ಜಾಗತಿಕ ಚರಿತ್ರೆಯಲ್ಲೇ ಬಹುಶಃ ಹಿಂದೆಂದೂ ಕಂಡಿರದ ಹೊಸ ಅಧ್ಯಾಯ ಸದ್ಯ ಭಾರತದಲ್ಲಿ ಆರಂಭವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರವೊಂದು ತನ್ನನ್ನು ಅಧಿಕಾರಕ್ಕೆ ತಂದ ಜನರ ದನಿಯನ್ನೇ ದಮನ ಮಾಡಲು, ಅವರ ಪ್ರಜಾಸತ್ತಾತ್ಮಕ ಹೋರಾಟವನ್ನು ಬಗ್ಗುಬಡಿಯಲು ಹೆದ್ದಾರಿಗಳಿಗೆ ಉಕ್ಕಿನ ಮೊಳೆ, ಸಿಮೆಂಟ್ ಗೋಡೆ, ಬ್ಯಾರಿಕೇಡು, ಕಂಟೇನರ್ ತಡೆ, ಮುಳ್ಳುತಂತಿಯ ಬೇಲಿ ಮುಂತಾದ ಬಗೆಯ ಐದು ಸುತ್ತಿನ ಕೋಟೆ ಕಟ್ಟಿದೆ. ಭೌತಿಕ ಕೋಟೆ ಸಾಲದು ಎಂದು, ಇಂಟರ್ ನೆಟ್ ಸ್ಥಗಿತಗೊಳಿಸುವ ಮೂಲಕ ಡಿಜಿಟಲ್ ತಡೆಗೋಡೆಯನ್ನೂ ನಿರ್ಮಿಸಿದೆ. ಆ ಮೂಲಕ ತನ್ನದೇ ಜನಗಳ ವಿರುದ್ಧ ಸಮರ ಸಾರಿದೆ!
ತನ್ನದೇ ಕಾಯ್ದೆಗಳನ್ನು ವಿರೋಧಿಸಿ, ಅವು ಯಾರ ಹಿತಕ್ಕಾಗಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆಯೋ, ಅದೇ ರೈತರು ಆ ಕಾಯ್ದೆಗಳ ವಿರುದ್ಧ ಎರಡೂವರೆ ತಿಂಗಳಿನಿಂದ ಆಹೋರಾತ್ರಿ ಹೋರಾಟ ನಡೆಸುತ್ತಿರುವಾಗ ಸರ್ಕಾರ, ಅವರೊಂದಿಗೆ ಪರಸ್ಪರ ಸಹಮತದ ಬಿಕ್ಕಟ್ಟು ಶಮನದ ಪ್ರಯತ್ನಗಳ ಬದಲಿಗೆ ಹೀಗೆ ಕೋಟೆ ಕಟ್ಟಿ, ಪೊಲೀಸ್ ಬಲ ಪ್ರಯೋಗಿಸಿ, ನೂರಾರು ಮಂದಿಯನ್ನು ಬಂಧಿಸಿ ಜೈಲಿಗಟ್ಟಿ, ಹೋರಾಟದ ವರದಿ ಮಾಡುವ ಪತ್ರಕರ್ತರನ್ನು ಕೂಡ ದೇಶದ್ರೋಹ ಕಾಯ್ದೆಯಡಿ ಜೈಲಿಗೆ ಕಳಿಸುವ ಮಟ್ಟಕ್ಕೆ ನಿರಂಕುಶ ಪ್ರಭುತ್ವದ ನಡೆ ಅನುಸರಿಸುತ್ತಿದೆ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿದೆ. ಅದಕ್ಕೆ ಕಾರಣವಾಗಿದ್ದು ಖ್ಯಾತ ಪಾಪ್ ಗಾಯಕಿ ರಿಹಾನ ಮತ್ತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಅವರು ಭಾರತೀಯ ರೈತ ಹೋರಾಟದ ಕುರಿತು ಮಾಡಿದ ಟ್ವೀಟಗಳು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ಮಟ್ಟದಲ್ಲಿ ಭಾರತದ ರೈತ ಹೋರಾಟ ಮತ್ತು ಆ ಹೋರಾಟವನ್ನು ಹತ್ತಿಕ್ಕಲು ಪ್ರಧಾನಿ ಮೋದಿಯವರ ಸರ್ಕಾರ ಅನುಸರಿಸುತ್ತಿರುವ ದಮನ ಕ್ರಮಗಳು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ; ಮುಖ್ಯವಾಗಿ ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿದ್ದ, ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ, ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ, ನಾಗರಿಕ ಹಕ್ಕುಗಳ ದಮನ ನಡೆಯುತ್ತಿದೆ, ದೇಶದ ನಾಗರಿಕ ಹೋರಾಟ, ಹೋರಾಟಗಾರರು, ಜನಪರ ಪತ್ರಕರ್ತರು, ಮಾಧ್ಯಮ, ಸಂಘಟನೆಗಳ ಮೇಲೆ ನಿರಂಕುಶ ದಾಳಿ ನಡೆಯುತ್ತಿದೆ ಮುಂತಾದ ಮಾತುಗಳು ಕೂಡ ಜಾಗತಿಕ ಮಟ್ಟದಲ್ಲಿ ಮತ್ತೆ ಮಾರ್ದನಿಸತೊಡಗಿವೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಕೂಡ ರೈತರ ಹೋರಾಟದ ವಿಷಯದಲ್ಲಿ ಸರ್ಕಾರದ ನಡೆಗಳು ಮಾನವ ಹಕ್ಕು ದಮನ ಕ್ರಮಗಳು ಎಂದಿವೆ.
ಸಹಜವಾಗೇ ಜಾಗತಿಕ ನಾಯಕನಾಗುವ ಮಹತ್ವಾಕಾಂಕ್ಷೆಯ ಮೋದಿಯವರಿಗೆ ಸಹಜವಾಗೇ ಈ ಹೊಸ ಬೆಳವಣಿಗೆಗಳು ದೊಡ್ಡ ಹಿನ್ನಡೆ ತಂದಿವೆ. ತಮ್ಮ ಬೆಂಬಲಿಗ ಭಕ್ತ ಪಡೆಗಳು, ಐಟಿ ಸೆಲ್ ಪ್ರಚಾರದ ಕಸರತ್ತುಗಳ ಮೂಲಕ ಕಟ್ಟಿದ ‘ವಿಶ್ವಗುರು’, ‘ವಿಶ್ವ ನಾಯಕ’ ಎಂಬ ವರ್ಚಸ್ಸಿಗೆ ಈ ಬೆಳವಣಿಗೆಗಳು