ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ”ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಷಯದಲ್ಲಿ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಹೋರಾಟದಲ್ಲಿ ಅಂತಿಮವಾಗಿ ಜಯ ಸಾಧಿಸುವವರು ರೈತರೇ. ಆದುದರಿಂದ ಕೇಂದ್ರ ಸರ್ಕಾರ ಈಗಲೇ ತಾನು ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವುದು ಸೂಕ್ತ’ ಎಂದು ಹೇಳಿದ್ದರು. ಜೊತೆಗೆ ‘2020ರ ಫೆಬ್ರವರಿ 12ರಂದು ನಾನು ಕೊರೋನಾ ಬಗ್ಗೆ ಕೂಡ ಇದೇ ರೀತಿಯ ಸುಳಿವನ್ನು ನೀಡಿದ್ದೆ, ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ನನ್ನನ್ನು ಗೇಲಿ ಮಾಡಲಾಗಿತ್ತು. ಆದರೀಗ ಮತ್ತೆ ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರ ಕೂಡಲೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ದೇಶಕ್ಕೆ ಮತ್ತೊಂದು ದೊಡ್ಡ ಸಮಸ್ಯೆ ಕಾಡಲಿದೆ’ ಎಂದು ಎಚ್ಚರಿಸಿದ್ದರು. ರಾಹುಲ್ ಗಾಂಧಿ ಅವರ ಮಾತುಗಳು ನಿಜವಾಗುವ ಸುಳಿವುಗಳು ಸಿಗಲಾರಂಭಿಸಿವೆ.ರೈತ ಹೋರಾಟಕ್ಕೆ ಬೆಚ್ಚಿಬಿದ್ದ ಕೇಂದ್ರ: ಉಳುವವನ ತಡೆಯಲು ಮೊಳೆ ನೆಟ್ಟ ಸರ್ಕಾರ
ಕಳೆದ ಎಪ್ಪತ್ತು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಬೇಕೆಂದು ಕೇಂದ್ರ ಸರ್ಕಾರ ನಾನಾ ರೀತಿಯ ಕಸರತ್ತು ನಡೆಸಿದೆ. ರೈತ ಸಂಘಟನೆಯ ಪ್ರತಿನಿಧಿಗಳೊಂದಿಗೆ 11 ಸುತ್ತು ಸಭೆ ನಡೆಸಿದೆ. ಅಷ್ಟೂ ಸಭೆಗಳಲ್ಲೂ ‘ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ, ಬೇಕಿದ್ದರೆ ಮಾರ್ಪಾಡು ಮಾಡುತ್ತೇವೆ’ ಎಂಬ ತನ್ನ ನಿಲುವಿನಿಂದ ಒಂದಿಂಚೂ ಹಿಂದೆ ಸರಿಯಲಿಲ್ಲ. ಹೀಗೆ ಹಠದಿಂದ ರೈತರ ವಿರುದ್ಧ ವಿಜಯ ಸಾಧಿಸಬಹುದು ಎಂದು ಕೊಂಡಿದ್ದ ಕೇಂದ್ರ ಸರ್ಕಾರದ ಯೋಚನೆ ತಲೆಕೆಳಗಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಮ್ಮೆ ಅನೌಪಚಾರಿಕವಾದ ಮಾತುಕತೆ ನಡೆಸಿದರು. ಅವರಿಂದಲೂ ರೈತರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಾದ ಬಳಿಕ ಗಣರಾಜ್ಯೋತ್ಸವದ ದಿನ ‘ತನ್ನದೇ ಜನಗಳನ್ನು’ ಬಿಟ್ಟು ಹೋರಾಟದ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಬಿಜೆಪಿ ಮತ್ತು ಆರ್ಎಸ್ಎಸ್ ಮೂಲದ ದೀಪ್ ಸಿಧು ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸುವ ಮೂಲಕ ಹೋರಾಟ ಹಳಿ ತಪ್ಪುವಂತೆ ಮಾಡಿದ. ಆತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆಯೇ ಈ ಕೃತ್ಯ ಮಾಡಿದ ಎಂಬುದಕ್ಕೆ ಹಲವು ಕುರುಹುಗಳು ಸಿಕ್ಕವು. ಇದಕ್ಕೆ ಆತನ ವಿರುದ್ಧ ಎಫ್ ಐ ಆರ್ ದಾಖಲಿಸಲು ಮತ್ತೀಗ ಆತನನ್ನು ಹುಡುಕಲು ದೆಹಲಿ ಪೊಲೀಸರು ತೋರುತ್ತಿರುವ ದಿವ್ಯ ನಿರ್ಲಕ್ಷ್ಯವೇ ಒಳ್ಳೆಯ ಉದಾಹರಣೆಗಳು.
ಹೀಗೆ ದಬ್ಬಾಳಿಕೆಯ ಬಳಿಕ ದಿಕ್ಕು ತಪ್ಪಿಸುವ ಕೇಂದ್ರ ಸರ್ಕಾರದ ಅಥವಾ ಬಿಜೆಪಿ ನಾಯಕರ ಹುನ್ನಾರವೂ ವಿಫಲವಾಯಿತು. ಇದಾದ ಮೇಲೆ ದೆಹಲಿ ಗಡಿಗಳಲ್ಲಿ ಡಿಸೆಂಬರ್ ಮತ್ತು ಜನವರಿಯ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಿಸಲಾಯಿತು. ಮಾಧ್ಯಮಗಳ (ಗೋದಿ ಮೀಡಿಯಾಗಳ) ಮುಖಾಂತರ ಬಿಜೆಪಿ ಕಾರ್ಯಕರ್ತರನ್ನು ಸ್ಥಳೀಯರು ಎಂದು ಬಿಂಬಿಸಲು ಇನ್ನಿಲ್ಲದ ಸಾಹಸಪಟ್ಟರೂ ಸತ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಅಲ್ಲಿಗೆ, ‘ಹೇಗಾದರೂ ಮಾಡಿ ರೈತರನ್ನು ಪ್ರತಿಭಟನಾ ಸ್ಥಳದಿಂದ ಖಾಲಿ ಮಾಡಿಸಬೇಕು’ ಎಂಬ ಕೇಂದ್ರ ಸರ್ಕಾರದ ಕುತರ್ಕ ಮಕಾಡೆ ಮಲಗಿತು.
