ಭಾರತೀಯ ಪೊಲೀಸ್ ಸೇವೆ (ಕೇಡರ್) ನಿಯಮಗಳು 1954 ರ ನಿಯಮ 6 (1) ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ರಾಜ್ಯಗಳ ಕಾಳಜಿಯನ್ನು ಮತ್ತು ದೃಷ್ಟಿಕೋನಗಳನ್ನು ಕಡೆಗಣಿಸಿ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಡೆಪ್ಯುಟೇಶನ್ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ನಿರ್ಧಾರವನ್ನು ಅತಿಕ್ರಮಿಸಬಹುದೇ ಮತ್ತು ಅನಿಯಂತ್ರಿತ ಅಧಿಕಾರ ಹೊಂದಬಹುದೇ? ಎಂದು ಪ್ರಶ್ನಿಸಲಾಗಿದೆ.
ಭಾರತದ ಸಂವಿಧಾನ ಮತ್ತು ಸಾರ್ವಜನಿಕ ನೀತಿಗಳ ಉಲ್ಲಂಘನೆ ಮಾಡುತ್ತದೆ ಎನ್ನುವ ಕಾರಣ ನೀಡಿ ನಿಯಮ 6 (1) ಅನ್ನು ತೆಗೆದುಹಾಕಬೇಕಾಗಿ ಪಶ್ಚಿಮ ಬಂಗಾಳ ಮೂಲದ ಸುಪ್ರೀಂ ಕೋರ್ಟ್ ವಕೀಲ ಅಬು ಸೊಹೇಲ್ ಅವರು ಮನವಿ ಮಾಡಿದ್ದಾರೆ.
‘ಕೇಡರ್ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಬೇರೊಂದು ರಾಜ್ಯದ ಸರ್ಕಾರದ ಅಡಿಯಲ್ಲಿ ಅಥವಾ ಕಂಪೆನಿ, ಸಂಘ ಅಥವಾ ವ್ಯಕ್ತಿಗಳ ಸಂಘಟನೆಯಡಿಯಲ್ಲಿ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿ ಸೇವೆಗೆ ನಿಯೋಜಿಸಬಹುದು’ ಎನ್ನುತ್ತದೆ ನಿಯಮ 6 (1). ಯಾವುದೇ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ, ಈ ವಿಷಯವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಮತ್ತು ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಶಾಸನವನ್ನು ರೂಪಿಸಿದ ಸಂದರ್ಭದಲ್ಲಿ ಇದರ ಉದ್ದೇಶವು ಸಂವಿಧಾನದ ರೂಪುರೇಷೆಯೊಳಗೆ ಇದ್ದಿರಬಹುದು. ಆದರೆ ಕಾಲ ಸರಿದಂತೆ ಈ ನಿಯಮದ ಅನಿಯಂತ್ರಿತ ಬಳಕೆಯಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹಲವು ಬಾರಿ ಭಿನ್ನಾಭಿಪ್ರಾಯಗಳುಂಟಾಗಿವೆ. ರಾಜ್ಯ ಸರ್ಕಾರಗಳ ಆಡಳಿತದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಈ ಕಾನೂನು ತೊಡಕನ್ನುಂಟು ಮಾಡಿವೆ.
ಕೇಂದ್ರ ಸರ್ಕಾರವು ಅನಿಯಂತ್ರಿತವಾಗಿ ಈ ಕಾನೂನನ್ನು ಬಳಸುವುದರಿಂದ ಅದರ ನೇರ ಪರಿಣಾಮವು ರಾಜ್ಯಗಳ ಮೇಲಾಗುತ್ತಿದೆ ಎಂದು ಅರ್ಜಿದಾರರು ಪ್ರತಿಪಾದಿಸುತ್ತಾರೆ. ಈ ಕಾನೂನಿನಿಂದಾಗಿ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಅಂತಿಮವಾಗಿ ಇದು ನಮ್ಮ ಸಂವಿಧಾನದ ಫೆಡರಲ್ ವ್ಯವಸ್ಥೆಗೆ ಬೆದರಿಕೆಯನ್ನು ಒಡ್ಡುತ್ತದೆ ಎನ್ನುತ್ತಾರೆ ಅರ್ಜಿದಾರರು.
2001ರಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನಿಂದ ಮೂವರು ಐಪಿಎಸ್ ಅಧಿಕಾರಿಗಳು ಹಿಂದಕ್ಕೆ ಕರೆಯಲು ನಿರ್ಧರಿಸಿದಾಗ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ನಿಯಮವನ್ನು ಮುಂದುವರಿಸಿದರೆ ಇಂತಹ ಮತ್ತಷ್ಟು ಘಟನೆಗಳು ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅಬು ಸೊಹೇಲ್.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಾಮರಸ್ಯ ಇರಬೇಕಾದದ್ದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯ. ಆದರೆ ಈ ನ್ಯಾಯಸಮ್ಮತವಲ್ಲದ ಈ ಕಾನೂನಿನಿಂದಾಗಿ ಸಾಮರಸ್ಯವು ಕೆಡುವ ಅಪಾಯವಿದೆ ಎಂದು ವಾದಿಸುವ ಅರ್ಜಿದಾರರು ಆರ್ಟಿಕಲ್ 21 ರ ಅಡಿಯಲ್ಲಿ ಬರುವ ಘನತೆಯಿಂದ ಬದುಕುವ ಹಕ್ಕನ್ನು ಈ ನಿಯಮ ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಅಲ್ಲದೆ, ನಿಯಮ 5 (1) ಮತ್ತು ನಿಯಮ 6 (1) ನಡುವೆ ದ್ವಂದ್ವತೆ ಇದೆ ಎಂದು ಸಹ ಅರ್ಜಿಯಲ್ಲಿ ವಿವರಿಸಲಾಗಿದೆ. ನಿಯಮ 5 (1)ರ ಪ್ರಕಾರ ಕೇಡರ್ ಅಧಿಕಾರಿಗಳ ಹಂಚಿಕೆಯನ್ನು ಕೇಂದ್ರ ಸರ್ಕಾರವು ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಮಾಡಬೇಕು ಎಂದು ಹೇಳುತ್ತದೆ.
ನಿಯಮ 5 (1) ರ ಪ್ರಕಾರ, ಒಂದು ರಾಜ್ಯಕ್ಕೆ ಅಧಿಕಾರಿಗಳನ್ನು ಹಂಚಿಕೆ ಮಾಡಲು ಅಥವಾ ಒಂದು ಕೇಡರ್ನಿಂದ ಇನ್ನೊಂದಕ್ಕೆ ವರ್ಗಾಯಿಸಲು, ರಾಜ್ಯ ಸರ್ಕಾರದ ಒಪ್ಪಿಗೆಯ ಅಗತ್ಯವಿದೆ.
ಆದರೆ ನಿಯಮ 6 (1) ರ ಪ್ರಕಾರ, ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವುಂಟಾದರೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಾರಿಗೆ ತರಲು ರಾಜ್ಯ ಸರ್ಕಾರವು ಬದ್ಧವಾಗಿರಬೇಕಾಗುತ್ತದೆ.
“1954ರ ಆಕ್ಷೇಪಾರ್ಹ ನಿಯಮವು ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವವರನ್ನು ಅಸಮಾನತೆಯಿಂದ ಕಾಣುತ್ತದೆ” ಎಂದೂ ಅರ್ಜಿದಾರರು ವಾದಿಸುತ್ತಾರೆ.