ಕೊಟ್ಟ ಪೆಟ್ಟು ಅವರಿಗೆ ಆಘಾತ ತಂದಿದೆ. ಆದರೆ, ವ್ಯಕ್ತಿಗತ ಪ್ರತಿಷ್ಠೆಯೊಂದಿಗೆ ರಾಜಕೀಯ ಅಧಿಕಾರವೂ ಸೇರಿದರೆ, ಎಂಥ ಹಠಮಾರಿತನಕ್ಕೆ ದೇಶ ಸಾಕ್ಷಿಯಾಗಬೇಕಾಗುತ್ತದೆ ಎಂಬುದಕ್ಕೆ 1975ರ ತುರ್ತುಪರಿಸ್ಥಿತಿಯ ಬಳಿಕ ಈ ದಿನಗಳು ನಿದರ್ಶನವಾಗಿವೆ.ʼ
1975ರಲ್ಲಿ ಕಾಂಗ್ರೆಸ್ನ ಪ್ರಶ್ನಾತೀತ ಅಧಿನಾಯಕಿಯ ಸುತ್ತ ಕೂಡ ಇಂತಹದ್ದೇ ವರ್ಚಸ್ಸು ಕಟ್ಟಲಾಗಿತ್ತು. ಅಂದು ಡಿಜಿಟಲ್ ಮಾಧ್ಯಮಗಳು, ಇಂಟರ್ ನೆಟ್ ಇಲ್ಲದೇ ಹೊದರೂ, ಆ ಪಕ್ಷದ ಯುವ ಕಾಂಗ್ರೆಸ್ ಘಟಕದ ಮೂಲಕವೇ ದೇಶವ್ಯಾಪಿ ದೊಡ್ಡ ಮಟ್ಟದ ಕಟ್ಟಾಭಿಮಾನಿಗಳ ಪಡೆ ತಲೆ ಎತ್ತಿದ್ದವು. ಈಗಿನ ಬಿಜೆಪಿ ಟ್ರೋಲ್ ಪಡೆ, ಐಟಿ ಸೆಲ್ ಮಾದರಿಯಲ್ಲೇ ಬಹುತೇಕ ಆಗಲೂ ಪ್ರಧಾನಿ ಇಂದಿರಾ ಟೀಕಾಕಾರರು, ವಿಮರ್ಶಕ ಹೋರಾಟಗಾರರು, ವಿದ್ಯಾರ್ಥಿಗಳು, ಪತ್ರಕರ್ತರು, ರೈತರ ವಿರುದ್ಧ ಬೆದರಿಕೆ, ದಾಳಿಗಳು ನಡೆಯುತ್ತಿದ್ದವು. ಇಂತಹದ್ದೇ ಭಾರೀ ಬಹುಮತದ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಇಂದಿರಾ ಮತ್ತು ಅವರ ಪುತ್ರ ಸಂಜಯ್ ಗಾಂಧಿ ತಮ್ಮ ವಿರುದ್ಧ ಯಾವ ಟೀಕೆಗಳನ್ನೂ ಸಹಿಸದ ಮಟ್ಟಿನ ಸರ್ವಾಧಿಕಾರಿ ಧೋರಣೆ ರೂಢಿಸಿಕೊಂಡಿದ್ದರು. ಆಗ ಬಿಹಾರದಲ್ಲಿ ಹುಟ್ಟಿಕೊಂಡ ಸಣ್ಣ ವಿದ್ಯಾರ್ಥಿ ಹೋರಾಟ ಕ್ರಮೇಣ ಇಂದಿರಾಗಾಂಧಿಯ ಸರ್ವಾಧಿಕಾರದ ವಿರುದ್ಧದ ದೇಶವ್ಯಾಪಿ ಜನಾಂದೋಲನವಾಗಿ ಬದಲಾಗಿತ್ತು. ಜಯಪ್ರಕಾಶ್ ನಾರಾಯಣ್ ಮತ್ತು ರಾಮಮನೋಹರ ಲೋಹಿಯಾ ಅವರು ವಿದ್ಯಾರ್ಥಿ ಹೋರಾಟಕ್ಕೆ ರಾಷ್ಟ್ರೀಯ ಪ್ರಜಾ ಆಂದೋಲನದ ಆಯಾಮ ನೀಡಿದ್ದರು.