ಆಗ ಹೊಳೆದದ್ದೇ ಈ ‘ಮೊಳೆ ಐಡಿಯಾ’. ವಾಸ್ತವದಲ್ಲಿ ಪ್ರತಿಭಟನಾನಿರತ ರೈತರು ಮತ್ತೆ ದೆಹಲಿ ಪ್ರವೇಶಿಸುವ ಯಾವ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಸಂಸತ್ ಭವನಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನೂ ಹಿಂತೆಗೆದುಕೊಂಡಿದ್ದರು. ‘ಅಕ್ಟೋಬರ್ ವರೆಗೂ ಶಾಂತವಾಗಿ ಪ್ರತಿಭಟನೆ ನಡೆಸುತ್ತೇವೆ. ಆವರೆಗೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಗಳನ್ನು ಸೇರಿಸಿ ಮೆರವಣಿಗೆ ಮಾಡುತ್ತೇವೆ’ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ. ಆದರೂ ರೈತರು ದೆಹಲಿಗೆ ಬಂದು ಬಿಡುತ್ತಾರೆ ಎಂದು ಅಂದಾಜು ಮಾಡಿಕೊಂಡು ದೆಹಲಿ ಪ್ರವೇಶಿಸುವ ಗಾಜಿಪುರ್ ಗಡಿಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 24ನ್ನು ಬಂದ್ ಮಾಡಿದೆ. ರಸ್ತೆಗೆ ಮೊಳೆ ಹೊಡೆಯಲಾಗಿದೆ.
ಬಂದ್ ಮಾಡುವುದು ಎಂದರೆ ಹಾಗೀಗಲ್ಲ. ಭಾರತ – ಪಾಕಿಸ್ತಾನದ ನಡುವೆ ಬೇಲಿ ನಿರ್ಮಿಸುವಂತೆ ನಾಲ್ಕೈದು ಸುತ್ತಿನ ಬ್ಯಾರಿಕೇಡ್ ಹಾಕಲಾಗಿದೆ. ಬ್ಯಾರಿಕೇಡ್ ಹತ್ತಿ ಬರಬಹುದೆಂದು ಅದರ ಮೇಲೆ ಮುಳ್ಳು ತಂತಿಯ ಬೇಲೆ ಹಾಕಲಾಗಿದೆ. ಇಷ್ಟೂ ಸಾಲದೆಂಬಂತೆ ದೊಡ್ಡ ದೊಡ್ಡ ಸಿಮೆಂಟ್ ಬ್ರಿಕ್ಸ್ ಗಳನ್ನು ತಂದು ಮಧ್ಯೆ ಕಾಂಕ್ರೀಟ್ ಸುರಿದು ಗೋಡೆ ನಿರ್ಮಿಸಲಾಗಿದೆ. ಇದಾದ ಮೇಲೆ ಮತ್ತೆ ಬ್ಯಾರಿಕೇಡ್ ಭದ್ರತೆ ಹಾಕಲಾಗಿದೆ. ಇದರ ನಡುವೆ ರಸ್ತೆಗಳಿಗೆ ಮೊಳೆ ಹೊಡೆಯಲಾಗಿದೆ. ರೈತರ ಟ್ರ್ಯಾಕ್ಟರ್ ಟೈರ್ ಗಳನ್ನು ಪಂಚರ್ ಮಾಡಲು ರಸ್ತೆಯಲ್ಲಿ ಮೊಳೆ ಹೊಡೆಯಲಾಗಿದೆ. ಇಷ್ಟೆಲ್ಲಾ ಮಾಡಿ ಕೇಂದ್ರ ಸರ್ಕಾರ ಸಾಧಿಸಿರುವುದೇನು ಗೊತ್ತಾ?
ರೈತರ ಪ್ರತಿಭಟನೆಗೆ ಬೆದರಿರುವ ಕೇಂದ್ರ ಸರ್ಕಾರ ಈಗ ರಸ್ತೆಗೆ ಹಾಕಲಾಗಿದ್ದ ಮೊಳೆ ತೆಗೆಯಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಗಾಜಿಪುರ ಗಡಿಯಲ್ಲಿ ರಸ್ತೆಗೆ ಹೊಡೆದಿದ್ದ ಮೊಳೆಗಳನ್ನು ದೆಹಲಿ ಪೊಲೀಸರು ತೆಗೆದಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಭಾರೀ ಮುಖಭಂಗಕ್ಕೆ ಒಳಗಾಗಿದೆ. ರಾಹುಲ್ ಗಾಂಧಿ ಅವರು ಹೇಳಿದಂತೆ ಕೇಂದ್ರ ಸರ್ಕಾರವೇ ಸೋಲಬೇಕೆಂಬ ಸುಳಿವು ನಿಶ್ಚಯವಾಗಿ ಹೊರಬಿದ್ದಂತಾಗಿದೆ.