ಶಿವಮೊಗ್ಗ ಸ್ಫೋಟವಾಗಿ ಹತ್ತು ದಿನಗಳು ಕಳೆದಿವೆ. ಇಡೀ ಮಲೆನಾಡನ್ನೇ ನಡುಗಿಸಿ ಆರು ಮಂದಿಯನ್ನು ಬಲಿ ತೆಗೆದುಕೊಂಡ ಭೀಕರ ಘಟನೆಯ ಕುರಿತು ಈವರೆಗೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅವಿನಾಶ್ ಕುಲಕರ್ಣಿ ಮತ್ತು ಶಶಿ ಎಂಬುವರ ಪತ್ತೆಗಾಗಿ ಪ್ರಯತ್ನ ಮುಂದುವರಿದಿದೆ.
ಈ ನಡುವೆ, ಘಟನೆಗೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಸುಧಾಕರ್ ಮತ್ತು ತಲೆಮರೆಸಿಕೊಂಡಿರುವ ಅವಿನಾಶ್ ಅವರಿಗೆ ಸೇರಿದ ಎಸ್ ಎಸ್ ಸ್ಟೋನ್ ಕ್ರಷರ್ ಘಟಕದ ಪರವಾನಗಿ ರದ್ದುಪಡಿಸಲಾಗಿದೆ. ಕೃತ್ಯದ ಕುರಿತ ಪೊಲೀಸ್ ತನಿಖೆಯನ್ನು ಹೊರತುಪಡಿಸಿ, ಘಟನೆ ಬಳಿಕದ ಈ ಹತ್ತು ದಿನಗಳಲ್ಲಿ ಶಿವಮೊಗ್ಗ ಜಿಲ್ಲಾಡಳಿತ ತೆಗೆದುಕೊಂಡಿರುವ ಏಕೈಕ ದಿಟ್ಟ ಕ್ರಮ ಈ ಪರವಾನಗಿ ರದ್ದತಿಯ ನಿರ್ಧಾರ!
ಮತ್ತೊಂದು ಕಡೆ, ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ಅಕ್ರಮ ಕ್ವಾರಿಗಳನ್ನು ನಿರ್ದಾಕ್ಷಿಣವಾಗಿ ಮುಚ್ಚಿಸಲಾಗುವುದು ಎಂದಿದ್ದಾರೆ. ಅಂದರೆ; ಸದ್ಯ ಸ್ಫೋಟದ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಶಿವಮೊಗ್ಗ ನಗರ ಪಾಲಿಕೆಯ ವ್ಯಾಪ್ತಿ ಮತ್ತು ಪಾಲಿಕೆಯ ಗಡಿಯಲ್ಲಿ ನಡೆಯುತ್ತಿರುವ ಸಕ್ರಮ ಕ್ರಷರ್ ಮತ್ತು ಕ್ವಾರಿಗಳು ಮತ್ತೆ ಗರಿಗೆದರಲಿವೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.
ಆದರೆ, ಶಿವಮೊಗ್ಗ ನಗರ ಮತ್ತು ಅಬ್ಬಲಗೆರೆ ಸೇರಿದಂತೆ ನಗರಕ್ಕೆ ಅಂಟಿಕೊಂಡಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶಗಳ ನಡುವೆಯೇ, ಕೃಷಿ ಜಮೀನುಗಳ ಮಧ್ಯೆಯೇ ನಡೆಯುತ್ತಿರುವ ಕ್ರಷರ್ ಮತ್ತು ಕ್ವಾರಿಗಳು ಜನ ಮತ್ತು ಜಾನುವಾರು ಜೀವಕ್ಕೆ ಎಂಥ ಸಂಚಕಾರ ತಂದಿವೆ ಎಂಬುದಕ್ಕೆ ಮೊನ್ನೆಯ ಸ್ಫೋಟ ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿರುವ ಮತ್ತು ಸದ್ಯ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹುಣಸೋಡು ಗ್ರಾಮದ ಯುವತಿ ಪೂಜಾ ಅವರ ಸ್ಥಿತಿಯೇ ನಿದರ್ಶನ.
23 ವರ್ಷದ ಪೂಜಾ ಎಂಬಿಎ ಪದವೀಧರೆ. ಪದವಿ ಮುಗಿಸಿ ಶಿವಮೊಗ್ಗದ ಖಾಸಗೀ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಾಲೀಕರೊಬ್ಬರ ತೋಟ ನೋಡಿಕೊಳ್ಳುವ ಕೆಲಸ ಮಾಡುತ್ತಿರುವ ವಯಸ್ಸಾದ ತಂದೆ-ತಾಯಿಗೆ ಒಬ್ಬಳೇ ಮಗಳು. ಹೆತ್ತವರ ಇಳಿ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊರಬೇಕಾದ ಹೊಣೆ ಅವರ ಮೇಲಿತ್ತು. ಆ ಹಿನ್ನೆಲೆಯಲ್ಲಿಯೇ ಅವರು ಉತ್ತಮ ಉದ್ಯೋಗಾವಕಾಶಕ್ಕಾಗಿ ಪ್ರಯತ್ನಿಸಿದ್ದರು. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸದ ಅವಕಾಶವೂ ಸಿಕ್ಕಿತ್ತು. ಸ್ಫೋಟ ಸಂಭವಿಸದೇ ಹೋಗಿದ್ದರೆ, ಆ ಘಟನೆಯಲ್ಲಿ ಅವರು ಗಾಯಗೊಂಡು ಆಸ್ಪತ್ರೆ ಸೇರದೇ ಹೋಗಿದ್ದರೆ, ಜ.23ರಂದು ಹೊಸ ಉದ್ಯೋಗಕ್ಕೆ ಸೇರಿ ಈಗಾಗಲೇ ಒಂದು ವಾರ ಕಳೆದಿರುತ್ತಿತ್ತು.
