ಹಳ್ಳಿಹಕ್ಕಿ ವಿಶ್ವನಾಥ್ ಅವರು ಸಚಿವರಾಗಲು ಅರ್ಹರಲ್ಲ ಎಂದು ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರಿಂಕೋರ್ಟ್ನಲ್ಲಿ ಪ್ರಶ್ನಿಸಿದ್ದ ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ. ಸುಪ್ರಿಂಕೋರ್ಟ್ ಕೂಡಾ ಹೈಕೋರ್ಟ್ನ ತೀರ್ಪನ್ನೇ ಎತ್ತಿ ಹಿಡಿದಿದ್ದು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ವಿಶ್ವನಾಥ್ ಅವರಿಗೆ ಭಾರಿ ಮುಖಭಂಗವಾಗಿದೆ.
ಜೆಡಿಎಸ್ನಿಂದ ಬಿಜೆಪಿಗೆ ಹೋಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುಂಚೂಣಿಯಲ್ಲಿದ್ದ ವಿಶ್ವನಾಥ್ ಅವರು ಈಗ ತಮ್ಮ ʼಅನರ್ಹʼ ಎಂಬ ಹಣೆಪಟ್ಟಿಯನ್ನು ಉಳಿಸಿಕೊಂಡಂತಾಗಿದೆ. ಇದು ವಿಶ್ವನಾಥ್ ಅವರ ರಾಜಕೀಯ ಜೀವನದಲ್ಲೇ ಅತೀ ದೊಡ್ಡ ಹಿನ್ನಡೆ ಎಂದು ಬಿಂಬಿತವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ವಿಶ್ವನಾಥ್ ಅವರು ಸಂವಿಧಾನದ 164(1B), 361 B ವಿಧಿಗಳ ಅಡಿಯಲ್ಲಿ ಸಚಿವರಾಗಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, ವಿಶ್ವನಾಥ್ ಅವರೊಂದಿಗೆ ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರು ಸಚಿವರಾಗಲು ಅರ್ಹ ಎಂಬ ಆದೇಶವನ್ನೂ ನೀಡಿತ್ತು.
ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಸ್ಥಾನ ಗಿಟ್ಟಿಸಿಕೊಂಡಿದ್ದ ವಿಶ್ವನಾಥ್ ಅವರು, ಸಿಎಂ ಸಿದ್ದರಾಮಯ್ಯ ಅವರ ಕ್ಯಾಬಿನೆಟ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಕೆಲ ದಿನಗಳ ಹಿಂದೆ ಸಚಿವ ಸಂಪುಟ ವಿಸ್ತರಣೆಯಾದಾಗ, ಸ್ಥಾನ ಸಿಗದ ಕಾರಣಕ್ಕೆ ಸಿಎಂ ಯಡಿಯೂರಪ್ಪ ಅವರ ವಿರುದ್ದ ನಿರಂತರವಾಗಿ ಕಿಡಿಕಾರಿದ್ದರು. ತಮ್ಮೊಂದಿಗೆ ಬಿಜೆಪಿ ಸೇರಿದ್ದ ಇತರ ನಾಯಕರು ತಮಗೆ ಮೋಸ ಮಾಡಿದ್ದಾರೆಂದು ಅಳಲು ತೋಡಿಕೊಂಡಿದ್ದರು.