ಅಮೆರಿಕದ ಅಧ್ಯಕ್ಷ ಚುನಾವಣಾ ಫಲಿತಾಂಶದಲ್ಲಿನ ತಿರುವುಗಳು, ಜೋ ಬಿಡೆನ್ ಆಯ್ಕೆ, ಕ್ಯಾಪಿಟಾಲೋ ಮೇಲೆ ಬಲಪಂಥೀಯರ ದಾಳಿ ಇವೆಲ್ಲವುಗಳ ಬಳಿಕ ಇಡೀ ಜಗತ್ತು ಜೋ ಬಿಡೆನ್ ಅವರ ಪ್ರಮಾಣ ವಚನ ಸಮಾರಂಭವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೆ, ಇದೇ ಕಾರ್ಯಕ್ರಮದಲ್ಲಿ ಕವನ ವಾಚಿಸಿದ 22 ವರ್ಷದ ಅಮಾಂಡಾ ಗೋರ್ಮನ್ ಎಲ್ಲರ ಗಮನ ಸೆಳೆದರು.
ಆಫ್ರಿಕನ್- ಅಮೆರಿಕನ್ ಕವಯಿತ್ರಿ ಅಮಾಂಡಾ ವಾಚಿಸಿದ ಕವಿತೆ ರಾಷ್ಟ್ರವು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮತ್ತು ಆಂತರಿಕ ಸಂಘರ್ಷದ ಸಂದರ್ಭದಲ್ಲಿ ತೋರಿದ ಸಂಯಮವನ್ನು ಸಶಕ್ತವಾಗಿ ಪ್ರತಿನಿಧಿಸಿದಂತಿತ್ತು. ಗೋರ್ಮನ್ ಅವರು ಅಮೆರಿಕದ ರಾಷ್ಟ್ರೀಯ ಯುವ ಕವಿಯಾಗಿದ್ದು ಅಧ್ಯಕ್ಷರ ಪ್ರಮಾಣವಚನ ಸಂದರ್ಭದಲ್ಲಿ ಕವಿತೆ ವಾಚಿಸಿದ ಅತ್ಯಂತ ಕಿರಿಯ ಕವಯಿತ್ರಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
‘ದಿ ಹಿಲ್ ವಿ ಕ್ಲೈಂಬ್’ ಶೀರ್ಷಿಕೆಯ ಅವರ ಕವಿತೆ ‘ಎಂದೂ ಮಾಯದ ಛಾಯೆಯೊಳಗೆ ಬೆಳಕಿಗಾಗಿ ನಾವು ಎಲ್ಲಿ ಹೋರಾಡಬೇಕು ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವ ಆ ದಿನಗಳೂ ಬರಲಿವೆ‘ ಎಂದು ಶುರುವಾಗುತ್ತದೆ. ಇದು ಕ್ಯಾಪಿಟಾಲ್ ಹಿಲ್ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಲೇ ಒಂದು ಪ್ರಬಲ ರಾಷ್ಟ್ರಕ್ಕಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಡುವಂತೆಯೂ ಕರೆ ಕೊಡುತ್ತದೆ.
‘ದೇಶವನ್ನು ಚೂರು ಚೂರಾಗಿಸುವ ಶಕ್ತಿಗಳನ್ನೂ ನೋಡಿದ್ದೇವೆ,
ಪ್ರಜಾಪ್ರಭುತ್ವದಲ್ಲಿನ ವಿಳಂಬವು ದೇಶವನ್ನು ನಾಶಪಡಿಸುತ್ತದೆ
ಮತ್ತವರು ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ
ಆದರೆ,
ಪ್ರಜಾಪ್ರಭುತ್ವವನ್ನು ಶಾಶ್ವತವಾಗಿ ಸೋಲಿಸಲಾಗದು‘.
ಐದು ನಿಮಿಷ ಮೀರಿ ಓದಿದ ಕವನವು ಅಮೆರಿಕದ ಇತಿಹಾಸ, ಸಂಸ್ಕೃತಿಯೆಡೆಗೆ ನೋಟ ಬೀರುತ್ತಲೇ
‘ಗುಲಾಮರೆಡೆಯಲಿ ಹುಟ್ಟಿದ
ಕಪ್ಪು ಜನಾಂಗದ
ಪರಿತ್ಯಕ್ತೆ ತಾಯಿ ಮಾತ್ರ ಬೆಳೆಸಿದ
ಅಮೆರಿಕದ ಅಧ್ಯಕ್ಷೆಯಾಗುವ ಕನಸು ಕಾಣುವ
ಸಣಕಲು ಹುಡುಗಿ ಇವತ್ತು
ಅಧ್ಯಕ್ಷರಿಗಾಗಿ ಓದುತ್ತಿದ್ದಾಳೆ‘ ಎನ್ನುತ್ತದೆ.
BBCಯ ಜೊತೆ ಮಾತಾಡುತ್ತಾ ಅಮಾಂಡಾ “ಉತ್ಸಾಹ, ಖುಶಿ, ಗೌರವ ಮತ್ತು ವಿನಮ್ರತೆ ಇವುಗಳ ಜೊತೆಗೆ ಭಯದ ಭಾವನೆ ಉಂಟಾಗಿತ್ತು”. “ನನ್ನ ಪದಗಳು ಏಕತೆಯ, ಸಹಬಾಳ್ವೆ ಮತ್ತು ಒಗ್ಗಟ್ಟಿನ ಸಂದೇಶ ಸಾರಬೇಕು ಎಂದು ನಾನು ಬಯಸಿದ್ದೆ” ಎಂದೂ ಹೇಳಿದ್ದಾರೆ.