ಸದ್ಯ ಕಳೆದ ಆರೂವರೆ ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ದೇಶದ ನಾಗರಿಕ ಹೋರಾಟಗಳನ್ನು, ವಿದ್ಯಾರ್ಥಿ ಚಳವಳಿಗಳನ್ನು, ರೈತರ ಪ್ರತಿರೋಧವನ್ನು ನಿಭಾಯಿಸಿದ ರೀತಿ ಗಮನಿಸಿದರೆ, ನೂರಾರು ಹೋರಾಟಗಾರರನ್ನು ಸುಳ್ಳು ಮತ್ತು ಅಪ್ರಸ್ತುತ ಕಾನೂನುಗಳಡಿ ಜೈಲಿಗೆ ಕಳಿಸಿರುವುದು, ವಾಸ್ತವಾಂಶಗಳನ್ನು ವರದಿ ಮಾಡಿದ ಪತ್ರಕರ್ತರನ್ನು ದೇಶದ್ರೋಹದಂತಹ ಪ್ರಕರಣಗಳಡಿ ಬಂಧಿಸಿಟ್ಟಿರುವುದು, ದಲಿತರು, ಮುಸ್ಲಿಮರ ಮೇಲಿನ ದಾಳಿಗಳು, ನಾಗರಿಕ ಹೋರಾಟಗಾರರ ಮೇಲೆ ಬಿಜೆಪಿ ಕಾರ್ಯಕರ್ತರು, ನಾಯಕರ ನೇತೃತ್ವದಲ್ಲಿ ಪೊಲೀಸರೇ ಮುಂದೆ ನಿಂತು ದಾಳಿ ನಡೆಸಿದ ದೆಹಲಿ ಗಲಭೆ ಮತ್ತು ಮೊನ್ನೆಯ ರೈತರ ಮೇಲಿನ ದಾಳಿ ಘಟನೆಗಳು, ಮಾಧ್ಯಮಗಳ ಮೇಲಿನ ನಿರ್ಬಂಧ, ಇಂಟರ್ ನೆಟ್ ಸ್ಥಗಿತದಂತಹ ಕ್ರಮಗಳು,.. ಹೀಗೆ ಎಲ್ಲವೂ 45 ವರ್ಷಗಳ ಹಿಂದಿನ ಪರಿಸ್ಥಿತಿಯೇ ಹೊಸ ಅಪ್ ಗ್ರೇಡೆಡ್ ಆವೃತ್ತಿಯೊಂದಿಗೆ ಮರುಕಳಿಸಿದ ಅನುಭವ ನೀಡುತ್ತಿದೆ.
ವಿಪರ್ಯಾಸವೆಂದರೆ; ಅಂದು ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಆಡಳಿತದ ದಬ್ಬಾಳಿಕೆಯ ವಿರುದ್ಧದ ಜೆಪಿ ಮತ್ತು ಲೋಹಿಯಾ ಹೋರಾಟಕ್ಕೆ ಬೆಂಬಲವಾಗಿ ನಿಂತು ಪ್ರಜಾಸತ್ತೆಯ ರಕ್ಷಕರ ಪಾತ್ರ ವಹಿಸಿದ್ದ ಭಾರತೀಯ ಜನತಾ ಪಕ್ಷ(ಅಂದಿನ ಜನಸಂಘ) ಈಗ ಅದೇ ಸರ್ವಾಧಿಕಾರಿ, ನಿರಂಕುಶ ಪ್ರಭುತ್ವದ ಕುರ್ಚಿಯಲ್ಲಿ ಕೂತಿದೆ. ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾಗಿ ಹೇಳುವ ಮಂದಿಯೇ ಈಗ ದೇಶದ ಚರಿತ್ರೆಯಲ್ಲಿ ಮತ್ತೊಂದು ತುರ್ತುಪರಿಸ್ಥಿತಿಯ ಅಧ್ಯಾಯದ ಲಿಪಿಕಾರರಾಗಿದ್ದಾರೆ.
