ಹಿಂದೆಂದೂ ಕಂಡು ಕಾಣದಂತಹ ಬಜೆಟ್ ಮಂಡಿಸುವುದಾಗಿ ಹೇಳಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ಲೆಕ್ಕದಲ್ಲಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಜನಸಾಮಾನ್ಯರ ಮೇಲೆ ಹೊಸದಾಗಿ ತೆರಿಗೆಯನ್ನು ಹೇರಿಲ್ಲ, ಈ ಹಿಂದೆ ಹೇರಿದ್ದ ತೆರಿಗೆಯನ್ನು ತಗ್ಗಿಸಿಲ್ಲ. ಅಷ್ಟರ ಮಟ್ಟಿಗೆ ಇದು ತಟಸ್ಥ ತೆರಿಗೆಯ ಬಜೆಟ್! ಆದರೆ, ಒಂದು ಕ್ಷಣ ಇರಿ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರಸ್ತಾಪಿಸಿ, ವಿವರವಾಗಿ ಓದದೇ ಇದ್ದ ಜನಸಾಮಾನ್ಯರ ಮೇಲೆ ಭಾರಿ ಹೊರೆ ಬೀಳುವ ತೆರಿಗೆಯೊಂದಿದೆ. ಅದೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಹೊಸ ತೆರಿಗೆ.
ಪೆಟ್ರೋಲ್ ಮೇಲೇ 2.5 ರುಪಾಯಿ ಮತ್ತು ಡೀಸೇಲ್ ಮೇಲೆ 4 ರುಪಾಯಿ ಕೃಷಿಮೂಲಭೂತ ಸೌಲಭ್ಯಗಳ ಸುಂಕವನ್ನು ವಿಧಿಸಲಾಗಿದೆ. ಇದು ಈಗಾಗಲೇ ಶತಕದ ಗಡಿ ದಾಟಲು ಹಾತೊರೆಯುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಶತಕದ ಗುರಿ ಸಾಧನೆಗೆ ನೆರವಾಗಲಿದೆ. ಈಗಾಗಲೇ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ಹೊರೆ ಹೊರುತ್ತಿರುವ ದೇಶವಾಗಿ ಹೊರ ಹೊಮ್ಮಿರುವ ಭಾರತವು, ಈ ಹೊಸ ತೆರಿಗೆ ಪ್ರಸ್ತಾಪದೊಂದಿಗೆ ಮೂಲ ದರ ಮತ್ತು ತೆರಿಗೆ ಹೊರೆಯ ನಡುವಿನ ಗರಿಷ್ಠ ಅಂತರವನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಿರ್ಮಲಾ ಸೀತಾರಾಮನ್ ಅವರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಹೇರಿಕೆಯ ಕಳಕಂವನ್ನು ತಾವು ಹೊರದೇ ಕೃಷಿ ವಲಯದ ಮೇಲೆ ಹೇರಿಬಿಟ್ಟಿದ್ದಾರೆ. ಅಂದರೆ, ಪರೋಕ್ಷವಾಗಿ ರೈತರ ಹೆಗಲಿಗೆ ತೆರಿಗೆ ಹೊರೆಯ ಕಳಂಕವನ್ನು ವರ್ಗಾಹಿಸಿದ್ದಾರೆ.
ಹಿಂದೆಂದೂ ಕಂಡುಕೇಳರಿಯದ ಬಜೆಟ್ ಎಂಬುದರ ಅರ್ಥ ಎಲ್ಲಿದೆ ಎಂದರೆ, ಇದುವರೆಗೆ ಸರ್ಕಾರಿ ಕಂಪನಿಗಳಲ್ಲಿನ ಬಂಡವಾಳವನ್ನು ಹಿಂತೆಗೆಯಲಾಗುತ್ತಿತ್ತು. ಇಡೀ ಕಂಪನಿಯನ್ನೇ ಮಾರಾಟ ಮಾಡದೇ ಅಲ್ಪಭಾಗದ ಪಾಲನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು ನೇರವಾಗಿ ಸರ್ಕಾರಿ ಬ್ಯಾಂಕುಗಳು ಮತ್ತು ಕಂಪನಿಗಳನ್ನು ಖಾಸಗಿ ಕರಣ ಮಾಡುವುದಾಗಿ ಘೋಷಿಸಿದ್ದಾರೆ.2021-22 ರ ಕೇಂದ್ರ ಬಜೆಟ್ ಮುಖ್ಯಾಂಶಗಳು
ಈ ಪೈಕಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುತ್ತದೆ. ಮತ್ತು ದೇಶದ ಹೆಮ್ಮೆಯ ಪವನ್ ಹಂಸ ವಾಯುಯಾನ ಸೇವಾ ಕಂಪನಿಯನ್ನು ಮಾರಾಟ ಮಾಡಲು ಪ್ರಸ್ತಾಪಿಸಲಾಗಿದೆ. ಒಂದು ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಮಾರಾಟ ಮಾಡಲಾಗುತ್ತದೆ. ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾಪಕ್ಕೆ ಹಣಕಾಸು ಮಾರುಕಟ್ಟೆ ವಲಯದಿಂದ ಉತ್ತೇಜನಾಕಾರಿ ಪ್ರೋತ್ಸಾಹ ವ್ಯಕ್ತವಾಗಿದ್ದು, ಷೇರುಪೇಟೆ ಸೂಚ್ಯಂಕಗಳು ತ್ವರಿತವಾಗಿ ಜಿಗಿದಿವೆ, ಮುಖ್ಯವಾಗಿ ಬ್ಯಾಂಕ್ ನಿಫ್ಟಿ ಸೂಚ್ಯಂಕವು ಶೇ.5ರಷ್ಟು ಜಿಗಿತ ದಾಖಲಿಸಿದೆ.
