ಔಷಧೀಯ ಸಸ್ಯಗಳು ನಿತ್ಯ ಹರಿದ್ವರ್ಣ ಕಾಡು ಅಷ್ಟೇ ಅಲ್ಲ ಎಲ್ಲೆಡೆ ಬೆಳೆಯುತ್ತಿರುತ್ತವೆ. ನೋಡುವ ಕಣ್ಣುಗಳು ಅವುಗಳನ್ನು ಅರಸುತ್ತ ಹೋದಾಗ ನಿಸರ್ಗದ ರಮಣೀಯತೆ ಧನ್ಯತಾ ಭಾವ ಮೂಡುತ್ತದೆ.
ಕೃಷಿ ಕಾಯಕದಲ್ಲಿ ತೊಡಗುವ ಕೃಷಿಕರಿಗೆ ಸ್ವಚ್ಛಂದವಾದ ಗಾಳಿ, ಹೂವು-ಹಣ್ಣು, ಸೌದೆ, ಆಯುರ್ವೆದ ಔಷಧೀಯ ಸಸ್ಯಗಳು ಸೇರಿದಂತೆ ಸಾಕಷ್ಟು ವನ್ಯಸಂಪತ್ತು ಸಿಗುತ್ತದೆ. ಇಂತಹ ವಿಭಿನ್ನ ರಾಶಿಗಳ ಮಧ್ಯೆ ಪ್ರಕೃತಿದತ್ತವಾಗಿ ಹೋಬಳಿಯ ಹಳ್ಳ, ಸರುವು, ಹೊಲದ ಬದುವು ಹಾಗೂ ತೋಟದ ಸೀಮೆಯಲ್ಲಿ ಹೇರಳವಾಗಿ ದೊರಕುವ ಗುಲಗಂಜಿಯಂತಹ ಸಂಪತ್ತು ಅಡವಿಗೆ ಮೆರಗು ನೀಡುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತಾದ್ಯಂತ ಸಿಗುವ ಗುಲಗಂಜಿಯು ಕೆಂಪು ಬಣ್ಣದ್ದಾಗಿದೆ. ಆದರೆ ಗದಗ ಜಿಲ್ಲೆಯ ನರೇಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಗುಲಗಂಜಿ ಕಂಡು ಬರುತ್ತಿರುವುದು ವಿಶೇಷವಾಗಿದೆ. ಸಸ್ಯ ಶಾಸ್ತ್ರದಲ್ಲಿ ಏಬ್ರಸ್ ಪ್ರಿಕಟೋರಿಯಸ್, ಇಂಗ್ಲಿಷ್ನಲ್ಲಿ ಇಂಡಿಯನ್ ಲಿಕೋರಿಸ್ ಎನ್ನುತ್ತಾರೆ. ಗುಲಗಂಜಿ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಹೂವು ಬಿಟ್ಟು ತಿಂಗಳೊಳಗೆ ಕಾಯಿಯಾಗಿ ಕೈಬೀಸಿ ಕರೆಯುತ್ತದೆ. ಇದೊಂದು ತೆಳ್ಳನೆಯ ಬಳ್ಳಿಯಂತೆ ಉದ್ದವಾದ ಸಸ್ಯ. ಮತ್ತೊಂದು ಗಿಡದ ಅವಲಂಬನೆಯಾಗಿ ಅದಕ್ಕೆ ಸುತ್ತಿಕೊಂಡು ಬೆಳೆದಿರುತ್ತದೆ. ಇದರ ಗಾಢ ಕೆಂಪು ಮತ್ತು ಕಪ್ಪು ಬಣ್ಣದ ಸೌಂದರ್ಯಕ್ಕೆ ಮನಸೋತವರಿಲ್ಲ, ಕಡು ಕೆಂಪು ಬಣ್ಣದ ಬೀಜವು ನೋಡಲು ಮೊಟ್ಟೆಯ ಆಕಾರದಲ್ಲಿರುತ್ತದೆ.
ಗುಲಗಂಜಿಯ ಬೀಜವನ್ನು ಕಳೆನಾಶಕಗಳಂತಹ ಬಹುಬಳಕೆಯ ಔಷಧೀಯದಲ್ಲಿ ಬಳಸಲಾಗುತ್ತದೆ. ಇದರ ಬೇರು, ಎಲೆ ರಸ ಹಾಲಿಗೆ ಹಾಕಿ ಕಲಸಿ ಆರ್ಯವೇದ ಔಷಧಿಯಾಗಿಯೂ ಬಳಸುತ್ತಾರೆ. ಜೇನು, ಹಾಲು ಮತ್ತು ತುಪ್ಪದ ಅನುಪಾತದೊಂದಿಗೆ ಸೆವಿಸುವುದು ಒಳ್ಳೆಯದು. ಹುಳುಕು ಹಲ್ಲು, ಗಂಟಲು ನೋವು, ಒಣಕೆಮ್ಮು ನಿವಾರಣೆಗೆ ಉಪಯೋಗಿಸುತ್ತಾರೆ. ಗುಲಗಂಜಿ ಎಲೆಯ ರಸವನ್ನು ಚರ್ಮದ ಮೇಲಿನ ಕಲೆಗಳ ನಿವಾರಣೆಗೆ, ಕಾಲು, ಸೊಂಟ ನೋವು ನಿವಾರಣೆಗೂ ಉಪಯೋಗಿಸುತ್ತಾರೆ. ಉಪಯೋಗ ತಿಳಿದ ಕೂಡಲೆ ನಾವೇ ಖುದ್ದಾಗಿ ಅದನ್ನು ಬಳಸಬಾರದು, ಆರ್ಯವೇದ ವೈದ್ಯರ ಸಲಹೆ ಪಡೆದು ನಂತರ ಉಪಯೋಗ ಮಾಡುವುದು ಉತ್ತಮ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದರು.
