ಮಲೆನಾಡನ್ನೇ ನುಡುಗಿಸಿದ ಶಿವಮೊಗ್ಗ ಕಲ್ಲುಕ್ವಾರಿ ಮಹಾ ಸ್ಫೋಟ ಘಟನೆ ನಡೆದು ಮೂರು ದಿನಗಳು ಉರುಳಿವೆ. ದಂಧೆಕೋರತನ ಸೃಷ್ಟಿಸಿದ ಮಹಾ ದುರಂತದಿಂದ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ ಜನ ಪವಾಡಸದೃಶವಾಗಿ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಭೀಕರ ಘಟನೆಯಲ್ಲಿ ಸಾವು ಕಂಡ ಕ್ವಾರಿ-ಕ್ರಷರ್ಯವರ ಸಂಖ್ಯೆ ಆರಕ್ಕೇರಿದೆ.
ಹಲವರು ಗಂಭೀರ ಗಾಯಗೊಂಡಿದ್ದಾರೆ. ನೂರಾರು ಮನೆ, ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗಿದೆ. ಘಟನೆಯ ಸ್ಥಳದಿಂದ ಸುತ್ತಮುತ್ತ ಸುಮಾರು 150 ಕಿ.ಮೀವರೆಗೆ ಆಸ್ಫೋಟದ ತೀವ್ರತೆ, ಕಂಪನ ಸಾವಿರಾರು ವಯೋವೃದ್ಧರು, ಮಕ್ಕಳುಮರಿ, ವನ್ಯಜೀವಿಗಳನ್ನು ಆಘಾತಗೊಳಿಸಿದೆ. ಘಟನೆಯ ಸಂಬಂಧ ಈವರೆಗೆ ಜಾಗದ ಮಾಲೀಕ ಅವಿನಾಶ್, ಕ್ರಷರ್ ಗುತ್ತಿಗೆದಾರ ಸುಧಾಕರ್ ಮತ್ತು ಜಿಲೆಟಿನ್ ಸರಬರಾಜುದಾರ ನರಸಿಂಹ ಸೇರಿದಂತೆ ಮೂವರನ್ನು ಈವರೆಗೆ ಬಂಧಿಸಲಾಗಿದೆ. ಇನ್ನೂ ಕೆಲವರ ಬಂಧನಕ್ಕೆ ಜಾಲ ಬೀಸಲಾಗಿದೆ.
ಇಷ್ಟಾಗಿಯೂ ಈವರೆಗೆ ಅಂತಹ ಭಯೋತ್ಪಾದಕ ಕೃತ್ಯ ಹೀಗೆ ಬಿಡುಬೀಸಾಗಿ ನಡೆಯಲು, ಅಕ್ರಮ ದಂಧೆಗೆ ಕಣ್ಣುಮುಚ್ಚಿ ಕೂತು ಕುಮ್ಮಕ್ಕು ನೀಡಿದ ಯಾವೊಬ್ಬ ಅಧಿಕಾರಿಯ ವಿರುದ್ಧವೂ ಕ್ರಮ ಜರುಗಿಸಿಲ್ಲ. ಕಳೆದ 20 ವರ್ಷಗಳಿಂದ ಶಿವಮೊಗ್ಗ ನಗರ ಮತ್ತು ಕ್ವಾರಿ-ಕ್ರಷರ್ ದಂಧೆ ನಡೆಯುತ್ತಿರುವ ಕಲ್ಲುಗಂಗೂರು, ಬಸವನಗಂಗೂರು, ಹುಣಸೋಡು, ಅಬ್ಬಲಗೆರೆ, ಗೆಜ್ಜೇನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಜನ ನಿರಂತರ ಹೋರಾಟ, ಪ್ರತಿಭಟನೆ, ದೂರುಗಳ ಮೂಲಕ ಜಿಲ್ಲಾಡಳಿತ, ರಾಜ್ಯ ಸರ್ಕಾರಗಳ ಗಮನ ಸೆಳೆದರೂ, ಅಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲಾ ಕ್ವಾರಿಗಳು ಮತ್ತು ಕ್ರಷರ್ ಗಳ ಅಕ್ರಮಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾದ ಜಿಲ್ಲಾಡಳಿತದ ನಿರ್ಲಕ್ಷ್ಯವೇ, ಜನವಿರೋಧಿ ಧೋರಣೆಯೇ ಈ ಅನಾಹುತಕ್ಕೆ ಮೂಲ ಕಾರಣ ಎಂಬುದನ್ನು ತಳ್ಳಿಹಾಕಲಾಗದು.
