ರಾಜ್ಯ ಯುವ ಕಾಂಗ್ರೆಸ್ ಪದಾಧೀಕಾರಿಗಳ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಗುರುವಾರ ಸಂಜೆಯ ವೇಳೆಗೆ ಭಾರತೀಯ ಯುವ ಕಾಂಗ್ರೆಸ್‌ನ ಅಧಿಕೃತ ಅಂತರ್ಜಾಲ ತಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಿದ್ದು, ರಕ್ಷಾ ರಾಮಯ್ಯ ಅವರು ಭಾರತೀಯ ಯುವ ಕಾಂಗ್ರೆಸ್‌ನ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಕ್ಷಾ ರಾಮಯ್ಯ ಅವರು ಒಟ್ಟು 57,271 ಮತಗಳನ್ನು ಪಡೆದುಕೊಂಡಿದ್ದರು. ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆಯುವವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ನಿಯಮ ಇದ್ದುದರಿಂದ, ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷರಾಗಿರುವ ಮಂಜುನಾಥ ಹೆಚ್ ಎಸ್ ಅವರಿಗೆ ಈ ಸ್ಥಾನ ಲಭಿಸಿದೆ. ಮಂಜುನಾಥ ಅವರು ಒಟ್ಟು 18,137 ಮತಗಳನ್ನು ಪಡೆದಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಉಪಾಧ್ಯಕ್ಷರಾಗಿ ಭವ್ಯ ಕೆ ಆರ್ (3156 ಮತಗಳು), ಎಸ್‌ಸಿ/ಎಸ್‌ಟಿ ಉಪಾಧ್ಯಕ್ಷರಾಗಿ ಸಂದೀಪ್ ನಾಯಕ್ (736 ಮತಗಳು) ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಲಗೈ ಬಂಟ ಮಿಥುನ್ ರೈ ಅವರು ಚುನಾವಣೆಯ ಮುನ್ನಾ ದಿನ ಕಣದಿಂದ ಹಿಂದೆ ಸರಿದಿದ್ದರು. ಇನ್ನೋರ್ವ ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾದ ಸಯ್ಯದ್ ಖಾಲಿದ್ ಅವರಿಗೆ 4740 ಮತಗಳು ಲಭಿಸಿವೆ.
ಈ ಚುನಾವಣೆಯಲ್ಲಿ ಒಟ್ಟು 1,92,703 ಯುವ ಕಾಂಗ್ರೆಸ್ ಕಾರ್ಯಕರ್ತರು ಮತ ಚಲಾಯಿಸಿದ್ದು, ಇದರಲ್ಲಿ 27,206 ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ.
ಮೊಹಮ್ಮದ್ ನಲಪಾಡ್ ಅನರ್ಹ:
ವಿಚಿತ್ರ ಎಂದರೆ, ಎಲ್ಲಾ ಚುನಾವಣೆಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡ ವ್ಯಕ್ತಿ ವಿಜೇತ ಎಂದು ಸಾರಲಾಗುತ್ತದೆ. ಆದರೆ, ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ವ್ಯಕ್ತಿಯನ್ನು ಅನರ್ಹ ಎಂದು ಸಾರಲಾಗಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮೊಹಮ್ಮದ್ ನಲಪಾಡ್ ಅವರನ್ನು ಕೊನೇಯ ಕ್ಷಣದಲ್ಲಿ ಅನರ್ಹ ಎಂದು ಘೋಷಿಸಿದ್ದಾರೆ. ಇವರು ಪಡೆದ ಮತಗಳು 64,203. ಬೇರೆ ಎಲ್ಲಾ ಅಭ್ಯರ್ಥಿಗಳಿಗಿಂತ ಅತೀ ಹೆಚ್ಚು ಮತಗಳನ್ನು ಪಡೆದಿದ್ದರೂ, ಅಧ್ಯಕ್ಷರಾಗುವ ಭಾಗ್ಯ ಮಾತ್ರ ಇವರ ಪಾಲಿಗೆ ಒಲಿದಿಲ್ಲ.
