ತನ್ನ ತಾತನಿಗೆ ಆಕ್ಸಿಜನ್ ಸಿಲಿಂಡರ್ ಗಾಗಿ ಮನವಿ ಮಾಡಿದ ಯುವಕನೊಬ್ಬನ ಮೇಲೆ ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ. ಶಶಾಂಕ್ ಯಾದವ್ ಅವರ ಅಜ್ಜನಿಗೆ ಕರೋನವೈರಸ್ ಇದೆಯೇ ಎಂದು ಉಲ್ಲೇಖಿಸಿರಲಿಲ್ಲ. ಆದರೆ, ಭಯ ಉಂಟುಮಾಡುವ ಉದ್ದೇಶದಿಂದ ವದಂತಿಯನ್ನು ಪ್ರಸಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ, ಈ ವ್ಯಕ್ತಿ “ದಾರಿತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಲು ಯಾದವ್ ಆಮ್ಲಜನಕ ಪೂರೈಕೆ ಮತ್ತು ಕರೋನವೈರಸ್ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ರಾಮಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೀರೇಂದ್ರ ಸಿಂಗ್ ಹೇಳಿದ್ದಾರೆ. “ವಿಚಾರಣೆಯ ಸಮಯದಲ್ಲಿ ಆರೋಪಿಯ ಸುಳ್ಳು ಟ್ವೀಟ್‌ನ ಕಾರಣದಿಂದಾಗಿ ಹಲವಾರು ವ್ಯಕ್ತಿಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಕಂಡುಬಂದಿದೆ” ಎಂದು ಸಿಂಗ್ ಪತ್ರಿಕೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಯಾದವ್ ಅವರು ಸೋಮವಾರ ಸಂಜೆ ಟ್ವಿಟರ್ ಬಳಸಿ ಎಸ್‌ಒಎಸ್ ಕಳುಹಿಸಿ ನಟ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿದ್ದರು. ಅವರ ಸ್ನೇಹಿತ ಅಂಕಿತ್ ಆ ಸಂದೇಶವನ್ನು ಬಳಸಿ ‘ದಿ ವೈರ್’ ಪತ್ರಕರ್ತ ಅರ್ಫಾ ಖನುಮ್ ಶೆರ್ವಾನಿ ಅವರ ಸಹಾಯವನ್ನು ಕೋರಿದರು. ಕೆಲವು ಗಂಟೆಗಳ ನಂತರ, ಶೆರ್ವಾನಿ ಅವರು ಯಾದವ್ ಅವರ ಅಜ್ಜನಿಗೆ ಸಹಾಯ ಕೇಳುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಸಂದೇಶಗಳಲ್ಲಿ ಎಲ್ಲೂ ಕರೋನ ವೈರಸ್ ಅನ್ನು ಉಲ್ಲೇಖಿಸಿರಲಿಲ್ಲ. ಆದರೆ ಸಹಾಯಕ್ಕಾಗಿ ಕೇಂದ್ರ ಸಚಿವ ಮತ್ತು ಅಮೆಥಿ ಸಂಸದೆ ಸ್ಮೃತಿ ಇರಾನಿಯವರನ್ನೂ ಟ್ಯಾಗ್ ಮಾಡಲಾಗಿತ್ತು.

30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು ತಾನು ಯಾದವ್‌ಗೆ ಹಲವು ಬಾರಿ ಕರೆ ಮಾಡಿದ್ದೇನೆ ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅಮೆಥಿ ಪೊಲೀಸರನ್ನು ಸಹ ಸಹಕರಿಸಲು ಕೇಳಿಕೊಂಡಿದ್ದೆ ಎಂದು ಅವರು ಹೇಳಿದರು.
ಆದರೆ ಅಷ್ಟು ಹೊತ್ತಿಗೆ ಯಾದವ್ ಅವರ ಅಜ್ಜ ನಿಧನರಾದರು. ಈ ಬಗ್ಗೆ ಅಂಕಿತ್ ಶೆರ್ವಾನಿಗೆ ಮಾಹಿತಿ ನೀಡಿದ ನಂತರ, ಅವರು ಮಾಹಿತಿಯನ್ನು ಇರಾನಿಗೆ ರವಾನಿಸಿದರು. ಕೇಂದ್ರ ಸಚಿವರು ಅವರು ತಮ್ಮ ಸಂತಾಪ ವ್ಯಕ್ತಪಡಿಸಿದರು. ಅದೇ ಸಂಜೆ ಯಾದವ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪೊಲೀಸರು “88 ವರ್ಷದ ಆ ವ್ಯಕ್ತಿಗೆ ಕರೋನಾ ವೈರಸ್ ಇರಲಿಲ್ಲ. ಅವರು ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ” ಎಂದು ಹೇಳಿದರು. “ಈ ಸಮಯದಲ್ಲಿ ಭಯ ಹುಟ್ಟಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಖಂಡನೀಯ ಮಾತ್ರವಲ್ಲ ಕಾನೂನು ಪ್ರಕಾರ ಅಪರಾಧವೂ ಹೌದು” ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್‌ಗಂಜ್ ಪೊಲೀಸ್ ಸ್ಟೇಷನ್‌ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಯುಪಿ ಮುಖ್ಯಮಂತ್ರಿ ಘೋಷಿಸಿದ ಕೆಲವೇ ದಿನಗಳ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಎಪ್ರಿಲ್ 24ರಂದು ಕೆಲವೇ ಪತ್ರಕರ್ತರನ್ನೊಳಗೊಂಡ ವರ್ಚುವಲ್ ಮೀಟಿಂಗ್ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೊರತೆ ಇದೆ ಎಂದು ವದಂತಿ ಹಬ್ಬಿಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದ್ದರು.
ಎಪ್ರಿಲ್ 25ರಂದು ನಡೆದ ಉನ್ನತ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲೂ ಆಕ್ಸಿಜನ್ ಕೊರತೆಯ ಬಗ್ಗೆ ರಿಪೋರ್ಟ್ ಮಾಡುವ ಖಾಸಗಿ ಆಸ್ಪತ್ರೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆದೇಶಿಸಿದ್ದಾರೆ ಎಂದು ‘ದಿ ಹಿಂದು’ ವರದಿ ಮಾಡಿದೆ.
ಕಳೆದ ವಾರ ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಟ್ವಿಟ್ಟರ್ ಕೋವಿಡ್ ಎರಡನೇ ಅಲೆಗೆ ಸಂಬಂಧಿಸಿದ 52 ಟ್ವೀಟ್‌ಗಳನ್ನು ಡಿಲೀಟ್ ಮಾಡಿತ್ತು. ಅವುಗಳಲ್ಲಿ ಬಹುತೇಕ ಟ್ವೀಟ್‌ಗಳು ಆಕ್ಸಿಜನ್ ಕೊರತೆಗೆ ಸಂಬಂಧಿಸಿದ್ದು. ಇದಾಗಿ ಒಂದು ದಿನದ ನಂತರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸುಮಾರು 100 ಪೋಸ್ಟ್‌ಗಳನ್ನು ತೆಗೆದುಹಾಕಲು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕೋರಿಕೊಂಡಿತ್ತು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.