ಆ ಹಿನ್ನೆಲೆಯಲ್ಲಿ ಬುಧವಾರ ಹರ್ಯಾಣದ ಜಿಂದ್ ನಲ್ಲಿ ನಡೆದ ರೈತರ ಮಹಾಪಂಚಾಯಿತಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಆಡಿದ ಮಾತುಗಳು ಗಮನಾರ್ಹ. ಹರ್ಯಾಣದ ರಾಜಕಾರಣದ ಕೇಂದ್ರಬಿಂದುವಾದ ಜಿಂದ್ ನಲ್ಲಿ ನೆರೆದಿದ್ದ ಬೃಹತ್ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು, “ಈವರೆಗೆ ನಾವು ಕೇವಲ ಬಿಲ್ ವಾಪ್ಸಿ(ಕೃಷಿ ಕಾಯ್ದೆ ಕೈಬಿಡಲು) ಕೇಳಿದ್ದೇವೆ. ನಮ್ಮ ಹಕ್ಕೊತ್ತಾಯವನ್ನು ಸರ್ಕಾರ ಸರಿಯಾಗಿ ಕಿವಿಗೊಟ್ಟು ಕೇಳಿಸಿಕೊಳ್ಳಬೇಕು. ಹಾಗೆ ಕೇಳಿಸಿಕೊಳ್ಳದೇ ಹೋದರೆ, ನಮ್ಮ ಯುವಕರು ನಾಳೆ ಗದ್ದಿ ವಾಪ್ಸಿ(ಅಧಿಕಾರ ಬಿಡಿ) ಎಂದು ಕೇಳುತ್ತಾರೆ. ಅಂತಹ ದಿನಗಳು ಬರದಂತೆ ಎಚ್ಚರಿಕೆ ವಹಿಸಿ” ಎಂದು ಅಧಿಕಾರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ನಲವತ್ತೈದು ವರ್ಷಗಳ ಹಿಂದೆ, ಬಿಹಾರ ಮತ್ತು ಗುಜರಾತಿನಲ್ಲಿ ಭುಗಿಲೆದ್ದಿದ್ದ ವಿದ್ಯಾರ್ಥಿ ಆಂದೋಲನವನ್ನು ದೇಶವ್ಯಾಪಿ ಜನಾಂದೋಲವಾಗಿ ಪರಿವರ್ತಿಸುವ ಮುನ್ನ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಕೂಡ ಇದೇ ಎಚ್ಚರಿಕೆಯನ್ನು ರವಾನಿಸಿದ್ದರು. 1974ರ ಮಾರ್ಚ್ 18ರಂದು ಬಿಹಾರದಿಂದ ಸಂಪೂರ್ಣ ಕ್ರಾಂತಿಗೆ ಕರೆ ನೀಡುವ ಮೂಲಕ ಒಂದು ಸರ್ವಾಧಿಕಾರಿ ಶಕ್ತಿಯ ವಿರುದ್ಧದ ದೇಶದ ಜನಸಾಮಾನ್ಯರ ಹೋರಾಟಕ್ಕೆ ನಾಂದಿ ಹಾಡಿದ್ದರು.
ರೈತರ ಪ್ರಜಾಸತ್ತಾತ್ಮಕ ಹೋರಾಟವನ್ನು ದಮನ ಮಾಡಿ, ತಮ್ಮ ನೀತಿ-ನಿಲುವುಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳು, ವಿದೇಶಿ ಶಕ್ತಿಗಳ ಕುಮ್ಮಕ್ಕು ಪಡೆದವರು, ವಿದೇಶಿ ಏಜೆಂಟರು ಎಂದು ಕರೆಯುವ ಮೂಲಕ ಹೋರಾಟದ ಕುರಿತ ಜನಾಭಿಪ್ರಾಯವನ್ನು ದಿಕ್ಕುತಪ್ಪಿಸುವ, ಜನರ ಕಣ್ಣಲ್ಲಿ ಹೋರಾಟವನ್ನು ವಿಲನ್ ಮಾಡುವ ಪ್ರಯತ್ನಗಳು ಈಗ ನಡೆದಂತೆಯೇ ಅಂದು ಕೂಡ, ಇಂದಿರಾ ವಿರೋಧಿ ಹೋರಾಟಗಾರರನ್ನು ವಿದೇಶಿ ಏಜೆಂಟರು ಎಂದು ಕರೆಯಲಾಗಿತ್ತು. ಆದರೆ, ಆಳುವ ಮಂದಿ ದೇಶದ ಜನಸಾಮಾನ್ಯರನ್ನು ಬಹಳ ದಿನ ಮೂರ್ಖರನ್ನಾಗಿ ಮಾಡಲಾಗಿರಲಿಲ್ಲ.