ನಾಗರಹಾವಿನ ವಿಷಕ್ಕಿಂತಲೂ ಅಪಾಯಕಾರಿ
ಹೌದು ಈ ಗುಲಗಂಜಿ ಬೀಜದಲ್ಲಿ ಅಬ್ರಿನ್ ಎನ್ನುವ ಅಪಾಯಕಾರಿ ವಿಷವಿದ ಅಂಶವಿದೆ. ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ಘೋರವಾಗಿದೆ. ಆದರೆ ಕಾಂಡ, ಎಲೆಗಳಲ್ಲಿ ವಿಷ ಇರುವುದಿಲ್ಲ. ಬೀಜಗಳನ್ನು ಅರೆದಾಗ ವಿಷ ಹೊರಬರುತ್ತದೆ. ಬೀಜವನ್ನು ಜಗಿದು ಇಲ್ಲವೇ ಪುಡಿ ಮಾಡಿ ತಿಂದರೆ ಅಪಾಯ ತಪ್ಪಿದ್ದಲ್ಲ ಎಂದು ಆಯುಷ್ ವೈದ್ಯ ಡಾ. ನಾಗರಾಜ ಎಲ್. ಗ್ರಾಮಪುರೋಹಿತ್ ತಿಳಿಸಿದರು.
ಅಡವಿಯಲ್ಲಿ ಆಹಾರಕ್ಕಾಗಿ ಅಲೆಯುವ ಕುರಿ, ದನಕರಗಳು ಗುಲಗಂಜಿ ಬೀಜದ ಸೇವನೆಯಿಂದ ತೊಂದರೆಗೆ ಒಳಗಾಗುವ ಸಂಭವವಿದೆ. ಆದರೆ ಜಾನುವಾರುಗಳು ಗುಲಗಂಜಿ ಬೀಜಗಳನ್ನು ತಿಂದ ತಕ್ಷಣ ಸಾಯುವುದಿಲ್ಲ. ಮೇವನ್ನು ತಿಂದು ಮೆಲುಕು ಹಾಕುವ ವೇಳೆ ವಿಷ ನಿಧಾನವಾಗಿ ದೇಹವನ್ನು ಪಸರಿಸುತ್ತದೆ. ಹಂತ ಹಂತವಾಗಿ ನರಗಳಿಗೆ ಹರಡುತ್ತದೆ. ಕ್ರಮೇಣ ಸಾವಿನ ದವಡೆಯತ್ತ ಸಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.
ಹಳ್ಳಿಗಳಲ್ಲಿ ನಾಟಿ ಔಷಧೀಯಾಗಿ ಬಳಸುತ್ತಾರೆ ಎಂದು ಕೇಳಿದ್ದೇನೆ. ಆದರೆ ನಮ್ಮ ಹೋಬಳಿಯಲ್ಲಿ ಗುಲಗಂಜಿ ಬೀಜಗಳ ಸೇವನೆಯಿಂದ ಜಾನುವಾರುಗಳು ಸಾವನ್ನಪ್ಪಿರುವ ಪ್ರಕರಣಗಳು ಇಂದಿಗೂ ನಡೆದಿಲ್ಲಡಾ. ಲಿಂಗಯ್ಯ ಗೌರಿ, ಮುಖ್ಯ ಪಶುವೈದ್ಯಾಧಿಕಾರಿ ನರೇಗಲ್
ಮುಖ್ಯವಾಗಿ ತಿಳಿಯಬೇಕಾಗಿದ್ದು:
- ಬೀಜದಲ್ಲಿದೆ ಅಬ್ರಿನ್ ಎನ್ನುವ ಅಪಾಯಕಾರಿ ವಿಷ
- ಇದು ನಾಗರಹಾವಿನ ವಿಷಕ್ಕಿಂತಲೂ ಅಪಾಯಕಾರಿ
- ಪ್ರಕೃತಿದತ್ತವಾಗಿ ಹೇರಳವಾಗಿ ದೊರಕುವ ಸಂಪತ್ತು
- ಎಲೆ, ಬೇರು ಆರ್ಯವೇದ ಔಷಧಿಯಾಗಿ ಬಳಕೆ