ನಿರ್ದಿಷ್ಟವಾಗಿ ಈ ಮಹಾಸ್ಫೋಟದ ಘಟನೆಯಲ್ಲಿ ಕೂಡ, ದಂಧೆಕೋರ ಕ್ರಿಮಿನಲ್ಗಳು ಯಾರು, ಘಟನೆಗೆ ಕಾರಣವೇನು ಎಂಬುದು ಈಗ ಬಹುತೇಕ ಗೊತ್ತಾಗಿದೆ. ಆ ಪೈಕಿ ಕೆಲವರ ಬಂಧನವೂ ಆಗಿದೆ. ಹಾಗಾಗಿ ಈಗ ತನಿಖೆಯಾಗಬೇಕಾಗಿರುವುದು ಇಷ್ಟೊಂದು ಬೃಹತ್ ಸ್ಫೋಟಕ್ಕೆ ಕಾರಣವಾದ ಆಡಳಿತಾತ್ಮಕ ಮತ್ತು ಕಣ್ಗಾವಲು ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ. ಸುಪ್ರೀಂಕೋರ್ಟ್ ಆದೇಶವನ್ನು ಗಾಳಿಗೆ ತೂರಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಸರಹದ್ದಿನಿಂದ ಕೇವಲ 2-3 ಕಿ.ಮೀ. ಅಂತರದಲ್ಲಿ (ವೈಮಾನಿಕ ಅಂತರ), ನಗರದಂಚಿನ ಹಳ್ಳಿಗಳ ಜನವಸತಿ ಪ್ರದೇಶಗಳ ನಡುವೆಯೇ ಕ್ರಷರ್ ಮತ್ತು ಕ್ವಾರಿಗಳಿಗೆ ಸೇಫ್ ಝೋನ್ ಗುರುತಿಸಿ, ಅಪಾಯಕಾರಿ ದಂಧೆಗೆ ಅವಕಾಶ ನೀಡಿದ್ದು, ಕ್ರಷರ್ ಪರವಾನಗಿ ಪಡೆದು ವರ್ಷಗಳಿಂದ ನಿರಂತರ ಕ್ವಾರಿ ಚಟುವಟಿಕೆ ನಡೆಸುತ್ತಿರುವುದರ ಮೇಲೆ ಕ್ರಮಕೈಗೊಳ್ಳದೆ ಇರುವುದು, ಇಡೀ ಜಿಲ್ಲೆಯಲ್ಲಿ ಯಾರೊಬ್ಬರೂ ಅಧಿಕೃತ ಸ್ಫೋಟಕ ಪರವಾನಗಿ ಪಡೆಯದೇ ಇದ್ದರೂ ಪ್ರತಿ ವಾರವೂ ಲೋಡುಗಟ್ಟಲೆ ಸ್ಫೋಟಕ ಸಾಗಣೆ ಮತ್ತು ಸ್ಫೋಟ ನಡೆಸುತ್ತಿರುವುದು ಗೊತ್ತಿದ್ದೂ ಕಣ್ಣುಮುಚ್ಚಿ ಕೂತಿರುವುದು, ಒಂದು ಲಾರಿ ಲೋಡ್ ನಗರದ ಮೂಲಕವೇ ಜಿಲ್ಲಾಧಿಕಾರಿ ಗಮನಕ್ಕೆ ಬಾರದೇ ಸಾಗಣೆಯಾಗಿರುವುದು ಮತ್ತು ಜಿಲ್ಲಾಧಿಕಾರಿ ಪರವಾನಗಿ ಪಡೆಯದೇ ಇಲ್ಲಿ ನಿರಂತರ ಸ್ಫೋಟಕ ಬಳಕೆ ನಡೆಯುತ್ತಿರುವುದು,, ಹೀಗೆ ಹಲವು ವಿಷಯದಲ್ಲಿ ನೇರವಾಗಿ ಜಿಲ್ಲಾಡಳಿತದ ಲೋಪವೇ ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೊಟಕ್ಕೆ ಕಾಣಿಸುತ್ತಿದೆ.
