಹಿಡಿದಿದ್ದು ನರೇಗಾ ಯೋಜನೆ. ಗುಳೆ ಹೋದವರು, ಇಲ್ಲೇ ಇದ್ದವರು, ಯುವಕರು ಮತ್ತು ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬರಲು ಮುಂದೆ ಬಂದಿದ್ದಾರೆ. ಆದರೆ ಕೆಲ ಭಾಗಗಳಲ್ಲಿ ವಿಶೇಷ ಏನೆಂದರೆ 60 ವಯಸ್ಸಿಗಿಂತ ಮೇಲ್ಪಟ್ಟ ವೃದ್ಧರೂ ಈ ಕೆಲಸಕ್ಕೆ ಬರುವುದು ನೋಡಿ ಯುವಕರು ನಾಚಿ ನೀರಾಗುತ್ತಿದ್ದಾರೆ. ಮೈಗಳ್ಳತನದಿಂದ ಕೆಲಸವೇ ಸಿಗಲಿಲ್ಲ ಎಂದು ಸರ್ಕಾರವನ್ನು ಬೈಯುವ ಯುವಕರಿಗೆ ವೃದ್ಧರು ಹುರುಪಿನಿಂದ ಮಾಡುವ ಕೆಲಸ ನೋಡಿ ಮುಜುಗರ ತರಿಸುವಂತಾಗಿದೆ.
ಹೀಗೊಬ್ಬ ವೃದ್ಧರು ನಮ್ಮ ತಂಡದ ಕಣ್ಣಿಗೆ ಬಂದಿದ್ದು, ಶಿರಹಟ್ಟಿ ಹತ್ತಿರದ ಬನ್ನಿಕೊಪ್ಪದ ಬಳಿ ಹೊಲವೊಂದರಲ್ಲಿ.
ಹೌದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕೊಪ್ಪ ಗ್ರಾಮದ ರೈತರ ಹೊಲಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಹಿರಿಯ ಜೀವಿಗಳ ಕಾಯಕನಿಷ್ಠೆ ಎಂತಹ ಚಿರ ಯುವಕರನ್ನೂ ನಾಚಿಸುವಂತೆ ಮಾಡಿದೆ.
ಪ್ರತಿವರ್ಷವೂ ಕೂಡ ನರೇಗಾ ಯೋಜನೆ ಕೆಲಸ ಮಾಡುತ್ತಾ ಬಂದಿರುವ ಸಹೋದರ- ಸಹೋದರಿಯರು, ಬೇಸಿಗೆಯ ಅವಧಿಯಲ್ಲಿ ನರೇಗಾದಲ್ಲಿ ಶುರುವಾಗುವ ಕಾಮಗಾರಿಗಳಲ್ಲಿ ಭಾಗವಹಿಸುವುದನ್ನು ಮರೆಯುವುದಿಲ್ಲ, ತಮ್ಮ ಗ್ರಾಮದ ಜಮೀನಿ ನಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ನೀಡಿದ ಅಳತೆಗೆ ತಕ್ಕ ಪ್ರಮಾಣದ ಕೆಲಸವನ್ನು ಸರಿಯಾದ ಪ್ರಮಾಣದಲ್ಲಿ ಕಡೆದು ಹಾಕುತ್ತಾರೆ.
ಇವರ ಕೆಲಸವನ್ನು ಕಂಡು ಚಿರ ಯುವಕರು ಕೂಡ ನಾಚುವಂತ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಮಗೆ ವಯಸ್ಸಾಯ್ತು ನಮ್ಮ ಶಕ್ತಿ ಕುಂದಿತ್ತು ಎಂದು ಎಷ್ಟೋ ಜನಗಳ ಮಧ್ಯೆ ಬನ್ನಿಕೊಪ್ಪ ಗ್ರಾಮದ ಹಿರಿಯ ಜೀವಿಗಳ ಕಾಯಕನಿಷ್ಠೆ ವಿಶೇಷವಾಗಿ ಕಾಣಿಸುತ್ತದೆ.
ಇವರ ಕಾಯಕ ನಿಷ್ಠೆ ನೋಡಿ ಗ್ರಾಮ ಪಂಚಾಯತಿಯ ಸದಸ್ಯರೊಬ್ಬರು ಹೇಳಿದ್ದು ಹೀಗೆ, “ಈ ವೃದ್ಧರು (ಹಾಗಂದರೆ ಸರಿ ಅನಿಸಲ್ಲ ಆದರೂ) ಬಂದು ನಮಗೆ ಊರಲ್ಲಿ ಎಲ್ಲಿಯೂ ಕೆಲಸ ಸಿಗುತ್ತಿಲ್ಲ, ನೀವು ಕೊಟ್ಟರೆ ಸರಿಯಾಗಿ ನಿಮಗೆ ಯಾವ ಸಮಸ್ಯೆಯೂ ಬರದಂತೆ ಸರಿಯಾದ ಸಮಯದಲ್ಲಿ ಕೆಲಸ ಮಾಡುತ್ತೇವೆ ಎಂದರು. ಆಗ ನಾವು ನೋಡೋಣ, ನರೇಗಾದಲ್ಲಿ ಇವರಿಗೆ ಕೆಲಸ ಕೊಟ್ಟು ನೋಡೋಣ ಎಂದುಕೊಂಡೆವು, ಇವರ ಉತ್ಸಾಹ ನೋಡಿ ನಮಗೂ ಖುಷಿಯಾಗಿದೆ” ಇವರನ್ನು ಮಾತನಾಡಿಸಿ ಹೆಸರು ಕೇಳಿದಾಗ ಹೆಸರಲ್ಲೇನಿದೆ ಬೇಕಾದರೆ ಫೋಟೊ ತೆಗೆದುಕೊಳ್ಳಿ ಎಂದರು. “ನಾವಷ್ಟೇ ಅಲ್ಲ ಈಗ ಎಲ್ಲರಿಗೂ ಸಂಕಷ್ಟದ ಸಮಯ ಬಂದಿದೆ. ಎಲ್ಲರೂ ಮೈ ಬಗ್ಗಿಸಿ ದುಡಿದು ತಿನ್ನೋಣ, ಕಳ್ಳತನ, ಮೋಸ, ಸುಲಿಗೆ, ಹರಾಮಿ ದುಡ್ಡಿಗೆ ಆಸೆ ಪಡಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ” ಎಂದರು.
ಹೌದಲ್ಲ ಎಷ್ಟು ನಿಜ…ಇಂದು ಬಹಳಷ್ಟು ಜನರು ರೇಷನ್ ಫ್ರೀ ಎಂದು ದುಡಿಯದೇ ಕಾಲ ಕಳೆಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ಅದೆಷ್ಟು ಸತ್ಯವೋ ಅಥವಾ ಸುಳ್ಳು ಅನ್ನುವುದಕ್ಕಿಂತ ಈ ವೃದ್ಧರ ಮಾತು ಮಾತ್ರ ನಿಜ ಅನಿಸುತ್ತದೆ. ಇವರೂ ನೂರು ಕಾಲ ಸುಖವಾಗಿರಲಿ ಎಂಬುದು ನಮ್ಮ ಶುಭಹಾರೈಕೆ.