ಕಳೆದ ಡಿಸೆಂಬರ್ನಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರಥಮ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ (ಡಿಡಿಸಿ) ಸಂದರ್ಭದಲ್ಲಿ ಕಾಶ್ಮೀರ ವಿಭಾಗದಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಘೋಷಣೆ (ಪಿಎಜಿಡಿ) ಭರ್ಜರಿ ಜಯ ದಾಖಲಿಸಿದರೂ, ಕಳೆದ ಶನಿವಾರ ಎರಡು ಜಿಲ್ಲೆಗಳ ಅಧ್ಯಕ್ಷ ಸ್ಥಾನಗಳನ್ನು ಕಳೆದುಕೊಂಡು ದೊಡ್ಡ ಹಿನ್ನಡೆ ಅನುಭವಿಸಿತು. ಅಪ್ನಿ ಪಾರ್ಟಿ ಯು ಎರಡು ಅದ್ಯಕ್ಷ ಸ್ಥಾನಗಳನ್ನು ಪಡೆದುಕೊಂಡಿತು. ಕಣಿವೆ ರಾಜ್ಯದಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಒತ್ತಾಯಿಸುತ್ತಿರುವ ಮೈತ್ರಿಕೂಟದ ಪ್ರಮುಖ ವಿರೋಧವಾಗಿ ಅಪ್ನಿ ಪಕ್ಷ ಹೊರಹೊಮ್ಮಿದೆ. ಕಾಶ್ಮೀರದ ಗಲಭೆ ಪೀಡಿತ ಶೋಪಿಯಾನ್ ಪ್ರದೇಶದಲ್ಲಿ ಮಾತ್ರ ಅಪ್ನಿ ಪಾರ್ಟಿ ಮೇಲುಗೈ ಸಾದಿಸಿಲ್ಲ ಬದಲಿಗೆ ನ್ಯಾಷನಲ್ ಕಾನ್ಫರೆನ್ಸ್ ಪ್ರಾಬಲ್ಯದ ಶ್ರೀನಗರದಲ್ಲೂ ಅಪ್ನಿ ಪಾರ್ಟಿ ಗೆಲುವು ದಾಖಲಿಸಿದೆ ಎಂದು ಅಪ್ನಿ ಪಾರ್ಟಿಯ ಹಿರಿಯ ನಾಯಕ ಉಸ್ಮಾನ್ ಮಜೀದ್ ತಿಳಿಸಿದರು.
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಶ್ರೀನಗರ ಜಿಲ್ಲೆಯಲ್ಲಿ ಈಗ ಮೇಯರ್ ಮತ್ತು ಡಿಡಿಸಿ ಅಧ್ಯಕ್ಷರಾಗಿ ಅಪ್ನಿ ಪಾರ್ಟಿಯವರೇ ಇದ್ದಾರೆ. ಜಮ್ಮು ಕಾಶ್ಮೀರದ 20 ಜಿಲ್ಲೆಗಳಲ್ಲಿ ಪ್ರತಿಯೊಂದನ್ನು 14 ಕ್ಷೇತ್ರಗಳಾಗಿ ವಿಂಗಡಿಸಲಾಗಿದ್ದು ಪ್ರತೀ ಕ್ಷೇತ್ರವನ್ನು ಓರ್ವ ಡಿಡಿಸಿ ಸದಸ್ಯರು ಪ್ರತಿನಿಧಿಸುತ್ತಾರೆ. ಶ್ರೀನಗರ, ಶೋಪಿಯಾನ್ ಮತ್ತು ಕುಲ್ಗಂ ಎಂಬ ಮೂರು ಜಿಲ್ಲೆಗಳಲ್ಲಿ ಡಿಡಿಸಿ ಅಧ್ಯಕ್ಷರನ್ನು ನೇಮಿಸಲು ಜಮ್ಮು ಕಾಶ್ಮೀರ ಆಡಳಿತ ಶನಿವಾರ ಚುನಾವಣೆ ನಡೆಸಿತು. 2020 ರ ಡಿಡಿಸಿ ಚುನಾವಣೆಯಲ್ಲಿ ವಿಜೇತರಾದ ಡಿಡಿಸಿ ಸದಸ್ಯರು ಜಿಲ್ಲಾಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕುಲ್ಗಾಂನಲ್ಲಿ, ಸಿಪಿಐ (ಎಂ) ನ ಡಿಡಿಸಿ ಸದಸ್ಯರನ್ನು ಅಧ್ಯಕ್ಷರಾಗಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಡಿಡಿಸಿ ಸದಸ್ಯರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಿಪಿಐ (ಎಂ) ನ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಕುಲ್ಗಮ್, ಗುಪ್ಕರ್ ಮೈತ್ರಿ ಕೂಟ ವಿಜಯ ಸಾಧಿಸಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಶೋಪಿಯಾನ್ ಮತ್ತು ಶ್ರೀನಗರದಲ್ಲಿ ಅದ್ಯಕ್ಷ ಉಪಾದ್ಯಕ್ಷ ನಾಲ್ಕು ಹುದ್ದೆಗಳಲ್ಲೂ ಜಯವನ್ನು ಪಡೆದುಕೊಂಡಿರುವುದು ಅಪ್ನಿ ಪಾರ್ಟಿ ಆಗಿದೆ. ಡಿಡಿಸಿ ಚುನಾವಣೆಯಲ್ಲಿ 166 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಅಪ್ನಿ ಪಾರ್ಟಿಯು ಒಟ್ಟು 12 ಸ್ಥಾನಗಳಿಗಳಿದ್ದ ಕಾಶ್ಮೀರದಲ್ಲಿ ಕೇವಲ ಒಂಬತ್ತು ಮತ್ತು ಜಮ್ಮುವಿನಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ. ಪಕ್ಷವು ಕೇವಲ 12 ಸ್ಥಾನಗಳನ್ನು ಹೊಂದಿದ್ದರೂ ಸಹ, ಅದರ ಮುಖ್ಯಸ್ಥ ಅಲ್ತಾಫ್ ಬುಖಾರಿ ಅವರು ಕಾಶ್ಮೀರದ ನಾಲ್ಕರಿಂದ ಐದು ಜಿಲ್ಲೆಗಳಲ್ಲಿ ಮತ್ತು ಜಮ್ಮುವಿನ ಎರಡು ಜಿಲ್ಲೆಗಳಲ್ಲಿ ತಮ್ಮ ಪಕ್ಷವು ಅದ್ಯಕ್ಷ ಸ್ಥಾನ ಪಡೆಯಲಿದೆ ಎಂದು ಹೇಳಿದರು.
ಆದರೆ ನ್ಯಾಷನಲ್ ಕಾನ್ಫರೆನ್ಸ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯ ಅನೇಕ ಡಿಡಿಸಿ ಸದಸ್ಯರು ಮತ್ತು ಸ್ವತಂತ್ರ ವಿಜೇತರು ಚುನಾವಣಾ ಫಲಿತಾಂಶದ ನಂತರ ಅಪ್ನಿ ಪಾರ್ಟಿಗೆ ಸೇರಿದ ನಂತರ ಬುಖಾರಿ ಅವರ ಪಕ್ಷದ ಮೇಲೆ ಕುದುರೆ ವ್ಯಾಪಾರದ ಆರೋಪ ಕೇಳಿ ಬಂದಿದೆ. ಶ್ರೀನಗರದಲ್ಲಿ ಏಳು ಸ್ವತಂತ್ರ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೆ, ಮೂರು ಸ್ಥಾನಗಳನ್ನು ಅಪ್ನಿ ಪಾರ್ಟಿ ಗೆದ್ದಿತ್ತು. ಇಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಿಡಿಪಿ, ಬಿಜೆಪಿ ಮತ್ತು ಪೀಪಲ್ಸ್ ಮೂವ್ಮೆಂಟ್ ತಲಾ ಒಂದು ಸ್ಥಾನವನ್ನು ಗೆದ್ದಿದ್ದವು. ಅಪ್ನಿ ಪಾರ್ಟಿಯು ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗೆದ್ದಿದೆ. ಶೋಪಿಯಾನ್ನಲ್ಲಿ ಪಿಡಿಪಿ ನಾಲ್ಕು ಸ್ಥಾನಗಳನ್ನು, ನ್ಯಾಷನಲ್ ಕಾನ್ಫರೆನ್ಸ್ ಮೂರು, ಅಪ್ನಿ ಪಾರ್ಟಿ ಎರಡು ಸ್ಥಾನಗಳನ್ನು, ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದ್ದರೆ, ಸ್ವತಂತ್ರರು ನಾಲ್ಕು ಸ್ಥಾನಗಳನ್ನು ಗಳಿಸಿದ್ದರು. ಇಲ್ಲಿಯೂ, ಅಪ್ನಿ ಪಕ್ಷವು ಅದ್ಯಕ್ಷ ,ಉಪಾದ್ಯಕ್ಷ ಹುದ್ದೆಗಳನ್ನು ಗೆದ್ದಿದೆ. ಕುಲ್ಗಾಮ್ ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಸಿಪಿಐ (ಎಂ) ಎರಡೂ ತಲಾ ಐದು ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಮತ್ತು ಪಿಡಿಪಿ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದವು. ಇಲ್ಲಿನ ಡಿಡಿಸಿ ಸದಸ್ಯರು ತಮ್ಮ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಶ್ರೀನಗರ ಮತ್ತು ಶೋಪಿಯಾನ್ನಲ್ಲಿನ 28 ಸ್ಥಾನಗಳಲ್ಲಿ ಅಪ್ನಿ ಪಾರ್ಟಿಯು ಕೇವಲ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೂ ಸಹ, ಇಂದು ಅದರ ಗೆಲುವು ಕಾಶ್ಮೀರದಲ್ಲಿ ಪಕ್ಷಕ್ಕೆ ಬಾಗಿಲು ತೆರೆದಿವೆ. ಜನರು ಸತ್ಯದ ರಾಜಕೀಯಕ್ಕೆ ಮತ ಹಾಕಿದ್ದಾರೆ. ಗುಪ್ಕರ್ ಒಕ್ಕೂಟವು 72 ವರ್ಷಗಳಿಂದ ಜನರಿಗೆ ಸುಳ್ಳು ಹೇಳುವುದು ಮತ್ತು ಭಾವನೆಗಳ ರಾಜಕೀಯವನ್ನು ಮಾಡುವುದು. ಆದರೆ ಭಾವನೆಯ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಶನಿವಾರದ ಫಲಿತಾಂಶವು ಸಾಬೀತುಪಡಿಸಿದೆ ಎಂದು ಅಪ್ನಿ ಪಾರ್ಟಿಯ ಹಿ ರಿಯ ಮುಖಂಡ ಉಸ್ಮಾನ್ ಮಜೀದ್ ಹೇಳಿದ್ದಾರೆ. ಬಿಜೆಪಿ ನಾಯಕ ಮತ್ತು ಶ್ರೀನಗರದ ಡಿಡಿಸಿ ಸದಸ್ಯ, ಅಪ್ನಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ ಐಜಾಜ್ ಹುಸೇನ್, ಬಿಜೆಪಿ ಮತ್ತು ಅಪ್ನಿ ಪಕ್ಷ ಎರಡೂ ಕಾಶ್ಮೀರದ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಪಕ್ಷಗಳಲ್ಲ, ಕಾಶ್ಮೀರದಲ್ಲಿ ಇನ್ನೆಂದೂ 370 ನೇ ವಿಧಿ ವಾಪಸ್ ಬರುವುದಿಲ್ಲ ಎಂದು ಮೊದಲೇ ಖಚಿತಪಡಿಸಿವೆ. ಬಿಜೆಪಿ ಮತ್ತು ಅಪ್ನಿ ಪಕ್ಷ ಎರಡೂ ಅಭಿವೃದ್ಧಿಯ ಘೋಷಣೆಯ ಮೇಲೆ ಕೆಲಸ ಮಾಡುತ್ತಿವೆ ಮತ್ತು ಅದಕ್ಕಾಗಿಯೇ ನಮ್ಮ ಪಕ್ಷವು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿತು. ಜನರಿಗೆ ಸುಳ್ಳು ಹೇಳದ ಯಾರಿಗಾದರೂ ನಾವು ಬೆಂಬಲ ನೀಡುತ್ತೇವೆ ಎಂದರು.