ಹಾಗಿದ್ದರೂ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ, ಘಟನೆಯ ಕುರಿತು ತನಿಖೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ಸಮಿತಿ ರಚಿಸಿರುವುದಾಗಿ ಘೋಷಿಸಿದ್ದಾರೆ. ಇದು ಒಂದು ರೀತಿಯಲ್ಲಿ ತಪ್ಪಿತಸ್ಥರಿಗೇ ತನಿಖೆಯ ಹೊಣೆ ಕೊಟ್ಟಂತೆ ಅಲ್ಲವೇ ಎಂಬುದು ಶಿವಮೊಗ್ಗ ಜನತೆಯ ಆತಂಕದ ಪ್ರಶ್ನೆ.
ಇದೇ ಹಿನ್ನೆಲೆಯಲ್ಲಿ; ಅಂದರೆ ಶಿವಮೊಗ್ಗ ನಗರದ ಜನರ ಜೀವ ಮತ್ತು ಸುತ್ತಮುತ್ತಲ ಪರಿಸರ, ವನ್ಯಜೀವಿಗಳ ಜೀವದ ಹಿನ್ನೆಲೆಯಲ್ಲಿ ನೋಡಿದರೆ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಕಡಿಮೆ ಇಲ್ಲದ ಇಂತಹ ದುರಂತದಲ್ಲಿ ಸತ್ತವರಿಗೆ ಸಿಎಂ ಯಡಿಯೂರಪ್ಪ ಪರಿಹಾರ ಘೋಷಿಸಿರುವುದು ಕೂಡ ಹಲವು ಪ್ರಶ್ನೆಗೆ ಕಾರಣವಾಗಿದೆ. ಮೃತರು ಕಾರ್ಮಿಕರು, ಬಡವರು, ಅಮಾಯಕರು ಎಂಬುದನ್ನು ಹೊರತುಪಡಿಸಿಯೂ, ಅವರ ಜೀವಹಾನಿಗೆ ಬೆಲೆ ತೆರಬೇಕಾದವರು ಅವರನ್ನು ಅಂತಹ ಅಪಾಯಕಾರಿ, ಅಕ್ರಮ ದಂಧೆಯಲ್ಲಿ ಬಳಸಿಕೊಂಡ ದಂಧೆಕೋರ ಖದೀಮರೆ? ಅಥವಾ ರಾಜ್ಯದ ಜನರ ತೆರಿಗೆ ಹಣದಲ್ಲಿ ಪರಿಹಾರ ನೀಡುವುದೆ? ಎಂಬ ಪ್ರಶ್ನೆ ಇದೆ. ಹಾಗೇ, ಒಂದು ಅಪಘಾತವೋ, ಪ್ರಾಕೃತಿಕ ವಿಪತ್ತೋ ಆಗಿದ್ದರೆ, ಜನರ ತೆರಿಗೆ ಹಣ ಬಳಸುವುದು ಸರಿ. ಆದರೆ, ಇಲ್ಲಿ ನಡೆದಿರುವುದು ಜನದ್ರೋಹದ, ರಾಜ್ಯದ್ರೋಹದ, ಒಂದು ರೀತಿಯ ಭಯೋತ್ಪಾದನಾ ಕೃತ್ಯ. ಜನರ ಜೀವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಕುತ್ತು ತರುವ ಕೃತ್ಯ. ಹಾಗಿರುವಾಗ ಅಂತಹ ದಂಧೆಕೋರರಿಗೆ, ಸಮಾಜಘಾತುಕರಿಗೆ ಪರಿಹಾರ ಘೋಷಣೆ ಮಾಡುವ ಮೂಲಕ ಸಿಎಂ ಇಡೀ ಅಕ್ರಮಕ್ಕೆ ಸಕ್ರಮದ ಸರ್ಟಿಫಿಕೇಟ್ ಕೊಟ್ಟರೆ ಎಂಬ ಪ್ರಶ್ನೆಯೇ ಎದ್ದಿದೆ.