ಆದರೆ, ದುಷ್ಕರ್ಮಿಗಳ ಹಣದಾಹದ ಅಕ್ರಮ ದಂಧೆ ಅವರ ಬದುಕಿನ ಆ ಹೊಸ ಭರವಸೆಯನ್ನೂ ಹೊಸಕಿ ಹಾಕಿಬಿಟ್ಟಿದೆ. ಮಾರನೇ ದಿನ ಬೆಂಗಳೂರಿಗೆ ಹೊರಡಬೇಕಿದ್ದ ಅವರು, ಜ.21ರ ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಊಟ ಮಾಡಿ ಮಲಗಲು ಸಜ್ಜಾಗುತ್ತಿದ್ದ ಅವರಿಗೆ ಅಂದು ರಾತ್ರಿ 10.20ರ ಸುಮಾರಿಗೆ ಸಂಭವಿಸಿದ ಭೀಕರ ಸ್ಫೋಟದಿಂದ ಸಿಡಿದ ಕಬ್ಬಿಣದ ತುಂಡೊಂದು ನೇರ ತಲೆಗೇ ನಾಟಿದೆ. ತಲೆಯಲ್ಲಿ ಆಳ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪೋಷಕರು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಕೂಲಿ ಮಾಡಿ ಬದುಕು ಸಾಗಿಸುವ ಪೂಜಾಳ ಪೋಷಕರಿಗೆ ಈಗ ಮಗಳ ಚಿಕಿತ್ಸೆಯ ಹೊರೆಯೂ ಬಿದ್ದಿದೆ. ಜೊತೆಗೆ ದುಡಿದು ತಮ್ಮನ್ನು ನೋಡಿಕೊಳ್ಳಬೇಕಾದ ಮಗಳು, ಸಿಕ್ಕ ಉದ್ಯೋಗದ ಅವಕಾಶವನ್ನೂ ಕಳೆದುಕೊಂಡು ಹಾಸಿಗೆ ಹಿಡಿದಿರುವ ಸಂಕಟ ಬೇರೆ.
ಸ್ಫೋಟ ಸಂಭವಿಸಿದ ಕೆಲವೇ ಮೀಟರ್ ದೂರದಲ್ಲಿರುವ ಈ ಮನೆಯ ಕಿಟಕಿ, ಬಾಗಿಲು, ಚಾವಣಿ ಕಿತ್ತುಹೋಗಿವೆ. ದುಡಿಯುವ ಮಗಳು ಗಾಯಗೊಂಡು ಹಾಸಿಗೆ ಹಿಡಿದಿದ್ದಾಳೆ. ಆದರೆ, ಹತ್ತು ದಿನಗಳು ಕಳೆದರೂ ಈವರೆಗೆ ಪೂಜಾಳ ಮನೆಗೆ ಯಾವೊಬ್ಬ ಅಧಿಕಾರಿಯಾಗಲೀ, ಜನಪ್ರತಿನಿಧಿಗಳಾಗಲೀ ಭೇಟಿ ನೀಡಿಲ್ಲ, ಅವರ ನೋವು, ಸಂಕಟ ಕೇಳುವ ಕನಿಷ್ಟ ಹೊಣೆಗಾರಿಕೆ ತೋರಿಲ್ಲ. ಜಿಲ್ಲಾಡಳಿತ ಈ ಸ್ಫೋಟ ಘಟನೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹುಣಸೋಡಿಗೆ ಭೇಟಿ ನೀಡಿದಾಗ ಪೂಜಾಳನ್ನು ಭೇಟಿ ಮಾಡಿ ಆಕೆಯ ಯೋಗಕ್ಷೇಮ ವಿಚಾರಿಸಿದ್ದು ಹೊರತುಪಡಿಸಿ, ನಾಲ್ಕು ಮಾರು ದೂರದ ಕ್ರಷರ್ ಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪಅವರಾಗಲೀ, ಗಣಿ ಸಚಿವ ಮರುಗೇಶ್ ನಿರಾಣಿ ಅವರಾಗಲೀ ಪಕ್ಕದಲ್ಲೇ ಇರುವ ಪೂಜಾಳ ಮನೆಯತ್ತ ಹೊರಳಿಯೂ ನೋಡಿಲ್ಲ!
ಜನಪ್ರತಿನಿಧಿಗಳ ವರಸೆ ಇದಾದರೆ, ಇಡೀ ಘಟನೆಗೆ ಪರೋಕ್ಷವಾಗಿ ಕಾರಣವಾಗಿರುವ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲೀ, ಪರಿಸರ ಇಲಾಖೆಯವರಾಗಲೀ ಅಥವಾ ಕನಿಷ್ಟ ಜಿಲ್ಲಾಧಿಕಾರಿಗಳಾಗಲೀ ಪೂಜಾ ಮತ್ತು ಆಕೆಯ ಮನೆಯವರ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನವನ್ನೇ ಮಾಡಿಲ್ಲ. ಇದು ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದ, ಒಂದಿಷ್ಟು ಹೆಚ್ಚು ಕಡಿಮೆಯಾಗಿದ್ದರೆ ಶಿವಮೊಗ್ಗ ನಗರವನ್ನೇ ಸ್ಮಶಾನ ಮಾಡಲಿದ್ದ ಭೀಕರ ಘಟನೆಗೆ ಜಿಲ್ಲಾಡಳಿತದ ಸ್ಪಂದನೆ!