ಜನಸಾಮಾನ್ಯರಿಗೆ ಬ್ಯಾಂಕುಗಳ ಸೇವೆ ಲಭ್ಯ ಆಗಬೇಕೆಂಬ ಕಾರಣಕ್ಕಾಗಿ 1969, ಜುಲೈ 29ರಲ್ಲಿ ಜಾರಿಗೆ ತಂದಿದ್ದ ಬ್ಯಾಂಕುಗಳ ರಾಷ್ಟ್ರೀಕರಣ ನೀತಿಗೆ ವಿರುದ್ಧವಾಗಿ ಮೋದಿ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಬ್ಯಾಂಕುಗಳ ಖಾಸಗೀಕರಣ ಆಗುವ ಸಾಧ್ಯತೆ ಇದೆ. ಅಂದರೆ, ಸರ್ಕಾರಿ ಬ್ಯಾಂಕುಗಳನ್ನು ಖರೀದಿಸುವ ಕಾರ್ಪೊರೆಟ್ ಕುಳಗಳು ಯಾರು ಎಂಬುದು 5 ಟ್ರಿಲಿಯನ್ ಡಾಲರ್ ಪ್ರಶ್ನೆ!
ಇದುವರೆಗೂ ತಾನು ವಿರೋಧ ಮಾಡಿಕೊಂಡು ಬಂದಿದ್ದ ಬಿಜೆಪಿಯು ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇ.49ರಿಂದ ಶೇ.74ಕ್ಕೆ ಏರಿಸಲು ನಿರ್ಧರಿಸಿದೆ. ಅಲ್ಲದೇ ಬಂಡವಾಳ ಹೂಡಿಕೆಗೆ ಹಲವು ನಿಯಮಗಳ ಸಡಿಲಿಕೆ ಮಾಡಲಾಗಿದೆ. ದೇಶೀಯ ಮುಖ್ಯಸ್ಥರೊಂದಿಗೆ ಇಡೀ ಕಂಪನಿಯ ಒಡೆತನವನ್ನು ವಿದೇಶಿಯರು ಹೊಂದಲು ಸಾಧ್ಯವಾಗಲಿದೆ. ಇದು ಪರೋಕ್ಷವಾಗಿ ಭಾರತೀಯ ಜೀವವಿಮಾ ನಿಗಮಕ್ಕೆ ಪ್ರಬಲ ಸ್ಪರ್ಧಿಗಳನ್ನು ತರುವ ಮತ್ತು ಕಾಲಕ್ರಮೇಣ, ಎಲ್ಐಸಿಯನ್ನು ಮತ್ತೊಂದು ಬಿಎಸ್ಎನ್ಎಲ್ ಕಂಪನಿಯನ್ನಾಗಿ ಮಾಡುವ ಪ್ರಯತ್ನವೇ ಎಂಬ ಪ್ರಶ್ನೆ ಏಳುತ್ತಿದೆ.ಕೇಂದ್ರ ಬಜೆಟ್ 2020ರ ಮುಖ್ಯಾಂಶಗಳು
ಬಹುತೇಕ ಎಲ್ಲರೂ ಕೋವಿಡ್ ಸುಂಕ ಹೇರಲಾಗುತ್ತದೆ ಎಂದೇ ನಿರೀಕ್ಷಿಸಿದ್ದರು. ಅಚ್ಚರಿಯೆಂಬಂತೆ, ಕೋವಿಡ್ ಸುಂಕ ಹೇರಿಲ್ಲ. ಅಲ್ಲದೇ ಕಾರ್ಪೊರೆಟ್ ವಲಯಗಳ ಮೇಲೆ ಹೊಸದಾಗಿ ಯಾವುದೇ ತೆರಿಗೆ ಹೇರಿಲ್ಲದ ಕಾರಣ, ಹಣಕಾಸು ಮಾರುಕಟ್ಟೆಯಷ್ಟೇ ಅಲ್ಲ ಇಡೀ ಕಾರ್ಪೊರೆಟ್ ವಲಯವು ಬಜೆಟ್ ಅನ್ನು ಹಾಡಿಹೊಗಳುತ್ತಿದೆ. ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಮಾತ್ರ ಹೇರಲಾಗಿದೆ. ಇದು ನೇರವಾಗಿ ಜನಸಾಮಾನ್ಯರ ಜೇಬಿಗೆ ಹೊರೆ ಆಗುವಂತಾದ್ದು.