ಹಾಗೇ, ಕ್ವಾರಿ ಮತ್ತು ಕ್ರಷರ್ ಗಳ ಅಕ್ರಮ ಮತ್ತು ಸಕ್ರಮಗಳ ಕುರಿತ ಸ್ವತಃ ಸಿಎಂ ಯಡಿಯೂರಪ್ಪ, ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಗಳು ಕ್ವಾರಿ ಗಣಿಗಾರಿಕೆಯ ವಿಷಯದಲ್ಲಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಈವರೆಗೆ ಇರುವ ಕಾನೂನು ಮತ್ತು ಕಾಯ್ದೆಗಳನ್ನು ಬುಡಮೇಲು ಮಾಡಿವೆ. ಅದರಲ್ಲೂ ಜನವಸತಿ ಪ್ರದೇಶದ ಅತಿ ಸಮೀಪದಲ್ಲಿ ಸ್ಫೋಟ, ಧೂಳು, ಭೂಪದರ ದುರ್ಬಲ, ಸಮೀಪದಲ್ಲೇ ಇರುವ ಶೆಟ್ಟಿಹಳ್ಳಿ ಮತ್ತು ಭದ್ರಾ ಅಭಯಾರಣ್ಯ ವನ್ಯಜೀವಿಗಳಿಗೆ ಮಾರಕವಾದ ದಂಧೆಗೆ ಯಾವ ಆಧಾರದ ಮೇಲೆ ಸರ್ಕಾರದ ಚುಕ್ಕಾಣಿ ಹಿಡಿದವರು ಸಕ್ರಮ, ಕಾನೂನುಬದ್ಧ ಎಂಬ ಹಣೆಪಟ್ಟಿ ನೀಡಿದರು? ಮತ್ತು ಅಂತಹ ಹೇಳಿಕೆ ರಾಜ್ಯದಾದ್ಯಂತ ಅಕ್ರಮ ದಂಧೆಗೆ ನೀಡುವ ಕುಮ್ಮಕ್ಕು ಎಂತಹದ್ದು ಎಂಬುದು ಆಘಾತಕಾರಿ ಸಂಗತಿ.
ಜೊತೆಗೆ ಸ್ಫೋಟದ ಕ್ಷಣದಿಂದ ಈವರೆಗೆ, ಇಡೀ ದಂಧೆಯ ಹಿಂದೆ ಕೇಳಿಬರುತ್ತಿರುವುದು ಪ್ರಮುಖವಾಗಿ ಬಿಜೆಪಿಯ ಪ್ರಮುಖ ನಾಯಕರದ್ದೇ. ಸ್ವತಃ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ದತ್ತಾತ್ರಿ ಸ್ವತಃ ಕ್ರಷರ್ ಮಾಲೀಕರ ಸಂಘದ ಗೌರವಾಧ್ಯಕ್ಷರು. ಅವರನ್ನೇ ಜೊತೆಗಿಟ್ಟುಕೊಂಡು ಗಣಿ ಸಚಿವ ನಿರಾಣಿ ಮತ್ತು ಸ್ವತಃ ಸಿಎಂ ಘಟನೆ ಸ್ಥಳದ ಪರಿಶೀಲನೆ ನಡೆಸಿರುವುದು ಯಾವ ಸಂದೇಶ ನೀಡುತ್ತದೆ? ಎಂಬ ಪ್ರಶ್ನೆಯೂ ಇದೆ. ಸ್ವತಃ ಉಸ್ತುವಾರಿ ಸಚಿವ ಈಶ್ವರಪ್ಪ ಅಕ್ರಮ ಗಣಿಗಾರಿಕೆಯ ಪರ ಅಧಿಕಾರಿಗಳ ಅಧಿಕೃತ ಸಭೆಗಳಲ್ಲೇ ವಕಾಲತು