‘ಕೊರೊನಾ ವಿಚಾರವಾಗಿ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಕೇವಲ ನನ್ನ ನಿರ್ಧಾರವಲ್ಲ. ಇದು ರಾಜ್ಯದ ವಿಚಾರ. ಈ ಬಗ್ಗೆ ನಮ್ಮ ನಾಯಕರ ಕುರಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ತಮ್ಮ ಸದಾಶಿವನಗರ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಸರ್ಕಾರ ಈವರೆಗೂ ನಮ್ಮ ಸಲಹೆ ಕೇಳಿಲ್ಲ. ಅವರ ಇಚ್ಛೆಯಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ. ಅವರು ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಮಗೆ ಇನ್ನು ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡಿದರೂ ಲೆಕ್ಕಿಸದೆ, ನೀವು ಎಷ್ಟಾದರೂ ಅರಚಿಕೊಳ್ಳಿ ನಾವು ಮಾಡಿದ್ದೆ ಸರಿ ಎಂಬ ಧೋರಣೆ ಅನುಸರಿಸಿದ್ದಾರೆ. ಅವೈಜ್ಞಾನಿಕ ನೈಟ್ ಕರ್ಫ್ಯು ಅಗತ್ಯವಿಲ್ಲ. ಆದರೂ ಜಾರಿಗೊಳಿಸಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರ ಲಸಿಕೆ ರಫ್ತು ನಿಲ್ಲಿಸಿ ದೇಶದ ಜನರಿಗೆ ಮೊದಲು ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.
ವೈಯಕ್ತಿಕವಾಗಿ ಲಾಕ್ ಡೌನ್ ವಿಚಾರದಲ್ಲಿ ಹೇಳುವುದಾದರೆ ಇದರ ಅಗತ್ಯವಿಲ್ಲ. ಜನ ಈಗಾಗಲೇ ನರಳುತ್ತಿದ್ದಾರೆ. ಲಾಕ್ ಡೌನ್ ಅಗತ್ಯವಿಲ್ಲ. ಮುಂಜಾಗ್ರತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರಿಗೆ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ ಹೀಗಾಗಿ ನೆಪ ಹುಡುಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ಆರ್ಥಿಕ ನೆರವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಅಂತಾ ಹೇಳಿದರು, ರಾಜ್ಯ ಸರ್ಕಾರ 1600 ಕೋಟಿ ಪ್ಯಾಕೇಜ್ ಎಂದರು. ಯಾರಿಗೂ ಸಹಾಯವಾಗಿಲ್ಲ. ಒಂದು ಕಡೆ ಜೀವ, ಮತ್ತೊಂದು ಕಡೆ ಜೀವನ. ಇವೆರಡರ ನಡುವೆ ಜನ ಸಿಲುಕಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಉದ್ಯೋಗಸ್ಥರು ಮತ್ತು ಉದ್ಯೋಗದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಬ್ಯಾಂಕ್ ಸಾಲದಲ್ಲಿ 6ತಿಂಗಳಿಂದ ಒಂದು ವರ್ಷದವರೆಗೂ ಬಡ್ಡಿ ಮನ್ನಾ ಮಾಡಲು ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ದೊಡ್ಡ ಹೋಟೆಲ್ ಗಳ ಸ್ಥಿತಿಯೂ ಗಂಭೀರವಾಗಿದ್ದು, ಎಲ್ಲರೂ ಮಾರಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಸರ್ಕಾರ ಪರಿಹಾರ ನೀಡುತ್ತೇವೆ ಎಂದವರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ಏಳೂವರೆ ಲಕ್ಷ ಚಾಲಕರಿಗೆ ಪರಿಹಾರ ಎಂದರು ಆದರೆ ಯಾರಿಗೂ ಕೊಟ್ಟಿಲ್ಲ. ಯಾರಿಗೆ ಕೊಟ್ಟಿದ್ದೀರ ಎಂದು ಪಟ್ಟಿಕೊಡಿ ಅಂತಾ ಕೇಳಿದೆವು. ಸಂಪ್ರದಾಯ ವೃತ್ತಿ ಅವಲಂಬಿಸಿರುವವರಿಗೂ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ಇದೆಲ್ಲದರ ಮಧ್ಯೆ ಬೆಲೆ ಏರಿಕೆ. ರಸಗೊಬ್ಬರ ಬೆಲೆ ಶಿಖರಕ್ಕೇರಿದೆ. ಸೀಮೆಂಟ್, ಕಬ್ಬಿಣ ಎಲ್ಲವೂ ಬೆಲೆ ಹೆಚ್ಚಾಗಿದೆ.
ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಭಗವದ್ಗೀತೆ, ಕುರಾನ್, ಬೈಬಲ್:
ಇಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಒಂದು ಭಾಗ. ನಾವೆಲ್ಲ ಸೇರಿ ಅದನ್ನು ಉಳಿಸಬೇಕಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಈ ದೇಶಕ್ಕೆ ಭಗವದ್ಗೀತೆ, ಕುರಾನ್, ಬೈಬಲ್ ನಂತೆ. ಇಡೀ ದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗಳಷ್ಟು, ಇನ್ಯಾರ ಪ್ರತಿಮೆಗಳು ಇಲ್ಲ. ಅವರು ಸಂವಿಧಾನದ ಮೂಲಕ ದೇಶಕ್ಕೆ ಸಾಮಾಜಿಕ, ಶೈಕ್ಷಣಿಕವಾಗಿ ಸಮಾನತೆ ಕೊಟ್ಟಿದ್ದಾರೆ. ಜನರಲ್ಲಿ ಶಾಂತಿ, ನೆಮ್ಮದಿ ಮೂಡಿಸಲು ಭದ್ರ ಬುನಾದಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾವು ಅಂಬೇಡ್ಕರ್ ಅವರ ಆಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕಿದೆ. ನಾವು ಕಳೆದ ವರ್ಷ ಸಂವಿಧಾನ ಪೀಠಿಕೆ ಓದಿದ್ದೆವು. ಅದನ್ನು ಓದಿಯೇ ನಾನು ಅಧಿಕಾರ ವಹಿಸಿಕೊಂಡಿದ್ದೆ. ಬೇರೆಯವರು ಈ ಸಂವಿಧಾನ ಬದಲಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದು ಸಾಧ್ಯವಿಲ್ಲ. ಎಲ್ಲ ವರ್ಗದವರಿಗೂ ಗೌರವ ಕೊಟ್ಟು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.