ಪ್ರಸಕ್ತ ವಿತ್ತೀಯ ವರ್ಷದ ವಿತ್ತೀಯ ಕೊರತೆಯು ಶೇ.9.5ರಷ್ಟು ದಾಟಿದೆ. ಅದು ಅನಿವಾರ್ಯವಾಗಿತ್ತು ಕೂಡಾ. 2021-22ನೇ ಸಾಲಿನ ವಿತ್ತೀಯ ಕೊರತೆ ಪ್ರಮಾಣದ ಮಿತಿಯನ್ನು ಶೇ.6.5ಕ್ಕೆ ನಿಗದಿ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ವಿತ್ತೀಯ ಕೊರತೆ ಮಿತಿಯನ್ನು ಶೇ.4.5ಕ್ಕೆ ತಗ್ಗಿಸುವ ಗುರಿಯನ್ನು ಘೋಷಿಸಲಾಗಿದೆ. ಆದರೆ, 2021-22 ಸಾಲಿನಲ್ಲಿ ವಿತ್ತೀಯ ಕೊರತೆ ಮಿತಿ ಗುರಿ ಶೇ.6.5ರಷ್ಟನ್ನು ಸಾಧಿಸುವುದು ಹೇಗೆ ಸಾಧ್ಯ ಎಂಬುದರ ಬಗ್ಗೆ ಹಲವು ಅನುಮಾನಗಳಿವೆ.
ವಿತ್ತೀಯ ಕೊರತೆ ತುಂಬಿಕೊಳ್ಳಲು ಸರ್ಕಾರವು ಮಾರುಕಟ್ಚೆಯಿಂದ 12 ಲಕ್ಷ ಕೋಟಿ ಸಾಲ ತರುವ ಪ್ರಸ್ತಾಪ ಮಾಡಿದೆ. ಅಂದರೆ, ಸಾಲದ ಹೊರೆಯು ಮತ್ತಷ್ಟು ಹೆಚ್ಚಾಗುತ್ತಿದೆ. 2021-22ರಲ್ಲಿ ಉದ್ದೇಶಿತ ಬಂಡವಾಳ ವೆಚ್ಚ34.5 ಲಕ್ಷ ಕೋಟಿ ರುಪಾಯಿಗಳ ಪೈಕಿ 12 ಲಕ್ಷ ಕೋಟಿ ರುಪಾಯಿಗಳನ್ನು ಸಾಲದ ಮೂಲಕವೇ ಸರಿದೂಗಿಸಲಾಗುತ್ತಿದೆ. ಆದಾಯ ಮತ್ತು ಸಾಲದ ಅನುಪಾತವನ್ನು ಗಮನಿಸಿದರೆ, ಇದು ದೇಶದ ಆರ್ಥಿಕತೆಯನ್ನು ಆರೋಗ್ಯಕರವಾಗಿ ಇಡುವ ಮುನ್ಸೂಚನೆಯಂತೂ ಅಲ್ಲ.ಕೇಂದ್ರ ಬಜೆಟ್: ನೀವು ಅರಿಯಲೇಬೇಕಾದ 15 ಅಚ್ಚರಿಯ ವಿಚಾರಗಳು
ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ. ಮುಖ್ಯವಾಗಿ ಸದ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಿಗೆ ಸಿಂಹಪಾಲು ನೀಡಲಾಗಿದೆ. ತಮಿಳುನಾಡು, ಕೇರಳ, ಪಶ್ಚಿಮಬಂಗಾಳ, ಅಸ್ಸಾಂ ಈ ರಾಜ್ಯಗಳಿಗೆ ಹೆಚ್ಚಿನ ಹೆದ್ದಾರಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದು ಲಕ್ಷ ಕೋಟಿಗಳ ಲೆಕ್ಕದಲ್ಲಿ ಇದೆ. ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಈ ಘೋಷಿತ ಯೋಜನೆಗಳು 2022-23 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಲಿವೆ. ಅಂದರೆ, ಇದು ಚುನಾವಣಾ ಉದ್ದೇಶಕ್ಕಾಗಿಯೇ ಘೋಷಿಸಿರುವ ಯೋಜನೆಗಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಭಾರತೀಯ ಆಹಾರ ನಿಗಮವು(ಎಫ್ಸಿಐ) ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯಿಂದ ಸಾಲ ಪಡೆಯುವುದನ್ನು