ಶ್ರೀಮಂತ, ಬಡವ ಅನ್ನದೆ ಎಲ್ಲರನ್ನೂ ಬಾದಿಸುತ್ತಿರುವ ಕರೋನಾ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದೆ. ಕರೋನಾ ಕುರುತು ಅನೇಕ ಡಾಕ್ಟರ್ಗಳು, ಸಂಶೋಧಕರು ತಿಳಿಸಿದ್ದಾದರು ಸರ್ಕಾರಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಾವಿರಾರು ಜನ ಸಾವನಪ್ಪುತ್ತಿದ್ದಾರೆ. ಕರೋನಾ ಸಾಂಕ್ರಾಮಿಕದಿಂದ ಜನಸಾಮಾನ್ಯರು ಅಕ್ಷರಶಃ ದಿಕ್ಕೆಟ್ಟು ಹೋಗಿದ್ದಾರೆ. ಅಗತ್ಯ ಆರೋಗ್ಯ ಸಲಕರಣೆಗಳು ಲಭ್ಯವಿಲ್ಲದೆ ವದ್ದಾಡುತ್ತಿದ್ದಾರೆ. ಎಷ್ಟೇ ಹರಸಾಹಸ ಪಟ್ಟರು ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಇನ್ನೂ ಆಕ್ಸಿಜನ್ ದೂರದ ಬೆಟ್ಟ. ಈ ಕುರಿತು ತಮ್ಮ ಸ್ವಂತ ಅನುಭವವನ್ನು ಪೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ ನಿರ್ದೇಶಕ ಕವಿ ರಾಜ್. ಬೇಸರದ ಜೊತೆ ಒಂದಷ್ಟು ಎಚ್ಚರಿಕೆಯಿಂದಿರಲು ಜನಸಾಮಾನ್ಯರಿಗೆ ಸಲಹೆಗಳನ್ನು ಸಹ ನೀಡಿದ್ದಾರೆ.
ಕರೋನಾ ಹಿಂದೆಂದಿಗಿಂತಲೂ ಈಗ ಹೆಚ್ಚು ಅಪಾಯಕಾರಿಯಾಗಿದೆ.
ನಮ್ಮ ಸುತ್ತಮುತ್ತಲಲ್ಲೇ ಮೊದಲಿಗಿಂತ ಹೆಚ್ಚು ಸೋಂಕು ಹಾಗೂ ಸಾವು ಕಂಡು ಬರುತ್ತಿದೆ. ನಿನ್ನೆ ಒಂದೇ ದಿನ ನನ್ನ ಪರಿಚಿತ ವಲಯದಲ್ಲೇ ಮೂವರ ಸಾವಿನ ಸುದ್ದಿ ಕೇಳಿದ್ದೇನೆ ( ಒಬ್ಬರು ಯುವ ಪತ್ರಕರ್ತರು, ಒಬ್ಬರು ಸಿನಿಮಾ ನಿರ್ಮಾಪಕರು, ಸಿನಿಮಾ ಕಲಾವಿದರ ಸಂಬಂಧಿ ಒಬ್ಬರು) ಎಂದು ಬರೆದುಕೊಂಡಿದ್ದಾರೆ.
ಹರಸಾಹಸ ಪಟ್ಟರು ಸೋಂಕಿತರಿಗೆ ಒಂದು ಬೆಡ್ ಪಡೆಯುವುದು ಕಷ್ಟವಾಗುತ್ತಿರುವುದು ಸ್ವಂತ ಅನುಭವ.
ಆಕ್ಸಿಜನ್ ಸಿಲಿಂಡರ್ ಮತ್ತು ರೆಮ್ಡೆಸಿವಿರ್ ಮುಂತಾದ ಜೀವರಕ್ಷಕಗಳ ಕೊರತೆ ಇದೆ (ಆಳುವವರು ಹಾಗೇನಿಲ್ಲ ಅಂದರೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಆಸ್ಪತ್ರೆಗಳ ಮುಖ್ಯಸ್ಥರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ ) ಎಂದು ಬರದುಕೊಂಡಿದ್ದಾರೆ.
ಸಾಮೂಹಿಕ ಶವ ದಹನ, ಮರಣ ಹೊಂದಿದದವರ ಅಂತ್ಯ ಸಂಸ್ಕಾರಕ್ಕೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ
ಕಚ್ಚಾ ವಸ್ತುಗಳ ಕೊರತೆಯಿಂದ ಬೇಡಿಕೆಯಷ್ಟು ವ್ಯಾಕ್ಸಿನ್ ತಯಾರಿಸಲಾಗುತ್ತಿಲ್ಲ ಎಂದು ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಪೂನಾವಾಲ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. (ಆ ಕಚ್ಚಾವಸ್ತುಗಳು ಯು ಎಸ್ ಮತ್ತು ಯುರೋಪಿಯನ್ ಯೂನಿಯನ್ ಇಂದ ಬರಬೇಕಿದ್ದು ಅವುಗಳ ರಫ್ತನ್ನು ಆ ದೇಶಗಳು ನಿಷೇಧಿಸಿವೆ ) ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಿದೆ. ಜನರ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ರಾಜಕಾರಣಿಗಳು ಚುನಾವಣೆ ಪ್ರಚಾರ , ಬೃಹತ್ ರ್ಯಾಲಿ, ಗೆಲುವಿನ ತಂತ್ರಗಳನ್ನು ಹೆಣೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರನ್ನು ನಂಬಿ ಕೂರುವಂತಿಲ್ಲ, ನಮ್ಮ ಪ್ರಾಣಕ್ಕೆ ನಾವೇ ಜವಾಬ್ದಾರರು ಎಂದು ಕವಿರಾಜ್ ಎಚ್ಚರಿಸಿದ್ದಾರೆ.
ಎಚ್ಚರ..ಎಚ್ಚರ..ಎಚ್ಚರ.. ಅತ್ಯಗತ್ಯ ಇಲ್ಲದೇ ಹೋದರೆ ಹೊರಗೆ ಓಡಾಡುವುದನ್ನು ನಿಲ್ಲಿಸೋಣ, ಗುಂಪುಗೂಡದಿರುವುದು, ಗುಂಪಿರುವಲ್ಲಿ ಹೋಗದಿರುವುದು. ಹಿರಿಯರು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಗಳ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧಾರಣೆ, ದೈಹಿಕ ಅಂತರ ಪಾಲನೆ, ಆಗಾಗ ಸ್ಯಾನಿಟೈಸೇಶನ್ ಇನ್ನಿತರ ಸಾಮಾಜಿಕ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸದಿದ್ದರೆ ನಾವು ಕನಸಿನಲ್ಲೂ ಊಹಿಸದ ನರಕವೊಂದನ್ನು ನಾವೇ ಸದ್ಯದಲ್ಲೇ ಸೃಷ್ಟಿಸಲಿದ್ದೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ ಕವಿ ರಾಜ್.