ಅಮಾಂಡಾ ಅವರು ಆಯ್ಕೆ ಮಾಡಿಕೊಂಡ ಕವನಕ್ಕೆ ಸೆಲೆಬ್ರಿಟಿಗಳಿಂದ ಮತ್ತು ರಾಜಕೀಯ ನೇತಾರರಿಂದ ಮೆಚ್ಚುಗೆ ಪಡೆದಿದೆ.
“ಅವರ ಕಟು ಮತ್ತು ಸಶಕ್ತ ಪದಗಳು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ನಮಗಿರುವ ಶಕ್ತಿಯನ್ನು ಮತ್ತೊಮ್ಮೆ ನೆನಪಿಸಿತು. ಪ್ರಕಾಶಿಸುತ್ತಿರು ಅಮಾಂಡಾ! ನೀನು ಮುಂದೇನು ಮಾಡಲಿದ್ದಿ ಎಂಬುವುದನ್ನು ನೋಡಲು ನಾನು ಕಾತರಳಾಗಿದ್ದೇನೆ” ಎಂದಿದ್ದಾರೆ ಮಿಶೆಲ್ ಒಬಾಮಾ.
ಮಾಜಿ ಸ್ಟೇಟ್ಸ್ ಸೆಕ್ರೆಟರಿ ಹಿಲರಿ ಕ್ಲಿಂಟನ್ “ಅಮಾಂಡಾ ಅವರ ಪದ್ಯ ಅದ್ಭುತವಾಗಿತ್ತಲ್ಲವೇ? 2036 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ ಬಯಸಿದ್ದಾಳೆ. ನಾನು ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇಲಿನಾಯ್ಸ್ ಕವಿ ಆ್ಯಂಜೆಲಾ ಜಾಕ್ಸನ್ “ಅವರ ಕವಿತೆ ಶ್ರೀಮಂತವಾಗಿತ್ತು ಮತ್ತು ಸತ್ಯದಿಂದ ಕೂಡಿತ್ತು” ಎಂದು ವ್ಯಾಖ್ಯಾನಿಸಿದ್ದಾರೆ.
1998ರಲ್ಲಿ ಜನಿಸಿದ ಗೋರ್ಮನ್ ಅವರು ಬೆಳದದ್ದು ತಾಯಿಯ ಮಾರ್ಗದರ್ಶನದಲ್ಲಿ. ಬಾಲ್ಯದಿಂದಲೇ ಓದು, ಬರವಣಿಗೆಯ ಕಡೆ ಹೆಚ್ಚಿನ ಒಲವಿದ್ದ ಅವರು ಹಾರ್ವರ್ಡ್ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಅಭ್ಯಸಿಸಿದ್ದಾರೆ. 2017 ಎಪ್ರಿಲ್ನಲ್ಲಿ ಅಮೆರಿಕದ ಮೊದಲ ರಾಷ್ಟ್ರೀಯ ಯುವ ಕವಿ ಎಂಬ ಪ್ರಶಸ್ತಿ ಪಡೆದುಕೊಂಡಿದ್ದರು. ಅವರ ಹೆಚ್ಚಿನ ಕವಿತೆಗಳು ಆಫ್ರಿಕನ್ ವಲಸೆ, ಸ್ತ್ರೀವಾದ, ವರ್ಣ ದ್ವೇಷ ಮುಂತಾದವುಗಳ ಬಗ್ಗೆ ಮಾತಾಡುತ್ತವೆ. ಪಾಕಿಸ್ತಾನದ ನೋಬೆಲ್ ವಿಜೇತ ಮಲಾಲ ಅವರನ್ನು ತಮ್ಮ ಆದರ್ಶ ಎಂದು ಕರೆಯುವ ಅಮಾಂಡ ‘ಒನ್ ಪೆನ್ ಒನ್ ಪೇಜ್’ ಎನ್ನುವ ಎನ್ಜಿಒ ನ್ನು ಸ್ಥಾಪಿಸಿದ್ದಾರೆ. 2015ರಲ್ಲಿ ‘one for whom food is not enough’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ.
ಅಮೆರಿಕದ ಈ ಬಾರಿಯ ಚುನಾವಣೆ, ಚುನಾವಣೋತ್ತರ ಘಟನೆಗಳು, ಅಧಿಕಾರ ಹಸ್ತಾಂತರದಲ್ಲಿನ ಭಂಡಾಟ, ಟ್ರಂಪ್ ದ್ರಾಷ್ಟ್ಯ , ಅಮೆರಿಕದಲ್ಲಿನ ಬಲಪಂಥೀಯರ ಪುಂಡಾಟ, ಮತೀಯ ಶಕ್ತಿಗಳು ವಿಜೃಂಭಿಸುವ ಆತಂಕ ಇವೆಲ್ಲವುದರ ಮಧ್ಯೆ ಅಮಾಂಡರಂತಹವರು ಯುವತಿಯರಲ್ಲಿ ಅದರಲ್ಲೂ ವರ್ಣದ್ವೇಷದ ಕಹಿಯುಂಡವರಿಗೆ ಭರವಸೆಯ ಬೆಳಕಾಗಿ ಗೋಚರಿಸುವುದರಲ್ಲಿ ಸಂಶಯವಿಲ್ಲ.