ಈಗಲೂ ಅಂತಹದ್ದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ. ಸರ್ಕಾರ ತನ್ನೆಲ್ಲಾ ಬಲ ಪ್ರಯೋಗಿಸಿ, ತಂತ್ರಗಳನ್ನು ಹೆಣೆದು, ರೈತ ಹೋರಾಟಗಾರರನ್ನು ಹಣಿಯುತ್ತಿದೆ. ಮೂರು ಕಾಯ್ದೆಗಳ ವಿಷಯದಲ್ಲಿ ದೇಶವ್ಯಾಪ್ತಿ ಜನಾಭಿಪ್ರಾಯವನ್ನು ಹತ್ತಿಕ್ಕಿ ತನ್ನ ಹಠಮಾರಿತನವನ್ನು ಮುಂದುವರಿಸಿದೆ. ಹತ್ತಾರು ಬಗೆಯಲ್ಲಿ ಹೋರಾಟಕ್ಕೆ ಕಳಂಕ ಮೆತ್ತಲು ಪ್ರಯತ್ನಿಸುತ್ತಿದೆ. ಆದರೆ, ಗಣರಾಜ್ಯೋತ್ಸವ ಮತ್ತು ಅದರ ಮಾರನೇ ದಿನ ನಡೆಸಿದ ಪ್ರಯತ್ನಗಳು ತಿರುಗುಬಾಣವಾದಂತೆಯೇ ಸರ್ಕಾರದ ದಮನ ಕ್ರಮಗಳು ತಿರುಗುಬಾಣವಾಗುತ್ತಿವೆ ಎಂಬುದಕ್ಕೆ ಮಹಾಪಂಚಾಯ್ತಿ ಮತ್ತು ದೆಹಲಿ ಗಡಿಯ ಹೋರಾಟಕ್ಕೆ ವ್ಯಕ್ತವಾಗುತ್ತಿರುವ ಭಾರೀ ಬೆಂಬಲವೇ ನಿದರ್ಶನ. ತುರ್ತುಪರಿಸ್ಥಿತಿ ಜಾರಿಗೆ ಬಂದಿದ್ದು ಕೂಡ ಹೀಗೆ ಜನವಿರೋಧಿ ಆಡಳಿತದ ವಿರುದ್ಧ ದೇಶವ್ಯಾಪಿ ಹಬ್ಬಿದ ಜನಾಂದೋಲವನ್ನು ಹತ್ತಿಕ್ಕುವ ತಂತ್ರವಾಗಿಯೇ.
ಈಗಲೂ; ಆಳುವ ಮಂದಿ ತಮ್ಮ ಟ್ರೋಲ್ ಪಡೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರೈತ ಹೋರಾಟದ ಬಗ್ಗೆ ಹಬ್ಬಿಸುತ್ತಿರುವ ಸಂಗತಿಗಳು ಹಸೀ ಸುಳ್ಳುಗಳು ಮತ್ತು ಜನರ ದನಿ ಉಡುಗಿಸುವ ಹುನ್ನಾರಗಳು ಎಂಬುದು ಜನಸಾಮಾನ್ಯರಿಗೆ ಅರಿವಿಗೆ ಬಂದಿದೆ. ದೇಶದ ಮೂಲೆಮೂಲೆಯಲ್ಲಿ ರೈತ ಹೋರಾಟದ ಪರ ವ್ಯಕ್ತವಾಗುತ್ತಿರುವ ಬೆಂಬಲ ಮತ್ತು ಸಹಾನುಭೂತಿ ಅದಕ್ಕೆ ಸಾಕ್ಷಿ.
ಕಾಲಚಕ್ರ ಒಂದು ಸುತ್ತು ಉರುಳಿದ ಹಾಗಿದೆ. ಬಹುಶಃ ದೇಶ ಮತ್ತೊಂದು ಜನಾಂದೋಲ ಮತ್ತು ಅದನ್ನು ಹತ್ತಿಕ್ಕುವ ಘೋಷಿತ ತುರ್ತುಪರಿಸ್ಥಿತಿಗೆ ಕ್ಷಣಗಣನೆಯ ಹೊಸ್ತಿಲಲ್ಲಿದೆ!