ನ್ಯಾಷನಲ್ ಕಾನ್ಫರೆನ್ಸ್ ಸಂಸದ ನ್ಯಾಯಮೂರ್ತಿ ಹಸ್ನೈನ್ ಮಸೂಡಿ ಮಾತನಾಡಿ ಈ ಎರಡು ಪಕ್ಷಗಳ ನಡುವಿನ ಮೈತ್ರಿಯಿಂದಾಗಿ ಶ್ರೀನಗರದಲ್ಲಿ ಗೆಲುವು ಸಾಧ್ಯವಾಗಿದೆ. ಶೋಪಿಯಾನ್ ಚಿತ್ರಣ ವಿಭಿನ್ನವಾಗಿದೆ. ಚುನಾವಣಾ ಫಲಿತಾಂಶದ ನಂತರ ಅಭ್ಯರ್ಥಿಗಳು ಪಕ್ಷಾಂತರಗೊಂಡು ಜನರು ನೀಡಿದ ಆದೇಶವನ್ನು ಅಪಹಾಸ್ಯ ಮಾಡಿದ್ದಾರೆ ಎಂದರು. ಗುಪ್ಕರ್ ಅಲೈಯನ್ಸ್ ತನ್ನ ಮುಂದಿನ ಕ್ರಮಗಳ ಬಗ್ಗೆ, ವಿಶೇಷವಾಗಿ ಅದ್ಯಕ್ಷರ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ ಅದರ ಅಂಗ ಪಕ್ಷವಾದ ಪೀಪಲ್ಸ್ ಕಾನ್ಫರೆನ್ಸ್ ಗುಪ್ಕರ್ ನ್ನು ತೊರೆದಿದೆ. ನಾವು ಡಿಡಿಸಿ ಅಧ್ಯಕ್ಷರ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಸಭೆ ನಡೆಸಬೇಕಿತ್ತು ಮತ್ತು ಅದು ಸಾದ್ಯವಾಗಲಿಲ್ಲ ಎಂದರು. ನ್ಯಾಷನಲ್ ಕಾನ್ಫರೆನ್ಸ್ ನ ಮಸೂಡಿ ಮಾತನಾಡಿ ಇಲ್ಲ, ಇದು ನಿಜವಲ್ಲ. ನಾವು ಎಲ್ಲಾ ಮೈತ್ರಿ ಪಕ್ಷಗಳೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೇವೆ. ನಮ್ಮ ಜಿಲ್ಲಾ ನಾಯಕತ್ವಕ್ಕೆ ತಮ್ಮದೇ ಆದ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲು ನಾವು ನಿರ್ಧರಿಸಿದ್ದೆವು ಆದರೆ ದುರದೃಷ್ಟವಶಾತ್ ಫಲಿತಾಂಶವು ನಾವು ನಿರೀಕ್ಷಿಸಿದಂತೆ ಬರಲಿಲ್ಲ ಇದಕ್ಕೆ ಗುಪ್ಕರ್ ಅಲಯನ್ಸ್ ಅಥವಾ ನ್ಯಾಷನಲ್ ಕಾನ್ಫರೆನ್ಸ್ ನ್ನು ದೂಷಿಸಬಾರದು ಎಂದರು.