ಉಡುಪಿಯ ಎಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ವಿದ್ಯುತ್ ಕಂಪೆನಿಯಿಂದ ಸ್ಥಳೀಯ ಪರಿಸರ, ಜನಜೀವನದ ಮೇಲೆ ಆಗುತ್ತಿರುವ ಹಾನಿ ಅಷ್ಟಿಷ್ಟಲ್ಲ. ರಾಷ್ಟ್ರೀಯ ಹಸಿರು ಮಂಡಳಿ (NGT)ಯು 2019ರಲ್ಲೇ “ಕಂಪನಿಯಿಂದ ಆಗುತ್ತಿರುವ ಪರಿಸರದ ಅಸಮರ್ಪಕ ನಿರ್ವಹಣೆಗೆ ಇಲ್ಲಿನ ಮಾಲಿನ್ಯಯುಕ್ತ ನೀರು, ಮಣ್ಣು ಮತ್ತು ಗಾಳಿಯೇ ಸಾಕ್ಷಿ ಒದಗಿಸುತ್ತದೆ” ಎಂದು ಹೇಳಿತ್ತು.
“ಧ್ಯಾನಗಳ ಉತ್ಪಾದನೆ, ಮಲ್ಲಿಗೆ ಬೆಳೆ, ತೋಟಗಾರಿಕಾ ಉತ್ಪನ್ನಗಳು, ಜೀವಿಗಳ ಸಂತಾನೋತ್ಪತ್ತಿ, ಹೈನುಗಾರಿಕೆಯ ಮೇಲೆ ಕಂಪೆನಿಯಿಂದ ಉಂಟಾಗುವ ಮಾಲಿನ್ಯವು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಲ್ಲಿನ ಮರಗಳ ಎಲೆಗಳ ಮೇಲೆ ದಟ್ಟವಾಗಿ ಶೇಖರವಾಗುವ ಧೂಳು ಸಸ್ಯಗಳ ಆಹಾರೋತ್ಪಾದನೆಯೇ ಮೇಲೂ ಪರಿಣಾಮ ಬೀರುತ್ತಿದೆ. ಉಸಿರಾಟ ಸಂಬಂಧಿತ ರೋಗಗಳೂ ಅಧಿಕವಾಗುತ್ತಿವೆ. ಕೂಲಿಂಗ್ ಟವರ್ಗಳ ಲವಣಯುಕ್ತ ಮಂಜು ಎರಡು ಕಿ.ಮೀ ವರೆಗೂ ಸಂಚರಿಸಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ವರದಿ ಸಲ್ಲಿಸಿತ್ತು.
ಯುಪಿಸಿಎಲ್ನ ಎರಡನೇ ಹಂತದ ವಿಸ್ತರಣೆ ಮಾಡುವಾಗ ಡಿಸೆಂಬರ್ 16, 2015ರಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಂಪೆನಿಯು ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಕಂಪೆನಿಯಲ್ಲಿ ಕೆಲಸ ಕೊಡಲಾಗುತ್ತದೆ ಎಂದು ವಾಗ್ದಾನ ಮಾಡಿತ್ತು ಮತ್ತು ಭೂಮಿಗೆ ಮಾರ್ಕೆಟ್ ದರವನ್ನೇ ಕೊಡಲಾಗುವುದು ಎಂದಿತ್ತು.
ಆದರೆ ಯಥಾಪ್ರಕಾರ ಕಂಪೆನಿಯು ನೀಡಿದ್ದ ವಾಗ್ದಾವನ್ನು ಮರೆತು, ಸ್ಥಳೀಯರಿಗೆ ಶಾಶ್ವತ ಉದ್ಯೋಗವನ್ನು ನೀಡದೆ, ಭೂಮಿಗೆ ಹೆಚ್ಚುವರಿ ಪರಿಹಾರವನ್ನೂ ನೀಡದೆ ವಂಚನೆ ಮಾಡಿ ಇತರ ರಾಜ್ಯಗಳ ಅದರಲ್ಲೂ ಉತ್ತರ ಭಾರತದ ರಾಜ್ಯಗಳ ಜನತೆಗೆ ಉದ್ಯೋಗ ನೀಡಿದೆ.
ಸಂತ್ರಸ್ತರು ಈ ಬಗ್ಗೆ ಕಂಪೆನಿಯ ಉಡುಪಿ ವಿಭಾಗದ ಕಿಶೋರ್ ಆಳ್ವ ಅವರನ್ನು ಭೇಟಿಯಾಗಿ ಈ ಬಗ್ಗೆ ಅಹವಾಲು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ನೀತಿಗಳಿಂದಾಗಿ ಎರಡನೇ ಘಟಕ ಇನ್ನೂ ಪ್ರಾರಂಭವಾಗಿಲ್ಲ ಹಾಗಾಗಿ ಕೆಲಸ ನೀಡಲಾಗುವುದಿಲ್ಲ ಎಂದಿದ್ದಾರೆ.
ಇದಲ್ಲದೆ ಸಂತ್ರಸ್ತರು ಕೆಐಎಡಿಬಿ, ಸ್ಥಳೀಯ ಶಾಸಕ ಲಾಲಾಜಿ ಮೆಂಡನ್, ರಾಜ್ಯ ಕೈಗಾರಿಕಾ ಸಚಿವರಿಗೂ ಅರ್ಜಿ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಸಂತ್ರಸ್ತರಲ್ಲಿ ಸುಮಾರು 34 ರೈತ ಕುಟುಂಬಗಳಿದ್ದು ತಮ್ಮ ಭೂಮಿಯಿಂದ ಬರುವ ಆದಾಯಗಳನ್ನೇ ನಂಬಿಕೊಂಡು ಜೀವಿಸುತ್ತಿದ್ದವರು. ಈಗ ಅತ್ತ ಭೂಮಿಯೂ ಇಲ್ಲ, ಇತ್ತ ಕೆಲಸವೂ ಇಲ್ಲ ಎಂಬಂತಾಗಿದೆ.