2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಸ್ವಾಮಿಗಳು ಹಾಗೂ ನಾಯಕರು 64 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆಯಲಾಗಿದೆ. ಸದನದಲ್ಲಿ ಮೀಸಲಾತಿಯ ಕುರಿತು ಸಿಎಂ ಬಿ ಎಸ್ ಯಡಿಯೂರಪ್ಪನವರು ಭರವಸ ನೀಡಿದ ಬೆನ್ನಲ್ಲೇ, ಈ ಧರಣಿ ಹಿಂಪಡೆಯಲಾಗಿದೆ.
ಯಡಿಯೂರಪ್ಪ ಅವರು ನೀಡಿದ ಭರವಸೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ಮುಖಂಡ ಬಸಗೌಡ ಪಾಟೀಲ ಯತ್ನಾಳ್, ಮೀಸಲಾತಿ ವಿಚಾರ ಸಂಬಂಧ ಸದನದಲ್ಲಿ ಮುಖ್ಯಮಂತ್ರಿ ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. 6 ತಿಂಗಳ ಒಳಗಾಗಿ ಹಿಂದುಳಿದ ಆಯೋಗದಿಂದ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯಿಂದ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು, ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದನ ಮುಗಿದ ಬಳಿಕ ಧರಣಿಯ ನೇತೃತ್ವ ವಹಿಸಿಕೊಂಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರನ್ನು ಭೇಟಿಯಾಗಿ ಇದರ ಕುರಿತು ಚರ್ಚೆ ನಡೆಸುವುದಾಗಿ ಹೇಳಿದ್ದರು. “ಆರು ತಿಂಗಳೊಳಗಾಗಿ ಭರವಸೆ ಈಡೇರದೆ ಇದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು, ಇಷ್ಟು ದಿನ ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ಕೊಡಲು ತಯಾರಿರಲಿಲ್ಲ, ಈಗ ಸದನದ್ಲಲಿಯೇ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಬೇಡಿಕೆ ಈಡೆರುತ್ತದೆ ಎಂಬ ವಿಶ್ವಾಸವಿದೆ. ಇದರಿಂದಾಗಿಯೇ ಹೋರಾಟ ಸ್ಥಗಿತಗೊಳಿಸುವಂತೆ ಸ್ವಾಮೀಜಿಗಳ ಹತ್ತಿರ ಕೇಳಿಕೊಳ್ಳುತ್ತಿದ್ದೇವೆ,” ಎಂದಿದ್ದರು.
“ಸುಭಾಷ್ ಅಡಿ ಅವರ ಸಮಿತಿಗೆ ಕಾನೂನಾತ್ಮಕ ಮನ್ನಣೆಯಿಲ್ಲ, ಈ ಸಮಿತಿಯನ್ನು ನಾವು ಒಪ್ಪುವುದಿಲ್ಲ, 1974 ರಿಂದಲೇ ಕರ್ನಾಟಕದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವಿದೆ. ಅದಕ್ಕೆ ಹಾಲಿ ನ್ಯಾಯಮೂರ್ತಿಗಳು ನ್ಯಾಯಸಮ್ಮತವಾದ ಅಧಿಕಾರಕೊಟ್ಟಿದ್ದಾರೆ. ಈ ಆಯೋಗದ ಶಿಫಾರಸ್ಸನ್ನು ತೆಗೆದುಕೊಂಡು ರಾಜ್ಯಸರ್ಕಾರ ತೀರ್ಮಾನ ಕೈಗೊಳ್ಳಬೇಕೆಂಬುವುದು ನಮ್ಮ ಒತ್ತಾಯವಾಗಿದೆ. ಮುಖ್ಯಮಂತ್ರಿಗಳು ಎರಡು ವರದಿಗಳನ್ನು ತರೆಸಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ನಾವು ಶಾಶ್ವತ ಹಿಂದುಳಿದ ವರ್ಗದ ಆಯೋಗದ ಮೇಲೆಯೇ ತೀರ್ಮಾನ ತೆಗೆದುಕೊಳ್ಳಬೇಕು,” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಳಿಕ ಯತ್ನಾಳ್ ಅವರ ಜೊತೆ ಸಚಿವ ಸಿಸಿ ಪಾಟೀಲ್, ರೇಣುಕಾಚಾರ್ಯ, ಅರುಣ್ ಪೂಜಾರಿ ಸೇರಿದಂತೆ ಇತರ ನಾಯಕರು ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ. ಸ್ವಾಮೀಜಿ ಹಾಗೂ ಧರಣಿ ನಿರತ ಇತರರಿಗೆ ಹೋಳಿಗೆ ತಿನ್ನಿಸುವ ಮೂಲಕ ಧರಣಿಯನ್ನು ʼತಾತ್ಕಾಲಿಕʼವಾಗಿ ಅಂತ್ಯಗೊಳಿಸಿದ್ದಾರೆ. ಆರು ತಿಂಗಳವರೆಗೆ ಕಾದು ನೋಡಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಧರಣಿ ನಿರತರು ಬಂದಿದ್ದಾರೆ ಎಂದು ಹೇಳಲಾಗಿದೆ.