ಕಳೆದ ಡಿಸೆಂಬರ್ನಲ್ಲಿ ಗುಜರಾತಿನ ಭರತ್ ಜಾದವ್ ಎಂಬ 20 ವರ್ಷದ ಯುವಕನ ಮೇಲೆ ರಜಪೂತರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸುತ್ತದೆ. ಕಾರಣ ಆತನ ಸರ್ನೇಮ್ ರಜಪೂತರಂತಿತ್ತು, ಮತ್ತು ದಲಿತನಾಗಿದ್ದುಕೊಂಡೂ ತನ್ನ ಸಹೋದ್ಯೋಗಿ ಹರ್ಷದ್ ರಜಪೂತ್ ಎಂಬ ರಜಪೂತರ ಯುವಕನನ್ನು ತನ್ನ ‘ಸಹೋದರ’ನಂತೆ ಅಂದಿದ್ದ.
ಹತ್ರಾಸಿನಲ್ಲಿ 19 ವರ್ಷ ವಯಸ್ಸಿನ ಹುಡುಗಿಯ ಮೇಲೆ ಸಪ್ಟೆಂಬರ್ 14ರಂದು ಅತ್ಯಾಚಾರವಾಗುತ್ತದೆ, ಅಲ್ಲಿನ ಪೊಲೀಸರೇ ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಸಪ್ಟೆಂಬರ್20ರಂದು ಹುಡುಗಿಯ ಮನೆಯವರಿಗೂ ತಿಳಿಸದೆ ಅಂತ್ಯ ಸಂಸ್ಕಾರವನ್ನು ಪೊಲೀಸರೇ ನಿಂತು ಮಾಡಿಸುತ್ತಾರೆ.
ಜೆಎನ್ಯು ಒಳಗೆ ನುಗ್ಗಿದ ಗೂಂಡಾಗಳು ಪೊಲೀಸರೆದುರೇ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗ ಥಳಿಸುತ್ತಾರೆ, ಮಂಗಳೂರಿನ ಏರ್ಪೋರ್ಟ್ ನಲ್ಲಿ ‘ಮಾನಸಿಕ ಅಸ್ವಸ್ಥ’ ಬಾಂಬ್ ಇಡುತ್ತಾನೆ, ಆ್ಯಂಟಿ ಸಿಎಎ ಪ್ರತಿಭಟನೆಯ ಮಧ್ಯೆಯೂ ಗಲಾಟೆಯಾಗುತ್ತದೆ, ದೆಹಲಿ ಗಲಭೆಯಲ್ಲಿ ಸಾಕಷ್ಟು ಪ್ರಾಣ ಹಾನಿಯಾಗಿತ್ತದೆ, ಮಂಗಳೂರಿನ ಸಿಎಎ ವಿರೋಧಿ ಹೋರಾಟದಲ್ಲಿ ಇಬ್ಬರು ಪ್ರಾಣ ಕಳೆದುಕೊಳ್ಳುತ್ತಾರೆ, ‘ಒಂದು ಜೀವವೂ ಹೋಗಿಲ್ಲವಲ್ಲ’ ಎಂದು ಪೊಲೀಸರು ಮಾತಾಡಿಕೊಳ್ಳುತ್ತಿರುವುದು ವೈರಲ್ ಆಗುತ್ತದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶದಲ್ಲಿ ಪೊಲೀಸರ ಸಮ್ಮುಖದಲ್ಲೇ ಗೋ ಹತ್ಯೆಯ ಹೆಸರಿನಲ್ಲಿ ದಾರುಣವಾಗಿ ಮನುಷ್ಯರರನ್ನು ಕೊಲ್ಲಲಾಗುತ್ತದೆ, ಲವ್ ಜಿಹಾದ್ ನೆಪದಲ್ಲಿ ಹಲ್ಲೆ ಮಾಡಲಾಗುತ್ತದೆ, ದಲಿತರು ಮೇಲ್ವರ್ಗದ ಮಹಿಳೆಯರನ್ನು ಪ್ರೀತಿಸಿದರು ಎಂದು ಮರ್ಯಾದಾ ಹತ್ಯೆಯಾಗುತ್ತದೆ.