ಇದರ ನಂತರ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ನಲಪಾಡ್ ಅವರು, ರಾಜ್ಯದಲ್ಲಿ ಅತೀ ಹೆಚ್ಚು ಮತಗಳನ್ನು ನಾನು ಪಡೆದಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವುದರಿಂದ ಪಕ್ಷ ಯಾವ ತೀರ್ಮಾನ ತೆಗೆದುಕೊಂಡರೂ ಅದನ್ನು ಸ್ವೀಕರಿಸುತ್ತೇನೆ ಎಂದಿದ್ದಾರೆ.https://www.instagram.com/p/CK320JlAQLD/embed/captioned/?cr=1&v=13&wp=492&rd=https%3A%2F%2Fpratidhvani.com&rp=%2Fstate%2F2021%2F02%2F04%2Fraksha-ramaiah-elected-as-kpyc-president#%7B%22ci%22%3A1%2C%22os%22%3A3098.1899999969755%7D
ಚುನಾವಣೆ ನಿರೀಕ್ಷಣಾ ಸಂಸ್ಥೆಯಾದ FAME (Foundation for advanced Management of Elections) ನಲಪಾಡ್ ಅವರನ್ನು ಅನರ್ಹ ಎಂದು ಘೋಷಿಸಿದೆ. ವಿಪರ್ಯಾಸವೆಂದರೆ, ಇದೇ ಸಂಸ್ಥೆ ಚುನಾವಣೆಗೂ ಒಂದು ತಿಂಗಳ ಮುಂಚೆ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಂದರ್ಶನವನ್ನು ನಡೆಸಿತ್ತು. ಅದರಲ್ಲಿ ಆಯ್ಕೆಯಾದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ʼಅರ್ಹʼ ಎಂದು ಪ್ರಮಾಣಪತ್ರ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಅನರ್ಹ ಎಂದು ಘೋಷಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಮೂಡಿದೆ.
ಗೊಂದಲದ ಗೂಡಾದ ಕೆಪಿವೈಸಿ ಚುನಾವಣೆ
ಮೊಟ್ಟಮೊದಲಿಗೆ ಈ ಚುನಾವಣೆ ಪಕ್ಷ ಕಟ್ಟಲೋ ಅಥವಾ ಪಕ್ಷ ಒಡೆಯಲೋ ಎಂಬ ಸಂದೇಹ ಹುಟ್ಟುಕೊಂಡಿದೆ. ಈ ಚುನಾವಣೆ ಎಐಸಿಸಿ ಕಾರ್ಯದರ್ಶಿಯಾಗಿರುವ ಕೃಷ್ಣಾ ಆಲುವಾರ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಇವರೊಂದಿಗೆ ಕನ್ನಡಿಗರಾದ ಹಾಗೂ IYC ರಾಷ್ಟ್ರಾಧ್ಯಕ್ಷರಾದ ಶ್ರೀನಿವಾಸ್ ಬಿ ವಿ ಅವರೂ ಇದ್ದರು.
ಘಟಾನುಘಟಿಗಳ ಆಶ್ರಯದಲ್ಲೇ ಈ ಚುನಾವಣೆ ನಡೆದರೂ, ಈ ಪರಿಯ ಗೊಂದಲಗಳು ಏಕೆ ಮೂಡಿದವು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸದಾ ಇವಿಎಂಗಳ ಬಳಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್, ಪಕ್ಷದ ಆಂತರಿಕ ಚುನಾವಣೆಯನ್ನು ಏಕೆ ಆನ್ಲೈನ್ ಮೂಲಕ ನಡೆಸಿತು? ಆಂತರಿಕ ಚುನಾವಣೆಯಲ್ಲಿಯೇ ಇಷ್ಟೊಂದು ಗೊಂದಲಗಳು ಮೂಡಬೇಕಾದರೆ, ಇನ್ನು ರಾಷ್ಟ್ರೀಯ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದೊಳಗೆ ಎಷ್ಟರ ಮಟ್ಟಿನ ಗೊಂದಲಗಳು ಇರಲಾರವು? ಎಂಬುದು ಈಗ ಸಾಮಾನ್ಯ ಕಾರ್ಯಕರ್ತನೂ ಕೇಳುವ ಪ್ರಶ್ನೆ.
ಒಟ್ಟಿನಲ್ಲಿ, ಕೆಪಿವೈಸಿ ಚುನಾವಣೆ ಎಂಬ ಗಜಪ್ರಸವ ಮುಗಿದುಹೋಗಿದೆ. ರಕ್ಷಾ ರಾಮಯ್ಯ ಅವರು ಮುಂದಿನ ಅಧ್ಯಕ್ಷರೆಂದು ಘೊಷಿಸಲಾಗಿದೆ. ಇವರ ನಾಯಕತ್ವದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಯಾವ ರೀತಿ ಕೆಪಿಸಿಸಿಯ ಕಾರ್ಯಯೋಜನೆಗಳಿಗೆ ಸಾಥ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.