ಜೆಡಿಎಸ್ ನಿರ್ನಾಮ ಮಾಡಲು ಹೋಗಿ ಬಹಳ ಜನ ಎಲ್ಲೆಲ್ಲೋ ಹೊರಟು ಹೋದರು. ಯಡಿಯೂರಪ್ಪ ಅವರು 2008 ರಲ್ಲಿ ಜೆಡಿಎಸ್ ಪಕ್ಷ ನಿರ್ನಾಮ ಮಾಡುತ್ತೀನೆಂದು ಹೇಳಿಕೆ ನೀಡಿದರು. ಅಪ್ಪ-ಮಕ್ಕಳನ್ನ ಮುಗಿಸ್ತೀನಿ ಎಂದು ಹುಬ್ಬಳಿಯಲ್ಲಿ ಭಾಷಣ ಮಾಡಿದರು. ಆ ಭಾಷಣ ಮಾಡಿದ ಮೇಲೆ ನಾನು ದಾಖಲೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಸಿರುವ ಅವರು, ಯಡಿಯೂರಪ್ಪರಿಗೆ ಹೇಳುವುದು ಇಷ್ಟೇ. ನಿಮ್ಮಂತಹ ನೂರು ಮಂದಿ ಬಂದರೂ ಜೆಡಿಎಸ್ ಪಕ್ಷವನ್ನು ನಿರ್ಣಾಮ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಬಗ್ಗೆ ಏನು ಬೇಕಾದರೂ ಮಾತಾಡಿಕೊಳ್ಳಿ. ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಎಚ್ಚರಿಸಿದ್ದಾರೆ.
2008 ರಲ್ಲಿ ಅಪ್ಪ ಮಕ್ಕಳನ್ನ ಮುಗಿಸ್ತೀನಿ ಎಂದ ಬಳಿಕ, 2008 ರಿಂದ 2011 ರವರೆಗೆ ಮೂರು ವರ್ಷದಲ್ಲಿ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆ ಆದರು. ಈ ಬಾರಿ ಇನ್ನೂ ಕೈ ಹಾಕಿಲ್ಲ. ನನ್ನ ಬಳಿ ಇವರ ಬಂಡವಾಳ ಇದೆ. ಯಡಿಯೂರಪ್ಪನವರೇ ಇಲ್ಲಿಯವರೆಗೆ ಎಲ್ಲವೂ ಕ್ಷೇಮವಾಗಿದ್ದೀರಿ, ನಮ್ಮ ತಂಟೆಗೆ ಬಂದರರೆ ಯಡವಟ್ಟು ಮಾಡಿಕೊಳ್ಳುತ್ತೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮಲ್ಲಿ ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇದೆ. ನೀವುಗಳು ಇನ್ನೊಂದು ಜನ್ಮವೆತ್ತಿ ಬಂದರೂ ಕರ್ನಾಟಕದಲ್ಲಿ ಜೆಡಿಎಸ್ ಅನ್ನು ನಾಶ ಮಾಡಲು ಸಾಧ್ಯವಿಲ್ಲ. ನಿಮ್ಮ ತರ ನಾವು ಪಾಪದ ಹಣದಲ್ಲಿ ರಾಜಕೀಯ ಮಾಡುತ್ತಿಲ್ಲ. ಕಷ್ಟಪಟ್ಟು ಸಂಪಾದನೆ ಮಾಡಿದ್ದೀವಿ, ಕಷ್ಟಪಟ್ಟು ರಾಜಕೀಯ ಮಾಡಿದ್ದೀವಿ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರೆ ಪ್ರತಿಫಲ ಅನುಭವಿಸುತ್ತೀರಿ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.