ಕರ್ನಾಟಕದಲ್ಲಿ, ತಮಿಳುನಾಡಿನಲ್ಲಿ, ರಾಜಸ್ತಾನದಲ್ಲಿ, ದೇಶಾದ್ಯಂತ ದಲಿತರೆಂಬ ಕಾರಣಕ್ಕೆ, ಮುಸ್ಲಿಮರೆಂಬ ಕಾರಣಕ್ಕೆ, ಸರ್ಕಾರವನ್ನು ಪ್ರಶ್ನಿಸಿದರೆಂಬ ಕಾರಣಕ್ಕೆ, ಜೈ ಶ್ರೀರಾಂ ಅನ್ನದೇ ಇದ್ದುದಕ್ಕೆ ಹಲ್ಲೆಗಳಾಗುತ್ತವೆ, ಹತ್ಯೆಯಾಗುತ್ತವೆ. ಸರಕಾರವೇ ಈ ಎಲ್ಲಾ ಹತ್ಯೆಗಳ ಹಿಂದೆ ನಿಂತು ರಕ್ಷಿಸುತ್ತಿದ್ದೆಯೇನೋ ಅನ್ನುವಂತಿರುತ್ತದೆ ಅಧಿಕಾರಿಗಳ ಮತ್ತು ಸರ್ಕಾರದ ನಡೆ.ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
ಈ ಎಲ್ಲಾ ಸಂದರ್ಭಗಳಲ್ಲೂ, ತಮ್ಮನ್ನು ತಾವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆದುಕೊಳ್ಳುವ ಬಹುತೇಕ ಮಾಧ್ಯಮಗಳು, ಅದರಲ್ಲೂ ಕ್ಷಣಾರ್ಧದಲ್ಲಿ ಕೋಟ್ಯಾಂತರ ಮಂದಿಯನ್ನು ತಲುಪಬಲ್ಲ ದೃಶ್ಯ ಮಾಧ್ಯಮಗಳು ಆರೋಪಿಗಳ ಪರ, ಸರ್ಕಾರದ ಪರ ನಿಂತವು. ಹತ್ರಾಸಿನಂತಹ ದಾರುಣ ಘಟನೆಗಳು ನಡೆದಾಗಲೂ ಸಂತ್ರಸ್ತರನ್ನೇ ತಪ್ಪಿತಸ್ಥರಂತೆ ಬಿಂಬಿಸುವ ಪ್ರಯತ್ನಗಳು ಮಾಧ್ಯಮಗಳಿಂದ ನಡೆಯಿತು. ತಮ್ಮಂತಹ ಸಹ ಪತ್ರಕರ್ತನೊಬ್ಬನನ್ನು ಯುಎಪಿಎ ಯಂತಹ ಕಠಿಣ ಕಾನೂನಿನಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಬಂಧಿಸಿದಾಗಲೂ ಮಾಧ್ಯಮದ ಮಂದಿಗೆ ಅದನ್ನು ಪ್ರತಿಭಟಿಸಬೇಕು ಅನ್ನಿಸಲಿಲ್ಲ.
ಮಂಗಳೂರಿನ ಏರ್ಪೋರ್ಟ್ ಪ್ರಕರಣದಲ್ಲೂ ಆರೋಪಿಯ ಮೇಲೆ ಪಾಕಿಸ್ತಾನದ ನಂಟು, ಐಎಸ್ಐ, ಇಂಡಿಯನ್ ಮುಜಾಹಿದೀನ್ ಎಲ್ಲಾ ಕೋನಗಳಲ್ಲೂ ಸುದ್ದಿ ‘ಕನೆಕ್ಟ್’ ಮಾಡಿ, ಅತಿರಂಜಿತ ವರದಿಗಳನ್ನು ನೀಡಿ, ಇಡೀ ಕರ್ನಾಟಕದ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೊನೆಗೆ ಆತ ಹಿಂದೂ ಎಂದು ಗೊತ್ತಾದಾಗ, ಅದರಲ್ಲೂ ಬ್ರಾಹ್ಮಣ ಎಂದು ಗೊತ್ತಾದಾಗ ‘ಮಾನಸಿಕ ಅಸ್ವಸ್ಥ’ ಎಂಬ ಎರಡು ಪದಗಳ ಸುದ್ದಿ ಪ್ರಸಾರ ಮಾಡಿ ಸುಮ್ಮನಾದವು.
