ಕರೋನಾ ಎರಡನೇ ಅಲೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ತಮ್ಮೆಲ್ಲಾ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದ್ದರು. ಅದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕೂಡಾ ತಮ್ಮ ಸಾರ್ವಜನಿಕ ಸಭೆಗಳಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.
ಕಲ್ಕತ್ತಾ ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ತೀವ್ರ ಏರಿಕೆಯನ್ನು ಪರಿಗಣಿಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಎಲ್ಲಾ ‘ದೊಡ್ಡ ರ್ಯಾಲಿಗಳನ್ನು’ ರದ್ದುಗೊಳಿಸಿದ್ದಾರೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ರ್ಯಾಲಿಗಳ ಸಮಯವನ್ನು ಕಡಿತಗೊಳಿಸಿದ್ದಾರೆ.
ಕಡಿಮೆ ಪ್ರಕರಣಗಳಿರುವ ಪ್ರದೇಶಗಳಲ್ಲಿ ತನ್ನ ಸಾರ್ವಜನಿಕ ಮತಪ್ರಚಾರಗಳನ್ನು ಸ್ವಯಂ ನಿರ್ಬಂಧಗೊಳಿಸಿರುವ ಮಮತಾ, ಎ. 26 ಹಾಗೂ ಎ. 29 ರಂದು ನಡೆಯಲಿರುವ ಮುಂದಿನ ಎರಡು ಹಂತದ ಮತದಾನಗಳಿಗೆ ಮತಪ್ರಚಾರದ ಪ್ರಮಾಣವನ್ನು ಕಡಿತಗೊಳಿಸುವಂತೆ ತಮ್ಮ ಪಕ್ಷದ ಮುಖಂಡರಿಗೆ ಕೇಳಿಕೊಂಡಿದ್ದಾರೆ.
“ಮಮತಾ ಬ್ಯಾನರ್ಜಿ ಇನ್ನು ಮುಂದೆ ಕೋಲ್ಕತ್ತಾದಲ್ಲಿ ಪ್ರಚಾರ ಮಾಡುವುದಿಲ್ಲ. ಏಪ್ರಿಲ್ 26 ರಂದು ನಗರದಲ್ಲಿ ಪ್ರಚಾರದ ಕೊನೆಯ ದಿನದಂದು ಕೇವಲ ಒಂದು ‘ಸಾಂಕೇತಿಕ’ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲಾ ಜಿಲ್ಲೆಗಳಲ್ಲಿ ತನ್ನ ಎಲ್ಲಾ ಚುನಾವಣಾ ರ್ಯಾಲಿಗಳಿಗೆ ಸಮಯವನ್ನು ಕಡಿತಗೊಳಿಸಲಾಗಿದೆ. ಸಮಯವನ್ನು ಕೇವಲ 30 ನಿಮಿಷಗಳಿಗೆ ನಿರ್ಬಂಧಿಸಲಾಗಿದೆ” ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರೆಕ್ ಒ ‘ಬ್ರಿಯಾನ್ ಟ್ವೀಟ್ ನಲ್ಲಿ ಹೇಳಿದ್ದಾರೆ. ಈ ತಿಂಗಳ 26 ರಂದು ಕೋಲ್ಕತ್ತಾದ ಬೀಡಾನ್ ಬೀದಿಯಲ್ಲಿ ‘ಸಾಂಕೇತಿಕ ರ್ಯಾಲಿ’ ನಡೆಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ತಿಳಿಸಿದ್ದಾರೆ.