ವಹಿಸಿರುವುದು ಮತ್ತು ಈಗಲೂ ಅವರು ಘಟನೆಗೆ ಜಿಲೆಟಿನ್ ಸ್ಫೋಟ ಒಂದೇ ಕಾರಣವಿರಲಾರದು, ಅಲ್ಲಿ ಎಲ್ಲವೂ ಸಕ್ರಮ ಕ್ವಾರಿ-ಕ್ರಷರ್ ಗಳೇ ಇವೆ, ಕಾನೂನುಬದ್ಧವಾಗಿಯೇ ಎಲ್ಲವೂ ನಡೆಯುತ್ತಿದೆ ಎಂಬಂತಹ ಘಟನೆಯ ತೀವ್ರತೆಯನ್ನು ತಗ್ಗಿಸುವ- ಕುಗ್ಗಿಸುವ ಹೇಳಿಕೆಗಳನ್ನು ನೀಡಿರುವುದು ಕೂಡ ಇಡೀ ದಂಧೆಯಲ್ಲಿ ಅವರ ಹಿತಾಸಕ್ತಿ ಏನು? ಮತ್ತು ನಗರ ಸೇರಿದಂತೆ ಮಲೆನಾಡಿನ ಜನ-ಜೀವಜಾಲದ ಜೀವಕ್ಕಿಂತ ಉಸ್ತುವಾರಿ ಸಚಿವರಿಗೆ ದಂಧೆಕೋರರ ಹಿತವೇ ಮುಖ್ಯವೇ ಎಂಬ ಪ್ರಶ್ನೆಯೂ ಇದೆ.
ಸ್ವತಃ ಸಿಎಂ, ಉಸ್ತುವಾರಿ ಸಚಿವರು ಸೇರಿದಂತೆ ಅಧಿಕಾರಸ್ಥರ ಇಂತಹ ಹೇಳಿಕೆ, ನಡೆಗಳಿಗೆ ಪೂರಕವಾಗಿ ಜಿಲ್ಲಾಡಳಿತ ಘಟನೆ ಸ್ಥಳದಿಂದ ಕಳೆದ ಮೂರು ದಿನಗಳಿಂದಲೂ ಮಾಧ್ಯಮವನ್ನು ದೂರ ಇಟ್ಟಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಫೋಟ ಸಂಭವಿಸಿದ ವೇಳೆ ಆರಂಭದಲ್ಲಿ ಕೆಲವು ಮಾಧ್ಯಮದ ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಹೊರತುಪಡಿಸಿ, ಮಾರನೇ ದಿನದಿಂದ ಈ ಕ್ಷಣದ ವರೆಗೆ ಯಾವುದೇ ಮಾಧ್ಯಮದವರಿಗೆ ಘಟನೆ ನಡೆದ ಸ್ಥಳದ ಸಮೀಪಕ್ಕೂ ತೆರಳಲು ಬಿಟ್ಟಿಲ್ಲ. ಸಚಿವ ಈಶ್ವರಪ್ಪ, ಗಣಿ ಸಚಿವ ನಿರಾಣಿ, ಮತ್ತು ಸಿಎಂ ಭೇಟಿ ವೇಳೆ ನೂರಾರು ಮಂದಿ ಅವರ ಬೆಂಬಲಿಗರು, ಅಧಿಕಾರಿ, ಸಿಬ್ಬಂದಿಗೆ ಮುಕ್ತ ಅವಕಾಶ ನೀಡಿದ ಜಿಲ್ಲಾಡಳಿತ, ಮಾಧ್ಯಮದವರನ್ನು ಮಾತ್ರ ಹೊರಗಿಟ್ಟಿರುವುದರ ಹಿಂದೆ ಯಾವ ವಾಸ್ತವಾಂಶಗಳನ್ನು ಮುಚ್ಚಿಹಾಕುವ ಹುನ್ನಾರವಿದೆ ಎಂಬುದು ಉತ್ತರಸಿಗಬೇಕಾದ ಪ್ರಶ್ನೆ.