“ತುಸು ಬಗ್ಗಿರಿ ಅಂದಾಗ ಮಾಧ್ಯಮಗಳು ತೆವಳಿದವು” ಎನ್ನುವ ಮಾತನ್ನು ಅಡ್ವಾಣಿಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇಳಿದ್ದರು ಅನ್ನಲಾಗುತ್ತಿದೆ. ಪ್ರಸ್ತುತ ಮಾಧ್ಯಮಗಳು ಆ ಮಾತನ್ನು ಅಕ್ಷರಶಃ ಪಾಲಿಸುತ್ತಿದೆ. ‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗ ಕರೆ ಕೊಟ್ಟದ್ದು ಮಾಧ್ಯಮಗಳಿಗೆ ತಪ್ಪು ಅನ್ನಿಸುವುದಿಲ್ಲ, ಅದರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವುದಿಲ್ಲ.
ಆದರೆ ರೈತರ ಪ್ರತಿಭಟನೆ, ಆಕ್ರೋಶ, ಬೇಡಿಕೆಗಳು ಮಾತ್ರ ನಮ್ಮ ಮಾಧ್ಯಮಗಳಿಗೆ ಭಯೋತ್ಪಾದನೆಯಂತೆ ತೋರುತ್ತದೆ. ಸಿಖ್ಖರ ಧ್ವಜ ಖಾಲಿಸ್ತಾನದ ಧ್ವಜದಂತೆ ಕಾಣುತ್ತದೆ. ಮಾಧ್ಯಮಗಳು ಯಾವ ಮುಲಾಜೂ ಇಲ್ಲದೆ, ಕಾನೂನಿನ ಕನಿಷ್ಠ ಭಯವೂ ಇಲ್ಲದೆ ಎಲ್ಲಾ ರೈತರನ್ನು ಉಗ್ರಗಾಮಿಗಳು ಎನ್ನುತ್ತದೆ. ಅದರಲ್ಲೂ ರೈತರ ಎರಡು ತಿಂಗಳುಗಳ ಪ್ರತಿಭಟನೆಯ ಬಗ್ಗೆ ಮಾತೇ ಆಡದ ಮಾಧ್ಯಮಗಳು ಈಗ ರೈತರು ಹಿಂಸಾ ಪ್ರಿಯರು, ಹಿಂಸೆಯ ಮಾರ್ಗವನ್ನು ಆಯ್ದುಕೊಂಡಿದ್ದಾರೆ ಎಂದು ಪದೇ ಪದೇ ಕಿರುಚಾಡುತ್ತಿವೆ. ತಾವು ಊಳಿಗರಾಗಿರುವ ಸಂಘಟನೆಯ ಕಛೇರಿಯಲ್ಲಿ ಐವತ್ತು ಚಿಲ್ಲರೆ ವರ್ಷಗಳ ಕಾಲ ರಾಷ್ಟ್ರ ಧ್ವಜ ಹಾರಿಸದೇ ಇದ್ದುದನ್ನು ಪ್ರಶ್ನಿಸದ ಮಾಧ್ಯಮಗಳು ಈಗ ಧ್ವಜದ ಅಸ್ಮಿತೆಯ ಬಗ್ಗೆ ಪ್ರವಚನ ನೀಡುವುದು ಹಿಪಾಕ್ರಸಿಯ ಕೊನೆಯ ಹಂತ