ಸ್ಥಗಿತಗೊಳಿಸಲಾಗಿದೆ. ಅದಕ್ಕಾಗಿ ಬಜೆಟ್ ನಲ್ಲಿ ಅಲ್ಪ ಮೊತ್ತದ ಅನುದಾನ ಒದಗಿಸಲಾಗಿದೆ. ಆದರೆ, ಇದು ಭಾರತ ಆಹಾರ ನಿಗಮವನ್ನು ಮುಚ್ಚಲಿಕ್ಕೆ ಹಾಕಿರುವ ಮೊದಲ ಮೆಟ್ಟಿಲಂತೆ ಕಾಣುತ್ತಿದೆ. ಇಡೀ ರೈತರ ಹೋರಾಟದ ಮೂಲ ಕಾರಣವೇ ಮೋದಿ ಸರ್ಕಾರವು ಎಫ್ಸಿಐ ಮುಚ್ಚಲು ಮತ್ತು ಆಹಾರ ಸಂಗ್ರಹಣೆಯನ್ನು ಖಾಸಗಿಯವರಿಗೆ ನೀಡಲು ಅನುವು ಮಾಡಿಕೊಡಲು ಮುಂದಾಗಿರುವುದು ಮತ್ತು ಅದಕ್ಕಾಗಿ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿರುವುದೇ ಆಗಿದೆ. ಹೀಗಾಗಿ ರೈತರ ಹೋರಾಟದ ನಡುವೆಯೇ ಎಫ್ಸಿಐ ಮುಚ್ಚುವುದಕ್ಕೆ ಮೊದಲ ಅಡಿಯನ್ನು ಸರ್ಕಾರ ಇಟ್ಟಿದೆ.ಬಜೆಟ್ ಅಧಿವೇಶನ: ಸತತ ಎರಡನೇ ಬಾರಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸುತ್ತಿರುವ ಪ್ರತಿಪಕ್ಷಗಳು
ರೈತರ ಹೋರಾಟದ ಬಗ್ಗೆ ಏನನ್ನೂ ಇದುವರೆಗೆ ಮಾತನಾಡದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸರ್ಕಾರ ಹೇಗೆ ಹಿಂದಿನ ಸರ್ಕಾರಕ್ಕಿಂತ ಗೋದಿ, ಅಕ್ಕಿ, ಸೇರಿದಂತೆ ಆಹಾರ ಧಾನ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಿದೆ ಎಂಬುದನ್ನು ವಿವರಿಸಲು ಬಜೆಟ್ ಭಾಷಣದ ವೇಳೆ ಸಾಕಷ್ಟು ಸಮಯ ‘ವೆಚ್ಚ’ ಮಾಡಿದ್ದಾರೆ. ಆ ವಿಷಯವನ್ನು ಹೇಳುವಾಗ ಅವರ ಮಾತಿನ ಧಾಟಿಯೇ ಬದಲಾಗಿತ್ತು. ಆ ಹೊತ್ತಿನಲ್ಲಿ ಪ್ರಧಾನಿ ಮೋದಿ ‘ಹೆಚ್ಚು ಬಲ’ದಿಂದಲೇ ಮೇಜು ಕುಟ್ಟುತ್ತಿದ್ದುದು ಕಂಡು ಬಂತು.
ಕೃಷಿಕರಿಗೆ ನೀಡಿರುವ ಅನುದಾನ ಕುರಿತಂತೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡುವುದು ರೈತರು ಮತ್ತು ಪ್ರತಿಪಕ್ಷಗಳಿಗೆ ಸೇರಿದ್ದು.
ಆದರೆ, ಮೋದಿ ಸರ್ಕಾರ ಇದುವರೆಗೆ ಯಾರ ಪರವಾಗಿ ನೀತಿ ನಿಯಮಗಳನ್ನು ರೂಪಿಸಿತ್ತೊ ಆ ವರ್ಗಕ್ಕೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಹೆಚ್ಚು ಆಪ್ತವಾಗಿದೆ. ಅದು ಷೇರುಮಾರುಕಟ್ಟೆಯ ಸೂಚ್ಯಂಕಗಳು ಜಿಗಿಯುವ ಮೂಲಕ ಅಭಿವ್ಯಕ್ತಗೊಂಡಿದೆ. ಕಾರ್ಪೊರೆಟ್ ಕುಳಗಳು ಸಂಭ್ರಮಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಹೊರೆಯನ್ನು ನೆನೆದು ಜೇಬು ಮುಟ್ಟಿನೋಡಿಕೊಳ್ಳುತ್ತಿದ್ದಾರೆ.