ಮುಖ್ಯವಾಗಿ ಘಟನೆಗೆ ಕಾರಣವಾದ ಭಾರೀ ಪ್ರಮಾಣದ ಜಿಲೆಟಿನ್, ಅಮೋನಿಯಂ ನೈಟ್ರೇಟ್, ಡಿಟೊನೇಟರ್ಸ್ ಆ ಸ್ಥಳಕ್ಕೆ ತಲುಪಿದ್ದು ಹೇಗೆ? ನಿರಂತರವಾಗಿ ವಾರಕ್ಕೊಮ್ಮೆ ನೂರಾರು ಕೆಜಿ ಸ್ಫೋಟಕಗಳು ಸರಬರಾಜಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕೂತಿದ್ದು ಯಾಕೆ? ಈಗಲೂ ಸರಬರಾಜುದಾರರು ಮತ್ತು ಅಕ್ರಮ ದಂಧೆಕೋರರ ಕುರಿತ ಸಂಪೂರ್ಣ ಮಾಹಿತಿಯನ್ನು ಘಟನೆ ನಡೆದಾದ ಅಲ್ಲಿ ಚಾಲನೆಯಲ್ಲಿದ್ದ ಮೊಬೈಲ್ ಗಳ ಟ್ರೇಸಿಂಗ್ ಮೂಲಕ ಜಾಲಾಡುವುದು ಸಾಧ್ಯವಿರುವಾಗ ಪರಾರಿಯಾದವರ ಪತ್ತೆಯಾಗದೇ ಇರುವುದು ಹೇಗೆ? ಪ್ರಭಾವಿಗಳ ಮಕ್ಕಳು ಮತ್ತು ಮೊಮ್ಮಕ್ಕಳೇ ದಂಧೆಯ ಪಾಲುದಾರರು, ಸ್ಫೋಟಕ ಸರಬರಾಜು ದಂಧೆಯಲ್ಲಿ ಶಿವಮೊಗ್ಗದ ಪ್ರಭಾವಿಗಳ ಮಕ್ಕಳೇ ಇದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ, ತನಿಖೆಯಲ್ಲಿನ ಮಂದಗತಿ ಮತ್ತು ಯಾವೊಬ್ಬ ಸರ್ಕಾರಿ ಅಧಿಕಾರಿ-ಸಿಬ್ಬಂದಿ ವಿರುದ್ಧವೂ ಕಠಿಣ ಕ್ರಮಕೈಗೊಳ್ಳದೇ ತಿಪ್ಪೆಸಾರಿಸುತ್ತಿರುವುದು ಕೂಡ ದೊಡ್ಡ ಮಟ್ಟದ ಷಢ್ಯಂತ್ರದ ಸುಳಿವು ನೀಡುತ್ತಿದೆ.
ಹಾಗೇ ಮಹಾ ಸ್ಫೋಟದ ಕುರಿತು ಭೂಕಂಪ, ವಿದ್ಯುತ್ ಸ್ಪರ್ಶ, ಸಿಗರೇಟಿನ ಬೆಂಕಿ ಮುಂತಾದ ಹತ್ತಾರು ಕಾರಣಗಳನ್ನು ಪಟ್ಟಿಮಾಡಲಾಗುತ್ತಿದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ ತಜ್ಞರಾಗಲೀ, ಭೂಕಂಪನ ಪರಿಣಿತರಾಗಲೀ, ಆ ಘಟನೆಯ ಕುರಿತು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
ಹಾಗಾಗಿ, ಸಾಲು ಸಾಲು ಪ್ರಶ್ನೆ, ಸಂಶಯ ಮತ್ತು ಶಂಕೆಗಳ ನಡುವೆಯೇ ಅಕ್ರಮ ದಂಧೆಗೆ ಸಕ್ರಮದ ಪಟ್ಟ ಕಟ್ಟುವ ಮೂಲಕ ಇಡೀ ಅನಾಹುತವನ್ನು ತೇಲಿಸಿಬಿಡುವ, ಗಂಭೀರತೆಯನ್ನು ಕುಗ್ಗಿಸುವ ಯತ್ನಗಳು ಅಧಿಕಾರರೂಢರಿಂದಲೇ ನಡೆಯುತ್ತಿದೆ. ಅಸಲಿಗೆ ಯಾರನ್ನು ರಕ್ಷಿಸಲು ಇಂತಹ ಷಢ್ಯಂತ್ರಗಳನ್ನು ಹೆಣೆಯಲಾಗುತ್ತಿದೆ? ಎಂಬುದು ಈಗಿರುವ ಅಂತಿಮ ಪ್ರಶ್ನೆ.