ತಮ್ಮ ಅಧಿಕಾರಾವಧಿಯಲ್ಲಿ ನೇರ, ದಿಟ್ಟ, ಖಡಕ್ ಅಧಿಕಾರಿಯೆಂದು ಖ್ಯಾತಿ ಹೊಂದಿದ್ದ, ಅನೇಕ ಯುವ ಜನತೆಗೆ ರೋಲ್ ಮಾಡೆಲ್ ಅಂತಿದ್ದ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ಗಳಿಗೆ ಒಳಗಾಗುತ್ತಿದ್ದಾರೆ.
ಕರ್ನಾಟಕ ಐಪಿಎಸ್ ಕೇಡರ್ ಆಗಿದ್ದ ಅಣ್ಣಾಮಲೈ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಿಗೆ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದರು. ಒಬ್ಬ ಸಾರ್ವಜನಿಕ ಅಧಿಕಾರಿಗೆ ಸಿಗಬೇಕಿದ್ದ ಮಾನ್ಯತೆಗಳಿಗಿಂತಲೂ ಹೆಚ್ಚು ಮಾನ್ಯತೆಯನ್ನು ಅಣ್ಣಾಮಲೈ ಸಾರ್ವಜನಿಕ ವಲಯದಿಂದ ಪಡೆದಿದ್ದರು.
ಅಣ್ಣಾಮಲೈ ಯಾವ ಕಾರ್ಯಕ್ರಮಕ್ಕೆ ಹೋದರೂ, ಯುವ ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿಕೊಳ್ಳುತ್ತಿದ್ದರು. ಅಂತಹಾ ಅಣ್ಣಾಮಲೈ ಇದೀಗ ಅತ್ಯಂತ ಹೀನಾಯವಾಗಿ ಸಾರ್ವಜನಿಕರಿಂದ ವ್ಯಂಗ್ಯಕ್ಕೆ ಒಳಗಾಗುತ್ತಿದ್ದಾರೆ.
ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆಂದು ಹೇಳಿ ಹೊರಟ ಅಣ್ಣಾಮಲೈ, ಬಳಿಕ ತಮಿಳುನಾಡು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಿವೃತ್ತಿ ಘೋಷಿಸಿದಾಗಲೇ, ಅಣ್ಣಾಮಲೈ ರಾಜಕೀಯ ಸೇರುತ್ತಾರೆ ಎಂಬ ವದಂತಿಗಳು ಕೇಳಿ ಬಂದಿತ್ತಾದರೂ ಅದನ್ನೆಲ್ಲಾ ನಿರಾಕರಿಸಿದ್ದ ಅಣ್ಣಾಮಲೈ ತಾನು ಯಾವುದೇ ರಾಜಕೀಯ ಪಕ್ಷಗಳಿಗೂ ಸೇರುವುದಿಲ್ಲ ಎಂದು ಹೇಳಿದ್ದರು. ಬಳಿಕ ಬಿಜೆಪಿಯೊಂದಿಗೆ ಹಲವು ಸಭೆಗಳಲ್ಲಿ ಗುರುತಿಸಿಕೊಂಡಾಗ ಸಾಕಷ್ಟು ಟೀಕೆಗೆ ಒಳಗಾದರು.